ಪವಿತ್ರ ಕುರ್ ಆನ್ ಧೋರಣೆ:
ಶಾಂತಿಗಾಗಿ ಸಂಘರ್ಷ, ನ್ಯಾಯಕ್ಕಾಗಿ ಹೋರಾಟ
(ಕುರ್ ಆನಿನ ಸಮರ ಸಂಬಂಧಿ ವಚನಗಳ ಹಿನ್ನೆಲೆಯಲ್ಲಿ)
ಮುನ್ನುಡಿ
ಇಂದು ಜಗತ್ತಿನ ಹಲವೆಡೆಗಳಲ್ಲಿ ಎರಡು ಬಗೆಯ ಗುಂಪುಗಳು ಸಕ್ರಿಯವಾಗಿರುವುದನ್ನು ಕಾಣುತ್ತಿದ್ದೇವೆ.
1. ತಾವು ಇಸ್ಲಾಮ್ ಧರ್ಮದ ರಕ್ಷಕರು, ಮುಸ್ಲಿಮ್ ಧರ್ಮಯೋಧರು ಎಂದೆಲ್ಲಾ ಹೇಳಿಕೊಂಡು ಭಯೋತ್ಪಾದನೆ ಮತ್ತಿತರ ವಿನಾಶಕಾರಿ ಕೃತ್ಯಗಳಲ್ಲಿ ತೊಡಗಿರುವವರು.
2. ಇಸ್ಲಾಮ್ ಧರ್ಮವು ಭಯೋತ್ಪಾದನೆಯನ್ನು ಪ್ರೋತ್ಸಾಹಿಸುತ್ತದೆ ಎಂದಿತ್ಯಾದಿ ಆರೋಪಗಳನ್ನು ಹೊರಿಸುವುದರಲ್ಲೇ ಸದಾ ಮಗ್ನರಾಗಿರುವ ಇಸ್ಲಾಮ್ ವಿರೋಧಿ ವಿಮರ್ಶಕರು.
ಸ್ವಾರಸ್ಯದ ಸಂಗತಿ ಏನೆಂದರೆ ಮೇಲ್ನೋಟಕ್ಕೆ ಇವೆರಡೂ ಪರಸ್ಪರ ತದ್ವಿರುದ್ಧ ದಿಕ್ಕಿನಲ್ಲಿರುವ ಗುಂಪುಗಳಂತೆ ಕಾಣಿಸುತ್ತವಾದರೂ ನಿಜವಾಗಿ ಈ ಎರಡೂ ಗುಂಪುಗಳು ಮಾಡುತ್ತಿರುವ ಕೆಲಸವು ಮೂಲತಃ ಒಂದೇ ಆಗಿದೆ. ಇವರಿಬ್ಬರೂ ಕುರ್ ಆನ್ ನ ವಚನಗಳನ್ನು ಅವುಗಳ ಸನ್ನಿವೇಶ, ಹಿನ್ನೆಲೆ ಇತ್ಯಾದಿ ಎಲ್ಲವುಗಳಿಂದ ಪ್ರತ್ಯೇಕಿಸಿ ತಮ್ಮ ಅನುಕೂಲಕ್ಕೆ ತಕ್ಕಂತೆ ತಮ್ಮ ಮೂಗಿನ ನೇರಕ್ಕೆ ವ್ಯಾಖ್ಯಾನಿಸುತ್ತಾರೆ. ಒಬ್ಬರು ತಮ್ಮ ವಿನಾಶಕಾರಿ ವಿಧ್ವಂಸಕ ಚಟುವಟಿಕೆಗಳನ್ನು ಸಮರ್ಥಿಸುವುದಕ್ಕಾಗಿ ಕೆಲವು ಕುರ್ ಆನ್ ವಚನಗಳ ದುರ್ವ್ಯಾಖ್ಯಾನ ಮಾಡುತ್ತಾರೆ. ಇನ್ನೊಬ್ಬರು ಕುರ್ ಆನ್ ಕುರಿತು ತಪ್ಪು ಅಭಿಪ್ರಾಯ ಮೂಡಿಸುವುದಕ್ಕಾಗಿಯೇ ಅಲ್ಲಿಲ್ಲಿಂದ ಕುರ್ ಆನ್ ನ ಕೆಲವು ವಚನಗಳನ್ನು ಹೆಕ್ಕಿ ಅವುಗಳ ದುರ್ವ್ಯಾಖ್ಯಾನ ಮಾಡುತ್ತಾರೆ. ಅಂತಿಮವಾಗಿ, ಪರಿಣಾಮದ ದೃಷ್ಟಿಯಿಂದ ಎರಡೂ ಗುಂಪುಗಳು ಕುರ್ ಆನ್ ಹಿಂಸೆಯನ್ನು ಸಮರ್ಥಿಸುತ್ತದೆಂಬ ಸುಳ್ಳನ್ನು ಜಗತ್ತಿಗೆ ತಲುಪಿಸುವುದು - ಎಂಬ ಒಂದೇ ಕೆಲಸವನ್ನು ಮಾಡುತ್ತಿವೆ. ಆದ್ದರಿಂದ ಸತ್ಯಕ್ಕೆ ದ್ರೋಹ ಬಗೆಯುವ ಈ ಎರಡೂ ಗುಂಪುಗಳನ್ನು ಒಂದೇ ನಾಣ್ಯದ ಎರಡು ಮುಖಗಳೆಂದು ಕರೆಯುವುದೇ ಸೂಕ್ತ.
ಮಾನವೀಯ ಸಂಬಂಧಗಳ ಕುರಿತಾಗಿ ಇಸ್ಲಾಮ್ ಧರ್ಮವು ತಾಳಿರುವ ವಿಶಾಲ ನಿಲುವು ಮತ್ತು ಆ ಕುರಿತು ಅದು ನೀಡುವ ಸವಿಸ್ತಾರ ನೀತಿ ಸಂಹಿತೆಯು ಎಲ್ಲ ಕಾಲ ಮತ್ತು ದೇಶಗಳ ಪಾಲಿಗೆ ಅನುಕರಣೀಯ ವಾಗಿದೆ. ಶಾಂತಿ ಪಾಲನೆ ಮತ್ತು ನ್ಯಾಯ ಪಾಲನೆಗೆ ಅಪಾರ ಮಹತ್ವ ನೀಡುವ ಇಸ್ಲಾಮ್ ಧರ್ಮವು ಆ ಉದ್ದೇಶಕ್ಕಾಗಿ ಯುದ್ಧವನ್ನೂ ಅನುಮತಿಸಿದೆ. ಖಂಡಿತವಾಗಿಯೂ ಯುದ್ಧ ಎಂಬುದು ಇಸ್ಲಾಮ್ ಧರ್ಮದ ಸಮಗ್ರ ಧೋರಣೆಯ ಒಂದು ಸಣ್ಣ ಭಾಗವೇ ಹೊರತು ಅದರ ಪ್ರಧಾನ ಧೋರಣೆಯಂತೂ ಖಂಡಿತ ಅಲ್ಲ. ನಿಜವಾಗಿ ಮಾನವರ ನಡುವೆ ಯುದ್ಧ ಮತ್ತು ಘರ್ಷಣೆಗಳು ನಡೆಯುವುದನ್ನು ನಿವಾರಿಸುವುದು ಮತ್ತು ಮಾನ ಸಮಾಜದಲ್ಲಿ ಎಲ್ಲ ಬಗೆಯ ಭಿನ್ನತೆಗಳ ಹೊರತಾಗಿಯೂ ಪರಸ್ಪರ ನಂಬಿಕೆ ಮತ್ತು ವಿಶ್ವಾಸದ ವಾತಾವರಣವನ್ನು ಸ್ಥಾಪಿಸುವುದೇ ಇಸ್ಲಾಮಿನ ತತ್ವ ಸಿದ್ಧಾಂತಗಳ ಆಶಯವಾಗಿದೆ. ಇಷ್ಟಿದ್ದೂ ಕೆಲವು ವಲಯಗಳು ಇಸ್ಲಾಮ್ ಧರ್ಮ ಹಿಂಸೆಯನ್ನು ಪ್ರೋತ್ಸಾಹಿಸುವ ಧರ್ಮ ಎಂಬ ಅಪ್ಪಟ ಸುಳ್ಳನ್ನು ಸೃಷ್ಟಿಸಿ ಪ್ರಚಾರ ಮಾಡುವ ಶ್ರಮದಲ್ಲಿ ನಿರತವಾಗಿರುವುದು ಒಂದು ದುರಂತವೇ ಸರಿ.
ಇತ್ತೀಚಿಗೆ ಕೆಲವರು ಪವಿತ್ರ ಕುರ್ ಆನ್ ಗ್ರಂಥವನ್ನು ಗುರಿಯಾಗಿಟ್ಟು ಅಪಪ್ರಚಾರದ ವ್ಯಾಪಕ ಅಭಿಯಾನವೊಂದನ್ನು ಆರಂಭಿಸಿದ್ದಾರೆ. ಅವರು ಕುರ್ ಆನ್ ಹಿಂಸೆಯನ್ನು ಪ್ರತಿಪಾದಿಸುವ ಗ್ರಂಥ ಎಂದು ಸಾಬೀತು ಪಡಿಸುವ ತಮ್ಮ ವಿಫಲ ಶ್ರಮದ ಭಾಗವಾಗಿ ಭಾರೀ ಹುಡುಕಾಟ ನಡೆಸಿದ್ದಾರೆ. ಪ್ರಾಮಾಣಿಕತೆ, ವಸ್ತು ನಿಷ್ಠೆ ಇತ್ಯಾದಿಯನ್ನೆಲ್ಲ ದೂರವಿಟ್ಟು, ತಪ್ಪು ಹುಡುಕುವ ದುರುದ್ದೇಶದಿಂದಲೇ ಭೂತ ಕನ್ನಡಿ, ಸೂಕ್ಷ್ಮ ದರ್ಶಕ ಇತ್ಯಾದಿ ಹಿಡಿದು, ತಮ್ಮದೇ ನೆಚ್ಚಿನ ಬಣ್ಣದ ಕನ್ನಡಕ ಧರಿಸಿಕೊಂಡು ಅವರು ಕುರ್ ಆನ್ ಅನ್ನು ಧಾರಾಳ ಜಾಲಾಡಿದ್ದಾರೆ. ಇಷ್ಟಾಗಿಯೂ ತಮಗೆ ಬೇಕಾದ ಹಿಂಸೆಯ ವಚನಗಳು ಸಿಗದೇ ಇದ್ದಾಗ ಶಾಂತಿ ಮತ್ತು ನ್ಯಾಯ ಪ್ರತಿಪಾದಿಸುವ ವಚನೆಗಳನ್ನೇ ತಿರುಚಿ, ವಿಕೃತಗೊಳಿಸಿ ತಮ್ಮ ಇಷ್ಟಾನುಸಾರ ಅವುಗಳನ್ನು ವ್ಯಾಖ್ಯಾನಿಸಿ ನಗೆಪಾಟಲಿಗೆ ಈಡಾಗಿದ್ದಾರೆ.
ಜಾಗತಿಕ ಭೂಪಟದ ಪೂರ್ವ ಭಾಗದಲ್ಲಿ ಈ ತರದ ಕಸರತ್ತು ಆರಂಭವಾದದ್ದು ಹೆಚ್ಚೆಂದರೆ ಒಂದು ಶತಮಾನದ ಹಿಂದೆ. ಆದರೆ ಪಶ್ಚಿಮದಲ್ಲಿ ಹಲವು ಶತಮಾನಗಳ ಹಿಂದೆಯೇ ಈ ಕುರಿತು ಗಹನವಾದ ಗಂಭೀರ ಸಂಶೋಧನೆಗಳೆಲ್ಲ ನಡೆದು ಮುಗಿದಿವೆ. ಹಲವು ಸಂಶೋಧಕರು ಈ ತಮ್ಮ ಸಂಶೋಧನೆ ಮುಗಿಯುವಷ್ಟರಲ್ಲಿ ಕುರ್ ಆನಿನ ಕಟ್ಟಾ ಅಭಿಮಾನಗಳಾಗಿ ಮಾರ್ಪಟ್ಟು , ಅದು ಜಗತ್ತಿನ ಬೇರಾವುದೇ ಗ್ರಂಥಕ್ಕಿಂತ ಹೆಚ್ಚು ಪರಿಣಾಮಕಾರಿಯಾಗಿ ಸಾರ್ವತ್ರಿಕ ಶಾಂತಿ ಮತ್ತು ನ್ಯಾಯವನ್ನು ಪ್ರತಿಪಾದಿಸುವ ಗ್ರಂಥವೆಂದು ವಾದಿಸಿದ್ದೂ ಇದೆ. ಇನ್ನು, ಕುರ್ ಆನ್ ಮೇಲೆ ಸುಳ್ಳಾರೋಪ ಹೊರಿಸಲೇಬೇಕೆಂಬ ದೃಢ ನಿರ್ಧಾರ ಮಾಡಿ ಹುಡುಕಲು ಹೊರಟವರಿಗೂ ಅದರಲ್ಲಿನ ಆರು ಸಾವಿರದ ಇನ್ನೂರಕ್ಕೂ ಮಿಕ್ಕಿದ ವಚನಗಳ ಪೈಕಿ, ಹಿಂಸಾತ್ಮಕ, ಹಿಂಸೆ ಪ್ರಚೋದಕ, ಹಿಂಸೆ ಸಮರ್ಥಕ ಎಂದೆಲ್ಲಾ ಹೆಸರಿಸಲು ಸಿಕ್ಕಿದ್ದು ಹೆಚ್ಚೆಂದರೆ 50 ವಚನಗಳು ಮಾತ್ರ. ಈ ರೀತಿ ಪರ್ವತ ಅಗೆದು ಚಿಕ್ಕಾಸು ಕೂಡಾ ದಕ್ಕದಾಗ ಕೆಲವರು ಹತಾಶರಾಗಿ ಹಿಂಸೆ ಯೊಂದಿಗೆ ಯಾವ ಸಂಬಂಧವೂ ಇಲ್ಲದ ವಚನಗಳನ್ನೂ ಪಟ್ಟಿಗೆ ಸೇರಿಸಿ ಪಟ್ಟಿಯನ್ನು ದೀರ್ಘಗೊಳಿಸುತ್ತಾ ಸಾಗಿದ್ದೂ ಇದೆ. ಅಂತಹ ಇಲಾಸ್ಟಿಕ್ ಪಟ್ಟಿಗಳನ್ನು ನಾವು ನೋಡಿದರೆ ಅಲ್ಲೂ ಹೆಚ್ಚೆಂದರೆ ನೂರು ವಚನಗಳು ಕಾಣಲು ಸಿಗುತ್ತವೆ.
ಇಂತಹ ಕುಚೇಷ್ಟೆಗಳು ಅಲ್ಲಲ್ಲಿ ಪದೇ ಪದೇ ನಡೆದಿರುವ ಮತ್ತು ನಡೆಯುತ್ತಿರುವ ಹಿನ್ನೆಲೆಯಲ್ಲಿ ವಿಕೃತ ವ್ಯಾಖ್ಯಾನ, ವಿಶ್ಲೇಷಣಗಳಿಗೆ ತುತ್ತಾದ ಪವಿತ್ರ ಕುರ್ ಆನ್ ನ ಕೆಲವು ವಚನಗಳ ವಾಸ್ತವವನ್ನು ಹಿನ್ನೆಲೆ ಸಹಿತ ವಿವರಿಸುವ ಒಂದು ಸಣ್ಣ ಪ್ರಯತ್ನ ಈ ಕಿರು ಹೊತ್ತಗೆ. ಈ ಮೂಲಕ ಕನಿಷ್ಠ ಒಂದು ನಿರ್ದಿಷ್ಟ ವಿಷಯದ ಕುರಿತು ಸತ್ಯವು ಬೆಳಕಿಗೆ ಬರುವುದೆಂದು ಆಶಿಸಲಾಗಿದೆ.
ಅಧ್ಯಾಯ - 1
ಕುರ್ ಆನ್ ಪ್ರತಿಪಾದಿಸುವ ಕೆಲವು ಸಾರ್ವಕಾಲಿಕ, ವಿಶ್ವಮಾನ್ಯ ಧೋರಣೆಗಳು ಜಗತ್ತಿನ ಎಲ್ಲ ಸಮಾಜಗಳಲ್ಲೂ ಸಾಮಾನ್ಯ ಸನ್ನಿವೇಶಗಳಿಗಾಗಿ ಒಂದಷ್ಟು ನಿಯಮಗಳಿರುತ್ತವೆ. ಆ ನಿಯಮಗಳೇ ಸಾಮಾಜಿಕ ವ್ಯವಸ್ಥೆಯ ತಳಹದಿಗಳಾಗಿರುತ್ತವೆ. ಆದರೆ ಅದೇ ವೇಳೆ, ಎಲ್ಲ ಸಮಾಜಗಳಲ್ಲೂ ಅಸಾಮಾನ್ಯ ಪರಿಸ್ಥಿತಿಗಳನ್ನು ಮತ್ತು ಸನ್ನಿವೇಶಗಳನ್ನು ನಿಭಾಯಿಸುವುದಕ್ಕಾಗಿ ಕೆಲವು ವಿಶೇಷ ನಿಯಮಗಳಿರುತ್ತವೆ. ತೀರಾ ಅನಿವಾರ್ಯವಾದಾಗ ಆ ನಿಯಮಗಳನ್ನು ಬಳಸಲಾಗುತ್ತದೆ. ಯಾವುದೇ ಸಮಾಜದಲ್ಲಿ ಎಲ್ಲರೂ ಕಳ್ಳರಾಗಿರುವುದಿಲ್ಲ. ಕೇವಲ ಕೆಲವರು ಮಾತ್ರ ಕೆಲವೊಮ್ಮೆ ಕಳ್ಳತನಕ್ಕೆ ಇಳಿಯುತ್ತಾರೆ. ಅದೇ ರೀತಿ ಕೆಲವರು ಕೆಲವೊಮ್ಮೆ ವಂಚನೆ, ಕೊಳ್ಳೆ, ದರೋಡೆ, ಅತ್ಯಾಚಾರ ಮಾತ್ರವಲ್ಲ ಕೊಲೆಯಂತಹ ಅಪರಾಧಗಳನ್ನೂ ಮಾಡುತ್ತಾರೆ. ಕೆಲವರಂತೂ ಇಂತಹ ಅಪರಾಧಗಳನ್ನು ಪದೇ ಪದೇ ಮಾಡುತ್ತಾರೆ. ಇಂತಹ ಪ್ರಕರಣಗಳು ನಡೆದಾಗಲೆಲ್ಲಾ ಕೇವಲ ಕ್ಷಮೆ, ಔದಾರ್ಯದಂತಹ ಸಾಮಾನ್ಯ ನಿಯಮಗಳನ್ನು ಮಾತ್ರ ಬಳಸಿದರೆ ಸಾಕೆಂದುಕೊಂಡು, ಅಪರಾಧಿಗಳನ್ನು ದಂಡಿಸುವುದಕ್ಕಾಗಿರುವ ವಿಶೇಷ ನಿಯಮಗಳನ್ನು ಬಳಸದಿದ್ದರೆ ಯಾವುದೇ ಸಮಾಜದ ಗತಿ ಏನಾದೀತು? ತಾವು ಅಹಿಂಸೆಯ ಪರಮೋಚ್ಚ ಪ್ರಕಾರವನ್ನು ನಂಬಿ ಆಚರಿಸುವವರು ಎಂದು ಹೇಳಿಕೊಳ್ಳುವವರೇ ಅತ್ಯಧಿಕ ಸಂಖ್ಯೆಯಲ್ಲಿರುವ ಮತ್ತು ಅವರದೇ ಆಡಳಿತ ಇರುವ ಸಮಾಜಗಳಲ್ಲೂ ದಂಡ ಸಂಹಿತೆಗಳಿರುತ್ತವೆ. ಅಲ್ಲೂ ಪೊಲೀಸ್ಠಾಣೆ ಗಳಿರುತ್ತವೆ. ಸಶಸ್ತ್ರ ಆಂತರಿಕ ಭದ್ರತಾ ಪಡೆಗಳಿರುತ್ತವೆ. ಜೈಲುಗಳು ಇರುತ್ತವೆ. ಅಪರಾಧಿಗಳನ್ನು ನಿಯಂತ್ರಿಸುವುದಕ್ಕಾಗಿ ಮತ್ತು ಅವರನ್ನು ದಂಡಿಸುವುದಕ್ಕಾಗಿ ಪ್ರತ್ಯೇಕ ಇಲಾಖೆಗಳು ಮತ್ತು ಸವಿಸ್ತಾರವಾದ ಕಾನೂನು ಸಂಹಿತೆ ಗಳೆಲ್ಲಾ ಇರುತ್ತವೆ. ಇರುತ್ತವೆ. ಗಡಿಯಾಚೆಯಿಂದ ಬರಬಹುದಾದ ಅಪಾಯಗಳನ್ನು ಎದುರಿಸಲು ಭೂ ಸೇನೆ, ನೌಕಾ ಪಡೆ, ವಾಯುಪಡೆ ಇತ್ಯಾದಿಗಳಿರುತ್ತವೆ. "ಒಂದು ಕೆನ್ನೆಗೆ ಹೊಡೆದವನಿಗೆ ಇನ್ನೊಂದು ಕೆನ್ನೆ ತೋರಿಸಬೇಕು" ಎಂಬ ಆದರ್ಶ ನೀತಿ ವ್ಯಕ್ತಿಗತ ಸನ್ನಿವೇಶಗಳಲ್ಲಿ ಖಂಡಿತ ಫಲಪ್ರದವಾಗುತ್ತದೆ. ಆದರೆ ಯಾರಾದರೂ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸ್ತರಗಳಲ್ಲಿ ಈ ನೀತಿಯನ್ನು ನೆಚ್ಚಿಕೊಂಡರೆ ಅದು ತೀರಾ ಉತ್ಪ್ರೇಕ್ಷಿತ ಮತ್ತು ಅಪ್ರಾಯೋಗಿಕ ಆದರ್ಶವಾದವೆನಿಸಿಕೊಳ್ಳುತ್ತದೆ. ಆದ್ದರಿಂದಲೇ ಅಂತಹ ತತ್ವವನ್ನು ಜಗತ್ತಿಗೆಲ್ಲಾ ಬೋಧಿಸುವವರು ಕೂಡಾ ತಮ್ಮ ಮನೆಯಲ್ಲಿ ಒಮ್ಮೆ ಕಳ್ಳತನ ಮಾಡಿದವನನ್ನು ಮತ್ತೆ ಬಂದು ಕಳ್ಳತನ ಮಾಡೆಂದು ಆಮಂತ್ರಿಸುವುದಿಲ್ಲ. ಒಮ್ಮೆ ಅತ್ಯಾಚಾರ ಮಾಡಿದವನಿಗೆ, ಇನ್ನೊಮ್ಮೆ ಮಾಡೆಂದು ಮನವಿ ಮಾಡುವುದಿಲ್ಲ. ಹಲ್ಲೆ, ಕೊಳ್ಳೆ, ಹತ್ಯೆಗಳ ಪಾಲಿಗೆ ಯಾವ ಸ್ವಸ್ಥ ಸಮಾಜವೂ ಸಹಿಷ್ಣುವಾಗಿರುವುದಿಲ್ಲ.
ಇಸ್ಲಾಮ್ ಧರ್ಮದಲ್ಲೂ ಅಷ್ಟೇ. ಇಲ್ಲಿರುವ ಸಾಮಾನ್ಯ ನಿಯಮಗಳನ್ನು ಮತ್ತು ನಿತ್ಯಜೀವನದಲ್ಲಿ ಪಾಲಿಸುವುದಕ್ಕೆ ಇಸ್ಲಾಮ್ ಧರ್ಮವು ನೀಡುವ ಸಂಹಿತೆಯನ್ನು ನೋಡಿದರೆ ಅದರಲ್ಲಿ ಸಾದ್ಯಂತ ಪ್ರೀತಿ, ವಿಶ್ವಾಸ, ಭ್ರಾತೃತ್ವ, ಬಂಧುತ್ವ, ಕರುಣೆ, ವಾತ್ಸಲ್ಯ, ಸಹನೆ, ಸಂಯಮ, ಕ್ಷಮೆ, ಔದಾರ್ಯ, ಸೇವೆ, ಉಪಕಾರ ಮುಂತಾದ ಮೌಲ್ಯಗಳೇ ತುಂಬಿ ತುಳುಕುತ್ತಿವೆ. ಆದರೆ ಅದೇ ವೇಳೆ ಸಾಮಾನ್ಯ ನಿಯಮಗಳನ್ನು ಉಲ್ಲಂಘಿಸಿ ಅಪರಾಧಕೃತ್ಯಗಳನ್ನು ಎಸಗುವವರನ್ನು ಹದ್ದುಬಸ್ತಿನಲ್ಲಿಡುವುದಕ್ಕಾಗಿ ವಿಶೇಷ ನಿಯಮಗಳೂ ಇವೆ. ಕೆಲವರು ಪ್ರಸ್ತುತ ವಿಶೇಷ ನಿಯಮಗಳನ್ನೇ ಹೆಕ್ಕಿ ಅವು ಮುಸ್ಲಿಮ್ ಸಮಾಜದಲ್ಲಿರುವ ಸಾಮಾನ್ಯ ನಿಯಮಗಳೆಂದು ಸುಳ್ಳು ಹೇಳಿ ಮುಸ್ಲಿಮರ ಧರ್ಮ, ಧರ್ಮಗ್ರಂಥ ಇತ್ಯಾದಿ ಎಲ್ಲ ವಿಷಯಗಳ ಕುರಿತು ಜನರಲ್ಲಿ ತೀರಾ ಪ್ರತಿಕೂಲ ಅಭಿಪ್ರಾಯವನ್ನು ಮೂಡಿಸಲು ಶ್ರಮಿಸುತ್ತಾರೆ.
ಲೋಕದ ಎಲ್ಲ ದೇಶಗಳಲ್ಲೂ ಪ್ರತಿದಿನವೇನೂ ಯುದ್ಧ ಗಳು ನಡೆಯುವುದಿಲ್ಲ. ಎಲ್ಲ ದೇಶಗಳು ತಮ್ಮ ನೆರೆಯ ದೇಶಗಳನ್ನು ಶತ್ರುದೇಶಗಳೆಂದು ಪರಿಗಣಿಸುವುದಿಲ್ಲ. ಆದರೂ ಜಗತ್ತಿನ ಹೆಚ್ಚಿನೆಲ್ಲಾ ದೇಶಗಳ ಬಳಿ ತಮ್ಮದೇ ಆದ ಬೇಹುಗಾರಿಕಾ ವ್ಯವಸ್ಥೆ, ಶಸ್ತ್ರ ಸಜ್ಜಿತ ಸೇನೆಗಳು, ಗಡಿಭದ್ರತಾ ಪಡೆಗಳು, ಶಸ್ತ್ರಾಸ್ತ್ರಗಳ ದಾಸ್ತಾನು ಇತ್ಯಾದಿಯೆಲ್ಲಾ ಇರುತ್ತವೆ. ಯೋಧರನ್ನು ಸದಾ ಸನ್ನದ್ಧ ಸ್ಥಿತಿಯಲ್ಲಿ, ಸಮರ ಸಜ್ಜಿತರಾಗಿಡುವುದಕ್ಕೆ ಬೇಕಾದ ಕವಾಯತ್ತು, ಅಭ್ಯಾಸ ಇತಾದಿಗಳೆಲ್ಲ ನಿತ್ಯ ನಡೆಯುತ್ತಿರುತ್ತವೆ. ಇದು ನಿನ್ನೆ ಮೊನ್ನೆಯ ಬೆಳವೆಣಿಗೆಯೇನೂ ಅಲ್ಲ. ನಮಗೆ ಪರಿಚಯವಿರುವ ಮಾನವ ಇತಿಹಾಸದ ಉದ್ದಕ್ಕೂ ಇದುವೇ ನಡೆದಿದೆ.
