Sunday, January 6, 2019

ನ್ಯಾಯಾಲಯವೇ 'ಗೇ' ರಕ್ಷಣೆಗಿಳಿದರೆ ಹೇಗೆ?

ಕಾಂಡೋಮ್ ಕೇಂದ್ರಿತ ಸಲಿಂಗ ವೈಭವದ ಟೊಳ್ಳುತನ ಮತ್ತು ಅಪಾಯಗಳು 

ನಿಮ್ಮ ಲಿಂಗ (gender) ಇರುವುದು ನಿಮ್ಮ ಎರಡು ಕಾಲುಗಳ ಮಧ್ಯೆ, ನಿಮ್ಮ ಲೈಂಗಿಕತೆ (sex) ಇರುವುದು ನಿಮ್ಮ ಎರಡು ಕಿವಿಗಳ ಮಧ್ಯೆ .   

ವ್ಯಕ್ತಿಗತವಾದ ಹಾಗೂ  ಬಲವಂತವಿಲ್ಲದ  ಲೈಂಗಿಕ ಅಥವಾ ಕಾಮ ಸಂಬಂಧಿ ಚಟುವಟಿಕೆಗಳು ಯಾವ ಸ್ವರೂಪದಲ್ಲಿದ್ದರೂ ಆ ಕುರಿತು ಸಮಾಜವು ಹೆಚ್ಚು ತಲೆಕೆಡಿಸಿಕೊಳ್ಳಬೇಕಾಗಿಲ್ಲ. ಸಾಮಾನ್ಯ ಸ್ಥಿತಿಯಲ್ಲಿ, ಕಾಮದ ವಿಷಯದಲ್ಲಿ, ಯಾವ ವ್ಯಕ್ತಿ ವೈಯಕ್ತಿಕವಾಗಿ ಎಂತಹ ಒಲವು ಉಳ್ಳವನು ಎಂಬ ಬಗ್ಗೆ ಬೇಹುಗಾರಿಕೆ ನಡೆಸುವ ಅಗತ್ಯವಿಲ್ಲ. ಯಾರೂ ಇನ್ನೊಬ್ಬರ  ಖಾಸಗಿ ಬದುಕಿನೊಳಗೆ ಮೂಗು ತೂರಿಸಬೇಕಾಗಿಲ್ಲ. ಇನ್ನೊಬ್ಬರ ಬೆಡ್ ರೂಮ್ ನೊಳಗೆ ಇಣುಕಿ ನೋಡ ಬೇಕಾಗಿಲ್ಲ. ನೈತಿಕ ದೃಷ್ಟಿಯಿಂದ ಯಾವುದು ಸದಾಚಾರ ಮತ್ತು ಯಾವುದು ದುರಾಚಾರ ಎಂಬುದನ್ನು ಸಮಾಜಕ್ಕೆ ನೆನಪಿಸುತ್ತಲಿದ್ದರೆ ಸಾಕು. ಹಾಗೆಯೇ ವಿವಿಧ ದುರಾಚಾರಗಳ ವಿವಿಧ ದುಷ್ಪರಿಣಾಮಗಳ ಬಗ್ಗೆ ಸಮಾಜವನ್ನು ಎಚ್ಚರಿಸುತ್ತಲಿದ್ದರೆ ಸಾಕು. ವ್ಯಕ್ತಿಗತ ದುರಾಚಾರಗಳನ್ನು ಸಮೂಹದಮೇಲೆ ಹೇರುವ ಶ್ರಮಗಳು ನಡೆಯದಂತೆ ನೋಡಿಕೊಂಡರೆ ಸಾಕು. ಇದು ಎಲ್ಲ ನಾಗರಿಕ ಸಮಾಜಗಳಲ್ಲಿ ಎಲ್ಲ ಕಾಲಗಳಲ್ಲೂ  ಪಾಲಿಸಲಾಗಿರುವ ಒಂದು ಸರಳ ನಿಯಮ. ಇದಕ್ಕೆ ಅಪವಾದಗಳೂ ಇದ್ದವು.  ಅಸ್ವಸ್ಥತೆಗಳು, ತೀವ್ರವಾದಿ ನಿಲುವುಗಳು, ಅಸಮತೋಲನಗಳು ವಿವಿಧ ಪ್ರಮಾಣಗಳಲ್ಲಿ ಆಂಶಿಕ ಅನಿಷ್ಟಗಳಾಗಿ ಎಲ್ಲ ಸಮಾಜ ಮತ್ತು ಎಲ್ಲ ಕಾಲಗಳಲ್ಲಿ ಅಸ್ತಿತ್ವದಲ್ಲಿದ್ದವು.  ಆದರೆ  ಇದೀಗ ವೇಗವಾಗಿ ಬದಲಾಗುತ್ತಿರುವ ತಂತ್ರಜ್ಞಾನದ ಜೊತೆ ಸ್ಪರ್ಧಿಸಲಿಕ್ಕೋ ಎಂಬಂತೆ ನೈತಿಕ ಮತ್ತು ಸಾಮಾಜಿಕ ನಿಯಮಗಳು, ಹಿತ - ಅಹಿತದ ಮಾನದಂಡಗಳು ಕೂಡಾ ಕ್ಷಿಪ್ರವಾಗಿ ಬದಲಾಗುತ್ತಿವೆ. ಆಹಾರಕ್ಕಿಂತ ಕಾಮವು ಹೆಚ್ಚು ಚರ್ಚೆಯಲ್ಲಿದೆ. ಉದ್ಯಮ, ಉದ್ಯೋಗ,ವೃತ್ತಿ, ಕೃಷಿ, ವ್ಯವಸಾಯ, ಕಲೆ, ಕ್ರೀಡೆ, ಸಾಹಿತ್ಯ, ಸಂಸ್ಕೃತಿ, ಅಭಿವೃದ್ಧಿ ಇತ್ಯಾದಿಗಳ ಕುರಿತಾದ ಚರ್ಚೆಗೆ ಮೀಸಲಿದ್ದ ಜಾಗವನ್ನೆಲ್ಲ ಕಾಮ ಮತ್ತು ಲೈಂಗಿಕತೆಯ ಕುರಿತಾದ ಆಲಾಪಗಳು ಕಬಳಿಸುತ್ತಿವೆ. ಅಪವಾದ ಸ್ವರೂಪದ ಅಸ್ವಾಸ್ಥ್ಯ ಗಳನ್ನು ಎಷ್ಟು ಪರಿಣಾಮಕಾರಿಯಾಗಿ ಸಮಾಜದ ಪ್ರಧಾನಧಾರೆಗೆ ತರಲಾಗುತ್ತಿದೆ ಎಂದರೆ, ಅಸ್ವಸ್ಥರನ್ನು ತಿದ್ದಲು ಹೊರಟಿದ್ದ ಕೆಲವು ಸ್ವಸ್ಥರು, ತಾವು ನಿಜಕ್ಕೂ ಸ್ವಸ್ಥರೇ ಎಂದು ಸ್ವತಃ ತಮ್ಮ ಸ್ವಾಸ್ಥ್ಯದ ಕುರಿತು ಸಂಶಯ ಪಟ್ಟುಕೊಳ್ಳುವಂತಾಗಿದೆ. 

ಒಂಟಿಯಾಗಿದ್ದ  'ಜಿ' (G) ಕ್ರಮೇಣ LGBTQQIAAP +  ಸಮುದಾಯವಾಗಿ ಬೆಳೆದದ್ದು ಮತ್ತು ಮಿತಿಮೀರಿ ಬೆಳೆಯುತ್ತಿರುವುದು  

ನಮ್ಮ ಸಮಕಾಲೀನ ಸಮಾಜದಲ್ಲಿ ಸಂವಾದಗಳು ರೂಪುಗೊಳ್ಳುವ ಮತ್ತು ಕ್ರಮೇಣ ಸಾಮೂಹಿಕ ಅಭಿರುಚಿ, ಸಂಸ್ಕೃತಿ, ಕಾನೂನು ಇತ್ಯಾದಿ ಎಲ್ಲವನ್ನೂ ಆವರಿಸಿ ಕೊಳ್ಳುವ ಪ್ರಕ್ರಿಯೆ ಬಹಳ ಗಮನಾರ್ಹವಾಗಿದೆ. ಕೆಲವೇ ದಶಕಗಳ ಹಿಂದೆ ಏಡ್ಸ್ ರೋಗದ ಹಿನ್ನೆಲೆಯಲ್ಲಿ ಪುರುಷರ ಸಲಿಂಗಕಾಮ ಅಥವಾ 'ಗೇ' ಕಾಮ  ಚರ್ಚೆಗೆ ಬಂತು. ಏಡ್ಸ್ ಪೀಡಿತರ ಪೈಕಿ ಸಲಿಂಗಿ ಪುರುಷರ ಅನುಪಾತ ತುಂಬಾ ಅಧಿಕವಾಗಿರುವುದು ಪದೇ ಪದೇ ಸಾಬೀತಾಗಿ, ಸಲಿಂಗ ಕಾಮದ ವಿರುದ್ಧ ಜನಾಭಿಪ್ರಾಯ ರೂಪುಗೊಳ್ಳತೊಡಗಿತು. ಆದರೆ ಕ್ರಮೇಣ ಜನರನ್ನು ಏಡ್ಸ್ ಮತ್ತಿತರ ಸೋಂಕುಗಳಿಂದ ರಕ್ಷಿಸುವ ಹೊಣೆಯನ್ನು ಸಂಪೂರ್ಣವಾಗಿ ಕಾಂಡೋಮ್ ಗಳಿಗೆ ವಹಿಸಿಕೊಡಲಾಯಿತು. ಕಾಂಡೋಮ್ ಧರಿಸಿಕೊಂಡು ಯಾವ ಬಗೆಯ ಕಾಮ ಕೇಳಿ ನಡೆಸಿದರೂ ಯಾವುದೇ ರೋಗ ಬಾಧಿಸುವುದಿಲ್ಲ ಎಂಬ ನಂಬಿಕೆ ವ್ಯಾಪಕವಾಯಿತು. ಶಕ್ತಿ ಸಂಪನ್ಮೂಲಗಳನ್ನೆಲ್ಲ  ಕಾಂಡೋಮ್ ಗಳ  ಪರ ಪ್ರಚಾರಕ್ಕೆ ಮೀಸಲಿಡಲಾಯಿತು. ಜಗತ್ತಿನ ವಿವಿಧೆಡೆಯ ಸರಕಾರಗಳು ಏಡ್ಸ್ ವಿರುದ್ಧ ಜಾಗೃತಿಗಾಗಿ ಜಾಹೀರಾತು ಗಳನ್ನು ಪ್ರಕಟಿಸತೊಡಗಿದವು. ಆ ಜಾಹೀರಾತುಗಳೆಲ್ಲಾ ಕಾಂಡೋಮ್ ಕೇಂದ್ರಿತವಾಗಿದ್ದವು. ಅಲ್ಲಿ ಶಾರೀರಿಕ ಹಾನಿ ಮತ್ತು ಸುರಕ್ಷೆಯ ಚರ್ಚೆ ಇತ್ತೇ ಹೊರತು ಚಾರಿತ್ರ್ಯ, ನೈತಿಕತೆ, ಕುಟುಂಬ ವ್ಯವಸ್ಥೆ, ಸಾಮಾಜಿಕ ಹಿತಾಸಕ್ತಿ  ಇತ್ಯಾದಿ ಆಯಾಮಗಳ ಪ್ರಸ್ತಾಪವೇ ಇರಲಿಲ್ಲ. ಇದರ ಜೊತೆ ಜೊತೆಗೇ ಸಮಾಜದಲ್ಲಿ, ಏಡ್ಸ್  ಅನ್ನು ತಡೆಯಲು ಕಾಂಡೋಮ್ ಎಂಬ ಬ್ರಹ್ಮಾಸ್ತ್ರ ವಿರುವಾಗ ಸುಮ್ಮ ಸುಮ್ಮನೆ ಸಲಿಂಗ ಕಾಮವನ್ನು ಯಾಕೆ ವಿರೋಧಿಸಬೇಕು ? ಎಂಬ ಪ್ರಶ್ನೆ ಜನಪ್ರಿಯವಾಗ ತೊಡಗಿತು. ಕ್ರಮೇಣ 'ಗೇ'  ಗಳ ಕುರಿತು ಅವರು ಅನಗತ್ಯವಾಗಿ ನಿಂದನೆಗೆ ತುತ್ತಾದವರು ಎಂಬ ಸಹಾನು ಭೂತಿಯ ಮಾತುಗಳು ಕೇಳಿ ಬರಲಾರಂಭಿಸಿದವು.

ಪುರುಷ ಪ್ರಧಾನವಾದ 'ಗೇ' ಸಂಸ್ಕೃತಿಗೆ ಗೌರವ ಮತ್ತು ಸಮತೋಲನ ತಂದು ಕೊಡಲು ಲೆಸ್ಬಿಯನ್ (Lesbian)  ಅಥವಾ ಸ್ತ್ರೀ ಸಲಿಂಗ ಸಂಸ್ಕೃತಿಯನ್ನು ಚರ್ಚೆಗೆ ತರಲಾಯಿತು, G ಜೊತೆಗೆ L  ಸಂಸ್ಕೃತಿಯನ್ನು ಸೇರಿಸಿ ಅವೆರಡಕ್ಕೂ ಮಾನ್ಯತೆ ದೊರಕಿಸುವ ಶ್ರಮ ಆರಂಭವಾಯಿತು. ಸಲಿಂಗಿಗಳು ಯಾವುದೇ ಬಗೆಯ ಕೀಳರಿಮೆಗೆ ತುತ್ತಾಗಬೇಕಾಗಿಲ್ಲ ಎಂಬ ಸಾಂತ್ವನದ ಅಭಿಯಾನ ಬಿರುಸಾಗಿ ನಡೆಯಿತು. 'ನಾನು G' ಅಥವಾ 'ನಾನು L' ಎಂದು ತಮ್ಮನ್ನು ಪರಿಚಯಿಸಿಕೊಳ್ಳುವ ಹೊಸ ಫ್ಯಾಶನ್ ಪರ್ವ ಆರಂಭವಾಯಿತು. ಇದೀಗ ಅಂತಹ ಅಸ್ವಾಭಾವಿಕ ಗುರುತುಗಳು L ಮತ್ತು G ಗೆ ಸೀಮಿತವಾಗಿ ಉಳಿಯದೆ  LGBTQQIAAP ಎಂಬ ಹತ್ತು ವಿಭಿನ್ನ ಗುರುತುಗಳಾಗಿ ಬೆಳೆದಿದೆ, ಬೆಳೆಯುತ್ತಲೇ ಇದೆ. ಅಸಹಜ, ಅಸ್ವಾಭಾವಿಕಗಳೆಲ್ಲ ಸಹಜ ಹಾಗೂ ಸ್ವಾಭಾವಿಕಗಳ ವ್ಯಾಪ್ತಿಯೊಳಗೆ ನುಸುಳಿಕೊಂಡು ನೆಲೆಯೂರುತ್ತಿವೆ. ವಿಪರ್ಯಾಸದ ಬೆಳವಣಿಗೆಯೇನೆಂದರೆ ಏಡ್ಸ್ ಎಂಬ ಮಹಾಮಾರಿ ಮಾನವ ಕುಲವನ್ನು ಬಾಧಿಸುತ್ತಲೇ ಇದೆ. ಆದರೆ ಕೆಲವು ದಶಕಗಳ ಹಿಂದೆ ಏಡ್ಸ್ ವಿರುದ್ಧ ಆರಂಭವಾಗಿದ್ದ ಜಾಗೃತಿ ಅಭಿಯಾನ ಇದೀಗ ತನ್ನ ಬಿರುಸು ಕಳೆದುಕೊಂಡು ಬಹಳಷ್ಟು ತಣ್ಣಗಾಗಿ ಬಿಟ್ಟಿದೆ. ಈ ಬೆಳವಣಿಗೆಗೆ ಸಮಾನಾಂತರವಾಗಿ 'ಗೇ' ಗಳನ್ನು ಗೌರವಿಸಬೇಕೆಂಬ ಅಭಿಯಾನ ತುಂಬಾ ಚುರುಕಾಗಿ ಬಿಟ್ಟಿದೆ. 'ಗೇ' ಗೌರವ ಎಂಬುದು ವ್ಯಾಪಕ ಮಾನ್ಯತೆ ಇರುವ ಫ್ಯಾಶನ್ ಆಗಿಬಿಟ್ಟಿದೆ.

ಫ್ಯಾಶನ್ ಸಾಮಾನ್ಯವಾಗಿ ಪಶ್ಚಿಮದ ಯಾವುದಾದರೂ ಮೂಲೆಯಲ್ಲಿ ಜನ್ಮ ತಾಳುತ್ತದೆ, ಬಹುಬೇಗನೆ ಪೂರ್ವದವರು ಭಕ್ತಿಪೂರ್ವಕ ಅದನ್ನು ಸ್ವೀಕರಿಸುತ್ತಾರೆ. ಹಲವೊಮ್ಮೆ ಪಶ್ಚಿಮದವರು ಒಂದು ಫ್ಯಾಶನ್ ಅನ್ನು ಬಿಟ್ಟು ದಶಕಗಳು ಉರುಳಿದರೂ ಪೌರ್ವಾತ್ಯರಾದ ನಾವಿಲ್ಲಿ ಬಹಳ ವಿಧೇಯವಾಗಿ ಅದಕ್ಕೆ ಅಂಟಿಕೊಂಡಿರುತ್ತೇವೆ. ನಮ್ಮಲ್ಲಿ ಶ್ರೀಮಂತರು ಅಥವಾ ತುಸು ಅನುಕೂಲಸ್ಥರು, ತಾವು ಧರಿಸಿರುವ ಬಟ್ಟೆಯ ಒಂದು ನೂಲು ಎದ್ದರೂ ಸಾಕು, ಮತ್ತೆ ಆ ಬಟ್ಟೆಯನ್ನೆಂದೂ ಧರಿಸುವುದಿಲ್ಲ. ಆದರೆ ಪಶ್ಚಿಮ ದವರು ಅಲ್ಲಲ್ಲಿ ಹರಿದಿರುವ ಜೀನ್ಸ್ ಪ್ಯಾಂಟ್ ಧರಿಸುವುದನ್ನು ಫ್ಯಾಶನ್ ಎಂದು ಸಾರಿದ್ದೇ ತಡ, ಇಲ್ಲಿಯ ನಮ್ಮ ಅನುಕೂಲಸ್ಥ ಯುವಕರು ತಮ್ಮ ಪ್ಯಾಂಟುಗಳನ್ನು ಕಂಡ ಕಂಡಲ್ಲಿ ಹರಿದು ಧರಿಸಲಾರಂಭಿಸುತ್ತಾರೆ.  ಹರಿದು ಚಿಂದಿಯಾದ ಅಥವಾ ಅಲ್ಲಲಿ ತೇಪೆ ಹಾಕಿದ ಅಥವಾ ಬಣ್ಣ ತೀರಾ ಮಸುಕಾಗಿ (Fade) ಹಳತಾಗಿ ಕಾಣುವ ಹೊಸ ಪ್ಯಾಂಟುಗಳನ್ನು ಸಾವಿರಾರು ರೂಪಾಯಿ ಕೊಟ್ಟು, ಖರೀದಿಸುತ್ತಾರೆ.

ತಡವಾದ ಅನುಕರಣೆ 

ಹಾಗೆಂದು ಎಲ್ಲ ಫ್ಯಾಶನ್ ಗಳನ್ನೂ  ಚುರುಕಾಗಿ ತತ್ ಕ್ಷಣವೇ  ಸ್ವೀಕರಿಸಲು ನಮಗೆ ಸಾಧ್ಯವಾಗುವುದಿಲ್ಲ. ಕೆಲವು ವಿಷಯಗಳಲ್ಲಿ ನಾವು ತುಸು ಮಂದಗತಿಯಲ್ಲಿ ಹೆಜ್ಜೆ ಇಡುತ್ತೇವೆ. ಉದಾಹರಣೆಗೆ ಸಲಿಂಗ ಕಾಮದ ವಿಷಯವನ್ನೇ ನೋಡಿ. ಆ ಕುರಿತು ಯು ಎಸ್ ಎ ಯಲ್ಲಿನ ನ್ಯಾಯಾಧೀಶರು 15 ವರ್ಷಗಳ ಹಿಂದೆ ನೀಡಿದ ತೀರ್ಪೊಂದನ್ನು ಭಾರತೀಯ ನ್ಯಾಯಾಂಗವು ತೀರಾ ಇತ್ತೀಚಿಗೆ ಆಮದು ಮಾಡಿಕೊಂಡಿದೆ. ಸಲಿಂಗ ಕಾಮ ಅಪರಾಧವಲ್ಲ ಎಂದು ನಮ್ಮ ಸರ್ವೋಚ್ಚ ನ್ಯಾಯಾಲಯವು ಸಾರಿದೆ. ಅಚ್ಚರಿಯ ಸಂಗತಿ ಏನೆಂದರೆ, ಬಹಳ ಮಹತ್ವದ ಈ ತೀರ್ಪಿನ ಕುರಿತಂತೆ  ಯಾವುದೇ ಗಣ್ಯ ಮಟ್ಟದ ಪ್ರತಿಕ್ರಿಯೆ ಸಾಂಪ್ರದಾಯಿಕ ಭಾರತೀಯ ಸಮಾಜದಲ್ಲಿ  ಪ್ರಕಟವಾಗಲಿಲ್ಲ. ಧರ್ಮ, ಆಧ್ಯಾತ್ಮ, ನಂಬಿಕೆ, ಧ್ಯಾನ, ಇತ್ಯಾದಿಗೆ ಸಂಬಂಧಿಸಿದ ಭಾವನೆಗಳು, ಸಂಕೇತಗಳು ಹಾಗೂ ಗದ್ದಲಗಳು ಸದಾ ತುಂಬಿ ತುಳುಕುತ್ತಿರುವ  ನಮ್ಮ ಮಡಿವಂತ ಸಮಾಜವು ಆ ತೀರ್ಪು ನಮಗೆ ಸಂಬಂಧಿಸಿದ್ದೇ  ಅಲ್ಲವೆಂಬಂತೆ  ನಿರ್ಲಿಪ್ತ ನಿಲುವು ತಾಳಿ ಬಿಟ್ಟಿತು. 

ಕೆಲವರ ಸಡಗರ , ಉಳಿದವರ ನಿಗೂಢ ನಿರ್ಲಿಪ್ತತೆ 

ನಿಜವಾಗಿ ಸುಪ್ರೀಂ ಕೋರ್ಟಿನ ಆ ತೀರ್ಪು  ಫ್ಯಾಶನ್ ನ ವ್ಯಾಪ್ತಿಗೆ ಮೀರಿದ, ತುಂಬಾ ಗಾಢವಾದ, ದೂರಗಾಮಿ ಪರಿಣಾಮಗಳಿರುವ ತೀರ್ಪಾಗಿತ್ತು. ಪ್ರಕೃತಿ, ಧರ್ಮ, ಸಮಾಜ, ನೈತಿಕತೆ, ಚಾರಿತ್ರ್ಯ, ಆರೋಗ್ಯ , ಸಂಬಂಧಗಳು, ಬಾಂಧವ್ಯಗಳು ಹೀಗೆ ಹಲವನ್ನು ಬಾಧಿಸುವ ತೀರ್ಪು. ಆ  ತೀರ್ಪಿನ ಸಮಗ್ರ ಮಹತ್ವಕ್ಕೆ ಹೋಲಿಸಿದರೆ ಅದಕ್ಕೆ ಪ್ರಕಟವಾದ ಪ್ರತಿಕ್ರಿಯೆ ತೀರಾ ನೀರಸ ಹಾಗೂ ಕ್ಷೀಣವಾಗಿತ್ತು. ಸುಪ್ರೀಂ ಕೋರ್ಟಿನ ಈ ತೀರ್ಪು ಪ್ರಕಟವಾದ ಬೆನ್ನಿಗೆ ಅದರ 'ನೇರ ಫಲಾನುಭವಿ' ಗಳಾದ ಒಂದಷ್ಟು ಮಂದಿ ಯಾವುದೋ ವಿಶ್ವ  ಕಪ್ ಮ್ಯಾಚು ಗೆದ್ದಾಗ ಸಂಭ್ರಮಿಸುವಂತೆ ಸದ್ದು ಗದ್ದಲದೊಂದಿಗೆ ಸಂಭ್ರಮಿಸಿದ್ದಾರೆ, ಹರ್ಷ ಪಟ್ಟಿದ್ದಾರೆ. ಬೀದಿಗಳಲ್ಲಿ ನಲಿದಾಡಿದ್ದಾರೆ. ಆದರೆ ಉಳಿದವರ ಕಥೆ ಏನು? ಅವರೆಲ್ಲಾ ಮೌನವಾಗಿ ಸಂತೋಷ ಆಚರಿಸಿದರೆ? ಈ ತೀರ್ಪಿನ ಬಗ್ಗೆ ಯಾರಿಗೆ ಏನು ಅನಿಸಿತು? ಯಾರು ಯಾವ ರೀತಿ ತಮ್ಮ ಅನಿಸಿಕೆಗಳನ್ನು ಪ್ರಕಟಿಸಿದರು ? ಅಥವಾ ಯಾರು ಎಷ್ಟು ನಾಜೂಕಾಗಿ ತಮ್ಮ ಅಭಿಮತವನ್ನು ಬಚ್ಚಿಟ್ಟುಕೊಂಡರು ? ಅವರು  ತಮ್ಮ ಅನಿಸಿಕೆಗಳನ್ನು ಆ ರೀತಿ ಯಾಕೆ ಬಚ್ಚಿಟ್ಟು ಕೊಂಡರು?   ಇವೆಲ್ಲಾ  ನಿಜಕ್ಕೂ ಕುತೂಹಲದ ವಿಷಯಗಳು. 