ನಿತ್ಯ ಜೀವನಕ್ಕೆ ಸಂಬಂಧಿಸಿದಂತೆ, ಸಮಾಜದಲ್ಲಿ ಎಲ್ಲರಿಗೂ ಅನ್ವಯಿಸುವ ಹಾಗೂ ಎಲ್ಲರ ಹಿತ ಕಾಪಾಡುವ ಕೆಲವು ವಿಶಾಲ ನಂಬಿಕೆ ಮತ್ತು ಉದಾತ್ತ ನಿಯಮಗಳನ್ನು ಇಸ್ಲಾಮ್ ಧರ್ಮವು ಮಾನವ ಸಮಾಜದ ಮುಂದಿಡುತ್ತದೆ. ಅದರ ಕೆಲವು ಮಾದರಿಗಳನ್ನು ಪವಿತ್ರ ಕುರ್ ಆನ್ ನಲ್ಲಿ ಕಾಣಬಹುದು. ಉದಾ :
"... .. ಅಲ್ಲಾಹನು ವಿಧ್ವಂಸವನ್ನು ಮೆಚ್ಚುವುದಿಲ್ಲ." 2:205
'' ನೀವು (ಮುಸ್ಲಿಮರು) ಸಂಪೂರ್ಣ ಮಾನವ ಸಮಾಜಕ್ಕಾಗಿ ನಿಯೋಜಿಸಲಾಗಿರುವ ಅತ್ಯುತ್ತಮ ಸಮುದಾಯದವರು... ... '' 3:110
"ಮಾನವರೇ, ಖಂಡಿತವಾಗಿಯೂ ನಾವು ನಿಮ್ಮೆಲ್ಲರನ್ನೂ ಒಬ್ಬ ಪುರುಷ ಹಾಗೂ ಒಬ್ಬ ಸ್ತ್ರೀ ಯಿಂದ ಸೃಷ್ಟಿಸಿರುವೆವು. ತರುವಾಯ ನೀವು ಪರಸ್ಪರ ಗುರುತಿಸುವಂತಾಗಲು ನಿಮ್ಮನ್ನು (ವಿವಿಧ) ಜನಾಂಗಗಳಾಗಿ ಹಾಗೂ ಪಂಗಡಗಳಾಗಿ ರೂಪಿಸಿರುವೆವು . ಅಲ್ಲಾಹನ ದೃಷ್ಟಿಯಲ್ಲಿ ನಿಮ್ಮ ಪೈಕಿ ಅತ್ಯಧಿಕ ಧರ್ಮ ನಿಷ್ಠನಾಗಿರುವವನೇ ನಿಮ್ಮಲ್ಲಿನ ಅತ್ಯುತ್ತಮನಾಗಿರುವನು..... ... " 49:13
" ಮಾನವರೇ, ನಿಮ್ಮನ್ನು ಒಂದೇ ಜೀವದಿಂದ ಸೃಷ್ಟಿಸಿದ ನಿಮ್ಮ ಒಡೆಯನಿಗೆ ನಿಷ್ಠರಾಗಿರಿ. ಅವನು ಅದೇ ಜೀವದಿಂದ ಅದರ ಜೊತೆಯನ್ನೂ ಸೃಷ್ಟಿಸಿದನು ಮತ್ತು ಅವರಿಬ್ಬರ ಮೂಲಕ ಅನೇಕಾರು ಪುರುಷರನ್ನೂ ಸ್ತ್ರೀಯರನ್ನೂ (ಲೋಕದಲ್ಲಿ ಹಬ್ಬಿದನು. ಯಾವ ಅಲ್ಲಾಹನ ಹೆಸರಲ್ಲಿ ನೀವು ಹಕ್ಕುಗಳನ್ನು ಕೇಳುತ್ತೀರೋ ಅವನಿಗೆ ಸದಾ ಅಂಜಿರಿ ಮತ್ತು ಬಾಂಧವ್ಯಗಳನ್ನು ಕಾಪಾಡಿರಿ. ಖಂಡಿತವಾಗಿಯೂ ಅಲ್ಲಾಹನು ನಿಮ್ಮ ಮೇಲೆ ಕಣ್ಣಿಟ್ಟಿರುತ್ತಾನೆ." 4:1
".... ... ಸಂಧಾನವೇ ಉತ್ತಮ. ಮನಸ್ಸುಗಳಲ್ಲಿ ಸ್ವಾರ್ಥವಿರುವುದು ಸ್ವಾಭಾವಿಕ. ಆದರೂ ನೀವು ಸೌಜನ್ಯ ತೋರಿದರೆ ಹಾಗೂ ಧರ್ಮನಿಷ್ಠರಾಗಿದ್ದರೆ (ನಿಮಗೆ ತಿಳಿದಿರಲಿ) - ಅಲ್ಲಾಹನಂತೂ ನೀವು ಮಾಡುವ ಎಲ್ಲವನ್ನೂ ಅರಿತಿರುತ್ತಾನೆ''. 4:128
ವಿಶ್ವಾಸಿಗಳೇ, ನೀವು ಕಟ್ಟು ನಿಟ್ಟಾಗಿ ಸದಾ ನ್ಯಾಯವನ್ನು ಪಾಲಿಸುವವರಾಗಿರಿ ಹಾಗೂ ಅಲ್ಲಾಹನಿಗಾಗಿ (ಸತ್ಯದ ಪರ) ಸಾಕ್ಷಿ ಹೇಳುವವರಾಗಿರಿ - ಅದು ಸ್ವತಃ ನಿಮ್ಮ ವಿರುದ್ಧ, ಅಥವಾ ನಿಮ್ಮ ತಂದೆ ತಾಯಿಯ ಅಥವಾ ನಿಕಟ ಬಂಧುಗಳ ವಿರುದ್ಧವಾಗಿದ್ದರೂ ಸರಿಯೇ..... ನೀವೆಂದೂ ನಿಮ್ಮ ಚಿತ್ತಾಕಾಂಕ್ಷೆ ಗಳನ್ನೂ ಅನುಸರಿಸಿ ನ್ಯಾಯಪಾಲನೆಯಲ್ಲಿ ತಪ್ಪಬೇಡಿ." 4:135
"ವಿಶ್ವಾಸಿಗಳೇ, ನೀವು ಸದಾ ಅಲ್ಲಾಹನಿಗಾಗಿ ನ್ಯಾಯದ ಪರ ಸಾಕ್ಷಿ ನಿಲ್ಲುವವರಾಗಿರಿ. ಒಂದು ಜನಾಂಗದ ಮೇಲಿನ ಹಗೆತನ ಕೂಡಾ, ನ್ಯಾಯ ಪಾಲಿಸದೆ ಇರಲು ನಿಮ್ಮನ್ನು ಪ್ರಚೋದಿಸ ಬಾರದು. ನೀವು ಸದಾ ನ್ಯಾಯವನ್ನೇ ಪಾಲಿಸಿರಿ. ಅದುವೇ ಧರ್ಮನಿಷ್ಠೆಗೆ ಹೆಚ್ಚು ನಿಕಟ ಧೋರಣೆಯಾಗಿದೆ. ಸದಾ ಅಲ್ಲಾಹನಿಗೆ ಅಂಜಿರಿ. ಅಲ್ಲಾಹನಂತು, ನೀವು ಮಾಡುತ್ತಿರುವ ಎಲ್ಲವನ್ನೂ ಚೆನ್ನಾಗಿ ಅರಿತಿರುತ್ತಾನೆ." 5:8
".... ನಾವು ಆದಮ್ ರ ಸಂತತಿಯನ್ನು (ಎಲ್ಲ ಮಾನವರನ್ನು) ಗೌರವಾನ್ವಿತಗೊಳಿಸಿರುವೆವು.........'' 17:70
"ಇದೇ ಕಾರಣದಿಂದ ನಾವು ಇಸ್ರಾಈಲ್ ಸಂತತಿಗಳಿಗೆ ಈ ರೀತಿ ವಿಧಿಸಿದೆವು; ಒಂದು ಮಾನವ ಜೀವಕ್ಕೆ ಪ್ರತಿಯಾಗಿ (ಒಂದು ಕೊಲೆಗೆ ಶಿಕ್ಷೆಯಾಗಿ) ಅಥವಾ ಭೂಮಿಯಲ್ಲಿ ಅಶಾಂತಿ ಹರಡಿದ್ದಕ್ಕೆ (ಶಿಕ್ಷೆಯಾಗಿ) ಹೊರತು - ಒಂದು ಮಾನವ ಜೀವವನ್ನು ಕೊಂದವನು ಎಲ್ಲ ಮಾನವರನ್ನು ಕೊಂದಂತೆ. ಹಾಗೆಯೇ ಅದನ್ನು (ಒಂದು ಮಾನವ ಜೀವವನ್ನು) ರಕ್ಷಿಸಿದವನು ಎಲ್ಲ ಮಾನವರನ್ನು ರಕ್ಷಿಸಿದಂತೆ..... ...." 5:32
"ಖಂಡಿತವಾಗಿಯೂ ಅಲ್ಲಾಹನು ನಿಮಗೆ, ನ್ಯಾಯ ಪಾಲಿಸಬೇಕೆಂದೂ ಸೌಜನ್ಯ ತೋರಬೇಕೆಂದೂ ಬಂಧುಗಳಿಗೆ (ಅವರ ಹಕ್ಕನ್ನು) ನೀಡಬೇಕೆಂದೂ ಆದೇಶಿಸುತ್ತಾನೆ ಮತ್ತು ಅವನು ನಿಮ್ಮನ್ನು ಅಶ್ಲೀಲ ಕತ್ಯಗಳಿಂದಲೂ, ಅನ್ಯಾಯದಿಂದಲೂ ವಿದ್ರೋಹದಿಂದಲೂ ತಡೆಯುತ್ತಾನೆ. ನೀವುಪಾಠ ಕಲಿಯಬೇಕೆಂದು ಅವನು ನಿಮಗೆ ಉಪದೇಶಿಸುತ್ತಾನೆ". 16:90
"ಧರ್ಮದಲ್ಲಿ ಬಲವಂತವಿಲ್ಲ. ಖಂಡಿತವಾಗಿಯೂ ಸರಿದಾರಿಯು ತಪ್ಪು ದಾರಿಗಳಿಂದ ಪ್ರತ್ಯೇಕವಾಗಿದೆ......" 2: 256.
"ನಿಮ್ಮ ಒಡೆಯನು ಬಯಸಿದ್ದರೆ, ಭೂಮಿಯಲ್ಲಿರುವ ಎಲ್ಲರೂ ಜೊತೆಯಾಗಿ (ಸತ್ಯ ಧರ್ಮವನ್ನು) ನಂಬುವವರಾಗಿ ಬಿಡುತ್ತಿದ್ದರು. (ಅವನೇ ಹಾಗೆ ಮಾಡಿಲ್ಲದಿರುವಾಗ) ಜನರೆಲ್ಲಾ ನಂಬುವವರಾಗಿ ಬಿಡುವ ತನಕ ನೀವೇನು ಅವರನ್ನು ನಿರ್ಬಂಧಿಸುವಿರಾ?" 10: 99
"ಅಲ್ಲಾಹನು ಅನುಮತಿಸದೆ, ವಿಶ್ವಾಸಿಯಾಗಲು ಯಾವ ಜೀವಿಗೂ ಸಾಧ್ಯವಿಲ್ಲ. ಬುದ್ಧಿಯನ್ನು ಬಳಸದ ಜನರ ಮೇಲೆ ಅವನು ಮಾಲಿನ್ಯವನ್ನು ಹೇರಿ ಬಿಡುತ್ತಾನೆ". 10:100.
''ನೀವು ಹೇಳಿ ಬಿಡಿ: ಇದು ನಿಮ್ಮ ಒಡೆಯನ ಕಡೆಯಿಂದ ಬಂದಿರುವ ಸತ್ಯ. (ಇದನ್ನು) ಇಷ್ಟವುಳ್ಳವನು ನಂಬಲಿ, ಮತ್ತು ಧಿಕ್ಕರಿಸ ಬಯಸುವವನು ಧಿಕ್ಕರಿಸಲಿ ... ... '' 18:29
"ಅಲ್ಲಾಹನು ನಿಷಿದ್ಧ ಗೊಳಿಸಿರುವ (ಕೊಲ್ಲಬಾರದೆಂದು ವಿಧಿಸಿರುವ) ಯಾವುದೇ ಜೀವವನ್ನು ನೀವು ಅಕ್ರಮವಾಗಿ ಕೊಲ್ಲಬೇಡಿ." 17: 33, 6:151
''.... ... ಅಜ್ಞಾನಿಗಳು ತಮ್ಮೊಡನೆ ಮಾತಿಗಿಳಿದರೆ ಅವರು (ಧರ್ಮನಿಷ್ಠ ಮುಸ್ಲಿಮರು), 'ಸಲಾಮ್' ಎಂದಷ್ಟೇ ಹೇಳುತ್ತಾರೆ'' 25:63
"ಅವರು (ಜನರನ್ನು) ಕ್ಷಮಿಸಬೇಕು ಮತ್ತು (ಇತರರ ತಪ್ಪುಗಳನ್ನು) ಕಡೆಗಣಿಸಬೇಕು. ನೀವೇನು, ಅಲ್ಲಾಹನು ನಿಮ್ಮನ್ನು ಕ್ಷಮಿಸಬೇಕೆಂದು ಅಪೇಕ್ಷಿಸುವುದಿಲ್ಲವೇ? ಅಲ್ಲಾಹನು ಕ್ಷಮಿಸುವವನು ಮತ್ತು ಕರುಣಾಳುವಾಗಿದ್ದಾನೆ". 24:22
".... ..... ಅಲ್ಲಾಹನು ನಿನಗೆ ಹಿತವನ್ನು ಮಾಡಿರುವಂತೆ ನೀನು (ಜನರಿಗೆ) ಹಿತವನ್ನು ಮಾಡು. ನೀನು ಭೂಮಿಯಲ್ಲಿ ಅಶಾಂತಿಯನ್ನು ಹರಡದಿರು. ಅಶಾಂತಿ ಹರಡುವವರನ್ನು ಅಲ್ಲಾಹನು ಖಂಡಿತ ಮೆಚ್ಚುವುದಿಲ್ಲ." 28:77
"'ಒಳಿತು ಮತ್ತು ಕೆಡುಕು ಸಮಾನವಲ್ಲ. ನೀವು ಕೆಡುಕನ್ನು ಒಳಿತಿನಿಂದ ಎದುರಿಸಿರಿ - ಆಗ ನಿಮ್ಮ ವಿರುದ್ಧ ಹಗೆತನ ಉಳ್ಳವನೂ ನಿಮ್ಮ ಆಪ್ತ ಮಿತ್ರನಾಗಿ ಬಿಡುವನು. ಸಹನ ಶೀಲರ ಹೊರತು ಇತರರಿಗೆ ಇದು (ಈ ಸಾಮರ್ಥ್ಯ) ಪ್ರಾಪ್ತವಾಗುವುದಿಲ್ಲ. ಮತ್ತು ಮಹಾ ಸೌಭಾಗ್ಯವಂತರ ಹೊರತು ಇತರರಿಗೆ ಇದು ಪ್ರಾಪ್ತವಾಗುವುದಿಲ್ಲ."' 41: 34,35
''ಧರ್ಮದ ವಿಷಯದಲ್ಲಿ ನಿಮ್ಮ ವಿರುದ್ಧ ಯುದ್ಧ ಮಾಡಿಲ್ಲದ ಮತ್ತು ನಿಮ್ಮನ್ನು ನಿಮ್ಮ ನಾಡಿನಿಂದ ಹೊರಹಾಕಿಲ್ಲದ ಜನರೊಡನೆ ನೀವು ಸೌಜನ್ಯ ತೋರುವುದನ್ನು ಮತ್ತು ಅವರ ಜೊತೆ ನ್ಯಾಯವಾಗಿ ವ್ಯವಹರಿಸುವುದನ್ನು ಅಲ್ಲಾಹನು ತಡೆಯುವುದಿಲ್ಲ. ನ್ಯಾಯ ಪಾಲಿಸುವವರನ್ನು ಅಲ್ಲಾಹನು ಪ್ರೀತಿಸುತ್ತಾನೆ.'' 60:8
ಕ್ರಿಸ್ತ ಪೂರ್ವ 32ನೇ ಶತಮಾನದಲ್ಲಿ ಈಜಿಪ್ಟ್ ನಲ್ಲಿ ಫಿರ್ ಫಿರ್ ಔನ್ ಎಂಬೊಬ್ಬ ಕ್ರೂರ ಹಾಗೂ ಅಹಂಕಾರಿ ದೊರೆ ಇದ್ದನು. ಅವನು "ನಾನೇ ಅತಿದೊಡ್ಡ ದೇವರು" ಎಂದು ಘೋಷಿಸಿದ್ದನು . ಕುರ್ ಆನ್ ನಲ್ಲಿ ಅಲ್ಲಾಹನು, ತನ್ನ ದೂತರಾದ ಮೂಸಾ ಮತ್ತು ಹಾರೂನ್ ರನ್ನು ಆ ದೊರೆಯ ಬಳಿಗೆ ಕಳಿಸಿದ ಸನ್ನಿವೇಶವನ್ನು ಹೀಗೆ ಪ್ರಸ್ತಾಪಿಸಲಾಗಿದೆ :
"ನೀವಿಬ್ಬರೂ ಫಿರ್‌ಔನನ ಬಳಿಗೆ ಹೋಗಿರಿ. ಅವನು ಖಂಡಿತ ಬಂಡಾಯವೆದ್ದಿರುವನು. ನೀವಿಬ್ಬರೂ ಅವನೊಡನೆ ಸೌಮ್ಯವಾದ ಮಾತನ್ನೇ ಆಡಿರಿ. ಅವನು ಉಪದೇಶ ಸ್ವೀಕರಿಸಬಹುದು ಅಥವಾ ದೇವ ಭಯ ಉಳ್ಳವನಾಗಲೂ ಬಹುದು (ಎಂದು ನಿರೀಕ್ಷಿಸುತ್ತಾ)." 20: 43,44
ಕುರ್ ಆನ್ ನ ಈ ವಚನಗಳನ್ನೋದಿ ಯಹ್ಯಾ ಬಿನ್ ಮುಆದ್ ಎಂಬ ಖ್ಯಾತ ವಿದ್ವಾಂಸರು ಕಣ್ಣೀರಿಡುತ್ತಾ ಹೇಳಿದ್ದರು:
"ನನ್ನೊಡೆಯಾ, ನಾನೇ ದೇವರು ಎನ್ನುವಾತನ ಪಾಲಿಗೆ ನೀನು ಇಷ್ಟೊಂದು ಸೌಮ್ಯನಾಗಿದ್ದರೆ, ನಿನ್ನನ್ನು ದೇವರೆಂದು ಕರೆಯುವವರ ಪಾಲಿಗೆ ನೀನೆಷ್ಟು ಸೌಮ್ಯನಾಗಿರಬಹುದು!"
ಕುರ್ ಆನ್ ನಲ್ಲಿ ಅಲ್ಲಾಹನ ಕುರಿತು ''ಅವನು ಕರುಣೆಯನ್ನು ತನ್ನ ಪಾಲಿಗೆ ಕಡ್ಡಾಯಗೊಳಿಸಿರುವನು" ಎನ್ನಲಾಗಿದೆ. 6:54
ಹಾಗೆಯೇ ಪ್ರವಾದಿ ಮುಹಮ್ಮದ್ (ಸ) ರ ಕುರಿತು ''ನಾವು ನಿಮ್ಮನ್ನು ಸರ್ವಲೋಕಗಳ ಪಾಲಿಗೆ ಕರುಣೆಯಾಗಿ ಕಳುಹಿಸಿರುವೆವು" ಎಂದು ಹೇಳಲಾಗಿದೆ. 21: 107
ಪ್ರವಾದಿ (ಸ) ಹೇಳಿದರು:
"ಯಾರಲ್ಲಿ ಅನುಕಂಪವಿಲ್ಲವೋ ಅವನಲ್ಲಿ ಯಾವ ಒಳಿತೂ ಇಲ್ಲ". (ಸಹೀಹ್ ಮುಸ್ಲಿಮ್ 2592)
"ಅಲ್ಲಾಹನು ಅನುಕಂಪ ಉಳ್ಳವನಾಗಿದ್ದಾನೆ ಮತ್ತು ಎಲ್ಲ ವಿಷಯಗಳಲ್ಲೂ ಅನುಕಂಪಡಾ ನೀತಿಯನ್ನು ಪ್ರ್ರೇಟಿಸುತ್ತಾನೆ". (ಸಹೀಹ್ ಬುಖಾರಿ 6528)
ಈ ರೀತಿ ಎಲ್ಲರ ಜೀವವನ್ನು ಗೌರವಿಸುವ, ಎಲ್ಲರ ಧಾರ್ಮಿಕ ಸ್ವಾತಂತ್ರ್ಯಕ್ಕೆ ಮಾನ್ಯತೆ ನೀಡುವ, ಸಾರ್ವತ್ರಿಕ ಶಾಂತಿಯನ್ನು ಪ್ರತಿಪಾದಿಸುವ, ಸದಾ ಎಲ್ಲರ ಜೊತೆ ನ್ಯಾಯಪಾಲನೆಗೆ ಆಗ್ರಹಿಸುವ ಮತ್ತು ಎಲ್ಲ ಸ್ತರಗಳಲ್ಲೂ ಅತ್ಯುನ್ನತ ನೈತಿಕ ಮೌಲ್ಯಗಳನ್ನು ವಿಧಿಸುವ ಸಹನೆ, ಸಂಯಮ, ಸಾಂತ್ವನ, ಶತಾಪಗಳೇ ತುಂಬಿರುವ ಸೌಮ್ಯ ವಚನಗಳೇ ಕುರ್ ಆನ್ ನಲ್ಲಿ ಉದ್ದಕ್ಕೂ ಕಾಣಲು ಸಿಗುತ್ತವೆ. ಅದೇ ವೇಳೆ, ಕೆಲವು ನಿರ್ದಿಷ್ಟ ಸನ್ನಿವೇಶಗಳಲ್ಲಿ, ಆತ್ಮ ರಕ್ಷಣೆಗಾಗಿ ಅಥವಾ ಅಪರಾಧಿಗಳನ್ನು ದಂಡಿಸುವುದಕ್ಕಾಗಿ ಅಥವಾ ನ್ಯಾಯಪಾಲನೆ ಮತ್ತು ಶಾಂತಿ ಸ್ಥಾಪನೆಗಾಗಿ ಅಥವಾ ಅನ್ಯಾಯ ಮತ್ತು ದೌರ್ಜನ್ಯಕ್ಕೆ ತುತ್ತಾಗಿರುವ ಅಮಾಯಕರನ್ನು ರಕ್ಷಿಸುವುದಕ್ಕಾಗಿ ಸೈನಿಕ ಕಾರ್ಯಾಚರಣೆ ಮತ್ತು ಯುದ್ಧವೂ ಸೇರಿದಂತೆ ವಿವಿಧ ದಂಡನಾತ್ಮಕ ಕ್ರಮಗಳನ್ನು ಅನುಮತಿಸುವ ಹಾಗೂ ವಿಧಿಸುವ ಕೆಲವು ವಚನಗಳೂ ಕುರ್ ಆನ್ ನಲ್ಲಿವೆ. ಅಂತಹ ವಚನಗಳನ್ನು ಅವುಗಳ ಸಾಂದರ್ಭಿಕ ಹಾಗೂ ಐತಿಹಾಸಿಕ ಹಿನ್ನೆಲೆಯಿಂದ ಸಂಪೂರ್ಣ ಬೇರ್ಪಡಿಸಿ, ಕೆಲವೊಮ್ಮೆ ಒಂದೇ ವಚನದ ಪದಗಳನ್ನು ಅವುಗಳ ಪೂರ್ವಾಪರಗಳಿಂದ ಪ್ರತ್ಯೇಕಿಸಿ, ಮುಗ್ಧ ಜನರ ಮುಂದಿಟ್ಟಾಗ ಅವು ಹಲವು ಅಪಾರ್ಥಗಳಿಗೆ ಕಾರಣವಾಗುತ್ತವೆ. ಸ್ವಾರಸ್ಯದ ಸಂಗತಿ ಏನೆಂದರೆ ಈ ದುಷ್ಟ ಕೆಲಸವನ್ನು ಎರಡು ಬಗೆಯ ಜನರು ಮಾಡುತ್ತಾರೆ.
1. ಕುರುಡಾಗಿ ಇಸ್ಲಾಮ್ ಧರ್ಮವನ್ನು ಮತ್ತು ಮುಸ್ಲಿಮ್ ಸಮಾಜವನ್ನು ಸ್ವತಃ ದ್ವೇಷಿಸುತ್ತ, ಇತರರಲ್ಲೂ ದ್ವೇಷವನ್ನು ಬಿತ್ತುವ ಕಾರ್ಯದಲ್ಲಿ ನಿರತರಾಗಿರುವ ಬಹಿರಂಗ ಶತ್ರುಗಳು.
2. ತಾವು ಇಸ್ಲಾಮ್ ಧರ್ಮದ ಅನುಯಾಯಿಗಳು ಹಾಗೂ ಮುಸ್ಲಿಮ್ ಸಮಾಜದ ಸದಸ್ಯರು ಹಾಗೂ ಹಿತರಕ್ಷಕರು ಎಂದು ಹೇಳಿಕೊಳ್ಳುತ್ತಾ, ಧರ್ಮ ರಕ್ಷಣೆಗೆ ಹಿಂಸೆಯೊಂದೇ ದಾರಿ ಎಂಬ ವಿನಾಶಕಾರಿ ನಂಬಿಕೆಯನ್ನಿಟ್ಟುಕೊಂಡು ತಮ್ಮ ಭಯೋತ್ಪಾದಕ, ವಿಧ್ವಂಸಕ ಚಟುವಟಿಕೆಗಳ ಸಮರ್ಥನೆಗೆ ಕುರ್ ಆನ್ ಅನ್ನು ಅಸ್ತ್ರವಾಗಿ ಬಳಸುವವರು.
ಮೇಲ್ನೋಟಕ್ಕೆ ಇವೆರಡು ತೀರಾ ಭಿನ್ನ ಹಾಗೂ ಪರಸ್ಪರ ವಿರೋಧಿ ಗುಂಪುಗಳು ಎಂಬಂತೆ ಕಂಡರೂ, ವಾಸ್ತವದಲ್ಲಿ ಸ್ವರೂಪ ಮತ್ತು ಪರಿಣಾಮದ ದೃಷ್ಟಿಯಿಂದ, ಅವರಿಬ್ಬರೂ ಮಾಡುತ್ತಿರುವ ಕೆಲಸ ಒಂದೇ ಬಗೆಯದ್ದಾಗಿದೆ.
ಅಧ್ಯಾಯ - 2
ಯುದ್ಧ : -ರಕ್ಷಣೆ ಮತ್ತು ನ್ಯಾಯಕ್ಕಾಗಿ ಮಾತ್ರ. ರಕ್ತಪಾತಕ್ಕಲ್ಲ, ಮತಾಂತರಕ್ಕಲ್ಲ
ಬದ್ರ್ ಯುದ್ಧವು ಪ್ರವಾದಿ ಮುಹಮ್ಮದ್ (ಸ) ರ ಬದುಕಿನ ಪ್ರಥಮ ದೊಡ್ಡ ಯುದ್ಧವಾಗಿತ್ತು. ಹಾಗೆಯೇ ಅದು ಯುದ್ಧಕ್ಕೆ ಸನ್ನದ್ಧರಲ್ಲದ ಮುಸ್ಲಿಮರ ಮೇಲೆ ಬಲವಂತವಾಗಿ ಹೇರಲಾದ ಯುದ್ಧವಾಗಿತ್ತು. ಪ್ರವಾದಿ ಮುಹಮ್ಮದ್ (ಸ) ಮಕ್ಕಾದಲ್ಲಿ ಸತ್ಯಪ್ರಸಾರ ಆರಂಭಿಸಿದಾಗ ಮತ್ತು ಶುದ್ಧವಾದ ಏಕದೇವಾರಾಧನೆ ಮತ್ತು ಮಾನವೀಯ ಸಮಾನತೆಯ ಸಂದೇಶವನ್ನು ಪ್ರಸಾರ ಮಾಡಲಾರಂಭಿಸಿದಾಗ ಮಕ್ಕಾದ ಬಲಿಷ್ಠ ಬುಡಕಟ್ಟುಗಳಿಗೆ ಸೇರಿದ್ದ ಬಹುದೇವಾರಾಧಕರು ಮತ್ತು ವಿಗ್ರಹಾರಾಧಕರು ಪ್ರವಾದಿಯನ್ನು ಮತ್ತವರ ಸಂದೇಶವನ್ನು ವಿರೋಧಿಸಲಾರಂಭಿಸಿದರು. ಪ್ರವಾದಿ (ಸ) ಹಾಗೂ ಅವರ ಅನುಯಾಯಿಗಳ ವಿರುದ್ಧ ಹಿಂಸೆಗೆ ಇಳಿದರು. ಮುಸ್ಲಿಮರಿಗೆ ಮೂಲಭೂತ ಮಾನವೀಯ ಹಕ್ಕುಗಳನ್ನು ನಿರಾಕರಿಸಲಾಯಿತು. ಹಲವು ಮುಸ್ಲಿಮರನ್ನು ಕೊಳ್ಳಲ್ಲಾಯಿತು. ಮಕ್ಕಾದಲ್ಲಿ ಈರೀತಿಯಾ ಅನಿಯಯಗಳು ತಾರಕಕ್ಕೇರಿದಾಗ ಪ್ರವಾದಿ (ಸ) ಮತ್ತವರ ಸಂಗಾತಿಗಳು ಮದೀನಾಗೆ ವಲಸೆ ಹೋಗಿ ಅಲ್ಲಿ ನೆಲೆಸಲು ಪ್ರಯತ್ನಿಸಿದರು. ಆದರೆ ಅದು ಕೂಡಾ ಮಕ್ಕಾದ ವಿರೋಧಿಗಳಿಗೆ ಸಹ್ಯವಾಗಲಿಲ್ಲ. ಅವರು ಒಂದು ದೊಡ್ಡ ಸೇನೆಯನ್ನು ಕಟ್ಟಿಕೊಂಡು ಮುಸ್ಲಿಮರ ವಿರುದ್ಧ ದಂಡೆತ್ತಿ ಬಂದರು. ಸಂಖ್ಯೆಯಲ್ಲಿ ಶತ್ರು ಪಡೆಯು ಮುಸ್ಲಿಮರ ಸೇನೆಗಿಂತ ಕನಿಷ್ಠ ಮೂರು ಪಟ್ಟು ಬಲಿಷ್ಠವಾಗಿತ್ತು. ಆಯುಧ ಮತ್ತಿತರ ಸಾಧನಗಳ ವಿಷಯದಲ್ಲೂ ಶತ್ರು ಪಡೆಯು ಸರ್ವ ಸಜ್ಜಿತವಾಗಿತ್ತು. ಆದರೂ ಯುದ್ಧದಲ್ಲಿ ಮುಸ್ಲಿಮರಿಗೆ ವಿಜಯ ಪ್ರಾಪ್ತವಾಯಿತು. ಹೀಗೆ ಮುಸ್ಲಿಮರು ವಿಜಯಿಗಳಾದಾಗ ತಾಳಿದ ಧೋರಣೆಯೇ ನಿಜವಾಗಿ ಇಸ್ಲಾಮ್ ಧರ್ಮ, ಪವಿತ್ರ ಕುರ್ ಆನ್ ಮತ್ತು ಪ್ರವಾದಿವರ್ಯರ (ಸ) ನೈಜ ಧೋರಣೆ ಏನೆಂಬುದನ್ನು ಪ್ರತಿನಿಧಿಸುತ್ತದೆ.
ಯುದ್ಧದಲ್ಲಿ ಮುಸ್ಲಿಮ್ ಸೇನೆಯ 14 ಮಂದಿ ಮತ್ತು ವಿರೋಧಿ ಸೇನೆಯ 70 ಮಂದಿ ಹತರಾದರು. ಶತ್ರು ಪಾಳಯದ 70 ಮಂದಿ ಬಂಧಿತರಾದರು. ಉಳಿದವರು ಪರಾರಿಯಾದರು. ಪ್ರಸ್ತುತ ಕೈದಿಗಳ ಜೊತೆ ಹೇಗೆ ವ್ಯವಹರಿಸಬೇಕೆಂಬ ಕುರಿತು ಚರ್ಚೆ, ಸಮಾಲೋಚನೆಗಳು ನಡೆದವು. ಮುಸ್ಲಿಮರನ್ನೆಲ್ಲ ವಧಿಸಬೇಕೆಂಬ ಉದ್ದೇಶದಿಂದಲೇ ಬಂದಿದ್ದ ಇವರನ್ನೆಲ್ಲ ವಧಿಸಿಬಿಡಬೇಕು ಎಂಬುದು ಹಲವರ ಅಭಿಮತವಾಗಿತ್ತು. ಯುದ್ಧ ಕೈದಿಗಳನ್ನು ಕೊಂದು ಬಿಡುವುದು ಅಥವಾ ಅವರನ್ನು ಅತ್ಯಂತ ಅಮಾನುಷ ಬಗೆಯ ಚಿತ್ರಹಿಂಸೆಗೆ ಗುರಿಪಡಿಸುವುದು ಅಥವಾ ಅವರನ್ನು ಶಾಶ್ವತವಾಗಿ ಗುಲಾಮರಾಗಿಸಿ ಬಿಡುವುದು - ಇವಿಷ್ಟೇ ಆ ಸಮಾಜದಲ್ಲಿ ಪರಿಚಿತವಾಗಿದ್ದ ಸಂಪ್ರದಾಯ ಗಳಾಗಿದ್ದವು. ಆದರೆ ಪ್ರವಾದಿ (ಸ) ಆವರೆಗೆ ಅಪರಿಚಿತವಾಗಿದ್ದ ತೀರಾ ಭಿನ್ನ ನೀತಿಯೊಂದನ್ನು ಅನುಸರಿಸಿದರು. ಅವರು, ಪರಿಹಾರ ಧನ ಪಾವತಿಸಿ ಬಿಡುಗಡೆ ಪಡೆಯುವ ಅಧಿಕಾರವನ್ನು ಯುದ್ಧ ಕೈದಿಗಳಿಗೆ ನೀಡಿದರು. ಯಾರು ಎಷ್ಟು ಪರಿಹಾರ ಧನ ಪಾವತಿಸಬೇಕೆಂಬುದನ್ನು ಅವರವರ ಆರ್ಥಿಕ ಸಾಮರ್ಥ್ಯದ ಆಧಾರದಲ್ಲಿ ನಿರ್ಧರಿ ಸಲಾಯಿತು. ಕೆಲವು ಕೈದಿಗಳು ಕೆಲವೇ ದಿನಗಳೊಳಗೆ ಪರಿಹಾರ ಧನವನ್ನು ಪಾವತಿಸಿ ಬಿಡುಗಡೆ ಪಡೆದರು. ಮಕ್ಕಾದ ಕೆಲವು ಶತ್ರು ಸೈನಿಕರ ಪರವಾಗಿ ಮದೀನಾದಲ್ಲಿದ್ದ ಅವರ ಮುಸ್ಲಿಮ್ ಬಂಧುಗಳು ಪರಿಹಾರ ಪಾವತಿಸಿದರು. ಕೆಲವರ ಪರವಾಗಿ ಪರಿಹಾರಧನವನ್ನು ಮಕ್ಕದಲ್ಲಿದ್ದವರು ಕಳಿಸಿಕೊಟ್ಟರು. ಸಂಗ್ರಹವಾದ ಪರಿಹಾರ ಧನವನ್ನು ಮುಸ್ಲಿಮ್ ಯೋಧರಿಗೆ ವಿತರಿಸಲಾಯಿತು. ಆ ಸಂದರ್ಭದಲ್ಲಿ ಪರಿಹಾರ ಧನ ಪಾವತಿಸುವ ಸಾಮರ್ಥ್ಯ ಇಲ್ಲದಿದ್ದ ಕೆಲವು ಯುದ್ಧ ಕೈದಿಗಳಿದ್ದರು. ಅವರಿಗೆ ಪ್ರವಾದಿ ವರ್ಯರು (ಸ) ವಿಧಿಸಿದ 'ಶಿಕ್ಷೆ ' ಜಗತ್ತಿಗೆಲ್ಲಾ ಸಾರ್ವಕಾಲಿಕ ಮಾದರಿ ಎನ್ನ ಬಹುದು. ಮಕ್ಕಾದಿಂದ ಬಂದಿದ್ದ ಶತ್ರುಸೇನೆಯಲ್ಲಿ ಯೋಧರಾಗಿದ್ದ ಆ ಕೈದಿಗಳು ಅಕ್ಷರಸ್ಥರಾಗಿದ್ದರು. ಇತ್ತ ಮದೀನಾದಲ್ಲಿ ಹಲವು ಅನಕ್ಷರಸ್ಥರಿದ್ದರು. ಪ್ರತಿಯೊಬ್ಬ ಅಕ್ಷರಸ್ಥ ಕೈದಿಯು ಮದೀನದಲ್ಲಿದ್ದ ಹತ್ತು ಮಂದಿ ನಿರಕ್ಷರಸ್ಥ ರಿಗೆ ಓದು ಬರಹ ಕಲಿಸಿದರೆ ಅದನ್ನೇ ಪರಿಹಾರವಾಗಿ ಪರಿಗಣಿಸಿ ಅವರನ್ನು ಬಿಡುಗಡೆಗೊಳಿಸಲಾಗುವುದು ಎಂದು ಪ್ರವಾದಿ (ಸ) ಘೋಷಿಸಿದರು. ಮುಂದಿನ ಕೆಲವು ದಿನಗಳಲ್ಲಿ ಆ ಕೈದಿಗಳು ಪ್ರಸ್ತುತ ಷರತ್ತನ್ನು ಈಡೇರಿಸಿ ಬಂಧಮುಕ್ತರಾದರು !
ಪ್ರವಾದಿಯ ಪುತ್ರಿ ಝೈನಬ್ (, ಆಗಿನ್ನೂ ಮಕ್ಕಾ ದಲ್ಲಿದ್ದರು. ಅವರ ಪತಿ ಅಬುಲ್ ಆಸ್ ಮುಸ್ಲಿಮರ ವಿರುದ್ಧ ದಂಡೆತ್ತಿ ಬಂದಿದ್ದ ವಿರೋಧಿ ಸೇನೆಯ ಯೋಧರಾಗಿದ್ದರು. ಅವರ ಪಡೆ ಯುದ್ಧದಲ್ಲಿ ಸೋತಾಗ ಇತರ ಅನೇಕರ ಜೊತೆ ಅಬುಲ್ ಆಸ್ ಅವರೂ ಯುದ್ಧ ಕೈದಿಯಾಗಿ ಮುಸ್ಲಿಮರ ಬಂಧಿಯಾಗಿದ್ದರು. ಅವರ ಬಿಡುಗಡೆಗಾಗಿ ಅವರ ಪತ್ನಿ, ಪ್ರವಾದಿ ಪುತ್ರಿ ಝೈನಬ್(raಮಕ್ಕಾದಿಂದ ಒಂದು ದುಬಾರಿ ಹಾರವನ್ನು ಪರಿಹಾರಧನವಾಗಿ ಕಳಿಸಿಕೊಟ್ಟರು. ಅದನ್ನು ಸ್ವೀಕರಿಸಿ, ಅಬುಲ್ ಆಸ್ ರನ್ನು ಬಿಡುಗಡೆಗೊಳಿಸಲಾಯಿತು. ನಿಜವಾಗಿ ಆ ಹಾರವು ಝೈ ನಬ್ ರ ವಿವಾಹದ ವೇಳೆ ಆಕೆಯ ತಾಯಿ ಹಾಗೂ ಪ್ರವಾದಿಪತ್ನಿ ಖದೀಜಾ (ರ) ಆಕೆಗೆ ಉಡುಗೊರೆಯಾಗಿ ನೀಡಿದ್ದ ಹಾರವಾಗಿತ್ತು. ಈ ವಿಷಯವು ಪ್ರವಾದಿಯ ಅನುಯಾಯಿಗಳಿಗೆ ತಿಳಿದಾಗ, ಹಾರವು ಯಾರ ಪಾಲಿಗೆ ಬಂದಿತ್ತೋ ಅವರು ಅದನ್ನು ತಂದು ಪ್ರವಾದಿಗೆ ನೀಡಿದರು. ಈ ರೀತಿ ತಮ್ಮ ಕೈಸೇರಿದ ಹಾರವನ್ನು ಪ್ರವಾದಿ (ಸ) ತಮ್ಮ ಅಳಿಯ ಅಬುಲ್ ಆಸ್ ರಿಗೆ ನೀಡಿ ಅದನ್ನುಝೈನಬ್ರಿಗೆ ಮರಳಿಸಲು ಹೇಳಿದರು.
ಬದ್ರ್ ಯುದ್ಧದ ಕೈದಿಗಳೊಂದಿಗೆ ಪ್ರವಾದಿ (ಸ) ನಡೆದುಕೊಂಡ ರೀತಿಯು, ಇಸ್ಲಾಮ್ ಧರ್ಮವು ಶಾಂತಿಯನ್ನು ಬಯಸುತ್ತದೆಯೇ ಹೊರತು ರಕ್ತಪಾತವನ್ನಲ್ಲ ಎಂಬುದಕ್ಕೆ ಬಹಳ ಸ್ಪಷ್ಟ ಪುರಾವೆಯಾಗಿದೆ. ವಿರೋಧಿಗಳ ಸಂಹಾರ ಮತ್ತು ಸರ್ವನಾಶವೇ ಉದ್ದೇಶವಾಗಿದ್ದರೆ ಮುಸ್ಲಿಮರು, ತಮ್ಮ ವಶದಲ್ಲಿದ್ದ ಆ ಬಂಧಿಗಳನ್ನೆಲ್ಲ ನಿಜಕ್ಕೂ ವಧಿಸಬಹುದಿತ್ತು. ಆ ಕಾಲದಲ್ಲಿದ್ದ ನಿಯಮಗಳ ಪ್ರಕಾರ ಆ ರೀತಿ ಕೈದಿಗಳನ್ನು ವಧಿಸುವುದು ಅಪರಾಧವೂ ಆಗಿರಲಿಲ್ಲ. ಆದರೆ ಮುಸ್ಲಿಮರು ಅವರನ್ನು ವಧಿಸಲಿಲ್ಲ, ಮಾತ್ರವಲ್ಲ, ಅವರನ್ನು ಕಾರಾಗೃಹಗಳಲ್ಲಿ ಕಟ್ಟಿಡಲಿಲ್ಲ, ಅವರಿಗೆ ಯಾವುದೇ ರೀತಿಯ ಚಿತ್ರ ಹಿಂಸೆಯನ್ನೂ ನೀಡಲಿಲ್ಲ. ಅವರನ್ನು ಅಪಮಾನಿಸಲೂ ಇಲ್ಲ. ಕೈದಿಗಳ ಕುರಿತಂತೆ ಅಂತಿಮ ತೀರ್ಮಾನ ಪ್ರಕಟಿಸುವ ತನಕ ಅವರನ್ನು ಸಣ್ಣ ತಂಡಗಳಾಗಿ ವಿಂಗಡಿಸಿ ಒಂದೊಂದು ತಂಡದ ಉಸ್ತುವಾರಿಯನ್ನು ಮತ್ತು ಅವರ ಊಟೋಪಚಾರದ ಹೊಣೆಗಾರಿಕೆಯನ್ನು ಮದೀನಾದ ಮುಸ್ಲಿಮರಲ್ಲಿನ ನಿರ್ದಿಷ್ಟ ವ್ಯಕ್ತಿ ಅಥವಾ ಕುಟುಂಬಗಳಿಗೆ ವಹಿಸಿಕೊಡಲಾಯಿತು.
ಪ್ರಸ್ತುತ ಕೈದಿಗಳಿಗೆ ಸ್ವತಃ ಪ್ರವಾದಿ (ಸ) ಮತ್ತು ಅವರ ಕೆಲವು ಅನುಯಾಯಿಗಳು ಇಸ್ಲಾಮ್ ಧರ್ಮ, ಏಕದೇವತ್ವ, ಪರಲೋಕ ವಿಶ್ವಾಸ, ಮಾನವೀಯ ಸಮಾನತೆ, ದಿವ್ಯ ಮಾರ್ಗದರ್ಶನ, ಸಚ್ಚಾರಿತ್ರ್ಯ ಇತ್ಯಾದಿ ವಿಷಯಗಳ ಕುರಿತು ಮಾಹಿತಿ, ಉಪದೇಶ ನೀಡುತ್ತಿದ್ದರು. ಇಸ್ಲಾಮ್ ಧರ್ಮ ಸ್ವೀಕರಿಸುವಂತೆ ಅವರ ಮನವೊಲಿಸಲು ಪ್ರಯತ್ನಿಸುತ್ತಿದ್ದರು. ಅವರು ಯಾವುದನ್ನು ತಮ್ಮ ವಿಮೋಚನೆಯ ಮಾರ್ಗವೆಂದು ನಂಬಿದ್ದರೋ ಅದನ್ನು ಇತರರಿಗೆ ತಿಳಿಸಿ ಅವರನ್ನು ಆ ಮಾರ್ಗದೆಡೆಗೆ ಕರೆಯುವ ಅವರ ಈ ಶ್ರಮವು ಅವರು ಇತರರ ನೈಜ ಹಿತಾಕಾಂಕ್ಷಿಗಳಾಗಿದ್ದರು ಎಂಬುದನ್ನಷ್ಟೇ ಸೂಚಿಸುತ್ತದೆ. ಆದರೆ ಅವರು ಈ ವಿಷಯದಲ್ಲಿ ಆ ಕೈದಿಗಳ ಮೇಲೆ ಮೇಲೆ ಕಿಂಚಿತ್ತೂ ಒತ್ತಡ ಹೇರಲಿಲ್ಲ. ಬಲಪ್ರಯೋಗ ಮಾಡಲಿಲ್ಲ. ಅವರ ಈ ಧೋರಣೆಗೆ, ಪವಿತ್ರ ಕುರ್ ಆನ್ ನಲ್ಲಿ ಸಾರಲಾಗಿರುವ ''ಧರ್ಮದ ವಿಷಯದಲ್ಲಿ ಬಲವಂತವಿಲ್ಲ'' (2:256) ಎಂಬ ವಿಶ್ವಮಾನ್ಯ ನಿಯಮವು ಕಾರಣವಾಗಿತ್ತು. ಧರ್ಮವನ್ನು ಜನರು ಸ್ವತಃ ತಮ್ಮ ಸ್ವತಂತ್ರ ಇಚ್ಛೆಯನುಸಾರ ಸ್ವೀಕರಿಸಬೇಕೇ ಹೊರತು ಬಲವಂತವಾಗಿ ಅದನ್ನು ಯಾರೂ ಯಾರ ಮೇಲೂ ಹೇರುವಂತಿಲ್ಲ.
''(ದೂತರೇ), ನೀವು ಹೇಳಿಬಿಡಿ, ಇದು ನಿಮ್ಮ ಒಡೆಯನ ಕಡೆಯಿಂದ ಬಂದ ಸತ್ಯ. (ಇದನ್ನು) ಇಷ್ಟವುಳ್ಳವನು ನಂಬಲಿ ಮತ್ತು ಧಿಕ್ಕರಿಸಬಯಸುವವನು ಧಿಕ್ಕರಿಸಲಿ." (18:29)
ಅಲ್ಲದೆ ಕುರ್ ಆನ್ ನಲ್ಲಿ ವಿಶೇಷವಾಗಿ ಯುದ್ಧ ಕೈದಿಗಳ ಕುರಿತಾಗಿಯೇ ಮಾರ್ಗ ದರ್ಶನವಿದೆ. ಉದಾ:
'"ದೂತರೇ, ನಿಮ್ಮ ಕೈಯಲ್ಲಿ ಕೈದಿಗಳಾಗಿರುವವರೊಡನೆ ಹೇಳಿರಿ: ನಿಮ್ಮ ಮನಸ್ಸುಗಳಲ್ಲಿ ಒಳಿತೇನಾದರೂ ಇರುವುದನ್ನು ಅಲ್ಲಾಹನು ಗುರುತಿಸಿದರೆ ನಿಮ್ಮಿಂದ ಏನನ್ನು ಪಡೆಯಲಾಗಿದೆಯೋ ಅದಕ್ಕಿಂತ ಉತ್ತಮವಾದುದನ್ನು ಅವನು ನಿಮಗೆ ನೀಡುವನು ಮತ್ತು ಅವನು ನಿಮ್ಮನ್ನು ಕ್ಷಮಿಸುವನು. ಅಲ್ಲಾಹನು ತುಂಬಾ ಕ್ಷಮಾಶೀಲನೂ ಕರುಣಾಮಯಿಯೂ ಆಗಿದ್ದಾನೆ"' (8:70)
ಇಲ್ಲಿ ಅಲ್ಲಾಹನ ಕ್ಷಮೆ ಮತ್ತು ಕರುಣೆಯನ್ನು ನೆನಪಿಸಿರುವುದರ ಉದ್ದೇಶವೇ, ನೀವೂ, ನಿಮ್ಮ ನಿಯಂತ್ರಣದಲ್ಲಿರುವ ಕೈದಿಗಳ ವಿಷಯದಲ್ಲಿ ಕ್ಷಮೆ ಮತ್ತು ಕರುಣೆಯ ನಿಲುವನ್ನು ತಾಳಿರೆಂದು ಸೂಚಿಸುವುದಾಗಿದೆ.
ಮುಸ್ಲಿಮರ ವಶದಲ್ಲಿದ್ದ ಕೈದಿಗಳ ಪೈಕಿ ಸುಹೈಲ್ ಇಬ್ನು ಅಮ್ರ್ ಎಂಬೊಬ್ಬ ಕುಖ್ಯಾತ ಭಾಷಣಗಾರನಿದ್ದನು. ಅವನು ಪ್ರವಾದಿಯನ್ನು, ಮುಸ್ಲಿಮರನ್ನು ಮತ್ತು ಅವರ ನಂಬಿಕೆಗಳನ್ನೆಲ್ಲ, ನಿಂದಿಸಿ ಅಪಮಾನಿಸಿ ಅವರ ವಿರುದ್ಧ ಬೆಂಕಿ ಉಗುಳುವಂತಹ ಪ್ರಚೋದಕ ಭಾಷಣಗಳನ್ನು ಮಾಡುವುದರಲ್ಲಿ ಪ್ರವೀಣನಾಗಿದ್ದನು. ಆತನ ಪ್ರಸ್ತುತ ಹಿನ್ನೆಲೆಯ ಕಾರಣ ಹಲವು ಮುಸ್ಲಿಮರಿಗೆ ಅವನ ವಿರುದ್ಧ ತುಂಬಾ ಆಕ್ರೋಶವಿತ್ತು. ಕೈದಿಗಳನ್ನು ಹಿಂಸಿಸುವುದಕ್ಕೆ ಇಸ್ಲಾಮ್ ಧರ್ಮದಲ್ಲಿ ಅವಕಾಶವಿಲ್ಲದಿದ್ದರೂ, ಕನಿಷ್ಠ ಆ ವ್ಯಕ್ತಿಯ ಮಾತುಗಾರಿಕೆಯ ತೀಕ್ಷ್ಣತೆಯನ್ನು ಕುಗ್ಗಿಸಲು ಅವನ ಮುಂದಿನ ಹಲ್ಲುಗಳನ್ನು ಕೀಳಬೇಕು ಎಂದು ಹಲವರು ಆಗ್ರಹಿಸಿದರು. ಆದರೆ ಅಂತಹ ಯಾವುದೇ ಕೃತ್ಯ ನಡೆಸುವುದಕ್ಕೆ ಪ್ರವಾದಿವರ್ಯರು (ಸ) ಅನುಮತಿ ನೀಡಲಿಲ್ಲ.
ಪ್ರಸ್ತುತ ಯುದ್ಧ ಕೈದಿಗಳ ಪೈಕಿ ಯಾರೂ ಸಾಮಾನ್ಯ ಪೌರರರಾಗಿರಲಿಲ್ಲ. ಪ್ರತಿಯೊಬ್ಬರೂ ಮುಸಲ್ಮಾನರನ್ನೆಲ್ಲ ಸದೆಬಡಿದು ಇಸ್ಲಾಮ್ ಧರ್ಮವನ್ನು ಶಾಶ್ವತವಾಗಿ ಅಳಿಸಿಬಿಡಬೇಕೆಂಬ ಘೋಷಿತ ಉದ್ದೇಶದಿಂದಲೇ ಶಸ್ತ್ರ ಸಜ್ಜಿತರಾಗಿ ಸರ್ವ ಸಿದ್ಧತೆಯೊಂದಿಗೆ ಯುದ್ಧರಂಗಕ್ಕೆ ಬಂದವರಾಗಿದ್ದರು. ಅಂತಹ ವ್ಯಕ್ತ ಶತ್ರುಗಳನ್ನು ಇಷ್ಟೊಂದು ಘನತೆ ಮತ್ತು ಸೌಜನ್ಯ ದೊಂದಿಗೆ ನಡೆಸಿಕೊಂಡ ಧರ್ಮವು ಅನ್ಯಸಮುದಾಯಗಳ ಜನಸಾಮಾನ್ಯರೊಂದಿಗೆ ಯಾವ ಬಗೆಯ ವ್ಯವಹಾರವನ್ನು ಪ್ರೋತ್ಸಾಹಿಸುತ್ತದೆಂಬುದನ್ನು ಯಾರಾದರೂ ಸುಲಭವಾಗಿ ಊಹಿಸಬಹುದು.
ಅಧ್ಯಾಯ - 3
ಕೆಲವು ಗಮನಾರ್ಹ ಐತಿಹಾಸಿಕ ಸತ್ಯಗಳು
ಪ್ರವಾದಿ ಮುಹಮ್ಮದ್ (ಸ) ಮಕ್ಕಾದಲ್ಲಿ ಕುರ್ ಆನ್ ನ ವಚನಗಳನ್ನು ಜನರಿಗೆ ಪರಿಚಯಿಸುವ ಮೂಲಕ ಸತ್ಯಪ್ರಸಾರ ಮತ್ತು ಚಾರಿತ್ರ್ಯ ನಿರ್ಮಾಣದ ಚಟುವಟಿಕೆಯನ್ನು ಆರಂಭಿಸಿದಾಗಲೇ ಅವರ ವಿರುದ್ಧ ಪ್ರತಿರೋಧ ಆರಂಭವಾಗಿತ್ತು. ಕೇವಲ ಕೆಲವರು ಮಾತ್ರ ಪ್ರವಾದಿಯ ಅನುಯಾಯಿಗಳಾಗಿ ಮಾರ್ಪಟ್ಟರು. ಅನುಯಾಯಿಗಳ ಸಂಖ್ಯೆ ಕ್ರಮೇಣ ಏರುತ್ತಾ ಹೋಯಿತಾದರೂ, ಏರಿಕೆಯ ಗತಿ ಬಹಳ ನಿಧಾನವಾಗಿತ್ತು. ಅತ್ತ, ದಿನದಳೆದಂತೆ ವಿರೋಧದ ಪ್ರಮಾಣ ಮತ್ತು ಸ್ವರೂಪ ಮಾತ್ರ ಬಹಳಷ್ಟು ವಿಸ್ತರಿಸುತ್ತಾ, ತೀವ್ರವಾಗುತ್ತಾ ಸಾಗಿತ್ತು. ಪ್ರವಾದಿ ಮತ್ತವರ ಅನುಯಾಯಿಗಳನ್ನು ಕಂಡ ಕಂಡಲ್ಲಿ ನಿಂದಿಸುವ, ಗೇಲಿ ಮಾಡುವ ಮತ್ತು ಅವರ ಮೇಲೆ ಶಾರೀರಿಕ ಹಲ್ಲೆ ನಡೆಸುವ ದೃಶ್ಯಗಳು ಸಾಮಾನ್ಯವಾಗಿ ಬಿಟ್ಟವು. ಪ್ರವಾದಿ ವರ್ಯರ(ಸ) ಅದೆಷ್ಟೋ ಅನುಯಾಯಿ ಪುರುಷರು ಮತ್ತು ಸ್ತ್ರೀಯರನ್ನು ಅಮಾನುಷ ಚಿತ್ರ ಹಿಂಸೆಗೆ ಗುರಿಪಡಿಸಲಾಯಿತು. ಯಾಸಿರ್ (ರ) ಎಂಬ ಪ್ರವಾದಿಯ ಸಂಗಾತಿಯನ್ನು ಮತ್ತು ಯಾಸಿರ್ ರ ಪತ್ನಿ ಸುಮಯ್ಯಾ (ರ) ರನ್ನು ಚಿತ್ರ ಹಿಂಸೆ ಕೊಟ್ಟು ಕೊಲ್ಲಲಾಯಿತು. ಕೊನೆಗೆ ಪ್ರವಾದಿವರ್ಯರ ಹತ್ಯೆಗೂ ಷಡ್ಯಂತ್ರಗಳು ನಡೆದವು.
ಪ್ರವಾದಿತ್ವದ ಬಳಿಕ, ಅಂದರೆ, ಪ್ರವಾದಿ ಮುಹಮ್ಮದ್ (ಸ) ತಾವು ದೇವದೂತರೆಂದು ಘೋಷಿಸಿ ಸತ್ಯಧರ್ಮದ ಪ್ರತಿಪಾದನೆ ಆರಂಭಿಸಿದ ಬಳಿಕದ 7ನೇ ವರ್ಷ ಮುಹರ್ರಮ್ ತಿಂಗಳಲ್ಲಿ ಮುಸ್ಲಿಮರು ಮತ್ತವರ ಬೆಂಬಲಿಗರ ಪಾಲಿಗೆ ಭಾರೀ ಪರೀಕ್ಷೆಯೊಂದು ಎದುರಾಯಿತು. ಮಕ್ಕಾದ ವಿವಿಧ ಜನಾಂಗ ಮತ್ತು ಗೋತ್ರಗಳಿಗೆ ಸೇರಿದ್ದ ಎಲ್ಲ ಮುಸ್ಲಿಮ್ ವಿರೋಧಿ ವ್ಯಕ್ತಿಗಳು ಮತ್ತು ಗುಂಪುಗಳು ಒಂದು ಸಂಯುಕ್ತ ತಂಡವಾಗಿ ಮಾರ್ಪಟ್ಟರು. ಅವರ ನಿಯೋಗವು ಪ್ರವಾದಿಯ ಚಿಕ್ಕಪ್ಪ ಹಾಗೂ ಅವರ ಪೋಷಕರಾಗಿದ್ದ ಅಬೂ ತಾಲಿಬ್ ರ ಬಳಿಗೆ ಹೋಗಿ "ನೀವು ಮುಹಮ್ಮದ್ (ಸ)ರಿಗೆ ನೀಡಿರುವ ರಕ್ಷಣೆಯನ್ನು ಹಿಂದೆಗೆದುಕೊಂಡು ಅವರನ್ನು ನಮ್ಮ ವಶಕ್ಕೆ ಬಿಟ್ಟುಕೊಡಬೇಕು" ಎಂಬ ಬೇಡಿಕೆಯನ್ನು ಮುಂದಿಟ್ಟಿತು. ಹಾಗೆ ಮಾಡದಿದ್ದರೆ ನಿಮ್ಮನ್ನು ಬಹಿಷ್ಕರಿಸಲಾಗುವುದು ಎಂಬ ಬೆದರಿಕೆಯನ್ನೂ ಒಡ್ಡಿತು. ಆದರೆ ಅಬೂ ತಾಲಿಬ್ ಯಾವ ಬೆದರಿಕೆಗೂ ಜಗ್ಗಲಿಲ್ಲ. ಅವರು ಸ್ವತಃ ಮುಸ್ಲಿಮರಾಗಿರಲಿಲ್ಲ. ಆದರೆ ಪ್ರವಾದಿಯನ್ನು ಅವರು ಅಪಾರ ಪ್ರೀತಿಸುತ್ತಿದ್ದರು. ಯಾವ ಕಾರಣಕ್ಕೂ ಅವರನ್ನು ತಾನು ಬಿಟ್ಟುಕೊಡುವುದಿಲ್ಲ ಎಂದು ಅವರು ಸ್ಪಷ್ಟವಾಗಿ ಸಾರಿ ಬಿಟ್ಟರು.