ಗಮ್ಮತ್ತೆಂದರೆ ಶತಮಾನಗಳಿಂದ ಸಲಿಂಗ ಕಾಮವನ್ನು  ಅದು ಅನೈತಿಕ, ಅಸ್ವಾಭಾವಿಕ, ಹೊಲಸು, ಅಮಾನುಷ, ಲಜ್ಜಾಹೀನ ಎಂದೆಲ್ಲ  ನಿಂದಿಸುತ್ತಾ ಅದರ ವಿರುದ್ಧ ಉಪದೇಶ ನೀಡುತ್ತಾ ಬಂದಿರುವ ನಮ್ಮಲ್ಲಿನ  ಹಲವು ಪ್ರಮುಖ ಧರ್ಮಗಳ ವಕ್ತಾರರು ಕೂಡಾ ಪ್ರಸ್ತುತ ಸುಪ್ರೀಂ ಕೋರ್ಟ್ ತೀರ್ಪಿನ ವಿಷಯದಲ್ಲಿ ಮೌನ ತಾಳಿದರು. ಮಾತು ಮಾತಿಗೆ ಧರ್ಮ ರಕ್ಷಣೆಯ ಹೆಸರಲ್ಲಿ ಬೀದಿಗಿಳಿಯುವವರು ಈ ವಿಷಯದಲ್ಲಿ ತಾಳಿರುವ ಮೌನ ಅಚ್ಚರಿ ಮೂಡಿಸುತ್ತದೆ. ಅವರು ಈ ವಿಷಯದಲ್ಲಿ ಪ್ರತಿಭಟಿಸುವುದು ಬಿಡಿ, ಈ ಕುರಿತು ಚರ್ಚಿಸುವುದಕ್ಕೂ ಬೀದಿಯ ಹತ್ತಿರ ಸುಳಿಯದಿರುವುದು ನಿಗೂಢವಾಗಿದೆ. ನೈತಿಕತೆಯ ರಕ್ಷಣೆಯ ಹೆಸರಲ್ಲಿ, ಬೀದಿಯಲ್ಲಿ ನಡೆದಾಡುವ ಯುವಕ ಯುವತಿಯರ ಧರ್ಮ, ಜಾತಿ ಇತ್ಯಾದಿಗಳ ಬಗ್ಗೆ ತನಿಖೆ ನಡೆಸಿ, ಅಲ್ಲೇ ವಿಚಾರಣೆಯನ್ನೂ ನಡೆಸಿ, ಅವರು ವಾಗ್ದಂಡ, ನಿಂದನೆ, ಹಲ್ಲೆ, ವಿವಸ್ತ್ರ, ಮರಣ ದಂಡನೆ ಇತ್ಯಾದಿಗಳ ಪೈಕಿ ಯಾವ ಶಿಕ್ಷೆಗೆ ಅರ್ಹರೆಂಬುದನ್ನೂ ಅಲ್ಲೇ ತೀರ್ಮಾನಿಸಿ ಅಲ್ಲೇ ಶಿಕ್ಷೆಯನ್ನೂ  ಘೋಷಿಸಿ ಅದನ್ನು ಜಾರಿಗೊಳಿಸಿಯೂ ಬಿಡುವ ನಮ್ಮ ಅತಿ ಸಂವೇದನಾ ಶೀಲ ಧರ್ಮ ವೀರರು ಕೂಡಾ  ಸಲಿಂಗ ಕಾಮವನ್ನು ಸಕ್ರಮಗೊಳಿಸುವ ತೀರ್ಪಿಗೆ ಮೌನ ಸಮ್ಮತಿ ನೀಡಿದರು. ಗೋ ರಕ್ಷಕರು  ಕೂಡಾ ಪರೋಕ್ಷವಾಗಿ 'ಗೇ'  ರಕ್ಷಕರಾಗಿ ಮಾರ್ಪಟ್ಟರು.

ಕ್ಷಮಾಪಣೆಯ  ವರಸೆ 

ಕಳೆದ ಕೆಲವು ವರ್ಷಗಳಿಂದ ಕೆಲವರು  'LGBTQ ಗಳ ಹಕ್ಕುಗಳು' ಎಂಬ ಹೆಸರಲ್ಲಿ ಒಂದು ಉದ್ದದ ಪಟ್ಟಿ ರಚಿಸಿ, ಅವುಗಳ ಪರ ವಕಾಲತ್ತು ನಡೆಸುತ್ತಿದ್ದರು. ಕಾಲಕ್ರಮೇಣ ಅವರಿಗೆ, ತಮ್ಮ ಚಟುವಟಿಕೆಯನ್ನು ಫ್ಯಾಶನ್ ನ ವ್ಯಾಪ್ತಿಗೆ ಸೇರಿಸಲು ಸಾಧ್ಯವಾಯಿತು. . ಒಂದು ವಸ್ತು ಫ್ಯಾಶನ್ ಆಗಿ ಬಿಟ್ಟಿತೆಂದರೆ ಮತ್ತೆ ಅದನ್ನು ವಿರೋಧಿಸುವುದು ಸುಲಭದ ಕೆಲಸವೇನಲ್ಲ. ಆದ್ದರಿಂದಲೇ,  ಖಾಸಗಿಯಾಗಿ ಸಲಿಂಗ ಕಾಮದ ವಿರುದ್ಧ ತುಂಬಾ ಖಾರವಾಗಿಯೇ ಮಾತನಾಡುತ್ತಿದ್ದ ಅಥವಾ ಆಕುರಿತು ಮಾತನಾಡಿದರೆ ವಾಕರಿಕೆ ಬರುತ್ತದೆ ಎಂಬ ಕಾರಣಕ್ಕಾಗಿ ಮಾತನಾಡಲು ಮುಜುಗರ ಪಡುತ್ತಿದ್ದ ಹಲವರ ಧಾಟಿ ಬದಲಾಗಿದೆ. ಅವರಲ್ಲಿ ಅನೇಕರು ಇದೀಗ ಸಾರ್ವಜನಿಕವಾಗಿ ಬೇರೆಯೇ ನಿಲುವು ಪ್ರಕಟಿಸುತ್ತಿದ್ದಾರೆ ಅಥವಾ ತಮ್ಮ ನೈಜ ನಿಲುವು ಎಲ್ಲಿ ಜನರಿಗೆ ತಿಳಿದು ಬಿಡುತ್ತದೋ ಎಂದು ಅಳುಕುತ್ತಿದ್ದಾರೆ. ಅವರ ಧ್ವನಿಯಲ್ಲಿ ರಾಜಿ, ಹಿಂಜರಿಕೆ  ಮಾತ್ರವಲ್ಲ ಕ್ಷಮಾಪಣೆಯ ಧಾಟಿ ಎದ್ದು ಕಾಣುತ್ತಿದೆ. 'ಗೇ' ರಕ್ಷಣೆ ಎಂಬುದು ಜಾಗತಿಕ ಮಟ್ಟದಲ್ಲಿ ಫ್ಯಾಶನ್  ಆಗಿ ಬಿಟ್ಟಿದೆ ಎಂದು ಅವರು ನಂಬಿರುವುದರಿಂದ ಆ ಕುರಿತು ಪ್ರತಿಕೂಲವಾಗಿ ಮಾತನಾಡಿದರೆ ಎಲ್ಲಿ ಯಾರಾದರೂ ತಮ್ಮನ್ನು ಔಟ್ ಆಫ್ ಫ್ಯಾಶನ್ ಎಂದು ಬ್ರಾಂಡ್ ಮಾಡಿ ಬಿಡುತ್ತಾರೋ ಎಂದು ಅವರು ಅಂಜುತ್ತಿದ್ದಾರೆಂಬುದು ಸ್ಪಷ್ಟವಾಗಿದೆ.

ಪ್ರತಿರೋಧ ರೋಗದ ವಿರುದ್ಧವೇ ಹೊರತು ರೋಗಿಯ ವಿರುದ್ಧವಲ್ಲ.  

ಸಲಿಂಗ ಕಾಮದ ಘೋರ ಅಪಾಯಗಳ ಬಗ್ಗೆ ಜಾಗೃತಿ ಇರುವವರು ಆ ಕುರಿತು ಸಾಮಾಜಿಕ ಜಾಗೃತಿ ಬೆಳೆಸಲು ಶ್ರಮಿಸುವುದು ಸಹಜ. ಆದ್ದರಿಂದಲೇ  ಸಲಿಂಗ ಕಾಮದ ವಿರುದ್ಧ ಪ್ರತಿರೋಧ ಎಲ್ಲ ಸ್ವಸ್ಥ ಸಮಾಜಗಳಲ್ಲಿ ಹಿಂದಿನಿಂದಲೂ ನಡೆದು ಬಂದಿದೆ. ಇದೀಗ, ಸಲಿಂಗಕಾಮಕ್ಕೆ ಗೌರವ ಕೊಡಿಸುವ ಶ್ರಮವು ಜಾಗತಿಕ ಮಟ್ಟದಲ್ಲಿ ಬಹಳ ಸಂಘಟಿತವಾಗಿ ನಡೆಯುತ್ತಿರುವುದರಿಂದ ಅಂತಹ ಶಮಗಳ ವಿರುದ್ಧವೂ ಪ್ರತಿರೋಧ  ಪ್ರಕಟವಾಗುತ್ತಿದೆ. ನಿರ್ಮಲ ವಸ್ತುವಿಗೆ ಕಳಂಕ ಅಂಟಿದರೆ ಅದನ್ನು ಕಳಂಕ ಮುಕ್ತಗೊಳಿಸಲು ಶ್ರಮಿಸಬಹುದು. ಆದರೆ ಸಾಕ್ಷಾತ್ ಕಳಂಕವನ್ನು ಕಳಂಕ ಮುಕ್ತಗೊಳಿಸಲಿಕ್ಕಾಗುವುದಿಲ್ಲ. ಆದ್ದರಿಂದಲೇ ಸಲಿಂಗ ಕಾಮವನ್ನು ಕಳಂಕ ಮುಕ್ತಗೊಳಿಸಲು ನಡೆಯುವ ಎಲ್ಲ ಶ್ರಮಗಳ ಮೇಲೆ ಕಣ್ಣಿಟ್ಟು ಅವುಗಳನ್ನು ಸೋಲಿಸಬೇಕಾದುದು ತಮ್ಮ ಕರ್ತವ್ಯವಾಗಿದೆ ಎಂದು ಸ್ವಸ್ಥ ಸಮಾಜದ ಸದಸ್ಯರು ಹಾಗೂ ಸಾಮಾಜಿಕ ಸ್ವಾಸ್ಥ್ಯದ ಪ್ರತಿಪಾದಕರು ನಂಬಿದ್ದಾರೆ. ಜಗತ್ತಿನಲ್ಲಿ ಹಲವೆಡೆ ಸಲಿಂಗ ಕಾಮದ ವಿರುದ್ಧ ಅಭಿಯಾನಗಳು  ಹಿಂಸಾತ್ಮಕ ರೂಪ ತಾಳಿ ಹಲವು ಅನಾಹುತಗಳಿಗೆ ಎಡೆಮಾಡಿಕೊಟ್ಟಿದೆ. ನಿಜವಾಗಿ ಸಲಿಂಗ ಕಾಮದ ಹಾನಿಗಳನ್ನು ಬಲ್ಲವರು ಯಾರೂ ಅದನ್ನು ಪ್ರತಿರೋಧಿಸದೆ ಇರಲು ಸಾಧ್ಯವಿಲ್ಲ. ಆದರೆ ಈ ಪ್ರತಿರೋಧವು ಚರ್ಚೆ, ಸಂವಾದ, ಸಮಾಲೋಚನೆ, ಶಿಕ್ಷಣ, ಉಪದೇಶ  ಇತ್ಯಾದಿಗಳ ಮೂಲಕ ಜನಜಾಗೃತಿ ಬೆಳೆಸುವ ಸ್ವರೂಪದಲ್ಲಿರಬೇಕೇ ಹೊರತು ಹಿಂಸೆ, ಬಲವಂತ, ನಿಂದನೆ, ದೂಷಣೆ ಮುಂತಾದ ರೂಪಗಳನ್ನು ಖಂಡಿತ ತಾಳಬಾರದು.  ಸಲಿಂಗ ಕಾಮದ ಕುರಿತು ಚರ್ಚೆ ಪ್ರಬುದ್ಧ ಹಾಗೂ ಗಂಭೀರ ಸ್ತರದಲ್ಲಿ ಮುಂದುವರಿಯಬೇಕಿದ್ದರೆ, ಚರ್ಚೆಯಲ್ಲಿ ಪಾಲುಗೊಳ್ಳುವವರು ಬಹಳಷ್ಟು ಸಂವೇದನಾಶೀಲರಾಗಿ,  ಸಂಯಮದೊಂದಿಗೆ, ಸಂತುಲಿತವಾಗಿ ಮುಂದುವರಿಯಬೇಕಾಗುತ್ತದೆ.  ಅವರು ರೋಗಿ ಮತ್ತು ರೋಗದ ನಡುವಣ ಅಂತರವನ್ನು ಎಂದೂ ಮರೆಯಬಾರದು. ರೋಗದ ಕುರಿತಾದ ಅವರ ಜಿಗುಪ್ಸೆ ಯಾವ ಕಾರಣಕ್ಕೂ  ರೋಗಿಯ ವಿರುದ್ಧ ತಿರುಗಬಾರದು.

ಯಾವುದು ಮಾನವೀಯತೆ?

ಆತ್ಮ ಹತ್ಯೆ ಪಾಪ  ಎಂದು ನಂಬುವ  ಹಲವಾರು  ಮಂದಿ ನಮ್ಮ ಸಮಾಜದಲ್ಲಿದ್ದಾರೆ. ಅದನ್ನು ಪಲಾಯನವಾದ, ಹೇಡಿತನ ಎಂದಿತ್ಯಾದಿಯಾಗಿ ಖಂಡಿಸುವವರೂ ಇದ್ದಾರೆ. ಇಷ್ಟಾಗಿಯೂ  ನಮ್ಮ ದೇಶವೂ ಸೇರಿದಂತೆ ಜಗತ್ತಿನೆಲ್ಲೆಡೆ ನೂರಾರು ಮಂದಿ ವಿವಿಧ ಕಾರಣಗಳಿಂದ  ಆತ್ಮ ಹತ್ಯೆಗೆ ಶರಣಾಗುತ್ತಾರೆ. ವಿಶ್ವ ಆರೋಗ್ಯ ಸಂಸ್ಥೆಯನುಸಾರ ಜಗತ್ತಿನಲ್ಲಿ ಪ್ರತಿ ವರ್ಷ ಸುಮಾರು ಹತ್ತು ಲಕ್ಷ ಮಂದಿ ಆತ್ಮ ಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಅಂದರೆ  ಈ ಲೋಕದಲ್ಲಿ ಪ್ರತಿ ನಲ್ವತ್ತು ಸೆಕೆಂಡ್ ಗೆ ಒಬ್ಬ ವ್ಯಕ್ತಿ ಆತ್ಮ ಹತ್ಯೆ ಮಾಡಿಕೊಳ್ಳುತ್ತಾನೆ.  ಕಳವಳದ ಅಂಶವೇನೆಂದರೆ ಜಗತ್ತಿನಲ್ಲಿ ಈ ರೀತಿ ಆತ್ಮಹತ್ಯೆಗೆ ಶರಣಾಗುವವರ ಸಂಖ್ಯೆಯು ಕ್ರಮೇಣ ಕುಸಿಯುವ ಬದಲು ಬಹಳ ತ್ವರಿತವಾಗಿ ಹೆಚ್ಚುತ್ತಿದ್ದು ಬಹುಬೇಗನೆ ಈ ಸಂಖ್ಯೆ ದ್ವಿಗುಣಗೊಳ್ಳುವ ಲಕ್ಷಣಗಳಿವೆ.

ಈ ರೀತಿ, ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಜೀವ ಕಳೆದುಕೊಳ್ಳುತ್ತಿರುವ  ಆತ್ಮ ಹತ್ಯಾಕಾಂಕ್ಷಿಗಳ ಬಗ್ಗೆ ಅನುಕಂಪ, ಸಹಾನುಭೂತಿ ಇರುವವರು ಏನು ಮಾಡಲು ಸಾಧ್ಯವಿದೆ? ಆತ್ಮ ಹತ್ಯೆ ಯಾವುದೇ ಸಮಸ್ಯೆಯ ಪರಿಹಾರವಲ್ಲ ಎಂಬ ಸಂದೇಶವನ್ನು ಸಮಾಜದಲ್ಲಿ ಜನಪ್ರಿಯ ಗೊಳಿಸುವ ಆಂದೋಲನ, ಅಭಿಯಾನಗಳನ್ನು ನಡೆಸಬಹುದು.  ಯಾರಲ್ಲಾದರೂ ಆತ್ಮ ಹತ್ಯೆಯ ಒಲವು ಮೂಡಿದರೆ ಅಂಥವರಿಗೆ ಸಾಂತ್ವನ ನೀಡಿ, ಅವರ ನಿರಾಶೆ ಹತಾಶೆಗಳನ್ನು ಹೋಗಲಾಡಿಸಿ, ಅವರಲ್ಲಿ ಧೈರ್ಯ ತುಂಬಿ, ಅವರಲ್ಲಿ ಆತ್ಮವಿಶ್ವಾಸ,  ಸ್ಥೈರ್ಯ ಹಾಗೂ ಆಶಾವಾದ ಮೂಡಿಸುವಂತಹ ಸಾಂತ್ವನ ಕೇಂದ್ರಗಳನ್ನು ಸ್ಥಾಪಿಸಬಹುದು. ಇದಕ್ಕಾಗಿ, ಅಲ್ಲಲ್ಲಿ ವೈದ್ಯರಿಗೆ, ಸಾಮಾಜಿಕ ಕಾರ್ಯಕರ್ತರಿಗೆ ಸಮಾಲೋಚನಾ ತರಬೇತಿ ನೀಡಬಹುದು. ಇದರ ಬದಲಿಗೆ ಯಾರಾದರೂ ಆತ್ಮ ಹತ್ಯಾಕಾಂಕ್ಷಿಗಳ ಬಗ್ಗೆ ಸಹಾನುಭೂತಿ ಪ್ರಕಟಿಸುತ್ತಾ, ಆತ್ಮ ಹತ್ಯೆಯ ಹಕ್ಕನ್ನು ವೈಭವೀಕರಿಸುತ್ತಾ, ಯಾರೂ ಆತ್ಮ ಹತ್ಯೆಯನ್ನು ವಿರೋಧಿಸಬಾರದು, ಅದರ ವಿರುದ್ಧ ಮಾತನಾಡಬಾರದು, ಎಂದೆಲ್ಲಾ  ವಾದಿಸಿದರೆ ಹೇಗಿದ್ದೀತು?  ಆತ್ಮಹತ್ಯೆಯನ್ನು ಸಕ್ರಮಗೊಳಿಸಬೇಕು, ಜನರಿಗೆ ಘನತೆಯೊಂದಿಗೆ ಆತ್ಮ ಹತ್ಯೆಮಾಡಿಕೊಳ್ಳುವುದಕ್ಕೆ ಬೇಕಾದ ಎಲ್ಲ ಮಾರ್ಗದರ್ಶನ ಹಾಗೂ ಸಕಲ ಸವಲತ್ತುಗಳನ್ನು ಒದಗಿಸಿ ಕೊಡಬೇಕು ಎಂದು ಆಗ್ರಹಿಸಲಾರಂಭಿಸಿದರೆ ಹೇಗಿದ್ದೀತು?  ಇಂಥವರು ಆತ್ಮಹತ್ಯಾಕಾಂಕ್ಷಿಗಳ  ಹಿತೈಷಿಗಳಾಗಿರಲು ಸಾಧ್ಯವೇ?  ಮಾನವೀಯ ಅಂತಃಕರಣ ಉಳ್ಳ ಯಾರೂ ಎಲ್ಲೂ ಎಂದೂ ಇಂತಹ ಧೋರಣೆಯನ್ನು ಅನುಸರಿಸಲಾರರು. ಹಾಗೆಯೇ, ಮಾನವೀಯ  ಅಂತಃಕರಣ ಇರುವ ಯಾರೂ  ಇಂಥವರ  ವಾದಗಳನ್ನು ಕೇಳಿ ಅದನ್ನು ಪ್ರತಿಭಟಿಸದೆ, ಪ್ರತಿರೋಧಿಸದೆ ಸುಮ್ಮನಿರಲಾರರು. 

ಆತ್ಮ ಹತ್ಯೆಯ ಕುರಿತಾದ  ಈ ಮಾತುಗಳು  'ಗೇ' (Gay) ಗಳ ಕುರಿತು ಅನುಕಂಪ ಪ್ರಕಟಿಸುತ್ತಾ, 'ಗೇ' ಸಂಸ್ಕೃತಿಯನ್ನು ಸಕ್ರಮಗೊಳಿಸಿ ಸಮಾಜದಲ್ಲಿ ಅದಕ್ಕೆ ಮಾನ್ಯತೆ ನೀಡಬೇಕೆಂದು ವಾದಿಸುವವರಿಗೆ ಮತ್ತು ಅಂತಹ ವಾದಗಳಿಗೆ ಮೌನ ಸಮ್ಮತಿ ಸೂಚಿಸುವವರಿಗೂ ಸಂಪೂರ್ಣವಾಗಿ ಅನ್ವಯಿಸುತ್ತವೆ.  ಮಾನವೀಯ ನೆಲೆಯಲ್ಲಿ ಗೇ ಗಳ ಬಗ್ಗೆ ಅನುಕಂಪ ತೋರಿಸುವವರು ನಿಜಕ್ಕೂ ಪ್ರಾಮಾಣಿಕರಾಗಿದ್ದರೆ ಗೇ ಸಂಸ್ಕೃತಿಯನ್ನು ಮತ್ತು ಸಲಿಂಗ ಕಾಮವನ್ನು ಬಹಳ ಸ್ಪಷ್ಟವಾಗಿ ಹಾಗೂ ಪರಿಣಾಮಕಾರಿಯಾಗಿ ವಿರೋಧಿಸಬೇಕು. ಆ ಕುರಿತು ವ್ಯಾಪಕ ಜನಜಾಗೃತಿ ಮೂಡಿಸಬೇಕು. 'ಗೇ' ಗಳನ್ನೂ ಸಂಪೂರ್ಣ ಸಮಾಜವನ್ನೂ ವಿನಾಶದಿಂದ ರಕ್ಷಿಸುವುದಕ್ಕೆ ಇರುವುದು ಇದೊಂದೇ ಮಾರ್ಗ.

'ಗೇ' ಸಂಸ್ಕೃತಿಯ ಭೀಭತ್ಸ ಫಲಗಳು 

'ಗೇ' ಸಂಸ್ಕೃತಿಯ ಬಗ್ಗೆ ಜಿಗುಪ್ಸೆ ಪಡುವುದಕ್ಕೆ ಮತ್ತು ಅದರ ವಿರುದ್ಧ ನಿಷ್ಠುರ ನಿಲುವು ತಾಳುವುದಕ್ಕೆ ಧಾರ್ಮಿಕ, ನೈತಿಕ  ಅಥವಾ ಆಧ್ಯಾತ್ಮಿಕ ಆಧಾರಗಳ ಅಗತ್ಯವೇನೂ ಇಲ್ಲ. ಇದರ ಬಗ್ಗೆ ಐತಿಹಾಸಿಕ ಸಂಶೋಧನೆ ಅಥವಾ ಭವಿಷ್ಯದ ಕುರಿತಾದ ಊಹೆ, ತರ್ಕ ಇತ್ಯಾದಿಗಳ ಅಗತ್ಯವೂ ಇಲ್ಲ. ನಮ್ಮ ಮುಂದುವರಿದ, ಆಧುನಿಕ, ವರ್ತಮಾನ ಸಮಾಜದಲ್ಲಿ 'ಗೇ'  ಸಂಸ್ಕೃತಿಯು ನೀಡಿರುವ ಭಯಾನಕ ಫಲಗಳನ್ನೊಮ್ಮೆ ನೋಡಿದರೆ ಸಾಕು. ಮಾನವೀಯ ಅಂತಃಕರಣ ಉಳ್ಳವರು ಪ್ರಥಮವಾಗಿ ಗೇ ಗಳನ್ನು 'ಗೇ' ಸಂಸ್ಕೃತಿಯಿಂದ ಕಾಪಾಡಲು  ಧಾವಿಸುತ್ತಾರೆ ಮತ್ತು ಸ್ವಸ್ಥ ಮನುಷ್ಯರು 'ಗೇ' ಗಳಾಗದಂತೆ ರಕ್ಷಿಸುವುದು ಹೇಗೆಂದು ಚಿಂತಿತರಾಗುತ್ತಾರೆ. ಏಕೆಂದರೆ 'ಗೇ'  ಸಂಸ್ಕೃತಿಗೆ ಏಡ್ಸ್ ಎಂಬ ಮಾರಕ ರೋಗದೊಂದಿಗೆ  ನೇರ ನಂಟಿದೆ, ಮಾತ್ರವಲ್ಲ, ಆ ಸಂಸ್ಕೃತಿ  ಏಡ್ಸ್ ಎಂಬ ಮಹಾಮಾರಿಯ ಹೆಬ್ಬಾಗಿಲಾಗಿದೆ.
 
ಏಡ್ಸ್ ಗೆ ಸುಮಾರು ಒಂದು ಶತಮಾನದ ಇತಿಹಾಸವಿದೆ ಎನ್ನುತ್ತಾರೆ. ಆದರೆ ಮಾನವ ಸಮಾಜ ಅದರ ಅಪಾಯಗಳನ್ನು ಅಧಿಕೃತವಾಗಿ ಗುರುತಿಸತೊಡಗಿದ್ದು ೮೦ರ ದಶಕದ ಆರಂಭದಲ್ಲಿ. ಪ್ರಥಮವಾಗಿ ವರದಿಯಾದ ಏಡ್ಸ್ ಪ್ರಕರಣಗಳಲ್ಲಿ ಒಂದಂಶ ಸಮಾನವಾಗಿತ್ತು. ಅದೇನೆಂದರೆ ಏಡ್ಸ್ ಪೀಡಿತರೆಲ್ಲರೂ ಸಲಿಂಗ ಕಾಮಿಗಳಾಗಿದ್ದರು ಅಥವಾ ಸಲಿಂಗ ಕಾಮಿಗಳ ಸಂಗಾ ಅಥವಾ ರಕ್ತದ  ಮೂಲಕ ಏಡ್ಸ್ ಸೋಂಕು ಪಡೆದವರಾಗಿದ್ದರು. ಕಳೆದ ನಾಲ್ಕು ದಶಕಗಳಲ್ಲಿ ಈ ರೋಗವು ಜಗತ್ತಿನಲ್ಲಿ ಮೂರೂವರೆ ಕೋಟಿಗೂ ಹೆಚ್ಚು ಮಂದಿಯ ಜೀವಗಳನ್ನು ಬಲಿ  ಪಡೆದುಕೊಂಡಿದೆ.  ಇಂದು ಜಗತ್ತಿನಲ್ಲಿ ಸುಮಾರು ೩.೭ ಕೋಟಿ ಜನರು ಏಡ್ಸ್ ರೋಗದಿಂದ ಬಳಲುತ್ತಿದ್ದಾರೆ. ಆ ಪೈಕಿ ೨ ಕೋಟಿಗೂ ಅಧಿಕ ಮಂದಿ ೧೫ ವರ್ಷಕ್ಕಿಂತ ಕೆಳ ವಯಸ್ಸಿನ ಮಕ್ಕಳು. ಇನ್ನೊಂದು ದುರಂತವೇನೆಂದರೆ  ಏಡ್ಸ್ ಪೀಡಿತರ ಪೈಕಿ ಸುಮಾರು ೩೯% ಮಂದಿಗೆ, ತಾವು ಏಡ್ಸ್ ಪೀಡಿತರೆಂಬ ಪರಿಜ್ಞಾನವೇ ಇಲ್ಲ. ಏಕೆಂದರೆ ಅವರು ತಮ್ಮನ್ನು HIV ಪರೀಕ್ಷೆಗೆ ಒಳಪಡಿಸಿಲ್ಲ. ಅದೆಷ್ಟೋ ಮಂದಿಗೆ ತಮ್ಮನ್ನು HIV ಪರೀಕ್ಷೆಗೆ ಒಳಪಡಿಸುವ ಅಗತ್ಯವಿದೆ ಎಂಬುದೇ  ಮನವರಿಕೆ ಯಾಗಿ ರುವುದಿಲ್ಲ.  ಇನ್ನೆಷ್ಟೋ ಕಡೆ ಅಂತಹ ಪರೀಕ್ಷೆಗೆ ಬೇಕಾದ ಸವಲತ್ತುಗಳು ಕೂಡಾ ಲಭ್ಯವಿರುವುದಿಲ್ಲ.