ಇದಕ್ಕುತ್ತರವಾಗಿ ಎಲ್ಲ ವಿರೋಧಿ ಗುಂಪುಗಳ ನಾಯಕರು ಜೊತೆಗೂಡಿ, ಪ್ರವಾದಿ ಮತ್ತು ಅವರ ಅನುಯಾಯಿಗಳು ಹಾಗೂ ಬೆಂಬಲಿಗರ ಮೇಲೆ ಸಾಮಾಜಿಕ ಹಾಗೂ ಆರ್ಥಿಕ ಬಹಿಷ್ಕಾರ ಹೇರುವ ನಿರ್ಧಾರ ಕೈಗೊಂಡರು. ಅವರು ಒಂದು ಜಂಟಿ ಬಹಿಷ್ಕಾರ ಪತ್ರವನ್ನು ಬರೆದು ಅದರಲ್ಲಿ ಎಲ್ಲ ಗೋತ್ರಗಳ ನಾಯಕರ ಸಹಿ ನಮೂದಿಸಿ ಪವಿತ್ರ ಕಾಬಾದ ಗೋಡೆಯಲ್ಲಿ ತೂಗು ಹಾಕಿದರು. ಆ ಮೂಲಕ ತಮ್ಮ ಬಹಿಷ್ಕಾರದ ನಿರ್ಧಾರಕ್ಕೆ ಧಾರ್ಮಿಕ ರೂಪ ಕೊಡುವುದು ಅವರ ಉದ್ದೇಶವಾಗಿತ್ತು. "ಯಾವುದೇ ವ್ಯಕ್ತಿ ಬನೂ ಹಾಶಿಮ್ ಮತ್ತು ಬನೂ ಅಬೂ ತಾಲಿಬ್ ಗೋತ್ರಕ್ಕೆ ಸೇರಿದವರ ಜೊತೆ ಯಾವುದೇ ವ್ಯವಹಾರ ಮಾಡಬಾರದು, ಯಾರೂ ಅವರಿಗೆ ಏನನ್ನೂ ಮಾರಬಾರದು, ಅವರಿಂದ ಏನನ್ನೂ ಖರೀದಿಸಬಾರದು, ಅವರ ಗೋತ್ರಕ್ಕೆ ಸೇರಿದವರ ಜೊತೆ ವಿವಾಹವಾಗಬಾರದು, ತಿನ್ನುವ ಅಥವಾ ಕುಡಿಯುವ ಯಾವುದೇ ವಸ್ತು ಅವರಿಗೆ ತಲುಪದಂತೆ ನೋಡಿಕೊಳ್ಳಬೇಕು, ಅವರು ಮುಹಮ್ಮದ್ ರನ್ನು ಸಂಪೂರ್ಣ ಕೈಬಿಟ್ಟು ಅವರನ್ನು ನಮ್ಮ ವಶಕ್ಕೆ ಒಪ್ಪಿಸುವ ತನಕ ಯಾರೂ ಅವರ ಜೊತೆಗೆ ಯಾವುದೇ ಸಂಪರ್ಕ ಇಟ್ಟುಕೊಳ್ಳಬಾರದು" ಎಂದು ಆ ಬಹಿಷ್ಕಾರ ಪತ್ರದಲ್ಲಿ ಬರೆಯಲಾಗಿತ್ತು.
ಬಹಿಷ್ಕಾರವು ಪ್ರವಾದಿ ಮುಹಮ್ಮದ್ (ಸ), ಮತ್ತವರ ಕುಟುಂಬದವರಿಗೆ ಹಾಗೂ ಅವರ ಅನುಯಾಯಿ ಮುಸ್ಲಿಮರಿಗೆ ಮಾತ್ರವಲ್ಲ, ಅವರಿಗೆ ಬೆಂಬಲ ನೀಡಿದ, ಮುಸ್ಲಿಮರಲ್ಲದ ಬಂಧುಗಳಿಗೂ ಅನ್ವಯಿಸಿತ್ತು. ಪ್ರಸ್ತುತ ಅವಧಿಯಲ್ಲಿ ಪ್ರವಾದಿ (ಸ), ಅವರ ಅನುಯಾಯಿಗಳು ಮತ್ತು ಅವರ ಗೋತ್ರದವರನ್ನು ಮಕ್ಕಾದ ಒಂದು ಕಣಿವೆ ಪ್ರದೇಶದಲ್ಲಿ ಸಂಪೂರ್ಣ ದಿಗ್ಬಂಧನದ ಸ್ಥಿತಿಯಲ್ಲಿಡಲಾಗಿತ್ತು. ಅವರಿಗೆ ಅನ್ನಾಹಾರ ಮತ್ತು ಔಷಧಿ ಕೂಡಾ ತಲುಪದಂತೆ ತಡೆಯಲಾಗಿತ್ತು. ಅದೆಷ್ಟೋ ದಿನಗಳ ಕಾಲ ಬಹಿಷ್ಕೃತರು ಹೊಟ್ಟೆಗಿಲ್ಲದೆ ನರಳಬೇಕಾಯಿತು. ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳು ತುಂಬಾ ಪಾಡು ಪಾಡು ಪಡಬೇಕಾಯಿತು. ಅವರೆಲ್ಲ, ತಮ್ಮ ಯಾರಾದರೂ ಹಿತೈಷಿಗಳು ಗುಟ್ಟಾಗಿ ತಲುಪಿಸುತ್ತಿದ್ದ ಸಾಮಗ್ರಿಗಳನ್ನೇ ಅವಲಂಬಿಸಿದ್ದರು. ಈ ಬಗೆಯ ಬಹಿಷ್ಕಾರದಿಂದ ಪ್ರವಾದಿ ಮತ್ತವರ ಅನುಯಾಯಿಗಳು ಮತ್ತು ಬೆಂಬಲಿಗರು ಒಂದೆರಡು ತಿಂಗಳಲ್ಲೇ ಸೋಲೊಪ್ಪಿ ಶರಣಾಗಿ ಬಿಡುತ್ತಾರೆ ಎಂಬುದು ಶತ್ರುಗಳ ನಿರೀಕ್ಷೆಯಾಗಿತ್ತು. ಆದರೆ ಅವರ ನಿರೀಕ್ಷೆ ಹುಸಿಯಾಯಿತು. ಪ್ರವಾದಿವರ್ಯರು (ಸ) ಮತ್ತವರ ಅನುಯಾಯಿಗಳು ಸತ್ಯ ಪ್ರಸಾರದ ಕಾರ್ಯವನ್ನು ಮುಂದುವರಿಸಿದರು. ಬಹಿಷ್ಕಾರದ ಮಧ್ಯೆಯೂ ಅವರು ಜನರನ್ನು ಸಂಪರ್ಕಿಸಿ ಅವರಿಗೆ ಸತ್ಯ ಸಂದೇಶ ತಲುಪಿಸುವ ಶ್ರಮದಲ್ಲಿ ನಿರತರಾಗಿದ್ದರು. ವಿಶೇಷವಾಗಿ ಹೊರ ಊರುಗಳಿಂದ ಬರುತ್ತಿದ್ದ ಹಜ್ ಯಾತ್ರಿಕರಿಗೆ ಮತ್ತು ವರ್ತಕರಿಗೆ ಅವರು ಇಸ್ಲಾಮ್ ಧರ್ಮವನ್ನು ಪರಿಚಯಿಸುತ್ತಿದ್ದರು. ಈ ಬಹಿಷ್ಕಾರ ಮುಂದಿನ ಮೂರು ವರ್ಷಗಳ ಕಾಲ ಜಾರಿಯಲ್ಲಿತ್ತು. ಆದರೆ ಈ ಬಗೆಯ ಬಹಿಷ್ಕಾರದ ಬಗ್ಗೆ ಮಕ್ಕಾದಲ್ಲಿ ಹಲವರಿಗೆ ಇದ್ದ ಅಪರಾಧಿ ಮನೋಭಾವ ಮತ್ತು ಬಹಿಷ್ಕೃತರ ಬಗ್ಗೆ ಹಲವರಲ್ಲಿದ್ದ ಅನುಕಂಪದಿಂದಾಗಿ ಕ್ರಮೇಣ ಬಹಿಷ್ಕಾರದ ತೀವ್ರತೆ ಕುಗ್ಗುತ್ತಾ ಹೋಯಿತು. ಅತ್ತ ಕಾಬಾದ ಗೋಡೆಗೆ ಲಗತ್ತಿಸಲಾಗಿದ್ದ ಬಹಿಷ್ಕಾರ ಪತ್ರದ ಬಹುಭಾಗವನ್ನು ಗೆದ್ದಲು ತಿಂದು ಬಿಟ್ಟಿತು. ಹೀಗೆ ಬಹಿಷ್ಕಾರ ಕೊನೆಗೊಂಡಿತು. ಆದರೆ ತೀವ್ರ ಸ್ವರೂಪದ ಇತರ ದೌರ್ಜನ್ಯಗಳು ಅವ್ಯಾಹತವಾಗಿ ಮುಂದುವರಿದಿದ್ದವು.
ಈ ಮಧ್ಯೆ ಮಕ್ಕಾದವರ ಕುರುಡು ವಿರೋಧ ಮತ್ತು ಅಮಾನುಷ ಹಿಂಸೆಗಳನ್ನು ತಾಳಲಾಗದೆ ಕೆಲವು ಮುಸ್ಲಿಮರು ಅಬಿಸೀನಿಯ ಎಂಬ ಆಫ್ರಿಕನ್ ದೇಶವೊಂದಕ್ಕೆ (ಈಗಿನ ಇಥಿಯೋಪಿಯಾದ ಉತ್ತರ ಭಾಗ) ವಲಸೆ ಹೋಗಿ ಅಲ್ಲಿ ಆಶ್ರಯ ಪಡೆದರು. ಮೊದಲ ಹಂತದಲ್ಲಿ 11 ಮಂದಿ ಮುಸ್ಲಿಮ್ ಪುರುಷರು ಹಾಗೂ 4 ಮಂದಿ ಮಹಿಳೆಯರಿದ್ದ ತಂಡ ಮತ್ತು ಮುಂದಿನ ಹಂತದಲ್ಲಿ 83ಮಂದಿ ಪುರುಷರು ಮತ್ತು 18 ಮಹಿಳೆಯರಿದ್ದ ತಂಡವು ಅಬಿಸೀನಿಯಾ ತಲುಪಿತ್ತು. ಪ್ರಸ್ತುತ ವಲಸಿಗರಲ್ಲಿ ಪ್ರವಾದಿಯ (ಸ) ಪುತ್ರಿ ರುಖಯ್ಯಾ(ರ) ಕೂಡಾ ಒಬ್ಬರಾಗಿದ್ದರು. ಮಕ್ಕಾದ ವಿರೋಧಿಗಳು, ಅಲ್ಲೂ ಅವರ ಬೆನ್ನು ಬಿಡಲಿಲ್ಲ. ಅವರು ಅಬಿಸ್ಸೀನಿಯಾದ ಕ್ರೈಸ್ತ ದೊರೆಯ ಬಳಿಗೆ ತಮ್ಮ ಪ್ರತಿನಿಧಿಗಳನ್ನು ಕಳಿಸಿ, ಆತನಿಗೆ, ಮುಸ್ಲಿಮ್ ವಲಸಿಗರ ವಿರುದ್ಧ ಸುಳ್ಳಾರೋಪಗಳ ಒಂದು ದೊಡ್ಡ ಪಟ್ಟಿಯನ್ನೇ ಸಲ್ಲಿಸಿ ಮುಸ್ಲಿಮರನ್ನು ಮರಳಿ ಮಕ್ಕಾಗೆ ಕಳಿಸಬೇಕೆಂದು ಮನವಿ ಮಾಡಿದ್ದರು. ಸಾಲದ್ದಕ್ಕೆ, ಮುಸ್ಲಿಮರು ಏಸುಕ್ರಿಸ್ತ ಮತ್ತು ಕ್ರೈಸ್ತ ಧರ್ಮದ ವಿರೋಧಿಗಳೆಂದು ಆತನ ಬಳಿ ದೂರಿಕೊಂಡಿದ್ದರು. ಆದರೆ ಈ ಕುರಿತು ಮುಸ್ಲಿಮರಿಂದ ಸ್ಪಷ್ಟೀಕರಣ ಪಡೆದ ದೊರೆ, ಮುಸ್ಲಿಮರ ಹೇಳಿಕೆಯಿಂದ ಸಂಪೂರ್ಣ ತೃಪ್ತನಾಗಿ, ಅವರಿಗೆ ಆಶ್ರಯ ಮುಂದುವರಿಸುವುದಾಗಿ ಘೋಷಿಸಿದನು.
ಅಧ್ಯಾಯ - 4
"ಕುಫ್ಫೂ ಐದಿಯಕುಮ್" (ನಿಮ್ಮ ಕೈಗಳನ್ನು ತಡೆದಿಟ್ಟುಕೊಳ್ಳಿರಿ)
ಇತಿಹಾಸದ ಆ ಪರ್ವದಲ್ಲಿ ಮುಸ್ಲಿಮರ ವಿರುದ್ಧ ಇಷ್ಟೆಲ್ಲಾ ಅನ್ಯಾಯ, ಹಿಂಸೆಗಳು ನಡೆದಿದ್ದರೂ, ಮೂಲಭೂತ ಮಾನವೀಯ ಹಕ್ಕುಗಳನ್ನು ಅವರ ಪಾಲಿಗೆ ನಿರಾಕರಿಸಲ್ಲದರೂ ಅವರ ಧರ್ಮವು ಅವರಿಗೆ ವೈರಿಗಳ ವಿರುದ್ಧ ಶಸ್ತ್ರವಂತಿರಲಿ, ಕೈ ಎತ್ತುವ ಅನುಮತಿಯನ್ನೂ ನೀಡಲಿಲ್ಲ. ಈ ಅವಧಿಯುದ್ದಕ್ಕೂ "ಕುಫ್ಫೂ ಐದಿಯಕುಮ್" (ನಿಮ್ಮ ಕೈಗಳನ್ನು ತಡೆದಿಟ್ಟುಕೊಳ್ಳಿರಿ - 4:77) ಎಂಬುದೇ ಕುರ್ ಆನ್ ನ ಮೂಲಕ ಮುಸ್ಲಿಮರಿಗೆ ನೀಡಲಾಗಿದ್ದ ಆದೇಶವಾಗಿತ್ತು. ಅದುವೇ ಮುಸ್ಲಿಮರ ಸಾಮೂಹಿಕ ಧೋರಣೆಯಾಗಿತ್ತು. ಎಷ್ಟೇ ಹಿಂಸೆ, ಅಪಮಾನಗಳನ್ನು ಎದುರಿಸಬೇಕಾಗಿ ಬಂದರೂ ಪ್ರತ್ಯಾಕ್ರಮಣ ನಡೆಸಬಾರದು ಎಂದು ಅವರನ್ನು ನಿರ್ಬಂಧಿಸಲಾಗಿತ್ತು. ವ್ಯಕ್ತಿಗತವಾಗಿ ಅಥವಾ ಸಂಘಟಿತವಾಗಿ ಆತ್ಮ ರಕ್ಷಣೆಗಾಗಿ ಕೂಡಾ ಶತ್ರುಗಳ ವಿರುದ್ಧ ಕೈ ಎತ್ತುವುದನ್ನು ಅವರ ಪಾಲಿಗೆ ಕಟ್ಟು ನಿಟ್ಟಾಗಿ ನಿಷೇಧಿಸಲಾಗಿತ್ತು. ಈ ನಿಷೇಧವನ್ನು ತೆರವು ಗೊಳಿಸಿ ತಮಗೆ ಪ್ರತಿಕ್ರಮದ ಅಧಿಕಾರ ನೀಡಬೇಕೆಂದು ಅನೇಕ ಸನ್ನಿವೇಶಗಳಲ್ಲಿ ವಿವಿಧ ಮುಸ್ಲಿಂ ವ್ಯಕ್ತಿಗಳು ಮತ್ತು ಗುಂಪುಗಳು ಪ್ರವಾದಿವರ್ಯರ ಬಳಿ ಪರಿಪರಿಯಾಗಿ ಬೇಡಿಕೊಂಡಿದ್ದರು. ಆದರೂ ಪ್ರವಾದಿವರ್ಯರು ಮುಸ್ಲಿಮರಿಗೆ, ಶತ್ರುಗಳ ಮೇಲೆ ಕೈ ಎತ್ತುವ ಹಕ್ಕನ್ನು ನೀಡಲಿಲ್ಲ.
ಸತತ 13 ವರ್ಷಗಳ ಕಾಲ ಮಕ್ಕಾದಲ್ಲಿ ಎಲ್ಲ ಬಗೆಯ ಚಿತ್ರ ಹಿಂಸೆಗಳನ್ನು ಸಹಿಸಿದ ಬಳಿಕ ಪ್ರವಾದಿ (ಸ) ಮಕ್ಕ ದಿಂದ ಸುಮಾರು 450 ಕಿ.ಮೀ ದೂರದ ಮದೀನಾ ಪಟ್ಟಣಕ್ಕೆ ವಲಸೆ ಹೋದರು. ಅವರು ಮದೀನಾದಲ್ಲಿದ್ದಾಗ, ಪ್ರಥಮ ಬಾರಿಗೆ ಯುದ್ಧವನ್ನು ಅನುಮತಿಸುವ ಎರಡು ಕುರ್ ಆನ್ ವಚನಗಳು ಅನಾವರಣಗೊಂಡವು ;
"ಯಾರ ವಿರುದ್ಧ ಯುದ್ಧಹೂಡಲಾಗಿತ್ತೋ ಅವರಿಗೆ (ಯುದ್ಧ ಹೂಡುವ) ಅನುಮತಿ ನೀಡಲಾಗಿದೆ - ಏಕೆಂದರೆ ಅವರ ಮೇಲೆ ಅಕ್ರಮ ನಡೆದಿದೆ. ಅವರಿಗೆ ನೆರವಾಗಲು ಅಲ್ಲಾಹನು ಖಂಡಿತ ಶಕ್ತನಾಗಿದ್ದಾನೆ." (22:39)
"ಅವರು ''ಅಲ್ಲಾಹನೇ ನಮ್ಮೊಡೆಯ'' ಎಂದು ಹೇಳಿದ ಕಾರಣಕ್ಕಾಗಿ, ಅನ್ಯಾಯವಾಗಿ ಅವರನ್ನು ಅವರ ಮನೆಗಳಿಂದ ಹೊರದಬ್ಬಲಾಯಿತು. ಒಂದುವೇಳೆ ಅಲ್ಲಾಹನು ಕೆಲವು ಜನರ ಮೂಲಕ ಮತ್ತೆ ಕೆಲವರನ್ನು ತೊಲಗಿಸದೆ ಇದ್ದಿದ್ದರೆ (ವಿರಕ್ತರ) ಆಶ್ರಮಗಳನ್ನು, (ಕ್ರೈಸ್ತರ) ಇಗರ್ಜಿಗಳನ್ನು, (ಯಹೂದ್ಯರ) ಪ್ರಾರ್ಥನಾಲಯಗಳನ್ನು ಮತ್ತು ಧಾರಾಳವಾಗಿ ಅಲ್ಲಾಹನ ಹೆಸರನ್ನು ಉಚ್ಚರಿಸಲಾಗುವ ಮಸೀದಿಗಳನ್ನು ಕೆಡವಿ ಹಾಕಲಾಗುತ್ತಿತ್ತು. .... .... " (22:40)
ಮೇಲೆ, 39ನೇ ವಚನದಲ್ಲಿ "ಯಾರ ವಿರುದ್ಧ ಯುದ್ಧ ಹೂಡಲಾಗಿತ್ತೋ ಅವರಿಗೆ" ಎನ್ನುವ ಮೂಲಕ ಯಾರನ್ನು ಉದ್ದೇಶಿಸಲಾಗಿದೆ ಎಂಬುದನ್ನು ಮುಂದಿನ 40ನೇ ವಚನವು ಸ್ಪಷ್ಟ ಪಡಿಸುತ್ತದೆ:
ಈ ಎರಡು ವಚನ ಗಳನ್ನು ಗಮನವಿಟ್ಟು ಓದಿದರೆ, ಇದು ನಿಜವಾಗಿ ಹಲವು ವರ್ಷಗಳ ಕಾಲ ಅನ್ಯಾಯ, ದೌರ್ಜನ್ಯಗಳನ್ನು ಎದುರಿಸುತ್ತಾ ಬಂದವರಿಗೆ ತಮ್ಮ ರಕ್ಷಣೆಗೆ ನೀಡಲಾದ ಸಮ್ಮತಿಯೇ ಹೊರತು ಏಕಪಕ್ಷೀಯ ಆಕ್ರಣದ ಅನುಮತಿ ಅಲ್ಲ ಎಂಬುದು ಯಾರಿಗಾದರೂ ಮಾನವರಿಕೆಯಾಗುತ್ತದೆ. ಹಾಗೆಯೇ, ಎರಡನೆಯ ವಚನದಲ್ಲಿ, ವಿರಕ್ತರ, ಕ್ರೈಸ್ತರ, ಯಹೂದಿಗಳ ಮತ್ತು ಮುಸ್ಲಿಮರ ಆರಾಧನಾಲಯಗಳನ್ನು ಜಂಟಿಯಾಗಿ ಪ್ರಸ್ತಾಪಿಸುವ ಮೂಲಕ, ಇದು ನ್ಯಾಯ ಮತ್ತು ಅನ್ಯಾಯ, ಸರಿ ಮತ್ತು ತಪ್ಪುಗಳ ನಡುವಣ ಸಂಘರ್ಷವೇ ಹೊರತು ಕೇವಲ ಮುಸ್ಲಿಮರು ಮತ್ತು ಮುಸ್ಲಿಮರಲ್ಲದವರ ನಡುವಣ ಹೋರಾಟಕ್ಕೆ ಸಂಬಂಧಿಸಿದ್ದಲ್ಲ ಎಂಬ ಅಂಶವನ್ನು ಸ್ಪಷ್ಟಪಡಿಸಲಾಗಿದೆ.
ಅಧ್ಯಾಯ - 5
ಯುದ್ಧದ ಕುರಿತಂತೆ ಪವಿತ್ರ ಕುರ್ ಆನ್ ನ ಧೋರಣೆ ಏನು?
ಸ್ಪಷ್ಟ ಉತ್ತರ ಒದಗಿಸುವ 5 ವಚನಗಳು (2:190-194)
ಕೆಲವರು, ಪವಿತ್ರ ಕುರ್ ಆನ್ ನ ಕೆಲವು ವಚನಗಳನ್ನು ಆಂಶಿಕವಾಗಿ ಮಾತ್ರ ತೋರಿಸಿ, ಕುರ್ ಆನ್ ಹಿಂಸೆ, ಯುದ್ಧ ಮತ್ತು ರಕ್ತಪಾತವನ್ನು ಪ್ರೋತ್ಸಾಹಿಸುವ ಗ್ರಂಥ ಎಂದು ಚಿತ್ರಿಸಲು ಪ್ರಯತ್ನಿಸುತ್ತಾರೆ. ಆದರೆ ಕುರ್ ಆನ್ ನ ಈ ಕೆಳಗಿನ 5 ವಚನಗಳನ್ನು ಗಮನವಿಟ್ಟು ಓದಿದರೆ, ಯುದ್ಧದ ಕುರಿತಂತೆ ಕುರ್ ಆನ್ ನ ನಿಜವಾದ ಧೋರಣೆ ಏನೆಂಬುದರ ಬಗ್ಗೆ ಇರುವ ಗೊಂದಲಗಳೆಲ್ಲಾ ನಿವಾರಣೆಯಾಗುತ್ತವೆ :
"ನಿಮ್ಮ ವಿರುದ್ಧ ಯುದ್ಧ ಮಾಡುವವರ ವಿರುದ್ಧ ನೀವು ಅಲ್ಲಾಹನ ಮಾರ್ಗದಲ್ಲಿ ಯುದ್ಧ ಮಾಡಿರಿ. ಆದರೆ ಅತಿರೇಕವೆಸಗಬೇಡಿ. ಖಂಡಿತವಾಗಿಯೂ ಅಲ್ಲಾಹನು ಅತಿರೇಕವೆಸಗುವವರನ್ನು ಮೆಚ್ಚುವುದಿಲ್ಲ." 2:190
"ಮತ್ತು ಅಂಥವರನ್ನು (ನಿಮ್ಮ ವಿರುದ್ಧ ಯುದ್ಧ ಸಾರಿದವರನ್ನು) ನೀವು ಕಂಡಲ್ಲಿ ವಧಿಸಿರಿ ಮತ್ತು ಅವರು ಎಲ್ಲಿಂದ ನಿಮ್ಮನ್ನು ಹೊರದಬ್ಬಿರುವರೋ ಅಲ್ಲಿಂದ ನೀವು ಅವರನ್ನು ಹೊರದಬ್ಬಿರಿ. ಅಶಾಂತಿಯು ಕೊಲೆಗಿಂತ ಕೆಟ್ಟದಾಗಿದೆ. ಇನ್ನು, ಮಸ್ಜಿದುಲ್ ಹರಾಮ್‌ನ ಬಳಿ - ಅವರು ನಿಮ್ಮ ವಿರುದ್ಧ ಯುದ್ಧ ಮಾಡುವ ತನಕ ನೀವು ಅವರ ವಿರುದ್ಧ ಯುದ್ಧ ಮಾಡಬೇಡಿ. ಅಲ್ಲಿ ಅವರು ನಿಮ್ಮ ವಿರುದ್ಧ ಯುದ್ಧ ಮಾಡಿದರೆ, ನೀವು ಅವರನ್ನು ವಧಿಸಿರಿ. ಇದುವೇ ಸತ್ಯವನ್ನು ಧಿಕ್ಕರಿಸಿದವರಿಗಿರುವ ಪ್ರತಿಫಲ." 2: 191
"ಒಂದು ವೇಳೆ ಅವರು ತಡೆದು ನಿಂತರೆ (ಯುದ್ಧ ವಿರಾಮ ಘೋಷಿಸಿದರೆ), ಖಂಡಿತವಾಗಿಯೂ ಅಲ್ಲಾಹನು ಕ್ಷಮಿಸುವವನು ಮತ್ತು ಕರುಣೆ ತೋರುವವನಾಗಿದ್ದಾನೆ." 2: 192
"ಯಾವುದೇ ಅಶಾಂತಿ ಇಲ್ಲವಾಗಿ ಬಿಡುವ ತನಕ ಹಾಗೂ ಧರ್ಮವು ಸಂಪೂರ್ಣವಾಗಿ ಅಲ್ಲಾಹನಿಗೆ ಮೀಸಲಾಗಿ ಬಿಡುವ ತನಕ ನೀವು ಅವರ ವಿರುದ್ಧ ಯುದ್ಧ ಮಾಡಿರಿ. ಇನ್ನು, ಅವರು ತಡೆದು ನಿಂತರೆ (ಯುದ್ಧ ವಿರಾಮ ಘೋಷಿಸಿದರೆ), ಅಕ್ರಮವೆಸಗಿದವರ ಹೊರತು ಇನ್ನಾರ ಮೇಲೂ ಆಕ್ರಮಣಕ್ಕೆ ಅವಕಾಶವಿಲ್ಲ." 2: 193
"ಪವಿತ್ರ ತಿಂಗಳುಗಳಿಗೆ ಪವಿತ್ರ ತಿಂಗಳುಗಳೇ ಪರಿಹಾರ. ಹಾಗೆಯೇ, ಎಲ್ಲ ಪಾವಿತ್ರಗಳು ‘ಕಿಸಾಸ್’ನ (ಪ್ರತೀಕಾರದ) ನಿಯಮಗಳಿಗೆ ಅಧೀನವಾಗಿವೆ. ನಿಮ್ಮ ಮೇಲೆ ಅತಿಕ್ರಮವೆಸಗಿದವರ ಮೇಲೆ ನೀವು, (ಹೆಚ್ಚೆಂದರೆ) ಅವರು ನಿಮ್ಮ ಮೇಲೆ ಎಸಗಿದಷ್ಟೇ ಪ್ರತಿಕ್ರಮವನ್ನೆಸಗಿರಿ ಮತ್ತು ಅಲ್ಲಾಹನಿಗೆ ಅಂಜಿರಿ. ಅಲ್ಲಾಹನು ಧರ್ಮ ನಿಷ್ಠರ ಜೊತೆಗಿದ್ದಾನೆಂಬುದು ನಿಮಗೆ ತಿಳಿದಿರಲಿ." 2: 194
ಈ ಮೇಲೆ ಪ್ರಸ್ತಾಪಿಸಲಾಗಿರುವ ಕುರ್ ಆನಿನ 2ನೇ ಅಧ್ಯಾಯದ 190 ರಿಂದ 194 ರ ವರೆಗಿನ 5 ವಚನಗಳನ್ನು ಸೂಕ್ಷ್ಮವಾಗಿ ಗಮನಿಸಿ. ಇಲ್ಲಿ ಪ್ರಸ್ತುತ 5 ವಚನಗಳ ಮತ್ತು ಅವುಗಳ ಒಳಗಿರುವ ಪದಗಳ ಹಿನ್ನೆಲೆ, ಸಂದರ್ಭ, ಸನ್ನಿವೇಶ ಇತ್ಯಾದಿ ಯಾವುದನ್ನೂ ಗಣನೆಗೆ ತೆಗೆದು ಕೊಳ್ಳದೆ ಕೇವಲ ಪದಗಳ ಜೊತೆ ಚೆಲ್ಲಾಟವಾಡಲು ಹೊರಟರೆ ಹಲವು ಸರ್ಕಸ್ಸುಗಳನ್ನು ಮಾಡಬಹುದು.