ಏಡ್ಸ್ ಬಂದರೆ ಬರಲಿ ಎಂದು ಧೈರ್ಯದಿಂದ ಸಲಿಂಗ ಸಾಹಸಕ್ಕೆ ಇಳಿಯುವವರ ಪ್ರವೃತ್ತಿಯನ್ನು ಯಾರಾದರೂ ಸಾಹಸ ಪ್ರವೃತ್ತಿಯೆಂದು ಪ್ರಶಂಸಿಸ ಬಹುದು. ಆದರೆ ಅವರ ಕೃತ್ಯಗಳ ಪರಿಣಾಮವಾಗಿ ಆ ಅಪಾಯಕಾರಿ  ಕೃತ್ಯದೊಂದಿಗೆ ಯಾವುದೇ ಸಂಬಂಧ ಇಲ್ಲದ ಲಕ್ಷಾಂತರ ಮುಗ್ಧ ಮಂದಿ ಕೂಡಾ ಪರೋಕ್ಷ ಮೂಲಗಳಿಂದ ಅವರ ರೋಗದ ಸೋಂಕು ಪಡೆದು ರೋಗಿಗಳಾಗಿ, ನರಕ ಯಾತನೆ ಅನುಭವಿಸಿ ಸಾಯುತ್ತಾರೆ.  ಗೇ ಅನುಕಂಪಿಗಳು ತಮ್ಮ ಅನುಕಂಪದ ಒಂದು ಪಾಲನ್ನಾದರೂ ಆ ಮುಗ್ಧ ಬಲಿಪಶುಗಳಿಗಾಗಿ ಮೀಸಲಿಡಬೇಕು. 

ವಿಶ್ವ ಸಂಸ್ಥೆಯವರು ಒದಗಿಸಿರುವ ಮಾಹಿತಿ ಪ್ರಕಾರ ೨೦೧೬ ರಲ್ಲಿ ಒಂದೇ ವರ್ಷದ ಅವಧಿಯಲ್ಲಿ ೧೦ ಲಕ್ಷ ಮಂದಿ ಏಡ್ಸ್ ರೋಗ ಪೀಡಿತರು  ಮರಣವನ್ನಪ್ಪಿದ್ದಾರೆ. ಅದೇ ವರ್ಷ ೧೮ ಲಕ್ಷ ಮಂದಿ ಹೊಸದಾಗಿ HIV ಸೋಂಕಿಗೆ ಒಳಗಾಗಿದ್ದಾರೆ. ಅಂದರೆ ನಿತ್ಯ ಸರಾಸರಿ ೫ಸಾವಿರ ಮಂದಿ ಹೊಸದಾಗಿ ಏಡ್ಸ್ ಸೋಂಕಿತ ರಾಗುತ್ತಿದ್ದಾರೆ.

ಏಡ್ಸ್ ಮತ್ತು ಸಲಿಂಗ ಅಥವಾ ಕಾಮ ವಿಕೃತಿ ಇವೆರಡರ  ನಡುವೆ ಏನು ಸಂಬಂಧವಿದೆ ಎಂದು ಅಚ್ಚರಿ ಪಡುವವರು ಗಮನಿಸಬೇಕು: ಜಗತ್ತಿಗೆ ಅನೇಕಾರು ಅನಿಷ್ಟಗಳನ್ನು ರಫ್ತು ಮಾಡಿರುವ ಯು ಎಸ್ ಎ ಜನಸಂಖ್ಯೆಯಲ್ಲಿ ಸಲಿಂಗ ಕಾಮಿಗಳ ಪ್ರಮಾಣ ೨% ರ   ಆಸುಪಾಸಿನಲ್ಲಿದೆ. ಆದರೆ ಅಲ್ಲಿರುವ  ಏಡ್ಸ್ ರೋಗ ಪೀಡಿತರ ಪೈಕಿ ಸಲಿಂಗಕಾಮಿಗಳು ಮತ್ತು ಉಭಯ ಕಾಮಿಗಳ (Bisexual) ಪ್ರಮಾಣ ೭೦% ದಷ್ಟಿದೆ. ಸಲಿಂಗ ಕಾಮವೆನ್ನುವುದು ಕೇವಲ ಭಾವನೆಗಳು, ಒಲವುಗಳು ಮತ್ತು ಹವ್ಯಾಸಗಳಿಗೆ ಸಂಬಂಧಿಸಿದ ವಿಷಯವಲ್ಲ, ಅದು ನೇರವಾಗಿ ಅಸ್ತಿತ್ವಕ್ಕೇ ಸಂಬಂಧಿಸಿದ ಅಪಾಯವೆಂಬುದಕ್ಕೆ ಬೇರಾವ ಪುರಾವೆಯ ಅಗತ್ಯವಿದೆ?

ಸಲಿಂಗ ಕಾಮಿಗಳು ಏಡ್ಸ್ ಮಾತ್ರವಲ್ಲದೆ ಹಲವು ಬಗೆಯ ಇತರ ಲೈಂಗಿಕ ರೋಗಗಳಿಗೂ ತುತ್ತಾಗುವ ಸರ್ವ ಸಾಧ್ಯತೆಗಳಿವೆ. ಜೊತೆಗೆ,  ತಮ್ಮ ಸಂಪರ್ಕದಲ್ಲಿರುವ ಅಥವಾ ಅರಿವಿಲ್ಲದೆ ತಮ್ಮ ರಕ್ತ ಪಡೆಯುವ  ಇತರರನ್ನು ಕೂಡ ಅಪಾಯಕ್ಕೆ ಸಿಲುಕಿಸುವ ಸಾಧ್ಯತೆ ಗಳಿವೆ. ಹಾಗೆಯೇ , ಅವರು ಗೊನೊರಿಯಾ, ಸಿಫಿಲಿಸ್, ಹೇರ್ಪಿಸ್, ಹೆಪಾಟೈಟಿಸ್ A, B, ಮತ್ತು C ಇತ್ಯಾದಿ ಮಾರಕ ವ್ಯಾಧಿಗಳಿಗೆ ತುತ್ತಾಗುವ ಸಾಧ್ಯತೆ ಗಳಿರುತ್ತವೆ. 

ಯು ಎಸ್ ಎ ಯಲ್ಲಿರುವ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಎಂಡ್ ಪ್ರಿವೆನ್ಷನ್ (ಸಿಡಿಸಿ) ಪ್ರಕಟಿಸಿರುವ ವರದಿ ಪ್ರಕಾರ ೨೦೧೪ ರಲ್ಲಿ ಪ್ರಥಮ ಹಾಗೂ ದ್ವಿತೀಯ ಮಟ್ಟದ ಸಿಫಿಲಿಸ್ (syphilis) ರೋಗ ಬಾಧಿತರ ಪೈಕಿ ೮೩% ಮಂದಿ ವಿವಿಧ ಸ್ವರೂಪದ ಸಲಿಂಗ ಕಾಮಿಗಳಾಗಿದ್ದರು. ಸಲಿಂಗ ಕಾಮಿಗಳು ಖ್ಲಾಮೆಡಿಯ (chlamydia) ಮತ್ತು (gonorrhea) ಎಂಬ ಮಾರಕ ಸೋಂಕುಗಳಿಗೆ ತುತ್ತಾಗುವ ಅಪಾಯ ಇತರರಿಗಿಂತ ತುಂಬಾ ಅಧಿಕವಿದೆ. ಇದೇ  ಸಂಸ್ಥೆಯ ವರದಿ ಪ್ರಕಾರ ಸಹಜ ಕಾಮಿಗಳಿಗೆ ಹೋಲಿಸಿದರೆ ಸಲಿಂಗ ಕಾಮಿಗಳು ಬಾಯಿ ಮತ್ತು ಗುದದ ಕ್ಯಾನ್ಸರ್ ರೋಗಕ್ಕೆ ತುತ್ತಾಗುವ ಸಾಧ್ಯತೆ ೧೭ ಪಟ್ಟು ಅಧಿಕವಾಗಿದೆ.

ಭಾವನಾತ್ಮಕ ಮೋಸದ ಜಾಲ 

'ಗೇ'  ಸಂಸ್ಕೃತಿಯ ಪರ ವಕಾಲತ್ತು ವಹಿಸುವ ಕೆಲವರು ಬಹಳ ಭಾವನಾತ್ಮಕ ವಾದಗಳನ್ನು ಮಂಡಿಸುತ್ತಾರೆ. ಅವರು ಅದನ್ನು ನೇರವಾಗಿ,  ಪ್ರೀತಿ, ಪ್ರೇಮ, ಸ್ನೇಹ, ವಾತ್ಸಲ್ಯವೇ ಮುಂತಾದ ಜಾಗತಿಕ ಮಾನ್ಯತೆ ಇರುವ ಮೌಲ್ಯಗಳ ಜೊತೆ ಜೋಡಿಸಲು ಪ್ರಯತ್ನಿಸುತ್ತಾರೆ. ಪುರುಷನೊಬ್ಬ ಇನ್ನೊಬ್ಬ ಪುರುಷನನ್ನು ಪ್ರೀತಿಸುವುದರಲ್ಲಿ ತಪ್ಪೇನಿದೆ ? ಎಂಬ ಅತಿ ಸರಳೀಕೃತ ಪ್ರಶ್ನೆಯೇ ಅವರ ವಾದದ ಸಾರಾಂಶವಾಗಿರುತ್ತದೆ. ನಿಜವಾಗಿ ಪುರುಷರು ಪುರುಷರನ್ನು ಅಥವಾ ಸ್ತ್ರೀಯರು ಸ್ತ್ರೀಯರನ್ನು ಪ್ರೀತಿಸುವುದಕ್ಕೆ ಯಾರ ಆಕ್ಷೇಪವೂ ಇಲ್ಲ. ಆಕ್ಷೇಪವಿರುವುದು ಸಲಿಂಗ ಕಾಮಕ್ಕೆ ಮಾತ್ರವೇ ಹೊರತು ಸಲಿಂಗ ಪ್ರೇಮಕ್ಕಲ್ಲ.  ಈ ಕುರಿತು ಹೆಚ್ಚಿನ ವಿವರಣೆಯ ಅಗತ್ಯವಿಲ್ಲ. ಪ್ರಕೃತಿಯಲ್ಲೇ ಪ್ರೇಮಕ್ಕೆ ಯಾವುದೇ ನಿರ್ಬಂಧವಿಲ್ಲ. ಆದರೆ ಕಾಮಕ್ಕೆ ನಿರ್ಬಂಧಗಳಿವೆ. ಅದು ಅಸಹಜ ಸ್ವರೂಪದಲ್ಲಿ ನಡೆದಾಗ ಪ್ರಕೃತಿ ತನ್ನ ದಂಡ ಸಂಹಿತೆಯನ್ನು ಅನುಷ್ಠಾನಿಸುತ್ತದೆ.  ಪ್ರೇಮ ಮತ್ತು ಕಾಮಗಳ ನಡುವೆ ಇರುವ ಬೃಹತ್ ಅಂತರವನ್ನು ಗುರುತಿಸ ಬಲ್ಲ ಯಾರೂ ಈ ವಿಷಯದಲ್ಲಿ ಗೊಂದಲಕ್ಕೆ ಒಳಗಾಗುವುದಿಲ್ಲ. ಪ್ರೇಮ ಮತ್ತು ಕಾಮ ಒಂದಲ್ಲ ಎಂಬ ಸರಳ ಸತ್ಯವನ್ನು ಒಪ್ಪಿಕೊಂಡರೆ ಸಾಕು. ಯಾವ ಗೊಂದಲವೂ ಉಳಿಯುವುದಿಲ್ಲ.

ಸಲಿಂಗಿಗಳ ಖಾಸಗಿ ಬದುಕಿನಲ್ಲಿ 'ಗೇ' ರಕ್ಷಕರು ಮೂಗು ತೂರುವುದೇಕೆ? 

ಸಲಿಂಗ ಕಾಮ್ ಹೊಸದೇನೂ ಅಲ್ಲ. ಸಲಿಂಗ ಕಾಮದ ಬಹಿರಂಗ ಅಭಿವ್ಯಕ್ತಿ, ಸಾಮೂಹಿಕ ವೈಭವೀಕರಣ ಮತ್ತು ಅದಕ್ಕೆ ಸಮಾಜ ಹಾಗೂ ಕಾನೂನಿನ ಮನೆ ಕೊಡಿಸುವ 'ಗೇ' ಅಭಿಯಾನ ಹಾಗೂ ಆಂದೋಲನ ಮಾತ್ರ ಹೊಸತು. ಈ ಹಿನ್ನೆಲೆಯಲ್ಲಿ  'ಗೇ' ಪೋಷಕ ವಲಯಗಳು ನಡೆಸುತ್ತಿರುವ ಮುಂದಿಡುವ ಕೆಲವು ಭಾವುಕ ತರ್ಕಗಳು ಮತ್ತು ಬೇಡಿಕೆಗಳ ಟೊಳ್ಳುತನವನ್ನು ಇಲ್ಲಿ ಪ್ರಸ್ತಾಪಿಸಬೇಕಾಗಿದೆ:

'ಗೇ' ಅಥವಾ ಲೆಸ್ಬಿಯನ್ ಸಂಗಾತಿಗಳ ಪರಸ್ಪರ ಸಂಬಂಧವು  ಪ್ರೀತಿ ಮತ್ತು ಪ್ರೇಮದ ಸಂಬಂಧವಾಗಿದ್ದರೆ ಅವರು ಕಾಮಕೇಳಿಗೆ ಇಳಿಯದೆಯೇ ತಮ್ಮ ಸಂಬಂಧವನ್ನು ಮುಂದುವರಿಸಬಹುದು. ಅದನ್ನು ಯಾರೂ ಆಕ್ಷೇಪಿಸಿದ್ದಿಲ್ಲ. ಇನ್ನು ಅದು ಸ್ನೇಹದ ಅಥವಾ ಭಾವನಾತ್ಮಕವಾದ ಸಂಬಂಧವಾಗಿದ್ದರೆ ಆಗಲೂ ಅವರು ಕಾಮಕೇಳಿಗೆ ಇಳಿಯದೆಯೇ ತಮ್ಮ ಸ್ನೇಹ  ಸಂಬಂಧವನ್ನು ಮುಂದುವರಿಸ ಬಹುದು. ಪ್ರೀತಿ ಪ್ರೇಮದ ಅಥವಾ ಸ್ನೇಹದ ಸಂಬಂಧವನ್ನು ಮುಂದುವರಿಸಲು, ಕಾಮ ಸಂಬಂಧಿ ಚಟುವಟಿಕೆಯ ಅಥವಾ ಸಲಿಂಗ ವಿವಾಹದ ಯಾವ ಅಗತ್ಯವೂ ಇಲ್ಲ. 