ಉದಾಹರಣೆಗೆ, ಇಲ್ಲಿ 'ಯುದ್ಧ ಮಾಡಿರಿ' ಎಂಬ ಆದೇಶ ಮೂರು ಕಡೆ ಇದೆ. ಹಾಗೆಯೇ 'ಅವರನ್ನು ಹೊರದಬ್ಬಿರಿ', 'ವಧಿಸಿರಿ', 'ಪ್ರತಿಕ್ರಮವನ್ನೆಸಗಿರಿ' ಎಂಬ ಮಾತುಗಳೂ ಇವೆ. ಯರಾದರೂ ಕೇವಲ ಇಂತಹ ಪದಗಳನ್ನು ಮಾತ್ರ ಬಳಸಿ, ಕುರ್ ಆನ್ ಒಂದು ಹಿಂಸಾತ್ಮಕ ಗ್ರಂಥ ಎಂದು ವಾದಿಸಬಹುದು. ಹಾಗೆಯೇ ಇದಕ್ಕೆಲ್ಲ ತೀರಾ ತದ್ವಿರುದ್ಧವಾಗಿ, ಇದೇ ವಚನಗಳಲ್ಲಿ "ಅಶಾಂತಿಯು ಕೊಲೆಗಿಂತ ಕೆಟ್ಟದು", "ಯುದ್ಧ ಮಾಡಬೇಡಿ", "ಆಕ್ರಮಣಕ್ಕೆ ಅವಕಾಶವಿಲ್ಲ." "ಅವರು ನಿಮ್ಮ ವಿರುದ್ಧ ಯುದ್ಧ ಮಾಡುವ ತನಕ ನೀವು ಅವರ ವಿರುದ್ಧ ಯುದ್ಧ ಮಾಡಬೇಡಿ" ಎಂಬ ಮಾತುಗಳು ಕೂಡಾ ಇವೆ. ಕೆಲವರು ಕೇವಲ ಈ ಮಾತುಗಳನ್ನು ಮಾತ್ರ ಪ್ರಸ್ತಾಪಿಸಿ, ಇಸ್ಲಾಮ್ ಧರ್ಮದಲ್ಲಿ ಯುದ್ಧ, ಆಕ್ರಮಣ ಇತ್ಯಾದಿ ಚಟುವಟಿಕೆಗಳಿಗೆ ಅವಕಾಶವೇ ಇಲ್ಲ ಎಂದು ಕೂಡಾ ವಾದಿಸಬಹುದು.
ಇದೇನೂ ಕೇವಲ ಕಾಲ್ಪನಿಕ ಸನ್ನಿವೇಶವಲ್ಲ. ಅದೆಷ್ಟೋ ಮಂದಿ ನಿಜಕ್ಕೂ ಪ್ರಸ್ತುತ 2ನೇ ಅಧ್ಯಾಯದ 190ನೇ ವಚನದಲ್ಲಿನ "ಯುದ್ಧ ಮಾಡಿರಿ'' ಎಂಬ ಎರಡು ಪದಗಳನ್ನು ಮಾತ್ರ ಜನರ ಮುಂದಿಟ್ಟು, ಕುರ್ ಆನ್ ಯುದ್ಧ, ಆಕ್ರಮಣ ಮತ್ತು ರಕ್ತಪಾತವನ್ನು ಪ್ರೋತ್ಸಾಹಿಸುವ ಗ್ರಂಥವೆಂಬ ಅಭಿಪ್ರಾಯವನ್ನು ಸಮಾಜದಲ್ಲಿ ಮೂಡಿಸಲು ಶ್ರಮಿಸಿದ್ದಾರೆ. ಇಂಥವರ ವಾದ ಕೇಳಿ ಯಾರಾದರೂ ಕುರ್ ಆನ್ ಅನ್ನು ತೆರೆದು, ಅದೇ ವಾಕ್ಯವನ್ನು ಪೂರ್ಣವಾಗಿ ಓದಿದರೆ ಅವರ ಮುಂದೆ ತೀರಾ ತದ್ವಿರುದ್ಧ ಚಿತ್ರವೊಂದು ಮೂಡುತ್ತದೆ.
ಉದಾ : ಇಲ್ಲಿ ಎಲ್ಲರ ವಿರುದ್ಧ ಯುದ್ಧ ಮಾಡಿರೆಂದು ಹೇಳಲಾಗಿಲ್ಲ. ಯಾರು ನಿಮ್ಮ ವಿರುದ್ಧ ಯುದ್ಧ ಮಾಡುತ್ತಾರೋ ಅವರ ವಿರುದ್ಧ ನೀವು ಯುದ್ಧ ಮಾಡಿರಿ ಎಂದು ಮಾತ್ರ ಆದೇಶಿಸಲಾಗಿದೆ. ಇದು ಜಗತ್ತಿನಲ್ಲಿ ಯಾರೂ ಆಕ್ಷೇಪಿಸಲು ಸಾಧ್ಯವಿಲ್ಲದ ನಿಯಮ. ಈ ಒಂದೇ ವಾಕ್ಯದಲ್ಲಿ ಇನ್ನೂ ಕೆಲವು ಅಂಶಗಳು ಗಮನಾರ್ಹವಾಗಿವೆ. ಕೇವಲ ಯುದ್ಧ ಮಾಡಿರೆಂದು ಹೇಳುವ ಬದಲು ಅಲ್ಲಾಹನ ಮಾರ್ಗದಲ್ಲಿ ಯುದ್ಧ ಮಾಡಿರಿ ಎಂದು ಹೇಳಲಾಗಿದೆ. ಅಲ್ಲಾಹನ ಮಾರ್ಗದಲ್ಲಿ ನಡೆಸಲಾಗುವ ಯಾವುದೇ ಚಟುವಟಿಕೆಯಲ್ಲಿ ಸ್ವಾರ್ಥ, ಸ್ವೇಚ್ಛಾಚಾರ, ದ್ವೇಷ, ಅಸೂಯೆ ಇತ್ಯಾದಿ ವಿಕಾರಗಳಿಗೆ ಆಸ್ಪದವಿರುವುದಿಲ್ಲ. ಅದು ನ್ಯಾಯ ಪ್ರಾಪ್ತಿಗಾಗಿರುವ ನ್ಯಾಯೋಚಿತ ಚಟುವಟಿಕೆ ಮಾತ್ರವಾಗಿ ಇರಬೇಕಾಗುತ್ತದೆ. ಆದ್ದರಿಂದ ಇದೇ ವಾಕ್ಯದ ಭಾಗವಾಗಿ, ಪ್ರತಿಕ್ರಮದ ಹೆಸರಲ್ಲಿ ಅತಿಕ್ರಮ ಸಲ್ಲದು ಎಂಬ ಸ್ಪಷ್ಟ ಎಚ್ಚರಿಕೆಯನ್ನು ನೀಡಲಾಗಿದೆ. ಅಲ್ಲಾಹನ ಮಾರ್ಗದ ಚಟುವಟಿಕೆ ಅಂದ ಮೇಲೆ ಅದು ಅಲ್ಲಾಹನನ್ನು ಮೆಚ್ಚಿಸುವ ಚಟುವಟಿಕೆಯಾಗಿರಬೇಕು. ಅತಿಕ್ರಮ, ಅತಿರೇಕಗಳು ಅಲ್ಲಾಹನು ಮೆಚ್ಚುವ ಕ್ರಿಯೆಗಳಲ್ಲ. ಅವು ಅಲ್ಲಾಹನ ದೃಷ್ಟಿಯಲ್ಲಿ ಶಿಕ್ಷಾರ್ಹ ಕ್ರಿಯೆಗಳಾಗಿವೆ. ಆದ್ದರಿಂದ, ಯುದ್ಧದ ಸನ್ನಿವೇಶದಲ್ಲೂ ನಿರ್ದಿಷ್ಟ ಮಿತಿ ಮೇರೆಗಳನ್ನು ಪಾಲಿಸಲೇಬೇಕೆಂದು ನೆನಪಿಸುವುದು ಈ ಎಚ್ಚರಿಕೆಯ ಉದ್ದೇಶವಾಗಿದೆ.
ಮುಂದಿನ (191 ನೇ) ವಚನವು ಮತ್ತೆ ಯುದ್ಧದ ಕುರಿತಂತೆ ಇಸ್ಲಾಮ್ ಧರ್ಮವು ತಾಳಿರುವ ಬಹಳ ಎಚ್ಚರಿಕೆಯ ಹಾಗೂ ಜವಾಬ್ದಾರಿಯುತವಾದ ಧೋರಣೆಯನ್ನು ಸ್ಪಷ್ಟಪಡಿಸುತ್ತದೆ. ಇಲ್ಲಿರುವ "ಅಂಥವರನ್ನು ನೀವು ಕಂಡಲ್ಲಿ ವಧಿಸಿರಿ" ಎಂಬ ಆದೇಶವನ್ನು ಹಲವರು ಬಹಳ ವ್ಯಾಪಕವಾಗಿ ದುರುಪಯೋಗ ಪಡಿಸಿದ್ದಾರೆ. ನಿಜವಾಗಿ ಇದು ಕೂಡಾ ಒಂದು ನಿರ್ದಿಷ್ಟ ಕಾಲ, ಒಂದು ನಿರ್ದಿಷ್ಟ ಪ್ರದೇಶ ಮತ್ತು ನಿರ್ದಿಷ್ಟ ಸನ್ನಿವೇಶಗಳಿಗೆ ಸಂಬಂಧಿಸಿದ ಆದೇಶವಾಗಿದೆ. ಮೂಲತಃ ಪ್ರವಾದಿ ಮುಹಮ್ಮದ್ (ಸ) ಅವರ ಕಾಲದ ಮುಸ್ಲಿಮ್ ಸಮಾಜ ಮತ್ತು ಅವರ ಸರಕಾರದ ವಿರುದ್ಧ ಯುದ್ಧ ಸಾರಿದ್ದ ಶತ್ರುಗಳ ಕುರಿತಂತೆ ಈ ಆದೇಶವನ್ನು ಹೊರಡಿಸಲಾಗಿತ್ತು.
ಇದೇ ವಚನದಲ್ಲಿ ಮುಂದುವರಿದು, "ಅವರು ಎಲ್ಲಿಂದ ನಿಮ್ಮನ್ನು ಹೊರದಬ್ಬಿರುವರೋ ಅಲ್ಲಿಂದ ನೀವು ಅವರನ್ನು ಹೊರದಬ್ಬಿರಿ" ಎಂಬ ಮಾತನ್ನು ಹೇಳಲಾಗಿದ್ದು, ಯುದ್ಧದ ಆದೇಶದಂತೆ ಗಡಿಪಾರು ಆದೇಶ ಕೂಡ ಯುದ್ಧಾಪರಾಧಿಗಳ ವಿರುದ್ಧ ಅನ್ವಯಿಸುತ್ತದೆಯೇ ಹೊರತು ಮುಗ್ಧ ಜನಸಾಮಾನ್ಯರಿಗೆ ಅನ್ವಯಿಸುವುದಿಲ್ಲ ಎಂಬುದಕ್ಕೆ ಅದು ಪುರಾವೆಯಾಗಿದೆ. ಅಶಾಂತಿಯು ಕೊಲೆಗಿಂತ ಕೆಟ್ಟದಾಗಿದೆ æ' ಎಂಬ ವಚನದಲ್ಲಿ, ಯುದ್ಧವು ಸ್ವತಃ ಒಂದು ಸತ್ಕಾರ್ಯವೇನೂ ಅಲ್ಲ, ಆದರೆ ಶಾಂತಿ ಸ್ಥಾಪನೆಗಾಗಿ ಅನಿವಾರ್ಯವಾದಾಗ ಮಾತ್ರ ಯುದ್ಧಕ್ಕೆ ಸಮ್ಮತಿ ನೀಡಲಾಗಿದೆ ಎಂಬ ಸೂಚನೆ ಎದ್ದು ಕಾಣುತ್ತದೆ. ''ಇನ್ನು, ಮಸ್ಜಿದುಲ್ ಹರಾಮ್‌ನ ಬಳಿ - ಅವರು ನಿಮ್ಮ ವಿರುದ್ಧ ಯುದ್ಧ ಮಾಡುವ ತನಕ ನೀವು ಅವರ ವಿರುದ್ಧ ಯುದ್ಧ ಮಾಡಬೇಡಿ. ಅಲ್ಲಿ ಅವರು ನಿಮ್ಮ ವಿರುದ್ಧ ಯುದ್ಧ ಮಾಡಿದರೆ, ನೀವು ಅವರನ್ನು ವಧಿಸಿರಿ"" ಎಂಬ ಆದೇಶವು ಮತ್ತೆ, ಆಕ್ರಮಣ ಶೀಲ ಧೋರಣೆಯನ್ನು ವಿರೋಧಿಸಿ, ಯುದ್ಧವನ್ನು ನಿವಾರಿಸುವ ಗರಿಷ್ಟ ಶ್ರಮ ನಡೆಸಿ ಆ ಬಳಿಕ ತೀರಾ ಅನಿವಾರ್ಯವಾದಾಗ ಮಾತ್ರ ಆಕ್ರಮಣ ಮಾಡಿರೆಂದು ಸಾರಿ ಹೇಳುತ್ತದೆ.
ಮುಂದೆ, 192ನೇ ವಚನದಲ್ಲಿ "ಒಂದು ವೇಳೆ ಅವರು ತಡೆದು ನಿಂತರೆ (ಯುದ್ಧ ವಿರಾಮ ಘೋಷಿಸಿದರೆ), ಖಂಡಿತವಾಗಿಯೂ ಅಲ್ಲಾಹನು ಕ್ಷಮಿಸುವವನು ಮತ್ತು ಕರುಣೆ ತೋರುವವನಾಗಿದ್ದಾನೆ" ಎಂದು ಹೇಳಲಾಗಿದೆ. ಅಂದರೆ ಇಲ್ಲಿ ಮತ್ತೆ ಶಾಂತಿಗೆ ಪ್ರಾಶಸ್ತ್ಯ ನೀಡಲಾಗಿದೆ. ಶತ್ರು ಪಾಳಯವು ಯುದ್ಧವಿರಾಮ ಬಯಸಿದರೆ ನೀವು ಯುದ್ಧವನ್ನು ಮುಂದುವರಿಸಲು ಪಟ್ಟು ಹಿಡಿಯಬೇಡಿ ಎಂಬ ಸೂಚನೆ ಇದೆ. ಅಲ್ಲಾಹನು ಕ್ಷಮಾಶೀಲನೂ ಕರುಣಾಮಯಿಯೂ ಆಗಿರುವಾಗ, ಅಲ್ಲಾಹನ ಮಾರ್ಗದಲ್ಲಿ ಹೋರಾಡಲು ಹೊರಟಿರುವ ನೀವು ಕ್ರೂರರೂ ಕಠಿಣ ಹೃದಯಿಗಳೂ ಆಗಿರಲು ಸಾಧ್ಯವಿಲ್ಲ. ಶತ್ರು ಪಾಳಯ ಶಾಂತಿಗೆ ಮುಂದಾದರೆ ನೀವೂ ಶಾಂತಿಗೆ ಪ್ರಾಶಸ್ತ್ಯ ನೀಡಿರೆಂಬುದು ಇದರ ವ್ಯಕ್ತ ಇಂಗಿತವಾಗಿದೆ.
ಕೊನೆಗೆ, 193 ಮತ್ತು 194 ನೇ ವಚನಗಳಲ್ಲೂ ಇದೇ ಧಾಟಿಯಲ್ಲಿ ಬಹುತೇಕ ಇದೇ ಆಶಯವನ್ನು ಪ್ರಕಟಿಸಲಾಗಿದೆ. ಯುದ್ಧದ ಉದ್ದೇಶ ಶಾಂತಿಯೇ ಹೊರತು ವಸ್ತುತಃ ಯುದ್ಧವೇ ಉದ್ದೇಶವಲ್ಲ, ಅನ್ಯಾಯಕ್ಕೆ ತಡೆಯೊಡ್ಡಿ, ಅನ್ಯಾಯದಲ್ಲಿ ನಿರತರಾಗಿರುವವರಿಗೆ ನ್ಯಾಯೋಚಿತ ದಂಡನೆ ನೀಡುವುದಕ್ಕಿಂತ ಹೆಚ್ಚಿನ ಅಧಿಕಾರ ನಿಮಗಿಲ್ಲ, ಹಾಗೆಯೇ, ಎದುರಾಳಿಯು ಶಾಂತಿಗಾಗಿ ಕೈಚಾಚಿದರೆ ಮತ್ತೆ ನಿಮಗೆ ಆಕ್ರಮಣದ ಹಕ್ಕಿಲ್ಲ ಎಂಬುದನ್ನು ಮನವರಿಕೆ ಮಾಡಿಸಲಾಗಿದೆ.
ಕುರ್ ಆನ್ ನಲ್ಲಾಗಲಿ ಪ್ರವಾದಿವಚನಗಳಲ್ಲಾಗಲಿ ನೀಡಲಾಗಿರುವ ಯುದ್ಧಕ್ಕೆ ಸಂಬಂಧಿಸಿದ ಆದೇಶಗಳನ್ನು ಓದುವಾಗ ಎದ್ದು ಕಾಣುವ ಬಹಳ ಮಹತ್ವದ ಇನ್ನೊಂದು ಅಂಶವೇನೆಂದರೆ, ಅಲ್ಲೆಲ್ಲಾ 'ಯುದ್ಧ ಮಾಡಿರಿ' ಎಂಬ ಆದೇಶವು ಹಲವು ಷರತ್ತು ಗಳಿಗೆ ಬದ್ಧವಾಗಿರುತ್ತದೆ. ಹಾಗೆಯೇ ಅದು ಒಂದು ಅಧಿಕೃತ ಸರಕಾರಕ್ಕೆ ನೀಡಲಾದ ಆದೇಶವಾಗಿದೆಯೇ ಹೊರತು ಕೇವಲ ಯಾರಾದರೊಬ್ಬ ವ್ಯಕ್ತಿಗೆ, ಕೆಲವು ವ್ಯಕ್ತಿಗಳಿಗೆ ಅಥವಾ ಒಂದು ಕುಟುಂಬ, ಕುಲ, ಜನಾಂಗ ಅಥವಾ ಯಾವುದಾದರೂ ಸಂಘಟನೆಗೆ ನೀಡಿದ ಆದೇಶವಾಗಿಲಿಲ್ಲ.
ಅಧ್ಯಾಯ - 6
ಮುಸ್ಲಿಮ್ ಸಮಾಜದ ಶಾಂತಿ ನಿಷ್ಠೆ, ಸಂಯಮ ಮತ್ತು ಔದಾರ್ಯ
ಎರಡು ಐತಿಹಾಸಿಕ ನಿದರ್ಶನಗಳು
1. ಹುದೈಬಿಯಾ ಸಂಧಾನ
ಮದೀನಾ ದಲ್ಲಿ ಇಸ್ಲಾಮ್ ಧರ್ಮದ ನಿಯಮಗಳ ತಳಹದಿಯಲ್ಲಿ ಒಂದು ಸಮಾಜದ ನಿರ್ಮಾಣವಾಯಿತು ಮತ್ತು ಒಂದು ಸರಕಾರದ ಸ್ಥಾಪನೆಯಾಯಿತು. ಆತನಕ ಏಕಪಕ್ಷೀಯ ಆಕ್ರಮಣ, ವಿದ್ರೋಹ, ವಂಚನೆ ಮತ್ತು ದೌರ್ಜನ್ಯಗಳನ್ನು ಮಾತ್ರ ಸಹಿಸಿಕೊಂಡು ಬಂದಿದ್ದ ಮುಸ್ಲಿಮರಿಗೆ ಅಲ್ಲಾಹನ ಕಡೆಯಿಂದ ಯುದ್ಧದ ಅನುಮತಿ ದೊರಕಿತು. ಹಲವು ಯುದ್ಧಗಳಲ್ಲಿ ವೀರೋಚಿತ ವಿಜಯವೂ ಪ್ರಾಪ್ತವಾಯಿತು. ಆದರೆ ಆಬಳಿಕವೂ ಪ್ರವಾದಿ ಮುಹಮ್ಮದ್ (ಸ) ಮತ್ತು ಅವರ ನೇತೃತ್ವದ ಮುಸ್ಲಿಮ್ ಸಮಾಜವು ಶಾಂತಿ, ಸಹನೆ ಮತ್ತು ಔದಾರ್ಯದ ಧೋರಣೆಯನ್ನು ಕೈಬಿಡಲಿಲ್ಲ. ಶಾಂತಿ ಮತ್ತು ನೆಮ್ಮದಿಯೇ ಅವರ ಪ್ರಾಶಸ್ತ್ಯವಾಗಿತ್ತು. ಇದಕ್ಕೆ ಅತ್ಯುತ್ತಮ ಉದಾಹರಣೆ ಹುದೈಬಿಯಾ ಸಂಧಿ.
ಮುಸ್ಲಿಮರು ಮಕ್ಕಾದವರ ದೌರ್ಜನ್ಯಗಳಿಂದ ರೋಸಿ ತಮ್ಮ ನೆಚ್ಚಿನ ನಾಡನ್ನು ತ್ಯಜಿಸಿ ಮದೀನಾ ಕ್ಕೆ ವಲಸೆ (ಹಿಜ್ರತ್) ಹೋದ ಬಳಿಕವೂ ಮಕ್ಕಾದ ಮುಸ್ಲಿಂ ವಿರೋಧಿಗಳು ತಮ್ಮ ಕಿರುಕುಳ ನಿಲ್ಲಿಸಲಿಲ್ಲ. ವಲಸೆಯ ಎರಡನೇ ವರ್ಷ ಮಾಕ್ಕಾದವರು ಮದೀನಾದ ಮೇಲೆ ಆಕ್ರಮಣ ನಡೆಸಿ, ಬದ್ರ್ ಯುದ್ಧವು ನಡೆಯಿತು. ಮೂರನೆಯ ವರ್ಷ ಉಹುದ್ ಯುದ್ಧವು ನಡೆಯಿತು. ಐದನೇ ವರ್ಷ ಖ೦ದಕ್ ಮತ್ತು ಖೈಬರ್ ಯುದ್ಧಗಳು ನಡೆದವು. ಮಕ್ಕಾದ ಕುರೈಶರು ಪವಿತ್ರ ಕಾಬಾ ವನ್ನು ಸಂದರ್ಶಿಸದಂತೆ ಮಾತ್ರವಲ್ಲ, ಮಕ್ಕ ನಗರವನ್ನೇ ಪ್ರವೇಶಿಸದಂತೆ ಮುಸ್ಲಿಮರ ಮೇಲೆ ನಿರ್ಬಂಧ ಹೇರಿದ್ದರು. ಕುರೈಶರು ಈ ರೀತಿ, ಏಕದೇವಾರಾಧನೆಗೆಂದೇ ನಿರ್ಮಿತವಾಗಿದ್ದ ಕಅಬಾವನ್ನು ಸಂದರ್ಶಿಸಲು ಬಹುದೇವಾರಾಧಕರಿಗೆಲ್ಲ ಮುಕ್ತ ಪರವಾನಗಿ ಕೊಟ್ಟು, ನೈಜ ಏಕದೇವಾರಾಧಕರ ಪಾಲಿಗೆ ಅದನ್ನು ಮುಚ್ಚಿದ್ದು ಅವರ ಅಹಂಕಾರ ಮತ್ತು ಉದ್ಧಟತನಕ್ಕೆ ಪುರಾವೆಯಾಗಿತ್ತು. ನಿಜವಾಗಿ ಅವರಿಗೆ ಹಾಗೆ ಮಾಡುವ ಯಾವ ಅಧಿಕಾರವೂ ಇರಲಿಲ್ಲ. ಅವರು ಕಾಬಾದ ಪಾಲಕರಾಗಿದ್ದರೇ ಹೊರತು ಅದರ ಮಾಲಕರಾಗಿರಲಿಲ್ಲ. ಅಲ್ಲದೆ ಆಗಿನ ಸಾಂಪ್ರದಾಯಿಕ ನಿಯಮಾನುಸಾರ ಕೂಡಾ, ಯಾರನ್ನೇ ಆಗಲಿ ಮಕ್ಕ ಪಟ್ಟಣಕ್ಕೆ ಬರದಂತೆ ಅಥವಾ ಕಾಬಾ ವನ್ನು ಸಂದರ್ಶಿಸದಂತೆ ತಡೆಯುವ ಅಧಿಕಾರ ಅವರಿಗಿರಲಿಲ್ಲ. ಯಾವುದೇ ಕಾರಣಕ್ಕೆ, ಹಜ್ಜ್ ಅಥವಾ ಉಮ್ರಾ ಯಾತ್ರೆಗೆಂದು ಬಂದವರನ್ನು ತಡೆದು ನಿಲ್ಲಿಸಲಾದ ಯಾವುದೇ ಪೂರ್ವ ನಿದರ್ಶನವೂ ಇರಲಿಲ್ಲ.
ಇತ್ತ, ಮಕ್ಕದಲ್ಲಿರುವ ಪವಿತ್ರ ಕಾಬಾವನ್ನು ಸಂದರ್ಶಿಸಬೇಕೆಂಬುದು ಮದೀನಾದಲ್ಲಿನ ಎಲ್ಲ ಮುಸ್ಲಿಮರ ಬಹುಕಾಲದ ಬೇಡಿಕೆಯಾಗಿತ್ತು. ಆದರೆ ಸಂಘರ್ಷವನ್ನು ತಪ್ಪಿಸಬೇಕೆಂಬ ದೃಷ್ಟಿಯಿಂದ ಸ್ವತಃ ಪ್ರವಾದಿವರ್ಯರೇ (ಸ) ಅವರಿಗೆ ಸಾಂತ್ವನ ಹೇಳಿ, ಸೂಕ್ತ ಕಾಲದಲ್ಲಿ ಹೊರಡೋಣ ಎನ್ನುತ್ತಾ ಅದನ್ನು ಮುಂದೂಡುತ್ತಾ ಬಂದಿದ್ದರು. ಹಿಜರಿ ಆರನೆಯ ವರ್ಷ ಪ್ರವಾದಿ (ಸ) ತಾವು ತಮ್ಮ ಅನುಯಾಯಿಗಳ ಜೊತೆ ಪವಿತ್ರ ಕಾಬಾದ ಸಂದರ್ಶನ ನಡೆಸಿರುವುದಾಗಿ ಸ್ವಪ್ನದಲ್ಲಿ ಕಂಡರು. ಆ ತಮ್ಮ ಸ್ವಪ್ನವನ್ನು ತಮ್ಮ ಅನುಯಾಯಿಗಳೊಂದಿಗೆ ಹಂಚಿಕೊಂಡರು. ಪ್ರವಾದಿವರ್ಯರ ಸ್ವಪ್ನವೆಂದರೆ ಅದು ದೇವರ ಕಡೆಯಿಂದ ಬಂದಿರುವ ಸೂಚನೆ ಎಂದು ಗ್ರಹಿಸಿಕೊಂಡರು. ಕೆಲವು ಸುತ್ತಿನ ಸಮಾಲೋಚನೆಗಲು ನಡೆದವು. ಮಕ್ಕಾದವರು ಯಾತ್ರೆಗೆ ತಡೆ ಒಡ್ಡಿದರೇನು ಮಾಡೋಣ? ಎಂಬ ಪ್ರಶ್ನೆಯೂ ಚರ್ಚೆಗೆ ಬಂತು. ಇತ್ತೀಚಿನ ಮೂರು ವರ್ಷಗಳಲ್ಲಿ ಮಕ್ಕದವರು ಮುಸ್ಲಿಮರ ವಿರುದ್ಧ ತಮ್ಮ ಸತತ ದುಸ್ಸಾಹಸಗಳ ಫಲವಾಗಿ ಸಾಕಷ್ಟು ನಾಶನಷ್ಟಗಳನ್ನು ಅನುಭವಿಸಿದ್ದರಿಂದ ಮುಸ್ಲಿಮರನ್ನು ತಡೆಯುವ ಧೈರ್ಯ ತೋರಲಾರರು ಎಂಬುದು ಹಲವರ ಲೆಕ್ಕಾಚಾರವಾಗಿತ್ತು.
ಕೊನೆಗೆ ಉಮ್ರಾ (ಹಜ್ಜ್ ತಿಂಗಳ ಹೊರತು ಬೇರೆ ತಿಂಗಳಲ್ಲಿ ನಡೆಸುವ ಕಾಬಾ ಸಂದರ್ಶನ) ಗೆ ಹೊರಡುವ ಸಿದ್ಧತೆ ಆರಂಭವಾಯಿತು. ಝುಲ್ ಕಅದಃ ತಿಂಗಳ ಮೊದಲ ದಿನ ಪ್ರವಾದಿವರ್ಯರ(ಸ) ನೇತೃತ್ವದಳ್ಳಿ ಸುಮಾರು 1500 ಮಂದಿಯ ತಂಡವು ಮಕ್ಕದೆಡೆಗೆ ಹೊರಟಿತು. ಆ ತಿಂಗಳು ಯುದ್ಧ ನಿಷಿದ್ಧ ಅವಧಿ ಎಂದು ಎಲ್ಲ ಅರಬ್ ಜನತೆ ಒಪ್ಪಿಕೊಂಡಿದ್ದ ನಾಲ್ಕು ಪಾವನ ತಿಂಗಳ ಪೈಕಿ ಒಂದಾಗಿತ್ತು. ಮುಸಲ್ಮಾನರು ಯಾವುದೇ ಯುದ್ಧ ಸಿದ್ಧತೆ ನಡೆಸಿರಲಿಲ್ಲ. ಅವರು ತಾವು ಸಾಮಾನ್ಯ ದಿನಗಳಲ್ಲಿ ಪ್ರಯಾಣದ ವೇಳೆ ವ್ಯಕ್ತಿಗತವಾಗಿ ತಮ್ಮ ಜೊತೆಗಿಟ್ಟುವಂತಹ ಒರೆ ಇರುವ ಖಡ್ಗಗಳನ್ನು ಧರಿಸಿದ್ದು ಬಿಟ್ಟರೆ ಬೇರಾವುದೇ ತಯಾರಿ ನಡೆಸಿರಲಿಲ್ಲ. ಅಲ್ಲದೆ ಅವರ ಜೊತೆ, ಉಮ್ರಾದ ವೇಳೆ ಬಲಿ ನೀಡುವುದಕ್ಕೆಂದೇ 70 ಒಂಟೆಗಳಿದ್ದವು. ಮದೀನಾ ದಿಂದ ಸುಮಾರು 12 ಕಿಲೋ ಮೀಟರ್ ದೂರ ಝುಲ್ ಹುಲೈಫಾ ಎಂಬಲ್ಲಿಗೆ ತಲುಪಿದೊಡನೆ ಎಲ್ಲ ಮುಸ್ಲಿಮರು ಉಮ್ರಾ ಅಥವಾ ಹಜ್ಜ್ ಗಾಗಿಯೇ ಧರಿಸುವ 'ಇಹ್ರಾಮ್' ಎಂಬ ವಿಶಿಷ್ಟ, ಸರಳ ಸಮವಸ್ತ್ರವನ್ನೂ ಧರಿಸಿಕೊಂಡರು. ಅತ್ತ ಮಕ್ಕಾದವರಿಗೆ ಸುದ್ದಿ ತಲುಪಿತು. ಅವರು ಪ್ರವಾದಿ(ಸ) ಮಕ್ಕಾದ ಮೇಲೆ ದಂಡೆತ್ತಿ ಬರುತ್ತಿದ್ದಾರೆಂಬ ಸುಳ್ಳು ವದಂತಿಯನ್ನು ಊರೆಲ್ಲಾ ಹರಡಿದರು. ಅವರು ಮುಸ್ಲಿಮರ ಯಾತ್ರಾ ತಂಡದ ಮೇಲೆ ಹಠಾತ್ ಧಾಳಿ ನಡೆಸುವುದಕ್ಕಾಗಿ ಮಕ್ಕಾದಿಂದ 80 ಕಿ.ಮೀ. ದೂರದ ಉಸ್ಫಾನ್ ಎಂಬಲ್ಲಿ ಖಾಲಿದ್ ಬಿನ್ ವಲೀದ್ ಎಂಬ ಪ್ರಖ್ಯಾತ ದಂಡನಾಯಕನ ನೇತೃತ್ವದಲ್ಲಿ 200 ಮಂದಿ ನುರಿತ ಯೋಧರ ಸರ್ವ ಸಜ್ಜಿತ ತಂಡವೊಂದನ್ನು ನಿಯೋಜಿಸಿದರು. ಅವರ ಈ ಚಟುವಟಿಕೆಗಳ ಸುದ್ದಿ ಮುಸ್ಲಿಮರಿಗೆ ತಲುಪಿತು. ಮುಸ್ಲಿಮರು ಖಾಲಿದ್ ರ ಸೇನೆ ಇದ್ದ ದಾರಿಯನ್ನು ಬಿಟ್ಟು ಬೇರೊಂದು ದಾರಿಯ ಮೂಲಕ ಮಕ್ಕಾದ ಸಮೀಪ ತಲುಪಿದರು. ಮಕ್ಕಾದಿಂದ 16 ಕಿ.ಮೀ. ದೂರ ಹುದೈಬಿಯಾ ಎಂಬಲ್ಲಿ ಮುಸ್ಲಿಮರು ಶಿಬಿರ ಹೂಡಿದರು.
ಮಕ್ಕಾದ ಹಲವು ನಿಯೋಗಗಳು ಪ್ರವಾದಿಯ ಬಳಿ ಬಂದು ಅವರ ಉದ್ದೇಶವೇನೆಂದು ವಿಚಾರಿಸಿದರು. ಪ್ರವಾದಿ (ಸ) ಮತ್ತವರ ಅನುಯಾಯಿಗಳು ತಮ್ಮ ಉದ್ದೇಶ ಕೇವಲ ಉಮ್ರಾ ಮಾತ್ರವಾಗಿದ್ದು ತಾವು ಯುದ್ಧವನ್ನು ಬಯಸುವುದಿಲ್ಲ ಎಂಬ ಆಶ್ವಾಸನೆ ನೀಡಿದರು. ಪ್ರವಾದಿವರ್ಯರು (ಸ) ಮತ್ತವರ ಸಂಗಾತಿಗಳು ಶಸ್ತ್ರ ಸಜ್ಜಿತರಾಗಿ ಬಂದಿಲ್ಲವೆಂಬುದನ್ನು, ಅವರು ಧರಿಸಿದ್ದ ಇಹ್ರಾಮ್ ಸಮವಸ್ತ್ರವನ್ನು ಮತ್ತು ಅವರ ಜೊತೆಗಿದ್ದ ಬಲಿದಾನದ ಒಂಟೆಗಳನ್ನು ನೋಡಿ, ನಿಯೋಗಗಳಿಗಂತೂ ಇವರು ಯುದ್ಧಕ್ಕೆ ಬಂದವರಲ್ಲ ಎಂಬುದು ಮನವರಿಕೆಯಾಗಿತ್ತು. ಆದರೆ ಮಕ್ಕಾದ ನಾಯಕರು ಸ್ವತಃ ತಮ್ಮದೇ ನಿಯೋಗದವರ ಮಾತನ್ನು ನಂಬಲು ಸಿದ್ಧರಿರಲಿಲ್ಲ. ತಮ್ಮ ಹುಸಿ ಪ್ರತಿಷ್ಠೆ, ಮೊಂಡುತನ ಮತ್ತು ಯಾವ ಬೆಲೆ ತೆತ್ತಾದರೂ ಮುಸ್ಲಿಮರನ್ನು ಸೋಲಿಸಬೇಕೆಂಬ ತಮ್ಮ ಉದ್ಧಟತನದಿಂದಾಗಿ ಅವರು, ಯಾವ ಕಾರಣಕ್ಕೂ ಮುಸ್ಲಿಮರು ಕಾಬಾದ ಸಂದರ್ಶನ ನಡೆಸುವುದನ್ನು ತಾವು ಸಮ್ಮತಿಸುವುದಿಲ್ಲ ಎಂದು ನಿರ್ಧರಿಸಿಬಿಟ್ಟರು. ಆದರೆ ಆರೀತಿ ಯಾರನ್ನಾದರೂ ಕಾಬಾ ಸಂದರ್ಶನ ನಡೆಸದಂತೆ ತಡೆದರೆ ಅಥವಾ ಸಂದರ್ಶನಕ್ಕೆ ಬಂದವರ ಮೇಲೆ ಯುದ್ಧ ನಿಷಿದ್ಧ ತಿಂಗಳಲ್ಲಿ ಸೈನಿಕ ಆಕ್ರಮಣ ನಡೆಸಿದರೆ ಸಂಪೂರ್ಣ ಅರಬ್ ಪ್ರದೇಶದಲ್ಲಿ ಎಲ್ಲ ಜನಾಂಗಗಳು ತಮ್ಮ ವಿರುದ್ಧ ತಿರುಗಿ ಬೀಳಬಹುದೆಂಬ ಭಯ ಅವರಿಗಿತ್ತು. ಆದ್ದರಿಂದ ಅವರು ಮುಸ್ಲಿಮರನ್ನು ಯುದ್ಧಕ್ಕೆ ಪ್ರಚೋದಿಸಲು ಸಂಚುಗಳನ್ನು ಹೂಡಿದರು. ರಾತ್ರಿವೇಳೆ ಹಲವು ಪುಂಡರ ತಂಡಗಳನ್ನು ಕಳಿಸಿ ಮುಸ್ಲಿಮರ ಶಿಬಿರಗಳ ಮೇಲೆ ಕಲ್ಲೆಸೆತ, ಬಾಣಪ್ರಯೋಗ ಇತ್ಯಾದಿ ಕಿಡಿಗೇಡಿ ಕೃತ್ಯಗಳನ್ನು ನಡೆಸಿದರು. ಮುಸ್ಲಿಮರು ಆಪೈಕಿ ಕೆಲವು ಪುಂಡರನ್ನು ವಶಕ್ಕೆ ತೆಗೆದುಕೊಂಡು ಆ ಬಳಿಕ ಬಿಡುಗಡೆ ಗೊಳಿಸಿದರು.
ಮಕ್ಕಾದ ನಾಯಕರ ಮನ ಓಲೈಸುವ ಶ್ರಮದ ಅಂಗವಾಗಿ ಪ್ರವಾದಿ (ಸ) ತಮ್ಮ ಆಪ್ತ ಉಸ್ಮಾನ್ (ರ)ರನ್ನು ಮಕ್ಕಾಗೆ ಕಳಿಸಿದರು. ಮಕ್ಕಾದವರ ಮಧ್ಯೆ ಸಾಕದ್ತು ಗೌರವಪಾತ್ರರಾಗಿದ್ದ ಉಸ್ಮಾನ್ (ರ) ಮಕ್ಕಾದ ನಾಯಕರನ್ನು ಭೇಟಿಯಾಗಿ, ಮುಸ್ಲಿಮರಿಗೆ ಉಮ್ರಾ ಮಾಡಲು ಅನುಮತಿಸಬೇಕು, ಅವರು ಉಮ್ರಾ ಮಾಡಿ ಮರಳಿ ಹೋಗುತ್ತಾರೆ, ಮಕ್ಕಾದವರಿಗೆ ಯಾವ ಹಾನಿಯನ್ನೂ ಮಾಡುವುದಿಲ್ಲ ಎಂದೆಲ್ಲಾ ಆ ನಾಯಕರಿಗೆ ಆಶ್ವಾಸನೆ ನೀಡಿದರೂ ಅವರು ಒಪ್ಪಲಿಲ್ಲ. ನೀವು ನಮ್ಮ ಅತಿಥಿ. ನೀವೊಬ್ಬರು ಉಮ್ರಾ ಮಾಡಬಹುದು. ಉಳಿದವರಿಗೆ ನಾವು ಸಮ್ಮತಿ ನೀಡುವುದಿಲ್ಲ, ಅವರು ಹಾಗೆಯೇ ಮರಳಿ ಹೋಗಬೇಕು ಎಂದು ಹಠ ಹಿಡಿದರು. ಪ್ರವಾದಿ ಮತ್ತವರ ಅನುಯಾಯಿಗಳಿಗೆ ಉಮ್ರಾದ ಅವಕಾಶ ಸಿಗುವ ತನಕ ನಾನು ಉಮ್ರಾ ಮಾಡುವುದಿಲ್ಲ, ಅದಕ್ಕಾಗಿ ವರ್ಷವಿಡೀ ಕಾಯಾಬೇಕಾಗಿ ಬಂದರೂ ಸರಿ ಎಂದು ಉಸ್ಮಾನ್ (ರ) ಘೋಷಿಸಿದರು. ಇತ್ತ ಮಾತುಕತೆ ದೀರ್ಘ ಕಾಲ ಮುಂದುವರಿದಂತೆ ಅತ್ತ ಮುಸ್ಲಿಮ್ ಪಾಳಯದಲ್ಲಿ, ಕಳವಳ, ಅಸಮಾಧಾನ ಹೆಚ್ಚತೊಡಗಿತು. ಈ ಮಧ್ಯೆ ಕುರೈಶರು ಉಸ್ಮಾನ್ ರನ್ನು ಬಂಧಿಸಿದ್ದಾರೆ ಮಾತ್ರವಲ್ಲ, ಅವರ ಹತ್ಯೆ ನಡೆಸಿದ್ದಾರೆ ಎಂಬ ವದಂತಿಗಳು ಹಬ್ಬಿ ಮುಸ್ಲಿಮರು ಆಕ್ರೋಶಿತರಾದರು. ರಾಯಭಾರಿಯ ಹತ್ಯೆ ನಿಜವಾಗಿ ಏಕಪಕ್ಷೀಯ ಯುದ್ಧ ಘೋಷಣೆಗೆ ಸಮಾನವಾದ್ದರಿಂದ ಮುಸ್ಲಿಮರೀಗ, ಪ್ರತೀಕಾರಕ್ಕಾಗಿ ಆಗ್ರಹಿಸಲಾರಂಭಿಸಿದರು. ಪ್ರವಾದಿ (ಸ) ಒಂದು ಮರದ ಕೆಳಗೆ ನಿಂತು ತಮ್ಮ ಅನುಯಾಯಿಗಳನ್ನೆಲ್ಲಾ ಸೇರಿಸಿ, ಮುಂದಿನ ಸನ್ನಿವೇಶವನ್ನು ಎದುರಿಸುವುದಕ್ಕೆ ತಯಾರಾಗುವಂತೆ ಆದೇಶಿಸಲಿದರು. ಅವರಲ್ಲಿ ಪ್ರತಿಯೊಬ್ಬರೂ ಪ್ರವಾದಿಯ ಬಲಗೈ ಮೇಲೆ ತಮ್ಮ ಕೈಯನ್ನಿಟ್ಟು ನಾವು ಹೋರಾಡುವೆವು, ಓಡಿ ಹೋಗಲಾರೆವು ಎಂದು ಪ್ರತಿಜ್ಞೆ ಮಾಡಿದರು. ಕೊನೆಯಲ್ಲಿ ಪ್ರವಾದಿ (ಸ) ತಮ್ಮದೇ ಎರಡೂ ಕೈಗಳನ್ನು ಜೋಡಿಸಿ, ಇದು 'ಉಸ್ಮಾನ್ ರ ಪರವಾದ ಪ್ರತಿಜ್ಞೆ' ಎಂದು ಘೋಷಿಸಿದರು. ಹಲವರು ಅದನ್ನು, ಉಸ್ಮಾನ್ ಹುತಾತ್ಮರಾಗಿಲ್ಲ ಎಂಬುದರ ಸೂಚನೆಯಾಗಿ ಪರಿಗಣಿಸಿದರು. ಈ ರೀತಿ ಮುಸ್ಲಿಮರು ತಾವು ತೀರಾ ಕಡಿಮೆ ಸಂಖ್ಯೆಯಲ್ಲಿದ್ದರೂ ತಮ್ಮ ಬಳಿ ಶಸ್ತ್ರಾಸ್ತ್ರ ಇತ್ಯಾದಿ ಯಾವುದೇ ರೀತಿಯ ಸಿದ್ಧತೆ ಇಲ್ಲದಿದ್ದರೂ ನ್ಯಾಯಕ್ಕಾಗಿ ಹೋರಾಡುವುದಕ್ಕೆ ತಮ್ಮ ಬದ್ಧತೆಯನ್ನು ಪ್ರಕಟಿಸಿದ ಈ ಘಟನೆಯ ಕುರಿತು ಅಲ್ಲಾಹನು ದಿವ್ಯವಾಣಿಯ ಮೂಲಕ ತನ್ನ ಪ್ರಸನ್ನತೆಯನ್ನು ಪ್ರಕಟಿಸಿದ್ದು (ಕುರ್ ಆನ್ 48:17) ಇತಿಹಾಸದಲ್ಲಿ ಅದನ್ನು 'ಬೈಅತ್ ರಿದ್ವಾನ್' (ಪ್ರಸನ್ನತೆಯ ಪ್ರತಿಜ್ಞೆ) ಎಂದು ಗುರುತಿಸಲಾಗುತ್ತದೆ.
ಮುಸ್ಲಿಮರು ಹೊಸ ಆವೇಶದಲ್ಲಿರುವ ಸುದ್ದಿ ಶತ್ರು ಪಾಳಯಕ್ಕೆ ತಲುಪಿತು. ಈ ಅನಿರೀಕ್ಷಿತ ಬೆಳವಣಿಗೆಯಿಂದ ಬೆಚ್ಚಿ ಬಿದ್ದ ಖುರೈಶ್ ನಾಯಕರು ಪ್ರವಾದಿಯ (ಸ) ಜೊತೆ ಮಾತುಕತೆಗೆ ಸಿದ್ಧರಾದರು. ಅವರು ಉಸ್ಮಾನ್ (ರ) ರನ್ನು ಸುರಕ್ಷಿತವಾಗಿ ಮುಸ್ಲಿಮರ ಬಳಿಗೆ ಕಳಿಸಿಕೊಟ್ಟರು. ಅದರ ಬೆನ್ನಿಗೇ ಮುಸ್ಲಿಮರ ಜೊತೆ ಸಂಧಾನದ ಮಾತುಕತೆಗಾಗಿ, ಸುಹೈಲ್ ಬಿನ್ ಅಮ್ರ್ ಎಂಬ ತಜ್ಞ ಮಾತುಗಾರನನ್ನು ಕಳಿಸಿಕೊಟ್ಟರು. "ಇದೊಂದು ಒಳ್ಳೆಯ ಬೆಳವಣಿಗೆ" ಎಂದು ತಮ್ಮ ಸಂಗಾತಿಗಳಿಗೆ ಹೇಳಿದ ಪ್ರವಾದಿ (ಸ) ಆತನನ್ನು ಸ್ವಾಗತಿಸಿದರು. ಮಾತುಕತೆ ಆರಂಭವಾಯಿತು. ಮಾತುಕತೆಯುದ್ದಕ್ಕೂ ಸುಹೈಲ್ ರ ಧಾಟಿ ಮತ್ತು ಧೋರಣೆ ಅತ್ಯಂತ ಉದ್ಧಟತನದ್ದಾಗಿತ್ತು. ಆದರೆ ಪ್ರವಾದಿ (ಸ) ಗರಿಷ್ಟ ಸಂಯಮದೊಂದಿಗೆ ಮಾತುಕತೆಯ ಪ್ರಕ್ರಿಯೆಯನ್ನು ಮುಂದುವರಿಸಿದರು. ಮಾತುಕತೆಯ ವೇಳೆ ಉಭಯ ಪಕ್ಷಗಳು ಒಪ್ಪಿಕೊಂಡ ಕೆಲವು ಅಂಶಗಳು ಹೀಗಿದ್ದವು:
1. ಮುಂದಿನ ಹತ್ತು ವರ್ಷಗಳ ತನಕ ಉಭಯ ಪಕ್ಷಗಳ ನಡುವೆ ಯಾವುದೇ ಯುದ್ಧ ನಡೆಯದು.
2. ಮುಸ್ಲಿಮರು ಈ ವರ್ಷ ಉಮ್ರಾ ನಡೆಸದೆಯೇ, ಮಕ್ಕಾದಿಂದ ಮದೀನಾಗೆ ಮರಳಿ ಹೋಗಬೇಕು.
3. ಮುಂದಿನ ವರ್ಷ ಮುಸ್ಲಿಮರು ಮದೀನಾ ದಿಂದ ಮಕ್ಕಾಗೇ ಬರಬಹುದು ಆದರೆ ಹೆಚ್ಚೆಂದರೆ ಮೂರು ದಿನಗಳೊಳಗೆ ಉಮ್ರಾ ಮುಗಿಸಿ ಮದೀನಾಗೆ ಮರಳಬೇಕು.
4. ಮಕ್ಕಾದ ಯಾರಾದರೂ ಮದೀನದಲ್ಲಿರುವ ಮುಸ್ಲಿಮರ ಬಳಿಗೆ ಬಂದರೆ ಮುಸ್ಲಿಮರು ಅವರಿಗೆ ಆಶ್ರಯ ನೀಡದೆ ಅವರನ್ನು ಮರಳಿ ಮಕ್ಕಾಗೆ ಕಳಿಸಿ ಕೊಡಬೇಕು. ಅದೇವೇಳೆ, ಮದೀನಾದ ಯಾರಾದರೂ ಮಕ್ಕಾಗೆ ಬಂದು ಆಶ್ರಯ ಕೇಳಿದರೆ ಮಕ್ಕಾದವರು ಅವರನ್ನು ಮರಳಿ ಕಲಿಸದೆ, ಅವರಿಗೆ ಆಶ್ರಯ ನೀಡುವರು.
5. ಮಕ್ಕಾದ ಮತ್ತು ಅದರ ಆಸುಪಾಸಿನ ಯಾವುದಾದರೂ ಜನಾಂಗ ಅಥವಾ ಬುಡಕಟ್ಟಿನವರು ಮದೀನಾದ ಮುಸ್ಲಿಮರ ಜೊತೆ ಒಡಂಬಡಿಕೆ ನಡೆಸ ಬಯಸಿದರೆ ಅವರು ಅದಕ್ಕೆ ಸ್ವತಂತ್ರರು ಹಾಗೆಯೇ ಮದೀನಾದ ಮತ್ತು ಅದರ ಆಸುಪಾಸಿನ ಯಾವುದಾದರೂ ಜನಾಂಗ ಅಥವಾ ಬುಡಕಟ್ಟಿನವರು ಮಕ್ಕದವರ ಜೊತೆ ಒಡಂಬಡಿಕೆ ನಡೆಸ ಬಯಸಿದರೆ ಅವರು ಅದಕ್ಕೆ ಸ್ವತಂತ್ರರು.
ಇಷ್ಟು ವಿಷಯಗಳ ಮೇಲೆ ಪರಸ್ಪರ ಒಮ್ಮತವಾದ ಬಳಿಕ ಪ್ರವಾದಿ (ಸ) ತಮ್ಮ ಆಪ್ತ ಅಲೀ (ರ) ಅವರೊಡನೆ, ಪ್ರಸ್ತುತ ಒಪ್ಪಂದದ ವಿವರಗಳನ್ನು ಲಿಖಿತವಾಗಿ ದಾಖಲಿಸಲು ಹೇಳಿದರು. ಅಲೀ (ರ) ಒಂದು ಕಾಗದದಲ್ಲಿ ಬರೆಯತೊಡಗಿದರು. ಅವರು 'ಬಿಸ್ಮಿಲ್ಲಾಹಿರ್ರಹ್ಮಾನಿರ್ರಹೀಮ್' (ಅಲ್ಲಾಹನ ಹೆಸರಿಂದ - ಅವನು ಅಪಾರ ದಯಾಳು, ಕರುಣಾಮಯಿ) ಎಂದು ಬರೆಯುತ್ತಿದ್ದಂತೆ ಸುಹೈಲ್ ಅದನ್ನು ಆಕ್ಷೇಪಿಸಿದರು. "ದಯಾಳು, ಕರುಣಾಮಯಿ ಇತ್ಯಾದಿ ಯಾವುದೂ ನಮಗೆ ಗೊತ್ತಿಲ್ಲ. ನಮ್ಮ ಸಂಪ್ರದಾಯದಂತೆ 'ಅಲ್ಲಾಹುಮ್ಮ ಬಿಸ್ಮಿಕ' (ಓ ಅಲ್ಲಾಹ್, ನಿನ್ನ ನಾಮದಿಂದ) ಎಂದು ಮಾತ್ರ ಬರೆಯಿರಿ" ಎಂದರು. ಇದನ್ನು ಪ್ರವಾದಿ (ಸ) ಸಮ್ಮತಿಸಿದರು. ಮುಂದೆ ಅಲೀ (ರ) "ಇದು ಅಲ್ಲಾಹನ ದೂತರಾದ ಮುಹಮ್ಮದರು ಒಪ್ಪಿರುವ ಸಂಧಾನ"ಎಂದು ಬರೆದಾಗ ಸುಹೈಲ್ "ಅವರು ಅಲ್ಲಾಹನ ದೂತರೆಂಬುದನ್ನು ನಾವು ಒಪ್ಪಿದರೆ ಮತ್ತೆ ಈ ಒಪ್ಪಂದದ ಅಗತ್ಯವೇ ಇಲ್ಲವಲ್ಲ?" ಎನ್ನುತ್ತಾ ಮತ್ತೆ ಆಕ್ಷೇಪಿಸಿದರು. ಇದು ನಿಜಕ್ಕೂ ಪ್ರಚೋದನೆಯ ಪರಾಕಾಷ್ಠೆಯಾಗಿತ್ತು. ಮುಸ್ಲಿಮರು ಮೊದಲೇ, ತಾವು ಉಮ್ರಾ ಗಾಗಿ 450 ಕಿ.ಮೀ. ದೂರ ಪ್ರಯಾಣಿಸಿ ಬಂದಿದ್ದರೂ, ಮಕ್ಕಾದ ಹೊರಗೆ ಸುಮಾರು ಮೂರು ವಾರ ಕಾದು ಕುಳಿತಿದ್ದರೂ ತಮಗೆ ಉಮ್ರಾದ ಅವಕಾಶವನ್ನು ಅಕ್ರಮವಾಗಿ ನಿರಾಕರಿಸಲಾಯಿತು ಎಂಬ ಕಾರಣಕ್ಕೆ ತೀರಾ ಅಸಂತುಷ್ಟರಾಗಿದ್ದರು. ಎರಡನೆಯದಾಗಿ ಸಂಧಾನದ ಷರತ್ತುಗಳು ತೀರಾ ಕಠಿಣವಾಗಿದ್ದು, ಅವು ಸಂಪೂರ್ಣವಾಗಿ ಮುಸ್ಲಿಮರಿಗೆ ಪ್ರತಿಕೂಲವಾಗಿವೆ, ಇಂತಹ ಅನುಚಿತ ಷರತ್ತುಗಳನ್ನು ಒಪ್ಪುವುದು ಮುಸ್ಲಿಮರ ಪಾಲಿಗೆ ಅಪಮಾನ ಎಂದು ಹಲವು ಮುಸ್ಲಿಮರಿಗೆ ಅನಿಸಿತ್ತು. ಒಪ್ಪಂದವನ್ನು ಬರೆಯುವ ವೇಳೆ 'ದಯಾಳು, ಕರುಣಾಮಯಿ' ಎಂಬ ಅಲ್ಲಾಹನ ಗುಣನಾಮಗಳನ್ನು ಬರೆಯುವುದಕ್ಕೆ ಆಕ್ಷೇಪ ಪ್ರಕಟವಾದಾಗ ಮುಸ್ಲಿಮರು ತುಂಬಾ ಕ್ರುದ್ಧರಾಗಿದ್ದರು. ಇದೀಗ ಸುಹೈಲ್ ರ ಹೊಸ ಆಕ್ಷೇಪದಿಂದಾಗಿ ಅವರ ಸಹನೆಯ ಕಟ್ಟೆ ಒಡೆಯಿತು.
ಆದರೆ ಪ್ರವಾದಿ (ಸ) ಮಾತ್ರ ಯಾವ ಹಂತದಲ್ಲೂ ತಮ್ಮ ಅಪಾರ ಸಂಯಮದ ನಿಲುವನ್ನು ಕೈ ಬಿಡಲಿಲ್ಲ. ಸುಹೈಲ್ ರ ಬೇಡಿಕೆಯಂತೆ "ಅಲ್ಲಾಹನ ದೂತರಾದ ಮುಹಮ್ಮದರು" ಎಂಬ ಪದಗಳನ್ನು ಅಳಿಸಿ "ಮುಹಮ್ಮದ್ ಬಿನ್ ಅಬ್ದುಲ್ಲಾಹ್" ಎಂದಷ್ಟೇ ಬರೆಯುವಂತೆ ಅಲೀ (ರ) ಅವರಿಗೆ ಆದೇಶಿಸಿದರು. ಅಲೀ (ರ) ಹಿಂಜರಿದಾಗ ಆ ಕೆಲಸವನ್ನು ಪ್ರವಾದಿ(ಸ) ಸ್ವತಃ ತಮ್ಮ ಕೈಯ್ಯಾರೆ ಮಾಡಿದರು.
ಈ ರೀತಿ 'ಹುದೈಬಿಯಾ ಸಂಧಾನ'ದ ಪ್ರಕ್ರಿಯೆ ಪೂರ್ಣಗೊಂಡಾಗ ಮುಸ್ಲಿಮ್ ಪಾಳಯದಲ್ಲಿ ತೀವ್ರ ಸ್ವರೂಪದ ಅಸಮಾಧಾನವು ಹೊಗೆಯಾಡುತ್ತಿತ್ತು. ಪ್ರವಾದಿವರ್ಯರ ನಿರ್ಧಾರಗಳ ಔಚಿತ್ಯವು ಹೆಚ್ಚಿನ ಅನುಯಾಯಿಗಳಿಗೆ ಅರ್ಥವಾಗಿರಲಿಲ್ಲ. ಅವರ ಅಸಮಾಧಾನದ ಸ್ವರೂಪ ಹೇಗಿತ್ತು ಎಂಬುದನ್ನು, ಆ ವೇಳೆ ಉಮರ್ (ರ) ಮತ್ತು ಅಬೂ ಬಕರ್ (ರ) ಎಂಬ ಪ್ರವಾದಿವರ್ಯರ ಇಬ್ಬರು ಅತ್ಯಂತ ಆಪ್ತ ಸಂಗಾತಿಗಳ ನಡುವೆ ನಡೆದ ಈ ಸಂಭಾಷಣೆಯಿಂದ ಊಹಿಸಬಹುದು:
ಉಮರ್ (ರ) : ಓ ಅಬೂ ಬಕರ್ (ರ) ! ಮುಹಮ್ಮದರು (ಸ) ನಿಜಕ್ಕೂ ಅಲ್ಲಾಹನ ದೂತರಲ್ಲವೇ?