ಸ್ತ್ರೀಯರಿರಲಿ, ಪುರುಷರಿರಲಿ ಹೆಚ್ಚಿನ ಸಲಿಂಗಿಗಳು ತಾವು ಸಲಿಂಗಿಗಳೆಂದು ಸಮಾಜದಲ್ಲಿ ಮಾತ್ರವಲ್ಲ ತಮ್ಮ ಆಪ್ತ ವಲಯದಲ್ಲೂ ಗುರುತಿಸಿಕೊಳ್ಳಲು ಅಪೇಕ್ಷಿಸುವುದಿಲ್ಲ. ಪರಸ್ಪರ ಸಲಿಂಗ ಲೈಂಗಿಕ ಸಂಬಂಧ ಇರುವವರಲ್ಲಿ ಕೂಡಾ  ಹೆಚ್ಚಿನವರು ಅದನ್ನು ಗುಟ್ಟಾಗಿಯೇ ಇಡಲು ಬಯಸುತ್ತಾರೆ. ತಮ್ಮ ಒಲವು ಬಹಿರಂಗವಾಗಿ ಚರ್ಚೆಗೆ ಒಳಪಡುವುದು ಅವರಿಗೆ ಇಷ್ಟವಿರುವುದಿಲ್ಲ. ಅವರಿಗೆ ತಮ್ಮ ಹಾಗೂ ತಮ್ಮ ಲೈಂಗಿಕ ಒಲವುಗಳ ಖಾಸಗಿತನ ತುಂಬಾ ಮಹತ್ವದ್ದಾಗಿರುತ್ತದೆ. ತಮ್ಮ ಲೈಂಗಿಕ  ಒಲವುಗಳ ಬಗ್ಗೆ ಅಥವಾ ತಮ್ಮ ಲೈಂಗಿಕ ಚಟುವಟಿಕೆಗಳ ಬಗ್ಗೆ ಅನ್ಯರು ಮಾತನಾಡಿ ಕೊಳ್ಳುವುದು ಅವರಿಗೆ ಅಪಥ್ಯವಾಗಿರುತ್ತದೆ. ಆದ್ದರಿಂದ, ಸಲಿಂಗಿಗಳು ತಮ್ಮ ಸಲಿಂಗಿ ಒಲವನ್ನು ಸಮಾಜದ ಮುಂದೆ ಪ್ರಕಟಿಸಬೇಕು ಮತ್ತು ತಮ್ಮನ್ನು ಸಲಿಂಗಿಗಳೆಂದೇ ಗುರುತಿಸಿಕೊಳ್ಳಬೇಕು ಎಂದು ನೇರ ಅಥವಾ ಪರೋಕ್ಷವಾಗಿ ಅವರ ಮೇಲೆ ಒತ್ತಡ ಹೇರುತ್ತಿರುವವರು ಈ ಸಲಿಂಗಿಗಳಿಗೆ ಯಾವುದೇ ಉಪಕಾರವನ್ನು ಮಾಡುತ್ತಿಲ್ಲ. ನಿಜವಾಗಿ ಈ 'ಗೇ ' ಆಂದೋಲನದವರು ಸಲಿಂಗಿಗಳನ್ನು ಬಯಲಿಗೆ ತಂದು ನಿಲ್ಲಿಸಿ ಅವರನ್ನು ಮುಜುಗರಕ್ಕೆ ಸಿಲುಕಿಸುವ ಮೂಲಕ ಅವರನ್ನು ಬೇರೊಂದು ತರದಲ್ಲಿ ಹಿಂಸಿಸುತ್ತಿದ್ದಾರೆ.   

ಒಂದುವೇಳೆ ಇಬ್ಬರು ಸಲಿಂಗಿಗಳು ಪರಸ್ಪರ ಲೈಂಗಿಕ ಸಂಬಂಧವನ್ನು ಇಟ್ಟುಕೊಂಡಿರುವರು ಎಂದುಕೊಳ್ಳೋಣ. ಆಗಲೂ ಸಲಿಂಗ ವಿವಾಹದ ಅಗತ್ಯವೇನೂ ಇಲ್ಲ. ಸ್ವತಃ  ಸಲಿಂಗಿಗಳಲ್ಲಿ ಹೆಚ್ಚಿನವರು ಈ ತಮ್ಮ ಸಂಬಂಧವನ್ನು ಸಮಾಜದ ಗಮನಕ್ಕೆ ತರಲು ಅಥವಾ ವಿವಾಹವನ್ನು ತಮ್ಮ ಮೇಲೆ ಹೇರಿಕೊಳ್ಳಲು ಬಯಸುವುದಿಲ್ಲ.  ಹೀಗಿರುತ್ತಾ ಸಲಿಂಗ ವಿವಾಹವನ್ನು ಸಕ್ರಮಗೊಳಿಸಬೇಕೆಂದು ಆಗ್ರಹಿಸುತ್ತಿರುವವರು  ಹಾಗೆ ಮಾಡುತ್ತಿರುವುದು ಸಲಿಂಗಿಗಳ ಹಿತಕ್ಕಾಗಿಯೋ ಅಥವಾ ಸ್ವಸ್ಥ ಸಮಾಜವನ್ನು ಕೆಣಕಲಿಕ್ಕಾಗಿ ಮಾತ್ರವೋ ಎಂಬ ಸಂದೇಹ ಮೂಡುತ್ತದೆ. 

ಗೊಂದಲವೇ ಬಂಡವಾಳ: LGBTQQIAAP + ಎಂಬ ಹತ್ತು ಭಿನ್ನ ವರ್ಗಗಳನ್ನು ಒಂದೆಂದು ಚಿತ್ರಿಸುವ ಹುನ್ನಾರ 

'ಗೇ' ರಕ್ಷಕರು ಮತ್ತು 'ಗೇ' ಪೋಷಕರು ಒಟ್ಟು ಲೈಂಗಿಕತೆಯ ವಿಷಯದಲ್ಲಿ ಜನಸಾಮಾನ್ಯರಲ್ಲಿ ಇರುವ ಅಜ್ಞಾನ ಮತ್ತು ಗೊಂದಲಗಳನ್ನೇ ತಮ್ಮ ಬಂಡವಾಳವಾಗಿ ಬಳಸಿಕೊಳ್ಳುತ್ತಾರೆ. "ಅಸಹಜ ಕಾಮಿಗಳು ಹುಟ್ಟಿನಿಂದಲೇ ಹಾಗಿರುತ್ತಾರೆ....  ಅವರ ಮುಂದೆ ಬೇರಾವುದೇ ದಾರಿ ಇರುವುದಿಲ್ಲ .... ಅವರೆಷ್ಟು ಬಯಸಿದರೂ ಅದರಿಂದ ಹೊರಬರಲು ಅವರಿಗೆ ಸಾಧ್ಯವಾಗುವುದಿಲ್ಲ... ಪ್ರಕೃತಿಯೇ ಅವರನ್ನು ಹಾಗೆ ಮಾಡಿರುವಾಗ ಸಮಾಜವು ಅವರನ್ನು ನಿರ್ಬಂಧಿಸುವುದು ಸರಿಯಲ್ಲ....... ಅವರಿಗೆ ಬೇರೆ ಆಯ್ಕೆಯೇ ಎಲ್ಲಿದೆ? ........ " ಹೀಗೆ ಸಾಗುತ್ತದೆ ಅವರ ವಾದ ವೈಖರಿ. ಈ ಮೂಲಕ ಅವರು ಅಂಗ ವೈಕಲ್ಯಗಳೊಂದಿಗೆ ಜನಿಸುವ ಜನರ  ಪರವಾಗಿರುವ, ಸಹತಾಪ,  ಸಹಾನುಭೂತಿಗಳನ್ನು ಸ್ವಯಂ ಪ್ರೇರಿತ ಹಾಗೂ ಸ್ವಯಂಕೃತ ನ್ಯೂನತೆ, ಅಸ್ವಾಸ್ಥ್ಯ ಗಳಿಗೆ ಅನ್ವಯಿಸಲು ಹೆಣಗುತ್ತಾರೆ. ಸಮಾಜದಲ್ಲಿ ಹಿಜಡಾಗಳ ಅಥವಾ ನಪುಂಸಕರ ಬಗ್ಗೆ ಇರುವ ಗೊಂದಲಗಳನ್ನೂ ಇವರು ತಮ್ಮ ಬಂಡವಾಳವಾಗಿಸುತ್ತಾರೆ. ಈ ದೃಷ್ಟಿಯಿಂದ, ಅಸಾಮಾನ್ಯ ಲೈಂಗಿಕತೆಯ ಎಲ್ಲ ಪ್ರಕಾರಗಳನ್ನು ಪ್ರತ್ಯೇಕವಾಗಿ ಗುರುತಿಸಿ ಪರಿಚಯ ಪಡುವುದು ಅತ್ಯವಶ್ಯಕವಾಗಿದೆ.

LGBTQQIAAP +  ಎಂಬ ಅಕ್ಷರ ಸಂಧಿಯ ವಿವರಣೆ ಹೀಗಿದೆ:

L ಅಥವಾ Lesbian ಲೆಸ್ಬಿಯನ್ ಅಂದರೆ ಸ್ತ್ರೀಯರ ಕಡೆಗೆ ಮಾತ್ರ ಲೈಂಗಿಕವಾಗಿ ಆಕರ್ಷಿತರಾಗುವ ಸ್ತ್ರೀ.
G ಅಥವಾ Gay ಗೇ ಅಂದರೆ ಪುರುಷರ ಕಡೆಗೆ ಮಾತ್ರ ಲೈಂಗಿಕವಾಗಿ ಆಕರ್ಷಿತನಾಗುವ ಪುರುಷ.
B ಅಥವಾ Bisexual ಬೈ ಸೆಕ್ಸುವಲ್ ಅಂದರೆ ಪುರಷರು ಮತ್ತು ಸ್ತ್ರೀಯರು ಇಬ್ಬರ ಕಡೆಗೂ ಲೈಂಗಿಕವಾಗಿ ಆಕರ್ಷಿತರಾಗುವ ಸ್ತ್ರೀಯರು ಮತ್ತು ಪುರುಷರು.
T ಅಥವಾ Transgender ಟ್ರಾನ್ಸ್ ಜೆಂಡರ್ ಅಥವಾ Transexual ಟ್ರಾಂಸೆಕ್ಸುವಲ್ ಅಂದರೆ ಹುಟ್ಟುವಾಗ ಪುರುಷನೆಂದು ಗುರುತಿಸಲ್ಪಟ್ಟು ಕ್ರಮೇಣ ತಾನು ಸ್ತ್ರೀ ಎಂದು ನಂಬಲಾರಂಭಿಸಿ ಹಾವಭಾವದಲ್ಲಿ, ಅಥವಾ ವರ್ತನೆಯಲ್ಲಿ ಅಥವಾ ಉಡುಗೆ ಅಲಂಕಾರ ಇತ್ಯಾದಿಗಳಲ್ಲಿ ಸ್ತ್ರೀಯರಂತಹ ಲಕ್ಷಣಗಳನ್ನು ಬೆಳೆಸಿಕೊಂಡವನು ಅಥವಾ ಹುಟ್ಟುವಾಗ ಸ್ತ್ರೀ ಎಂದು ಗುರುತಿಸಲ್ಪಟ್ಟು ಕ್ರಮೇಣ  ಹಾವಭಾವದಲ್ಲಿ ಅಥವಾ ವರ್ತನೆಯಲ್ಲಿ ಅಥವಾ ಉಡುಗೆ ಅಲಂಕಾರ ಇತ್ಯಾದಿಗಳಲ್ಲಿ ಪುರುಷರಂತಹ ಲಕ್ಷಣಗಳನ್ನು ಬೆಳೆಸಿಕೊಂಡವಳು ಅಥವಾ ಅಳವಡಿಸಿಕೊಂಡವರು. ಇವರಲ್ಲಿ ಕೆಲವರು ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡು ತಮ್ಮ ಒಲವಿಗನುಸಾರ ಲಿಂಗ ಪರಿವರ್ತನೆ ಮಾಡಿಕೊಳ್ಳುತ್ತಾರೆ. ಅಂದರೆ ಪುರುಷ ಲಕ್ಷಣಗಳೊಂದಿಗೆ ಹುಟ್ಟಿದವನು ಸ್ತ್ರೀಯಾಗಿ ಮಾರ್ಪಡುತ್ತಾನೆ. ಸ್ತ್ರ್ರೆ ಲಕ್ಷಣಗಳೊಂದಿಗೆ ಜನಿಸಿದವಳು ಪುರುಷನಾಗಿ ಮಾರ್ಪಡುತ್ತಾಳೆ.   
Q ಅಥವಾ Queer ಕ್ವಿಯರ್ ಅಂದರೆ ತಮ್ಮನ್ನು ಸ್ತ್ರೀ, ಪುರುಷ ಅಥವಾ ಯಾವುದೇ ನಿರ್ದಿಷ್ಟ ಲಿಂಗ ದೊಂದಿಗೆ ಗುರುತಿಸಲ್ಪಡಲು ಅಪೇಕ್ಷಿಸದವರು.
Q ಅಥವಾ  Questioning ಕ್ವೆಶ್ಚನಿಂಗ್ ಅಂದರೆ ತಮ್ಮ ಲೈಂಗಿಕ ಗುರುತು ಯಾವುದೆಂಬುದನ್ನು ನಿರ್ಧರಿಸಲಾಗದೆ ತಾವೇ ಆ ಕುರಿತು ಪ್ರಶ್ನಿಸುತ್ತಿರುವ ಹಂತದಲ್ಲಿರುವವರು. 
I ಅಥವಾ Intersex  ಇಂಟರ್ಸೆಕ್ಸ್ ಅಂದರೆ ಶಾರೀರಿಕವಾಗಿ ಸ್ತ್ರೀ ಮತ್ತು ಪುರುಷರಿಬ್ಬರ ಮಿಶ್ರ ಲಕ್ಷಣಗಳೊಂದಿಗೆ ಹುಟ್ಟಿದವರು. ಇಂತಹ ಪ್ರಕರಣಗಳು ತೀರಾ ವಿರಳ.
A ಅಥವಾ Asexual  ಎಸೆಕ್ಸುವಲ್ ಅಂದರೆ ಯಾರ ಕಡೆಗೂ ಲೈಂಗಿಕವಾಗಿ ಆಕರ್ಷಿತರಾಗದ ಸ್ತ್ರೀಯರು ಅಥವಾ ಪುರುಷರು.
A ಅಥವಾ Allies ಅಲೈಸ್ ಅಂದರೆ ಲೈಂಗಿಕವಾಗಿ ಸ್ವತಃ ಸ್ವಸ್ಥರಾಗಿದ್ದು LGBTQQIAP ವರ್ಗಕ್ಕೆ ಸೇರಿದವರನ್ನು ಬೆಂಬಲಿಸುವವರು.
P ಅಥವಾ Pan sexual  ಪಾನ್ ಸೆಕ್ಸುವಲ್ ಅಂದರೆ ಇನ್ನೊಬ್ಬರ ಲೈಂಗಿಕತೆ ಏನಾಗಿದ್ದರೂ ಅದನ್ನು ಪರಿಗಣಿಸದೆಯೇ ಅವರ ಕಡೆಗೆ ಲೈಂಗಿಕವಾಗಿ ಆಕರ್ಷಿತರಾಗುವವರು.

ಮುಂದಿನ ದಿನಗಳಲ್ಲಿ ಇಂಗ್ಲಿಷ್ ಅಕ್ಷರಮಾಲೆಯ ಉಳಿದೆಲ್ಲ ಅಕ್ಷರಗಳು ಈ ಅಸಾಮಾನ್ಯರ ಈ ಪಟ್ಟಿಯಲ್ಲಿ ಸೇರಿಕೊಂಡರೂ ಅಚ್ಚರಿಯೇನಿಲ್ಲ. ಇಲ್ಲಿ Q  ಮತ್ತು A ಎಂಬ ಮುಂದಕ್ಷರ ಅಥವಾ ಮೊದಲಕ್ಷರಗಳು ಎರಡೆರಡು ಬಾರಿ ಬಂದಿವೆ. ಹೀಗೆಯೇ ಮುಂದುವರಿದರೆ ಇದು ನೂರಾರು ಮುಂದಕ್ಷರಗಳಿಂದ ಗುರುತಿಸಲ್ಪಡುವ ಸಮುದಾಯವಾಗಿಯೂ ಬೆಳೆಯಬಹುದು. ಪ್ರಸ್ತುತ  ಹತ್ತು ವರ್ಗಗಳಿಗೆ ಮೇಲೆ ನೀಡಲಾಗಿರುವ ವ್ಯಾಖ್ಯಾನಗಳು ಬಹುತೇಕ ಎಲ್ಲರೂ ಸಮ್ಮತಿಸುವ ವ್ಯಾಖ್ಯಾನಗಳಾಗಿವೆ. ಒಂದೊಂದಾಗಿ ಈ  ಎಲ್ಲ  ಲಕ್ಷಣಗಳನ್ನು ಗಮನವಿಟ್ಟು ನೋಡಿದರೆ ಒಂದಂತೂ ಬಹಳ ಸ್ಪಷ್ಟವಿದೆ.  ಈ ಹತ್ತು ವರ್ಗಗಳ ಪೈಕಿ  I ಅಥವಾ ಇಂಟರ್ಸೆಕ್ಸ್ (Intersex)  ಎಂಬ ಒಂದು ವರ್ಗದವರು ಮಾತ್ರ ಶಾರೀರಿಕವಾಗಿ, ಲೈಂಗಿಕ ವೈಕಲ್ಯದೊಂದಿಗೆ ಜನಿಸಿರುತ್ತಾರೆ ಅಥವಾ ಕಾಲ ಕ್ರಮೇಣ ಅವರಲ್ಲಿ ಅಂತಹ ವೈಕಲ್ಯಗಳು ಬೆಳೆಯುತ್ತವೆ. ಅವರ ಶರೀರದಲ್ಲಿ  ಸ್ತ್ರೀಯರ ಲಕ್ಷಣಗಳೂ ಪುರುಷರ ಲಕ್ಷಣಗಳೂ ಮಿಶ್ರವಾಗಿರುತ್ತವೆ. ಉಳಿದಂತೆ, ಬೇರೆ ಯಾವ ವರ್ಗದವರಲ್ಲೂ ಹುಟ್ಟುವಾಗ ಯಾವುದೇ ಬಗೆಯ ಶಾರೀರಿಕ ವೈಕಲ್ಯವಿರುವುದಿಲ್ಲ. ಅವರು ಸಾಮಾನ್ಯರಿಗಿಂತ ಭಿನ್ನರಾಗಿರುವುದು ತಮ್ಮ ನಡವಳಿಕೆ, ಮಾನಸಿಕ ಒಲವುಗಳು, ಆಗ್ರಹಗಳು ಮತ್ತು ತೆವಲುಗಳಲ್ಲಿ ಮಾತ್ರ. 'ಗೇ' ಪರ ವಕಾಲತ್ತು ವಹಿಸುವವರು ಈ ಮಹತ್ವದ ಸತ್ಯವನ್ನು ಮರೆಮಾಚಿ ಪ್ರಸ್ತುತ ಎಲ್ಲದವರನ್ನೂ ಒಂದೇ ಬಗೆಯವರೆಂದು ಚಿತ್ರಿಸಲು ಶ್ರಮಿಸುತ್ತಾರೆ. ಈ ಕುರಿತು ಸತ್ಯವೇನೆಂಬುದನ್ನು ಅರಿಯಲು ಶ್ರಮಿಸದೇ ಅವರಿವರ ಮಾತು ಕೇಳಿ ತೀರ್ಮಾನ ಕೈಗೊಳ್ಳುವವರು ಇದರಿಂದ ಗೊಂದಲಕ್ಕೊಳಗಾಗುವುದು ಸಹಜ.

ಭಾರತದ ಹೆಚ್ಚಿನ ದೊಡ್ಡ ನಗರಗಳಲ್ಲಿ ಟೋಲ್ ಗೇಟ್ ಅಥವಾ ಟ್ರಾಫಿಕ್ ಸಿಗ್ನಲ್ ಗಳ ಸಮೀಪ ಕೆಲವು ಸ್ತ್ರೀ ವೇಷಧಾರಿಗಳು ಚಪ್ಪಾಳೆ ತಟ್ಟುತ್ತಾ ಹಣ ವಸೂಲಿ ಮಾಡುವುದು ಕಂಡು ಬರುತ್ತದೆ. ಇವರಲ್ಲಿ ಕೆಲವರ ವಸೂಲಿಯ ಶೈಲಿ ತುಂಬಾ ಅಕ್ರಮಣಕಾರಿಯಾಗಿರುತ್ತದೆ. ಇವರನ್ನು ಸಾಮಾನ್ಯವಾಗಿ ಹಿಜಡಾ ಗಳೆಂದು ಗುರುತಿಸಲಾಗುತ್ತದೆ. ಇವರ ಬಗ್ಗೆ ಕೂಡಾ ಇವರು ಹುಟ್ಟುವಾಗಲೇ ಮಿಶ್ರಲಿಂಗಿಗಳಾಗಿ ಅಥವಾ ಲೈಂಗಿಕ ವೈಕಲ್ಯದೊಂದಿಗೆ ಹುಟ್ಟಿರುತ್ತಾರೆ ಎಂಬ ನಂಬಿಕೆ ಸಾಮಾನ್ಯವಾಗಿದೆ.  ಕೆಲವರು ಇವರನ್ನು transgender ಅಥವಾ transexual ಪ್ರವರ್ಗಕ್ಕೆ ಸೇರಿದವರೆಂದು ಪರಿಗಣಿಸುತ್ತಾರೆ. ಆದರೆ ಅಖಿಲ ಭಾರತ ಹಿಜಡಾ ಕಲ್ಯಾಣ ಸಂಘ (AIHKS) ದವರ ಪ್ರಕಾರ ಹಿಜಡಾಗಳೆಂದು ಗುರುತಿಸಲ್ಪಡುವವರ ಪೈಕಿ ಲೈಂಗಿಕ ವೈಕಲ್ಯದೊಂದಿಗೆ ಹುಟ್ಟುವವರ ಸಂಖ್ಯೆ ೧% ಮಾತ್ರ. ಉಳಿದವರಲ್ಲಿ ಹೆಚ್ಚಿನವರು ಪೂರ್ಣಪ್ರಮಾಣದ ಪುರುಷರಾಗಿದ್ದು ಹಿಜಡಾಗಳಂತೆ ನಟಿಸುತ್ತಿರುತ್ತಾರೆ. ಅನೇಕರನ್ನು ಅವರ ಬಾಲ್ಯದಲ್ಲಿ ಅಥವಾ ಹದಿ ಹರೆಯದಲ್ಲಿ ಬಲವಂತವಾಗಿ ಲಿಂಗ ಛೇದನ ಅಥವಾ ಕಸಿಯ ಮೂಲಕ ಹಿಜಡಾಗಳಾಗಿ ಪರಿವರ್ತಿಸಲಾಗುತ್ತದೆ. ಅಂದರೆ ಅವರ ಪುರುಷ ಜನನಾಂಗವನ್ನು ಕಿತ್ತು ಹಾಕಲಾಗುತ್ತದೆ. ಇದರ ಪರಿಣಾಮವಾಗಿ ಮುಂದೆ ಕ್ರಮೇಣ ಅವರ ಶರೀರದಲ್ಲಿ ಬದಲಾವಣೆಗಳಾಗಲು ಆರಂಭವಾಗುತ್ತದೆ ಮತ್ತು ಅವರಲ್ಲಿ  ಕೆಲವು ಸ್ತ್ರೀ ಲಕ್ಷಣಗಳು ಬೆಳೆಯುತ್ತವೆ. ವಿಶೇಷವಾಗಿ ಗಂಡು ಮಕ್ಕಳನ್ನು ಅಪಹರಿಸಿ ಅವರನ್ನು ಹಿಜಡಾಗಳಾಗಿ ಪರಿವರ್ತಿಸುವ ಒಂದು ದೊಡ್ಡ ಜಾಲವೇ ಸಕ್ರಿಯವಾಗಿದೆ. ಹಿಜಡಾಗಳು ಸಂಘಟಿತರಾಗಿರುವಲ್ಲಿ ಅವರ ನಾಯಕರನ್ನು 'ಗುರು' ಎಂದು ಗುರುತಿಸಲಾಗುತ್ತದೆ. ಹಲವೆಡೆ ಕೆಲವು ಪಂಥಗಳ ಹಿಜಡಾಗಳು ಪ್ರತಿವರ್ಷ, ಈ ರೀತಿ ಅಪಹೃತ ಮಕ್ಕಳನ್ನು ಕಸಿ ಮಾಡಿ ವಿಧ್ಯುಕ್ತವಾಗಿ ಹಿಜಡಾ ಸಮಾಜಕ್ಕೆ ಸೇರಿಸುವ 'ನಿರ್ವಾಣ' ಎಂಬ ಅಧಿಕೃತ ಧಾರ್ಮಿಕ ಸಮಾರಂಭಗಳನ್ನು ಆಯೋಜಿಸುತ್ತಾರೆ. ಕೆಲವರು ವಿವಿಧ ಮೂಢ ನಂಬಿಕೆ ಗಳಿಂದ ಪ್ರೇರಿತರಾಗಿ ತಮ್ಮ ಒಂದು ಗಂಡು ಮಗುವನ್ನು ಹಿಜಡಾ ಮಾಡುವುದಾಗಿ ಹರಕೆ ಹೊತ್ತು ತಾವಾಗಿಯೇ ಅಂತಹ ಮಕ್ಕಳನ್ನು ಹಿಜಡಾ 'ಗುರು'ಗಳಿಗೆ ಒಪ್ಪಿಸುವುದೂ ಇದೆ. ಆ ಗುರುಗಳು ತಮ್ಮ ಬಲಿಪಶುಗಳನ್ನು ಕ್ರಮೇಣ ಸಲಿಂಗಕಾಮಿಗಳಾಗಿಸಿ ಸಲಿಂಗ ಕಾಮದ ಬೃಹತ್ ಸಂಘಟಿತ ಜಾಲಗಳನ್ನು ನಡೆಸುತ್ತಾರೆ. ಜೊತೆಗೆ ಭಿಕ್ಷಾಟನೆ ಮತ್ತು ಬಲವಂತದ ಹಫ್ತಾ ವಸೂಲಿ ಜಾಲಗಳನ್ನೂ ನಡೆಸುತ್ತಾರೆ. 

ಹೀಗೆ, ಹೆಚ್ಚಿನ ಪ್ರಕರಣಗಳಲ್ಲಿ ದೂರಬೇಕಾದದ್ದು ಶಾರೀರಿಕವಾಗಿ ಸ್ವಸ್ಥರಾಗಿದ್ದರೂ ಮಾನಸಿಕವಾಗಿ ವಕ್ರ ದಾರಿಗಳನ್ನು ಅರಸುವ ಅಸ್ವಸ್ಥ ಮಾನಸಿಕತೆಯನ್ನೇ ಹೊರತು ದೇವರನ್ನಂತೂ ಅಲ್ಲ. ಹಾಗೆಯೇ, ಲೈಂಗಿಕ ಅಸ್ವಾಸ್ಥ್ಯದ ಹೆಚ್ಚಿನ ಪ್ರಕರಣಗಳು ಶುದ್ಧ ಮಾನಸಿಕ ಸ್ವರೂಪದ ಸಮಸ್ಯೆಯಾಗಿದ್ದು ಅವುಗಳನ್ನು ಆ ಸ್ತರದಲ್ಲೇ ಗುರುತಿಸಿ ಬಗೆಹರಿಬೇಕೆ ಹೊರತು ನಿಂದನೆಯಾಗಲಿ ವೈಭವೀಕರಣವಾಗಲಿ ಅದಕ್ಕೆ ಪರಿಹಾರವಲ್ಲ.