ಅಬೂ ಬಕರ್ (ರ) : ಖಂಡಿತ ಹೌದು.
ಉಮರ್ (ರ) : ನಾವು ಸತ್ಯದ ಮಾರ್ಗದಲ್ಲಿದ್ದೇವೆ ಮತ್ತು ನಮ್ಮ ವಿರೋಧಿಗಳು ಅಸತ್ಯದ ಮಾರ್ಗದಲ್ಲಿದ್ದಾರೆ ಎಂಬುದು ಸತ್ಯವಲ್ಲವೇ? ಹಾಗೆಯೇ, ನಮ್ಮ ಪಾಳಯದಲ್ಲಿದ್ದು ಹತರಾದವರು ಸ್ವರ್ಗಕ್ಕೆ ಹೋಗುವರು ಮತ್ತು ಅವರ ಪಾಳಯದಲ್ಲಿದ್ದು ಹತರಾದವರು ನರಕಕ್ಕೆ ಹೋಗುವರೆಂಬುದು ಸತ್ಯವಲ್ಲವೇ?
ಅಬೂ ಬಕರ್ (ರ) : ಖಂಡಿತ ಹೌದು.
ಉಮರ್ (ರ) : ಹಾಗಾದರೆ ನಾವೇಕೆ ನಮ್ಮ ಧರ್ಮಕ್ಕೆ ಮಾಡಲಾದ ಇಷ್ಟೆಲ್ಲಾ ಅಪಮಾನಗಳನ್ನು ಸಹಿಸಿಕೊಂಡು, ಉಮ್ರಾ ಮಾಡದೆ ಮರಳಿ ಹೋಗಬೇಕು?
ಅಬೂ ಬಕರ್ (ರ) : ಉಮರ್, ಮುಹಮ್ಮದರು(ಸ) ಖಂಡಿತ ಅಲ್ಲಾಹನ ದೂತರು. ಅವರೆಂದೂ ಅಲ್ಲಾಹನ ಆದೇಶವನ್ನು ಮೀರಿ ನಡೆಯುವುದಿಲ್ಲ. ಅಲ್ಲಾಹನೇ ಅವರ ಸಹಾಯಕನು. ನೀವು ಜೀವಂತ ಇರುವಷ್ಟು ಕಾಲ ಅಲ್ಲಾಹನ ಪಾಶವನ್ನು ಭದ್ರವಾಗಿ ಹಿಡಿದುಕೊಳ್ಳಿರಿ. ಅಲ್ಲಾಹನಾಣೆ, ಅವರು ಸತ್ಯದ ಮಾರ್ಗದಲ್ಲಿದ್ದಾರೆ ಮತ್ತು ಅವರು ಅಲ್ಲಾಹನ ದೂತರಾಗಿದ್ದಾರೆ. ನಮ್ಮ ನಾಯಕ ಅಲ್ಲಾಹನ ದೂತರು ಹೌದೆಂದು ನಾನು ಘೋಷಿಸುತ್ತಿದ್ದೇನೆ.
ಮುಂದೆ ಉಮರ್ (ರ), ಪ್ರವಾದಿವರ್ಯರ (ಸ) ಬಳಿ ಹೋಗಿ ತಮ್ಮ ಅದೇ ಮಾತುಗಳನ್ನು ಪುನರಾವರ್ತಿಸಿದರು. ಪ್ರವಾದಿ (ಸ) ವಿಚಲಿತರಾಗದೆ, "ನಿಸ್ಸಂದೇಹವಾಗಿಯೂ ನಾನು ಅಲ್ಲಾಹನ ದೂತ. ನಾನು ಯಾವ ಸ್ಥಿತಿಯಲ್ಲೂ ಅವನ ಆದೇಶವನ್ನು ಮೀರಿ ನಡೆಯುವುದಿಲ್ಲ. ಅವನೇ ನನ್ನ ಸಹಾಯಕ" ಎಂದರು.
ಮುಂದಿನ ದಿನಗಳಲ್ಲಿ ಉಮರ್ (ರ) ಅಂದಿನ ಆ ತಮ್ಮ ವರ್ತನೆಗಾಗಿ ತುಂಬಾ ಪಶ್ಚಾತ್ತಾಪ ಪಟ್ಟರು. ಪಾಪ ಪರಿಹಾರಕ್ಕಾಗಿ ಹಲವಾರು ದಿನ ಉಪವಾಸ ಆಚರಿಸಿದರು, ಬಹಳಷ್ಟು ದಾನಧರ್ಮಗಳನ್ನು ಮಾಡಿದರು. ಹಲವು ಪ್ರಾರ್ಥನೆಗಳನ್ನು ಸಲ್ಲಿಸಿದರು. ತನ್ನಿಂದ ತಪ್ಪಾಯಿತು ಎಂದು ಜನರೊಡನೆಯೂ ಪದೇ ಪದೇ ಹೇಳಿದರು. ಅಲ್ಲಾಹನ ಬಳಿ ದೀನರಾಗಿ ಕ್ಷಮೆ ಯಾಚಿಸಿದರು.
ಈ ವೇಳೆ ಇನ್ನೊಂದು ಘಟನೆ ನಡೆಯಿತು. ಮುಸ್ಲಿಮರ ಜೊತೆ ಮಾತುಕತೆಯಲ್ಲಿ ನಿರತರಾಗಿದ್ದ ಸುಹೈಲ್ ಬಿನ್ ಅಮ್ರ್ ಅವರ ಪುತ್ರ ಅಬೂ ಜಂದಲ್ ಪ್ರವಾದಿವರ್ಯರ ಮುಂದೆ ಹಾಜರಾದರು. "ನಾನು ಇಸ್ಲಾಮ್ ಧರ್ಮವನ್ನು ಸ್ವೀಕರಿಸಿದ್ದಕ್ಕಾಗಿ ಮಕ್ಕದವರು ನನ್ನನ್ನು ಬಂಧನದಲ್ಲಿಟ್ಟು ನನಗೆ ಎಲ್ಲ ಬಗೆಯ ಚಿತ್ರಹಿಂಸೆ ನೀಡಿದ್ದಾರೆ. ಇದೀಗ ಹೇಗೋ ತಪ್ಪಿಸಿಕೊಂಡು ಬಂದಿದ್ದೇನೆ, ನನಗೆ ನೀವು ರಕ್ಷಣೆ ನೀಡಬೇಕು, ಯಾವ ಕಾರಣಕ್ಕೂ ನನ್ನನ್ನು ಮರಳಿ ಮಕ್ಕದವರ ವಶಕ್ಕೆ ಒಪ್ಪಿಸಬಾರದು" ಎಂದು ಮನವಿ ಮಾಡಿದರು. ಅಬೂ ಜಂದಲ್ ರನ್ನು ತಮ್ಮ ಜೊತೆ ಮದೀನಾಗೆ ಕರೆದೊಯ್ಯಲು ಅನುಮತಿಸಬೇಕೆಂದು ಪ್ರವಾದಿ (ಸ) ಸುಹೈಲ್ ಬಳಿ ಕೇಳಿಕೊಂಡರು. ಆದರೆ ಅವರು, ಸಂಧಾನದ ಪ್ರಕಾರ ಅದಕ್ಕೆ ಅವಕಾಶವಿಲ್ಲ ಎಂದು ಬಿಟ್ಟರು. ಆಗ ಪ್ರವಾದಿ (ಸ) ಅಬೂ ಜಂದಲ್ ರನ್ನುದ್ದೇಶಿಸಿ ಸಾಂತ್ವನದ ಮಾತುಗಳನ್ನು ಹೇಳುತ್ತಾ, "ನೀವೀಗ ಸಹನಶೀಲರಾಗಿರಬೇಕು, ಅಲ್ಲಾಹನ ಬಳಿ ನಿಮಗಿರುವ ಪ್ರತಿಫಲವನ್ನು ನಿರೀಕ್ಷಿಸುತ್ತಾ ಸ್ಥಿರಚಿತ್ತ ಮೆರೆಯಬೇಕು, ಶೀಘ್ರದಲ್ಲೀ ಅಲ್ಲಾಹನು ನಿಮಗೂ ನಿಮ್ಮಂತಹ ಇತರ ದುರ್ಬಲ ಸಂಗಾತಿಗಳಿಗೂ ಬಿಡುಗಡೆಯ ದಾರಿ ತೋರಲಿದ್ದಾನೆ. ನಾವೀಗ ಸಂಧಾನವನ್ನು ಪೂರ್ತಿಗೊಳಿಸಿ ಆಗಿದೆ ಮತ್ತು ನಾವು ಸಂಧಾನ ಮುರಿಯುವವರಲ್ಲ." ಎಂದರು. ಮುಸ್ಲಿಮರ ಕಣ್ಣ ಮುಂದೆಯೇ ಶತ್ರು ಪಾಲಯದವರು ಅಬೂ ಜಂದಲ್ ರನ್ನು ಎಳೆದೊಯ್ದರು.
ಇದಾಗಿ, ಪ್ರವಾದಿ (ಸ) ತಮ್ಮ ಅನುಯಾಯಿಗಳೊಡನೆ, 'ಇಹ್ರಾಮ್' ಕಳಚಿ, ಸಾಮಾನ್ಯ ವಸ್ತ್ರ ಧರಿಸಿ, ಇದೇ ಸ್ಥಳದಲ್ಲಿ ಬಲಿಪ್ರಾಣಿಗಳನ್ನು ಬಲಿಯರ್ಪಿಸಿ, ತಲೆಬೋಳಿಸಿ, ಮದೀನಾಗೆ ಮರಳಲು ಸಿದ್ಧತೆ ನಡೆಸಿರಿ ಎಂದು ಆದೇಶಿಸಿದರು. ತೀರಾ ಹತಾಶ ಸ್ಥಿತಿಯಲ್ಲಿದ್ದ ಹೆಚ್ಚಿನ ಅನುಯಾಯಿಗಳ ಪ್ರತಿಕ್ರಿಯೆ ತುಂಬಾ ಮಂದಗತಿಯಲ್ಲಿತ್ತು. ಯಾತ್ರಾ ತಂಡವು ಅದೇ ಸ್ಥಿತಿಯಲ್ಲಿ ಮದೀನಾಗೆ ಮರಳಿತು. ತಂಡವು ಮದೀನಾದಿಂದ ಕೆಲವೇ ಮೈಲು ದೂರ ಇದ್ದಾಗ, ಪ್ರವಾದಿವರ್ಯರಿಗೆ (ಸ) ಪವಿತ್ರ ಕುರ್ ಆನ್ ನ 48ನೇ ಅಧ್ಯಾಯವು ಅನಾವರಣಗೊಂಡಿತು. ಅದರ ಮೊದಲ ವಾಕ್ಯದಲ್ಲೇ "ನಿಸ್ಸಂದೇಹವಾಗಿಯೂ ನಾವು ನಿಮಗೆ ಸ್ಪಷ್ಟ ವಿಜಯವನ್ನು ನೀಡಿದ್ದೇವೆ" ಎಂಬ ಶುಭವಾರ್ತೆ ಇತ್ತು. ಹುದೈಬಿಯಾ ಸಂಧಿಯ ಷರತ್ತುಗಳು ಮೇಲ್ನೋಟಕ್ಕೆ ಮುಸ್ಲಿಮರ ಪಾಲಿಗೆ ಅಪಮಾನಾತ್ಮಕವಾಗಿರುವಂತೆ ಕಂಡರೂ ನಿಜಾರ್ಥದಲ್ಲಿ ಅದು ಅವರಿಗೆ ಮಹಾ ವಿಜಯವೊಂದರ ಹೆಬ್ಬಾಗಿಲಾಗಿತ್ತು. ಪ್ರವಾದಿವರ್ಯರು ಮೆರೆದ ಶಾಂತಿ ನಿಷ್ಠೆ ಮತ್ತು ತೀವ್ರ ಪ್ರಚೋದನೆಗಳ ಮುಂದೆ ಅವರು ತೋರಿದ ಘನತೆ ಮತ್ತು ಸಂಯಮವು ಅವರ ಶತ್ರುಗಳ ದೃಷ್ಟಿಯಲ್ಲೂ ಅವರ ಗೌರವವನ್ನು ಹೆಚ್ಚಿಸಿತು.
2. ಮಕ್ಕಾ ವಿಜಯ : ಅಪಾರ ಸಂಯಮ ಮತ್ತು ಔದಾರ್ಯದ ಸಂಪನ್ನ ದೃಶ್ಯಾವಳಿ
ಪ್ರಸ್ತುತ ಹುದೈಬಿಯ ಸಂಧಾನ ಮುಗಿದು ಎರಡು ವರ್ಷಗಳು ಪೂರ್ತಿಯಾಗುವ ಮುನ್ನವೇ ಮಕ್ಕಾದವರು ಆ ಸಂಧಾನವನ್ನು ಉಲ್ಲಂಘಿಸಿದರು. ಸಂಧಾನ ಪ್ರಕಾರ ಯಾವುದೇ ಜನಾ೦ಗ ಅಥವಾ ಬುಡಕಟ್ಟಿನವರು ಮದೀನಾದ ಮುಸ್ಲಿಮರ ಜೊತೆಗಾಗಾಗಲಿ ಮಕ್ಕಾದವರ ಜೊತೆಗಾಗಲಿ ಒಪ್ಪಂದ ಮಾಡಿಕೊಂಡಿದ್ದರೆ, ಎರಡೂ ಕಡೆಯವರು ಅದನ್ನು ಮಾನ್ಯ ಮಾಡಬೇಕಿತ್ತು. ಬನೂ ಬಕರ್ ಮತ್ತು ಬನೂ ಖುಝಾಆ ಎಂಬೆರಡು ಬುಡಕಟ್ಟಿನವರ ಮಧ್ಯೆ ಬಹುಕಾಲದ ವೈಷಮ್ಯವಿತ್ತು. ಈ ಪೈಕಿ ಬನೂ ಬಕರ್ ನವರು ಮಕ್ಕಾದವರ ಜೊತೆ ಸಂಧಾನ ಮಾಡಿಕೊಂಡಿದ್ದರೆ ಬನೂ ಖುಝಾಆ ದವರು ಮದೀನಾದ ಮುಸ್ಲಿಮರ ಜೊತೆ ಸಂಧಾನವೇರ್ಪಡಿಸಿಕೊಂಡಿದ್ದರು. ಅವರಲ್ಲಿ ಅನೇಕರು ಮುಸ್ಲಿಮರಾಗಿ ಮಾರ್ಪಟ್ಟಿದ್ದರು. ಒಂದು ದಿನ ಇರುಳಲ್ಲಿ ಬನೂ ಬಕರ್ ಕಡೆಯವರು ಹಠಾತ್ತಾಗಿ, ನದಿಯೊಂದರ ಪಕ್ಕದಲ್ಲಿ ಶಿಬಿರಹೂಡಿದ್ದ ಬನೂ ಖುಝಾಆ ದವರ ಮೇಲೆ ಆಕ್ರಮಣ ನಡೆಸಿ ಅವರ ಕೆಲವು ಮಂದಿಯನ್ನು ಕೊಂದು ಬಿಟ್ಟರು. ಇದರ ಬೆನ್ನಿಗೇ ಅವರ ಮಧ್ಯೆ ಘರ್ಷಣೆಗಳ ಸರಣಿಯೊಂದು ಆರಂಭವಾಯಿತು. ಈ ವೇಳೆ ಮಕ್ಕಾದ ಕುರೈಶರು ಬನೂ ಖುಝಾಆದವರಿಗೆ ಶಸ್ತ್ರಾಸ್ತ್ರ ಹಾಗೂ ಕುದುರೆಗಳನ್ನು ಪೂರೈಸುವುದೂ ಸೇರಿದಂತೆ ಎಲ್ಲ ಬಗೆಯ ಸಹಾಯ ನೀಡಿದರು. ಕೆಲವು ಕುರೈಶರಂತೂ ಖುದ್ದಾಗಿ ಯುದ್ಧದಲ್ಲಿ ಪಾಲುಗೊಂಡರು. ಬನೂ ಖುಝಾಆದ ಕೆಲವು ಮಂದಿ ಪವಿತ್ರ ಕಾಬಾದ ಬಳಿಗೆ ಓಡಿ ಹೋಗಿ ಅಲ್ಲಿ ಆಶ್ರಯ ಪಡೆಯಲೆತ್ನಿಸಿದಾಗ, ಕುರೈಶರು ಎಲ್ಲ ಸಾಂಪ್ರದಾಯಿಕ ನಿಯಮಗಳನ್ನು ಉಲ್ಲಂಘಿಸಿ ಅಲ್ಲೇ ಆ ಮಂದಿಯನ್ನು ವಧಿಸಿ ಬಿಟ್ಟರು. ಈ ರೀತಿ, ಮುಸ್ಲಿಮರ ಜೊತೆ ಒಪ್ಪಂದ ಮಾಡಿಕೊಂಡಿರುವ ಒಂದು ಗುಂಪಿನ ವಿರುದ್ಧ ಆಕ್ರಮಣದಲ್ಲಿ ಭಾಗವಹಿಸುವುದು ಮತ್ತು ಸಹಕರಿಸುವುದು ಹುದೈಬಿಯಾ ಸಂಧಿಯ ಸ್ಪಷ್ಟ ಉಲ್ಲಂಘನೆಯಾಗಿತ್ತು. ಬನೂ ಖುಝಾಆದ ಪ್ರತಿನಿಧಿಗಳು ಪ್ರವಾದಿವರ್ಯರ ಬಳಿ ಬಂದು ಈ ಕುರಿತು ದೂರು ಸಲ್ಲಿಸಿ ತಮಗೆ ನ್ಯಾಯ ಒದಗಿಸುವಂತೆ ಕೇಳಿಕೊಂಡರು. ಪ್ರವಾದಿ (ಸ) ಇದಕ್ಕುತ್ತರವಾಗಿ ಒಂದು ನಿಯೋಗವನ್ನು ಮಕ್ಕಾಗೆ ಕಳಿಸಿಕೊಟ್ಟರು. ಅವರಿಗೆ ಎರಡು ಕೆಲಸಗಳನ್ನು ವಹಿಸಿಕೊಡಲಾಗಿತ್ತು.
1. ಬನೂ ಖುಝಾಆದವರ ಎಲ್ಲ ದೂರುಗಳ ಸತ್ಯಾಸತ್ಯ ವೇನೆಂಬುದನ್ನು ಖಾತರಿ ಪಡಿಸಿಕೊಳ್ಳುವುದು.
2. ಅವರ ಆರೋಪಗಳು ನಿಜವಾಗಿದ್ದರೆ, ಕುರೈಶರ ಬಳಿ ಹೋಗಿ, ತಮ್ಮ ತಪ್ಪಿಗಾಗಿ ಬನೂ ಖುಝಾಆದವವರಿಗೆ ಒಪ್ಪಿಗೆಯಾಗುವಂತಹ ಪರಿಹಾರ ಧನ ಪಾವತಿಸಬೇಕು ಮತ್ತು ಬನೂ ಬಕರ್ ಗೆ ನೀಡಿರುವ ಬೆಂಬಲ ಹಿಂದೆಗೆದು ಕೊಳ್ಳಬೇಕು - ಅದಲ್ಲವಾದರೆ ಈ ರೀತಿ ಏಕಪಕ್ಷೀಯವಾಗಿ ಹುದೈಬಿಯ ಸಂಧಿಯನ್ನು ಉಲ್ಲಂಘಿಸಲಿದ್ದಕ್ಕಾಗಿ ನಮ್ಮ ಕಡೆಯಿಂದ ಯುದ್ಧವನ್ನೆದುರಿಸಲು ಸನ್ನದ್ಧರಾಗಬೇಕೆಂದು ತಿಳಿಸುವುದು.
ತನಿಖೆಯಿಂದ, ಅನ್ಯಾಯ ನಡೆದಿರುವುದು ಖಚಿತವಾಯಿತು. ಕುರೈಶರಿಗೆ ತಲುಪಿಸಬೇಕಾಗಿದ್ದ ಸಂದೇಶವನ್ನೂ ತಲುಪಿಸಲಾಯಿತು. ಆದರೆ ಅವರು ಯಾವುದೇ ಪರಿಹಾರ ಕ್ರಮಕ್ಕೆ ಒಪ್ಪದೇ ಇರುವ ಮೂಲಕ ಮತ್ತೆ ತಮ್ಮ ಉದ್ಧಟತನ ಮೆರೆದರು. ಈ ಸಂದೇಶ ಪ್ರವಾದಿವರ್ಯರಿಗೆ(ಸ) ತಲುಪಿದೊಡನೆ ಅವರು ತಮ್ಮ ಸಂಗಾತಿಗಳ ಜೊತೆ ಸಮಾಲೋಚಿಸಿದರು. ಹತ್ತು ಸಾವಿರ ಮಂದಿಯ ಸೇನೆಯೊಂದಿಗೆ ಮಕ್ಕಾವನ್ನು ಪ್ರವೇಶಿಸಬೇಕೆಂದು ನಿರ್ಧಾರವಾಯಿತು. ಸಿದ್ಧತೆಗಳೂ ಆರಂಭವಾದವು. ಮುಸ್ಲಿಮರು ಕಠಿಣ ಕ್ರಮವೊಂದಕ್ಕೆ ಸಿದ್ಧರಾಗುತ್ತಿದ್ದಾರೆ ಎಂಬ ವಾರ್ತೆ ಮಕ್ಕಾದ ನಾಯಕರಿಗೆ ತಲುಪಿದಾಗ ಅವರು ಬೆಚ್ಚಿ ಬಿದ್ದರು. ಅವರ ಉದ್ಧಟತನವೆಲ್ಲಾ ಕರಗಿ ಹೋಯಿತು. ಅವರು ತಮ್ಮ ಪ್ರಮುಖ ನೇತಾರ ಅಬೂ ಸುಫ್ಯಾನ್ ರನ್ನು ಪ್ರವಾದಿಯ ಜೊತೆ ಮಾತುಕತೆಗಾಗಿ ಕಳಿಸಿಕೊಟ್ಟರು. ಮದೀನಾದಲ್ಲಿ ಪ್ರವಾದಿವರ್ಯ(ಸ)ರನ್ನು ಭೇಟಿಯಾದ ಅಬೂ ಸುಫ್ಯಾನ್ "ಹುದೈಬಿಯ ಸಂಧಾನವನ್ನು ನವೀಕರಿಸಿ, ಯುದ್ಧವಿರಾಮದ ಅವಧಿಯನ್ನು ವಿಸ್ತರಿಸಿರಿ" ಎಂದು ಮನವಿ ಮಾಡಿದರು. "ಅಬೂ ಸುಫ್ಯಾನ್, ನೀವು ಕೇವಲ ಇಷ್ಟನ್ನು ಹೇಳಲು ನಮ್ಮ ಬಳಿಗೆ ಬಂದಿರುವಿರಾ? ನಾವಂತೂ ಹುದೈಬಿಯ ಸಂಧಿಯ ಎಲ್ಲ ನಿಬಂಧನೆಗಳನ್ನೂ ಕಟ್ಟುನಿಟ್ಟಾಗಿ ಪಾಲಿಸುತ್ತಲೇ ಇದ್ದೇವಲ್ಲಾ ! ನಿಮ್ಮ ಕಡೆಯಿಂದ ಉಲ್ಲಂಘನೆಯೇನಾದರೂ ಆಗಿದೆಯೇ?" ಎಂದು ಪ್ರವಾದಿ (ಸ) ವಿಚಾರಿಸಿದರು. ಈ ಪ್ರಶ್ನೆಯಿಂದ ಅಬೂ ಸುಫ್ಯಾನ್ ತಬ್ಬಿಬ್ಬಾದರು. ಅವರ ಬಳಿ ತಮ್ಮ ಪಕ್ಷವನ್ನು ಸಮರ್ಥಿಸಬಲ್ಲ ಯಾವುದೇ ನೈತಿಕ ಅಥವಾ ತಾರ್ಕಿಕ ವಾದವು ಉಳಿದಿರಲಿಲ್ಲ. ಆದರೆ, ತಮ್ಮ ಕಡೆಯಿಂದ ತಪ್ಪು ಸಂಭವಿಸಿದೆ ಎಂಬುದನ್ನು ಒಪ್ಪಲಿಕ್ಕೂ ಅವರು ಸಿದ್ಧರಿರಲಿಲ್ಲ. ಆದ್ದರಿಂದ ಅವರು ಪ್ರವಾದಿಯ ಬಳಿಯೂ ಅವರ ಪ್ರಮುಖ ಅನುಯಾಯಿಗಳ ಬಳಿಯೂ "ಹುದೈಬಿಯ ಸಂಧಾನವನ್ನು ನವೀಕರಿಸಿ, ಯುದ್ಧವಿರಾಮದ ಅವಧಿಯನ್ನು ವಿಸ್ತರಿಸಿರಿ" ಎಂಬ ಮನವಿಯನ್ನಷ್ಟೇ ಪುನರಾವರ್ತಿಸುತ್ತಲಿದ್ದರು. ಕೊನೆಗೆ ಯಾವುದೇ ಮುನ್ನಡೆ ಸಾಧಿಸಲಾಗದೆ ಮಾತುಕತೆ ಕೈಬಿಟ್ಟು ಅವರು ಮರಳಿ ಮಕ್ಕಾಗೆ ಹೋದರು.
ಶೀಘ್ರವೇ ಪ್ರವಾದಿ (ಸ), ಸದ್ದುಗದ್ದಲವಿಲ್ಲದೆ, ತಮ್ಮ ಸುಮಾರು ಹತ್ತು ಸಾವಿರ ಅನುಯಾಯಿಗಳೊಂದಿಗೆ ಮಕ್ಕಾ ದ ಕಡೆಗೆ ಪ್ರಯಾಣ ಹೊರಟರು. ಆ ರೀತಿ ಹತ್ತು ಸಾವಿರ ಯೋಧರನ್ನು ಸೇರಿಸಲು ಅವರಿಗೇನೂ ಕಷ್ಟವಾಗಲಿಲ್ಲ. ಏಕೆಂದರೆ, ಆ ವೇಳೆಗಾಗಲೇ ಮದೀನಾ ಮತ್ತು ಮಕ್ಕಾದ ಆಸುಪಾಸಿನ ಹೆಚ್ಚಿನೆಲ್ಲಾ ಬುಡಕಟ್ಟುಗಳ ಜನರು ಇಸ್ಲಾಮ್ ಧರ್ಮವನ್ನು ಸ್ವೀಕರಿದ್ದರು. ಇತರ ಅನೇಕರು ಪ್ರವಾದಿಯ (ಸ) ಜೊತೆ ಶಾಂತಿ ಒಪ್ಪಂದಗಳನ್ನು ಮಾಡಿಕೊಂಡಿದ್ದರು. ಪ್ರವಾದಿಯ ಕಡೆಯಿಂದ ಸೂಚನೆ ಸಿಕ್ಕೊಡನೆ ಅವರೆಲ್ಲ ತಮ್ಮ ಯೋಧರನ್ನು ಕಳಿಸಿಕೊಟ್ಟಿದ್ದರು. ಈ ರೀತಿ ಪ್ರವಾದಿಯ ನೇತೃತ್ವದ ಸೇನೆಯು ಹೆಚ್ಚಿನೆಲ್ಲಾ ಅರಬರನ್ನು ಪ್ರತಿನಿಧಿಸುವ ಸೇನೆಯಾಗಿತ್ತು.
ಹಿಜರಿ 8ನೇ ವರ್ಷ ರಮದಾನ್ ಒಂದರಂದು ಹೊರಟವರು ಎಂಟು ದಿನಗಳ ಪ್ರಯಾಣದ ಬಳಿಕ ಮಕ್ಕಾದ ಸಮೀಪ ಮರ್ರ್ ಅಲ್ ಝಹ್ರಾನ್ ಎಂಬಲ್ಲಿ ಶಿಬಿರ ಹೂಡಿದರು. ಅಲ್ಲಿ ರಾತ್ರಿ ಹೊತ್ತು ಪ್ರವಾದಿ (ಸ) ತಮ್ಮ ಪ್ರತಿಯೊಬ್ಬ ಅನುಯಾಯಿಯೊಡನೆ, ದೀವಟಿಗೆ ಹೊತ್ತಿಸಲು ಹೇಳಿದರು. ಹತ್ತು ಸಾವಿರ ಮಂದಿ ದೀವಟಿಗೆ ಹೊತ್ತಿಸಿದಾಗ ಆಪ್ರದೇಶವೆಲ್ಲ ಹಗಲಿನಂತೆ ಬೆಳಗಿ ಬಿಟ್ಟಿತು. ಈ ದೃಶ್ಯವನ್ನು ದೂರದ ಮಕ್ಕಾದಲ್ಲಿನ ಬೆಟ್ಟಗಳ ಮೇಲಿಂದ ನೋಡಿದವರು, ಮುಸ್ಲಿಮರ ಸಂಖ್ಯಾಬಲ ಕಂಡು ನಡುಗಿಬಿಟ್ಟರು. ಬಹುಬೇಗನೆ ಊರೆಲ್ಲಾ ಸುದ್ದಿ ಹಬ್ಬಿತು. ಯುದ್ಧ, ಆಕ್ರಮಣ, ಘರ್ಷಣೆ ಇತ್ಯಾದಿಗಳಲ್ಲಿ ಆಸಕ್ತರಾಗಿದ್ದವರೆಲ್ಲ ತಮ್ಮ ಜೀವ ಉಳಿಸಿಕೊಳ್ಳುವುದು ಹೇಗೆಂದು ಚಿಂತಿತರಾದರು. ಅವರು ಯಾವ ರೀತಿ ತರ್ಕಿಸಿದರೂ, ಕೆಲವೇ ವರ್ಷಗಳ ಹಿಂದೆ ತಾವು ಖಡ್ಗದ ಬಲದಿಂದ ನಂದಿಸಲು ಬಯಸಿದ್ದ ಪುಟ್ಟ ದೀಪವು ಇಷ್ಟು ಬೇಗನೆ ಈ ರೀತಿ ಬೆಳಕಿನ ಸಾಗರವಾಗಿ ಮಾರ್ಪಟ್ಟಿದ್ದು ಹೇಗೆ ಎಂಬುದು ಅವರಿಗೆ ಅರ್ಥವಾಗುತ್ತಿರಲಿಲ್ಲ. ನಾಳೆ ಆ ಸೇನೆ ಮಕ್ಕಾ ನಗರವನ್ನು ಪ್ರವೇಶಿಸಿದಾಗ ಹಿಂದೆ ಅಸಹಾಯಕ ಮುಸ್ಲಿಮರ ವಿರುದ್ಧ ನಡೆಸಲಾದ ಅನ್ಯಾಯ ಅಕ್ರಮಗಳಿಗೆಲ್ಲಾ ಪ್ರತೀಕಾರ ನಡೆಯುವುದು ಖಚಿತ, ಸಾಮೂಹಿಕ ವಧೆ ನಡೆಯುವುದು ಖಚಿತ, ರಕ್ತದ ಹೊಳೆ ಹರಿಯುವುದನ್ನು ತಡೆಯಲು ನಾಳೆ ಯಾರಿಗೂ ಸಾಧ್ಯವಾಗದು - ಎಂದಿತ್ಯಾದಿಯಾಗಿ ಮಕ್ಕಾದ ಜನ ಚಿಂತಿಸತೊಡಗಿದ್ದರು. ಎಲ್ಲೆಡೆ ಭಯ, ಆತಂಕ ಮತ್ತು ಹತಾಶೆಯ ವಾತಾವರಣವಿತ್ತು.