ಕಾಂಡೋಮ್ ಎಂಬ ರಂಧ್ರಾಶ್ರಯದ ಇತಿಮಿತಿಗಳು

ವಿಪರ್ಯಾಸ ನೋಡಿ. ಸಲಿಂಗ ಕಾಮದ ಮಾರಕ ಅಪಾಯಗಳ ಕುರಿತು ಪ್ರಸ್ತಾಪ ಬಂದೊಡನೆ ಹಲವರು ಕಾಂಡೋಮ್ ಆಶ್ರಿತರಾಗಿ ಬಿಡುತ್ತಾರೆ. ಕಾಂಡೋಮ್ ಧರಿಸಿಕೊಂಡರೆ ಸಾಕು, ಯಾವ  ವೇಶ್ಯಾ ಸಹವಾಸ ಮಾಡಿದರೂ ಎಂತಹ ವಿಕೃತ ಕಾಮ ಕೇಳಿ ನಡೆಸಿದರೂ  ಎಲ್ಲ ಬಗೆಯ ಸೋಂಕು ರೋಗಗಳಿಂದ ಸುರಕ್ಷಿತರಾಗಿ ಉಳಿಯಲು ಸಾಧ್ಯವಿದೆ ಎಂದು ವಾದಿಸತೊಡಗುತ್ತಾರೆ. ಹೀಗೆ ವಾದಿಸುವವರ ಸಾಲಲ್ಲಿ ಭಂಡ ಅರೆಶಿಕ್ಷಿತರು ಮಾತ್ರವಲ್ಲ ಅಜ್ಞಾನಿ ಶಿಕ್ಷಿತರೂ ಸೇರಿದ್ದಾರೆ. ನಿರ್ದಿಷ್ಟವಾಗಿ ಕಾಂಡೋಮ್ ಇತಿಮಿತಿಗಳ ಕುರಿತಾಗಿಯೇ ಸವಿಸ್ತಾರ ಅಧ್ಯಯನ, ಸಂಶೋಧನೆಗಳನ್ನು ನಡೆಸಿರುವ ವಿಜ್ಞಾನಿಗಳು ಮತ್ತು ಸಂಶೋಧಕ ಸಂಸ್ಥೆಗಳು ನೀಡಿರುವ ಎಚ್ಚರಿಕೆಗಳು ಬಹುಶ: ಇವರಿಗೆ ಮನವರಿಕೆ ಆದಂತಿಲ್ಲ. ತಜ್ಞರ ಪ್ರಕಾರ ಗರ್ಭನಿರೋಧದ ವಿಷಯದಲ್ಲಾಗಲಿ, ರೋಗನಿರೋಧದ ವಿಷಯದಲ್ಲಾಗಲಿ ಕಾಂಡೋಮ್ ಗಳು ತುಂಬಾ ಸಹಾಯಕ. ಆದರೆ ಅವು  ೧೦೦% ಸುರಕ್ಷಿತವಲ್ಲ. ಕಾಂಡೋಮ್ ಗಳನ್ನು ಹೇಗೆ ಧರಿಸಬೇಕು ಎಂಬ ಕುರಿತಂತೆ ತಜ್ಞರು ಶಿಫಾರಸು ಮಾಡುವ ಹಲವು ನಿಯಮಗಳಿವೆ. ಆ ಎಲ್ಲ ನಿಯಮಗಳನ್ನೂ ಯಥಾವತ್ತಾಗಿ ಪಾಲಿಸಿದರೂ ಅವುಗಳ  ಯಶಸ್ಸಿನ ಪ್ರಮಾಣ ೯೮%ಕ್ಕಿಂತ ಹೆಚ್ಚಿಲ್ಲ. ವೈಫಲ್ಯದ ಪ್ರಮಾಣ ಕೇವಲ ೨% ಎಂದು ಕಾಮಾತುರರು ಸಂತಸ ಪಡಬೇಕಾಗಿಲ್ಲ. ಏಕೆಂದರೆ ಇದು ತಮ್ಮ ಆಪ್ತ ತಂಡಕ್ಕೆ ಸೋಲಾಯಿತೆಂದು ಮಾತ್ರ ದುಃಖಿಸಬೇಕಾಗುವ ಕ್ರಿಕೆಟ್ ಫುಟ್ಬಾಲ್ ಗಳಂತಹ ಆಟವೇನಲ್ಲ. ಅಥವಾ ಕೇವಲ ಒಂದಷ್ಟು  ಹಣ ಕಳೆದು ಹೋಗುವ ಜೂಜು ಕೂಡಾ ಅಲ್ಲ. ಇಲ್ಲಿಯ ಸೋಲು ಏಡ್ಸ್ ನಂತಹ ಮಾರಕ ರೋಗದ ಗೆಲುವಾಗಿರುತ್ತದೆ. ಇಲ್ಲಿ ಮಾರಣಾಂತಿಕ ಅಪಾಯದ ಅಂಚಿನಲ್ಲಿರುವುದು ಅಮೂಲ್ಯ ಮಾನವ ಜೀವಗಳು.

ಪುರುಷರು ಸ್ತ್ರೀ ಸಂಪರ್ಕದ ವೇಳೆ ಕಾಂಡೋಮ್ ಧರಿಸಿದ್ದರೂ, ಧರಿಸಿದ ವಿಧಾನದ ದೋಷದಿಂದಾಗಿ ಅವರ ಲೈಂಗಿಕ ಸಂಗಾತಿ ಗರ್ಭ ಧರಿಸುವ ಸಾಧ್ಯತೆ ೧೫% ದಷ್ಟಿದೆ. ಲೈಂಗಿಕ ರೋಗಗಳ ವರ್ಗಾವಣೆಯ ಸಾಧ್ಯತೆ ಇದಕ್ಕಿಂತ ತುಂಬಾ ಅಧಿಕವಿದೆ. 

ಕಾಂಡೋಮ್ ಗಳನ್ನು ನಂಬಿ ಕುರುಡು ಸಾಹಸಕ್ಕಿಳಿಯುವವರು ತಿಳಿದಿರಬೇಕು:  ಈಗಾಗಲೇ ಸ್ವತಃ ತಮಗೆ ಏಡ್ಸ್ ಇತ್ಯಾದಿ ಘಾತಕ  ಸೋಂಕು ತಗಲಿಸಿ ಕೊಂಡಿರುವ ಮತ್ತು ತಮ್ಮ ಅಕ್ರಮ ಲೈಂಗಿಕ ಸಂಗಾತಿಗಳಿಗೂ, ಮುಗ್ಧ ಜೀವನ ಸಂಗಾತಿಗಳಿಗೂ, ತಮ್ಮ ನಿಕಟವರ್ತಿಗಳಿಗೂ, ತಮ್ಮ ರಕ್ತದಾನದ ಅಮಾಯಕ ಫಲಾನುಭವಿಗಳಿಗೂ ಸೋಂಕು ಪ್ರಸಾದ ನೀಡಿರುವ ಹಲವು ಕೋಟಿ ಸಾಹಸಿಗಳು ಸಂಪೂರ್ಣವಾಗಿ ಕಾಂಡೋಮ್ ವಿರೋಧಿಗಳಾಗಲಿ  ಕಾಂಡೋಮ್  ಪರಿತ್ಯಾಗಿಗಳಾಗಲಿ ಆಗಿರಲಿಲ್ಲ. ಅವರಲ್ಲಿ ಲಕ್ಷಾಂತರ ಮಂದಿ ಕಾಂಡೋಮ್ ಧಾರಿಗಳಾಗಿಯೇ  ವಿನಾಶಲೋಕಕ್ಕೆ ಹೆಜ್ಜೆ ಇಟ್ಟಿರುತ್ತಾರೆ. ಆದರೆ ಒಂದೋ ಕಾಂಡೋಮ್ ಕೈಕೊಟ್ಟಿರುತ್ತದೆ ಅಥವಾ ಕಾಂಡೋಮ್ ಧರಿಸುವ ವಿಧಾನದ ವೈಫಲ್ಯದಿಂದ ಅದನ್ನು ನಂಬಿದವನು ಗುಂಡಿಗೆ ಬಿದ್ದಿರುತ್ತಾನೆ. ಇನ್ನು ಕಾಂಡೋಮ್ ಅನ್ನು ಎಷ್ಟು ಶಾಸ್ತ್ರೋಕ್ತವಾಗಿ ಧರಿಸಿದರೂ ಅದು ಗುಪ್ತಾಂಗದ  ಒಂದು ಭಾಗವನ್ನು ಮಾತ್ರ ಆವವರಿಸಿರುತ್ತದೆಯೇ ಹೊರತು ಸಂಪೂರ್ಣ ಶರೀರದ ಪಾಲಿಗೆ ರಕ್ಷಾ ಕವಚವಾಗಿರುವುದಿಲ್ಲ. 

ನ್ಯಾಯಾಂಗದ ಅಸಹಜ ಆತುರ 

ನಮ್ಮ ನ್ಯಾಯಾಂಗ ತುಂಬಾ ಪುರುಸೊತ್ತಿರುವ ಸಂಸ್ಥೆಯೇನಲ್ಲ. ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಾಧೀಶರೇ ಇತ್ತೀಚಿಗೆ ತಿಳಿಸಿದ ಪ್ರಕಾರ ನಮ್ಮ ಕೆಳ ಕೋರ್ಟುಗಳಲ್ಲಿ ಸುಮಾರು ೨. ೮೫ ಕೋಟಿ ಕೇಸುಗಳು ಹಲವಾರು ವರ್ಷಗಳಿಂದ ಇತ್ಯರ್ಥಕ್ಕೆ ಬಾಕಿ ಇವೆ. ಹೈಕೋರ್ಟುಗಳಲ್ಲಿ ಅಂತಹ ೪೩ ಲಕ್ಷ ಕೇಸುಗಳು ಬಾಕಿ ಇವೆ. ಸುಪ್ರೀಂ ಕೋರ್ಟಿನಲ್ಲೇ ಸುಮಾರು ೬೦ ಸಾವಿರ ಹಳೆಯ ಕೇಸುಗಳು ಬಾಕಿ ಇವೆ. ಹೀಗಿರುತ್ತಾ ಆ ನಮ್ಮ ಪರಮೋಚ್ಚ ನ್ಯಾಯ ಧಾಮವು ಇತರ ಬಾಕಿ ಕೇಸುಗಳನ್ನು ಶೀತಲ ಪೆಟ್ಟಿಗೆಯಲ್ಲಿಟ್ಟು 'ಗೇ' ಮಹನೀಯರ ನೆರವಿಗಾಗಿ ಸಂವಿಧಾನದ ೩೭೭ನೇ ಪರಿಚ್ಛೇಧದಲ್ಲಿದ್ದ ನಿಯಮವನ್ನು ರದ್ದುಗೊಳಿಸಿ ಸಲಿಂಗ ಕಾಮವನ್ನು ಸಕ್ರಮ ಗೊಳಿಸುವ ವಿಷಯದಲ್ಲಿ ತೋರಿರುವ ಅಸಹಜ ಆತುರ ಹಲವು ಪ್ರಶ್ನೆಗಳಿಗೆ ಜನ್ಮ ನೀಡುತ್ತದೆ.

ಸಾಮೂಹಿಕ ಹೊಣೆ 

ಮುಂದಿನ ದಿನಗಳಲ್ಲಿ, ನೈತಿಕ ಮೌಲ್ಯಗಳಲ್ಲಿ ಮತ್ತು ಪ್ರಕೃತಿಯ ನೈರ್ಮಲ್ಯದಲ್ಲಿ ನಂಬಿಕೆ ಉಳ್ಳ, ಸಮಾಜದ ವಿವಿಧ ವಲಯಗಳು ಜೊತೆಗೂಡಿ ಈ ಪ್ರಶ್ನೆಗಳನ್ನು ಚರ್ಚೆಗೆತ್ತಿಕೊಳ್ಳಬೇಕಾಗಿದೆ. ಸಾಮಾಜಿಕ, ಕೌಟುಂಬಿಕ  ಮತ್ತು ವೈಜ್ಞಾನಿಕ ವಾಸ್ತವ, ತರ್ಕ ಹಾಗೂ ಪುರಾವೆಗಳ ಆಧಾರದಲ್ಲಿ  ಸಲಿಂಗಕಾಮದ ಆತ್ಮ ಘಾತಕ, ಆಪ್ತಘಾತಕ ಮತ್ತು ಸಮೂಹ ಘಾತಕ ಆಯಾಮಗಳ  ಕುರಿತು, ವ್ಯಾಪಕ ಜನಜಾಗೃತಿ ಬೆಳೆಸಬೇಕಾಗಿದೆ. ಆಗ ನಮ್ಮ ಸಲಿಂಗ ಸಹಿಷ್ಣು ಹಾಗೂ ಸಲಿಂಗ ಪೋಷಕ ವ್ಯಕ್ತಿಗಳು ಹಾಗೂ ಗುಂಪುಗಳು ಮಾತ್ರವಲ್ಲ, ನ್ಯಾಯಾಧೀಶರುಗಳು ಕೂಡ ಪ್ರಕೃತಿಯ ಪ್ರಾಚೀನ ಫ್ಯಾಶನ್ ಕಡೆಗೆ ಮರಳಿ ಬರುವ ನಿರೀಕ್ಷೆ ಇದೆ.

✍ಅಬ್ದುಸ್ಸಲಾಮ್ ಪುತ್ತಿಗೆ 

No comments:

Post a Comment