ಪ್ರವಾದಿ (ಸ) ಮತ್ತು ಅವರ ಅನುಯಾಯಿಗಳು ಮಕ್ಕಾ ಪ್ರವೇಶಿಸಲಿದ್ದ ದಿನದ ಹಿಂದಿನ ರಾತ್ರಿ ಖುರೈಶರ ನಾಯಕ ಅಬೂ ಸುಫ್ಯಾನ್ ಮುಸ್ಲಿಮರ ಶಿಬಿರಗಳಿದ್ದ ಸ್ಥಳಕ್ಕೆ ಬಂದರು. ಕೆಲವೇ ದಿನಗಳ ಹಿಂದೆ ಮುಸ್ಲಿಮರ ಪಾಳಯವನ್ನು ಸೇರಿದ್ದ ಪ್ರವಾದಿವರ್ಯರ(ಸ) ಚಿಕ್ಕಪ್ಪ ಅಬ್ಬಾಸ್(ರ) ಜೊತೆ ಮಾತುಕತೆ ನಡೆಸಿ, ಅವರ ಆಶ್ರಯದಲ್ಲಿ ಪ್ರವಾದಿಯನ್ನು ಭೇಟಿಯಾಗುವ ಇಚ್ಛೆ ಪ್ರಕಟಿಸಿದರು. ಅಲ್ಲಿ ಪಥಸಂಚಲನ ನಡೆಸುತ್ತಿದ್ದ ಮುಸ್ಲಿಮ್ ಸೇನೆಯ ವಿವಿಧ ತುಕಡಿಗಳನ್ನು ಅವರಿಗೆ ಅಬ್ಬಾಸ್ (ರ) ಪರಿಚಯಿಸಿದರು. ಮರು ದಿನ ಅಬ್ಬಾಸ್ (ರ) ರ ಜೊತೆ ಅಬೂಸುಫ್ಯಾನ್ ಪ್ರವಾದಿವರ್ಯರ ಸಮಕ್ಷಮ ಹಾಜರಾಗಿ ಇಸ್ಲಾಮ್ ಧರ್ಮ ಸ್ವೀಕರಿಸಿದರು.
ಸ್ವತಃ ಪ್ರವಾದಿವರ್ಯರು ಇದ್ದ ತುಕಡಿಯು ಹಾದುಹೋದಾಗ ಆ ತುಕಡಿಯನ್ನು ಸಂಯೋಜಿಸಲಾಗಿದ್ದ ವಿಧಾನ, ಅದರಲ್ಲಿದ್ದ ಯೋಧರ ಸಂಖ್ಯೆ, ಅವರ ಶಿಸ್ತು ಮತ್ತು ಪರಸ್ಪರ ನಿರ್ದಿಷ್ಟ ಅಂತರ ಕಾದುಕೊಂಡು ಅವರು ನಡೆಯುತ್ತಿದ್ದ ವೈಖರಿ ಕಂಡು ಅಬೂಸುಫ್ಯಾನ್, "ಅಬ್ಬಾಸ್, ಈ ಪಡೆಯನ್ನು ಸೋಲಿಸಲು ಸಾಧ್ಯವಿಲ್ಲ. ನಿಮ್ಮ ತಮ್ಮನ ಪುತ್ರನ ಸಾಮ್ರಾಜ್ಯ ನಿಜಕ್ಕೂ ಬಹಳಷ್ಟು ದೊಡ್ಡದಾಗಿ ಬೆಳೆದಿದೆ" ಎಂದರು. ಇದಕ್ಕುತ್ತರವಾಗಿ ಅಬ್ಬಾಸ್(ರ) ಹೇಳಿದರು: "ಅದು ಸಾಮ್ರಾಜ್ಯವಲ್ಲ, ಪ್ರವಾದಿತ್ವ. ಮುಹಮ್ಮದ್ (ಸ) ರ ಶಕ್ತಿ ಇರುವುದು ಅವರಿಗೆ ನೀಡಲಾಗಿರುವ ಪ್ರವಾದಿತ್ವದಲ್ಲೇ ಹೊರತು, ಹೊರಗೆ ಕಾಣುವ ವೈಭವದಲ್ಲಿ ಅಲ್ಲ. "
ಈ ಮಧ್ಯೆ ಪ್ರವಾದಿಯ ನಂಬಿಗಸ್ಥ ಸಂಗಾತಿಗಳಲ್ಲೊಬ್ಬರಾಗಿದ್ದ ಸಅದ್ ಬಿನ್ ಉಬಾದರ ನೇತೃತ್ವದಲ್ಲಿ ಒಂದು ದೊಡ್ಡ ಸೇನಾ ತುಕಡಿ ಅಬೂ ಸೂಫ್ಯಾನ್ ರ ಮುಂದಿಂದ ಹಾದು ಹೋಯಿತು. ಸಅದ್ ಬಿನ್ ಉಬಾದ, ಅಬೂ ಸುಫ್ಯಾನ್ ರನ್ನು ಹೆಸರೆತ್ತಿ ಕರೆದು "ಇಂದಿನ ದಿನ ರಕ್ತಪಾತದ ದಿನವಾಗಿರುವುದು ಮತ್ತು ಈ ದಿನ ಕುರೈಶರ ಪಾಲಿಗೆ ಸೋಲು ಮತ್ತು ಅಪಮಾನದ ದಿನವಾಗಿರುವುದು" ಎಂದರು. ಈ ವಿಷಯವನ್ನು ಅಬೂ ಸುಫ್ಯಾನ್ ಪ್ರವಾದಿಯ ಬಳಿ ಪ್ರಸ್ತಾಪಿಸಿದರು. ಪ್ರವಾದಿವರ್ಯರು ಎಲ್ಲ ಯೋಧರನ್ನುದ್ದೇಶಿಸಿ "ಇಂದಿನ ದಿನ ಕಾರುಣ್ಯದ ದಿನವಾಗಿದೆ ಮತ್ತು ಇದು ಕುರೈಶರ ಪಾಲಿಗೆ ಗೌರವದ ದಿನವಾಗಿದೆ" ಎಂದು ಘೋಷಿಸಿದರು. ಆ ಬಳಿಕ ಅವರು ಸಅದ್ ಬಿನ್ ಉಬಾದರನ್ನು ಕರೆದು ಅವರ ಕೈಯಲ್ಲಿದ್ದ ಧ್ವಜವನ್ನು ಕಿತ್ತುಕೊಂಡು ಸಅದ್ ಅವರ ಪುತ್ರನ ಕೈಗೆ ಕೊಟ್ಟರು. ಅದು ರಕ್ತಪಾತದ ಮಾತನ್ನು ಆಡಿದ್ದಕ್ಕಾಗಿ ಸಅದ್ ರಿಗೆ ಪ್ರವಾದಿ ನೀಡಿದ ಶಿಕ್ಷಯಾಗಿತ್ತು. ಆ ಬಳಿಕ ಪ್ರವಾದಿ (ಸ) ಅಬೂ ಸುಫ್ಯಾನ್ ರೊಡನೆ, "ನೀವು ಈಗಲೇ ಮಕ್ಕಾದೊಳಗೆ ಹೋಗಿ. ಇಂದು ನಾವು ಮಕ್ಕಾಗೆ ಬರುತ್ತಿದ್ದೇವೆ. ನಾವು ವಿನಾಶ ಮೆರೆಯುವುದಕ್ಕಾಗಿ ಬರುತ್ತಿಲ್ಲ. ಶಾಂತಿಯುತವಾಗಿ ಬರುತ್ತಿದ್ದೇವೆ ಮತ್ತು ಊರವರಿಗೆ ನಮ್ಮಿಂದ ಯಾವ ಅಪಾಯವೂ ಇಲ್ಲ ಎಂಬುದನ್ನು ಊರವರಿಗೆಲ್ಲಾ ತಿಳಿಸಿ" ಎಂದರು. ಈ ಈರೀತಿ ಸತತ 20 ವರ್ಷಗಳ ಕಾಲ ಪ್ರವಾದಿವರ್ಯರಿಗೂ ಮುಸ್ಲಿಮ್ ಸಮಾಜಕ್ಕೂ ಎಲ್ಲ ಬಗೆಯ ಹಿಂಸೆ ಹಾಗೂ ಕಿರುಕುಳ ನೀಡಿದ್ದ ಅಬೂ ಸುಫ್ಯಾನ್ ಪ್ರವಾದಿಯ ಕಡೆಯಿಂದ ಶಾಂತಿಯ ಆಶ್ವಾಸನೆ ಹೊತ್ತು ಮಕ್ಕಾಗೆ ಮರಳಿದರು.
ಆ ಬಳಿಕ ಪ್ರವಾದಿ (ಸ) ತಮ್ಮ ಯೋಧರಿಗೆ, "ನಿಮ್ಮ ಮೇಲೆ ಆಕ್ರಮಣ ಮಾಡದ ಯಾರ ಮೇಲೂ ಆಕ್ರಮಣ ಮಾಡಬೇಡಿ. ಮಕ್ಕಳು, ಮಹಿಳೆಯರು ಮತ್ತು ವೃದ್ಧರ ಮೇಲೆ ಕೈ ಎತ್ತಬೇಡಿ. ಯಾರು ಪವಿತ್ರ ಕಾಬಾ ಮತ್ತದರ ಆಸುಪಾಸಿನಲ್ಲಿ ಆಶ್ರಯ ಪಡೆಯುವರೋ ಅವರೆಲ್ಲ ಸಂಪೂರ್ಣ ಸುರಕ್ಷಿತರು. ಯಾರು ತಮ್ಮ ಮನೆಗಳೊಳಗೆ ಉಳಿಯುವರೋ ಅವರೆಲ್ಲಾ ಸುರಕ್ಷಿತರು ಮತ್ತು ಯಾರೆಲ್ಲಾ ಅಬೂ ಸುಫ್ಯಾನ್ ರ ಮನೆಯಲ್ಲಿ ಆಶ್ರಯ ಪಡೆಯುವರೋ ಅವರೆಲ್ಲಾ ಸುರಕ್ಷಿತರು" ಎಂದು ಆದೇಶಿದರು. ಒಂದು ಕಾಲದಲ್ಲಿ ಪ್ರವಾದಿವರ್ಯರ (ಸ) ಹತ್ಯೆಗಾಗಿ ಸಂಚು ನಡೆಸಿದ್ದ ಅಬೂ ಸುಫ್ಯಾನ್ ರಿಗೆ ಪ್ರವಾದಿ ನೀಡಿದ ಈ ಗೌರವದ ಸ್ಥಾನವನ್ನು ಕಂಡು ಹಲವರು ಚಕಿತರಾದರು.
ಮುಸ್ಲಿಮರ ಯಾತ್ರಾ ತಂಡವು ವಿವಿಧ ವಿಭಾಗಗಳಾಗಿ, ವಿವಿಧ ದಾರಿಗಳ ಮೂಲಕ ಮಕ್ಕಾ ನಗರವನ್ನು ಪ್ರವೇಶಿಸಿತು. ಆ ಪೈಕಿ ಖಾಲಿದ್ ಬಿನ್ ವಲೀದ್ ನೇತೃತ್ವದಲ್ಲಿದ್ದ ವಿಭಾಗದ ಮೇಲೆ ಇಕ್ರಿಮಾ ಬಿನ್ ಅಬೂ ಜಹಲ್ ನೇತೃತ್ವದಲ್ಲಿ ಶಸ್ತ್ರ ಸಜ್ಜಿತ ಗುಂಪೊಂದು ಆಕ್ರಮಣ ಮಾಡಿತು. ಆರಂಭದಲ್ಲಿ ಖಾಲಿದ್, ಪ್ರವಾದಿವರ್ಯರ ಆದೇಶದಂತೆ ರಕ್ತಪಾತ ತಪ್ಪಿಸಲು, ತಮ್ಮ ಯೋಧರೊಡನೆ ಸಂಯಮ ಪಾಲಿಸಲು ಹೇಳಿದರು. ಆದರೆ ಆಕ್ರಮಣ ತೀವ್ರವಾದಾಗ ಪ್ರತಿಕ್ರಮಕ್ಕೆ ಅನುಮತಿ ನೀಡಿದರು. ಕೊನೆಗೆ ಆಕ್ರಣಕಾರರು ಸೋತು ಪಲಾಯನ ಮಾಡಿದರು. ಅಲ್ಲಿ ನಡೆದ ಘರ್ಷಣೆಯಲ್ಲಿ ಮುಸ್ಲಿಮರ ಪಾಳಯದ ಇಬ್ಬರು ಮತ್ತು ಇಕ್ರಿಮಾರ ದಂಡಿನ 13 ಮಂದಿ ಹತರಾದರು. ಉಳಿದಂತೆ ಮುಸ್ಲಿಮರ ಮಕ್ಕಾ ಪ್ರವೇಶದ ಪ್ರಕ್ರಿಯೆ ಸಂಪೂರ್ಣ ಶಾಂತಿಯುತವಾಗಿತ್ತು.
ಪ್ರವಾದಿ (ಸ) 'ಖಸ್ವ' ಎಂಬ ತಮ್ಮ ಒಂಟೆಯ ಮೇಲೆ ಸವಾರರಾಗಿ ಮಕ್ಕಾ ನಗರವನ್ನು ಪ್ರವೇಶಿಸಿದರು. 8 ವರ್ಷಗಳ ಹಿಂದೆ, ತಮ್ಮ ಹತ್ಯೆಗಾಗಿ ಸಂಚು ಹೂಡಿ ತಮ್ಮ ಮನೆಯನ್ನು ಸುತ್ತುವರಿದು ನಿಂತಿದ್ದ ಶಸ್ತ್ರ ಸಜ್ಜಿತ ವಿರೋಧಿಗಳ ಕಣ್ಣುತಪ್ಪಿಸಿ, ಇರುಳ ಕತ್ತಲಲ್ಲಿ, ತೀರಾ ಅಸಹಾಯಕ ಸನ್ನಿವೇಶದಲ್ಲಿ ತಮ್ಮ ಪ್ರೀತಿಯ ನಾಡು ಮಕ್ಕಾವನ್ನು ತೊರೆದು ಗುಪ್ತವಾಗಿ ಮದೀನಾಗೆ ವಲಸೆ ಹೋಗಿದ್ದ ಪ್ರವಾದಿ, ಇಂದು ಅಷ್ಟೊ೦ದು ದೊಡ್ಡ ತಂಡದ ನೇತೃತ್ವ ವಹಿಸಿ ವಿಜಯಿಯಾಗಿ ಮಕ್ಕಾಗೆ ಮರಳುತ್ತಿರುವುದನ್ನು ಸಾವಿರಾರು ಜನ ವೀಕ್ಷಿಸುತ್ತಿದ್ದರು. ಆದರೆ ಪ್ರವಾದಿ (ಸ) ವಿನಯದಿಂದ ತಲೆ ತಗ್ಗಿಸಿದ್ದರು. ಅವರು ಪದೇ ಪದೇ ಅಲ್ಲಾಹನನ್ನು ಸ್ತುತಿಸುತ್ತಿದ್ದರು.
ಮುಂದೆ ಪ್ರವಾದಿ (ಸ) ತಮ್ಮ ಮುಂದೆ ವಿನಯಶೀಲರಾಗಿ ನಿಂತಿದ್ದ ಮಕ್ಕಾದವರೊಡನೆ "ನೀವಿಂದು ನನ್ನಿಂದ ಏನನ್ನು ನಿರೀಕ್ಷಿಸುತ್ತೀರಿ?" ಎಂದು ವಿಚಾರಿಸಿದರು. ಆಗ ಆ ಜನರು "ನೀವು ನಮಗೆ ಹಿತವನ್ನೇ ಮಾಡುವಿರಿ, ಏಕೆಂದರೆ ನೀವು ನಮ್ಮ ಗೌರವಾನ್ವಿತ ಸಹೋದರ, ಗೌರವಾನ್ವಿತರಾಗಿದ್ದ ಅಬ್ದುಲ್ಲಾಹ್ ರ ಪುತ್ರ ಮತ್ತು ಗೌರವಾನ್ವಿತರಾಗಿದ್ದ ಅಬ್ದುಲ್ ಮುತ್ತಲಿಬ್ ರ ಮೊಮ್ಮಗ" ಎಂದರು.
ಪ್ರವಾದಿ (ಸ) "ಅಂದು ನನ್ನ ಸಹೋದರ ಯೂಸುಫರು, ತಮ್ಮ ಸಹೋದರರಿಗೆ ಹೇಳಿದ್ದನ್ನೇ ಇಂದು ನಾನು ನಿಮಗೆ ಹೇಳುತ್ತಿದ್ದೇನೆ" ಎನ್ನುತ್ತಾ ಆ ಕುರಿತು ಕುರ್ ಆನ್ ನಲ್ಲಿರುವ ಯೂಸುಫ್ ರ ಮಾತನ್ನೇ ಪುನರಾವರ್ತಿಸಿದರು: "ಇಂದು ನಿಮ್ಮ ಮೇಲೆ ಯಾವ ಆರೋಪವೂ ಇಲ್ಲ. ಅಲ್ಲಾಹನು ನಿಮ್ಮನ್ನು ಕ್ಷಮಿಸಲಿ. ಅವನು ಅತ್ಯಧಿಕ ಕ್ಷಮಿಸುವವನಾಗಿದ್ದಾನೆ." (12:92) ಕೊನೆಗೆ, "ಹೋಗಿರಿ, ನೀವೆಲ್ಲರೂ ದೋಷಮುಕ್ತರು" ಎಂದು ಘೋಷಿಸಿದರು.
ಆ ಬಳಿಕ ಜನರು ತಂಡೋಪತಂಡಗಳಾಗಿ ಬಂದು ಪ್ರವಾದಿವರ್ಯರನ್ನು ಭೇಟಿಯಾಗಲು ಬರಲಾರಂಭಿಸಿದರು. ಅವರಲ್ಲಿ, ಅಗಲಿದ್ದ ಬಂಧುಗಳು, ಹಳೆಯ ನೆರೆಯವರು, ಬಾಲ್ಯ ಮತ್ತು ತಾರುಣ್ಯಕಾಲದ ಮಿತ್ರರು, ಮಾತ್ರವಲ್ಲ, ಪ್ರವಾದಿವರ್ಯರು ಮತ್ತವರ ಅನುಯಾಯಿಗಳಿಗೆ ಎಲ್ಲ ಬಗೆಯ ಹಿಂಸೆ ಕಿರುಕುಳ ನೀಡಿದ್ದ, ಅಪಮಾನಿಸಿದ್ದ , ಕೊಲೆಗೆ ಸಂಚು ನಡೆಸಿದ್ದ, ಪ್ರವಾದಿಯ ಆಪ್ತರನ್ನು ಕೊಂದಿದ್ದ ಜನರೂ ಇದ್ದರು. ಹೆಚ್ಚಿನವರು ಇಸ್ಲಾಮ್ ಧರ್ಮದ ಮೇಲೆ ತಮ್ಮ ನಂಬಿಕೆಯನ್ನು ಪ್ರಕಟಿಸಿ ಅಧಿಕೃತವಾಗಿ ತಾವು ಮುಸ್ಲಿಮರಾಗಿರುವುದಾಗಿ ಘೋಷಿಸಿದರು. ನಿಜವಾಗಿ ಮಕ್ಕಾದವರೆಲ್ಲಾ ಇಸ್ಲಾಮ್ ಧ್ರಮದ ವಿರೋಧಿಗಳಾಗಿರಲಿಲ್ಲ. ಅವರಲ್ಲಿ ಕಟ್ಟಾ ವಿರೋಧಿಗಳ ಸಂಖ್ಯೆ ತೀರಾ ಸೀಮಿತವಾಗಿತ್ತು. ಹೆಚ್ಚಿನವರಿಗೆ ಕುರ್ ಆನ್ ದೇವಗ್ರಂಥವೆಂಬ ಹಾಗೂ ಮುಹಮ್ಮದ್ (ಸ) ಅಲ್ಲಾಹನ ದೂತರೆಂಬ ನಂಬಿಕೆ ಇತ್ತು. ಪ್ರವಾದಿವರ್ಯರು ಬೋಧಿಸುತ್ತಿದ್ದ ಏಕದೇವತ್ವವೇ ಈ ಹಿಂದೆ ತಮ್ಮಾ ಮುತ್ತಾತ ಇಬ್ರಾಹೀಮರು ಮತ್ತು ಅನಂತರ ಬಂಡ ದೇವದೂತರೆಲ್ಲಾ ಬೋಧಿಸಿದ ಪರಮ ಸತ್ಯವೆಂಬುದು ಅವರಿಗೆ ಮನವರಿಕೆಯಾಗಿತ್ತು. ಆದರೆ ವಿವಿಧ ಬಗೆಯ ಪೂರ್ವಗ್ರಹ, ಪ್ರತಿಷ್ಠೆ, ಅಂಜಿಕೆ, ಹಿಂಜರಿಕೆ ಇತ್ಯಾದಿಗಳಿಂದಾಗಿ ಅವರು ಅಧಿಕೃತವಾಗಿ ಈ ಧರ್ಮವನ್ನು ಸ್ವೀಕರಿಸಿರಲಿಲ್ಲ. ಇದೀಗ ಎಲ್ಲವೂ ಅನುಕೂಲಕರವಾದಾಗ ಅವರು ತೊಡೋಪತಂಡಗಳಾಗಿ ಬಂದು ಸತ್ಯಧರ್ಮವನ್ನು ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಕಾಬಾದ ಬಾಗಿಲ ಬಳಿ ನಿಂತು, ನೆರೆದವರನ್ನುದ್ದೇಶಿಸಿ ಮಾಡಿದ ತಮ್ಮ ಭಾಷಣದಲ್ಲಿ ಪ್ರವಾದಿ (ಸ) ಹೇಳಿದ ಕೆಲವು ಮಾತುಗಳು:
"ಅಲ್ಲಾಹನ ಹೊರತು ಯಾರೂ ಪೂಜಾರ್ಹರಲ್ಲ, ಅವನಿಗೆ ಯಾರೂ ಪಾಲುದಾರರಿಲ್ಲ. ಅವನು ತನ್ನ ವಾಗ್ದಾನವನ್ನು ಪೂರ್ಣಗೊಳಿಸಿದ್ದಾನೆ. ಅವನು ತನ್ನ ದಾಸನಿಗೆ ನೆರವಾಗಿದ್ದಾನೆ. ಆತನ ವಿರುದ್ಧ ಒಂದಾಗಿದ್ದ ಶತ್ರುಗಳನ್ನು ನಿರ್ನಾಮಗೊಳಿಸಿದ್ದಾನೆ. ಜಾಹಿಲಿಯ್ಯ (ಪ್ರವಾದಿತ್ವಕ್ಕಿಂತ ಹಿಂದಿನ ಅಜ್ಞಾನದ ಕಾಲ) ಕಾಲದ ದೊಡ್ಡಸ್ತಿಕೆ, ಮೇಲ್ಮೆ, ಪ್ರತಿಷ್ಠೆ, ಕಲಹ, ವೈಮನಸ್ಯ ಇತ್ಯಾದಿ ಎಲ್ಲವನ್ನೂ ಇಂದು ರದ್ದುಗೊಳಿಸಲಾಗಿದೆ. ಮಾನವರೆಲ್ಲರನ್ನೂ ಆದಮ್ ರ ಮೂಲಕ ಸೃಷ್ಟಿಸಲಾಗಿದೆ ಮತ್ತು ಆದಮ್ ರನ್ನು ಆವೆ ಮಣ್ಣಿನಿಂದ ಸೃಷ್ಟಿಸಲಾಗಿತ್ತು".
ತರುವಾಯ ಅವರು ಕುರ್ ಆನ್ ನ ಈ ವಚನವನ್ನು ಓದಿದರು:
"ಮಾನವರೇ, ಖಂಡಿತವಾಗಿಯೂ ನಾವು ನಿಮ್ಮೆಲ್ಲರನ್ನೂ ಒಬ್ಬ ಪುರುಷ ಹಾಗೂ ಒಬ್ಬ ಸ್ತ್ರೀಯಿಂದ ಸಷ್ಟಿಸಿರುವೆವು. ತರುವಾಯ, ನೀವು ಪರಸ್ಪರ ಗುರುತಿಸುವಂತಾಗಲು ನಿಮ್ಮನ್ನು (ವಿವಿಧ) ಜನಾಂಗಗಳಾಗಿ ಹಾಗೂ ಪಂಗಡಗಳಾಗಿ ರೂಪಿಸಿರುವೆವು. ಅಲ್ಲಾಹನ ದಷ್ಟಿಯಲ್ಲಿ ನಿಮ್ಮ ಪೈಕಿ ಅತ್ಯಧಿಕ ಧರ್ಮನಿಷ್ಠನಾಗಿರುವವನೇ ನಿಮ್ಮಲ್ಲಿನ ಅತ್ಯುತ್ತಮನಾಗಿರುವನು. ಅಲ್ಲಾಹನು ಖಂಡಿತವಾಗಿಯೂ ಬಲ್ಲವನು ಹಾಗೂ ಅರಿವು ಉಳ್ಳವನಾಗಿದ್ದಾನೆ." (ಕುರ್ ಆನ್ 49:13)
ಆ ಬಳಿಕ ಪವಿತ್ರ ಕಾಬಾದಲ್ಲಿ ಅಕ್ರಮವಾಗಿ ಸ್ಥಾಪಿಸಲಾಗಿದ್ದ ವಿಗ್ರಹ, ಚಿತ್ರ ಇತ್ಯಾದಿಗಳನ್ನೆಲ್ಲ ನೆಲಕ್ಕುರುಳಿಸಲಾಯಿತು. ಏಕದೇವಾರಾಧನೆಗಾಗಿ ಪ್ರವಾದಿ ಇಬ್ರಾಹೀಮರು ನಿರ್ಮಿಸಿದ್ದ ಕಾಬಾ ಮಸೀದಿಯನ್ನು ಶುದ್ಧ ಏಕದೇವಾರಾಧನೆಗಾಗಿ ಸಜ್ಜು ಗೊಳಿಸಲಾಯಿತು.
"ಮತ್ತು ಹೇಳಿರಿ; ಸತ್ಯವು ಬಂದು ಬಿಟ್ಟಿತು ಮತ್ತು ಅಸತ್ಯವು ಅಳಿದು ಹೋಯಿತು - ಖಂಡಿತವಾಗಿಯೂ ಅಸತ್ಯವು ಅಳಿಯುವಂತಹದೇ ಆಗಿದೆ" (17:81) ಎಂಬ ಕುರ್ ಆನ್ ವಚನವನ್ನು ಪ್ರವಾದಿ (ಸ) ಓದಿದರು. ಅಲ್ಲಿ ನೆರೆದಿದ್ದ ಅನುಯಾಯಿಗಳೆಲ್ಲಾ ಪದೇ ಪದೇ "ಅಲ್ಲಾಹು ಅಕ್ಬರ್" (ಅಲ್ಲಾಹನೇ ಸರ್ವೋನ್ನತನು) ಎಂಬ ಘೋಷಣೆಯ ಮೂಲಕ, ತಮ್ಮ ವಿನಯ ಮತ್ತು ಜಗದೊಡೆಯನ ಮೇಲ್ಮೆಯನ್ನು ಸಾರುತ್ತಲಿದ್ದರು.
"ಇದು ಪಾವನ ನಗರ. ಅಲ್ಲಾಹನಲ್ಲಿ ಮತ್ತು ಪರಲೋಕದಲ್ಲಿ ನಂಬಿಕೆ ಉಳ್ಳವರ ಪಾಲಿಗೆ, ಇಲ್ಲಿ ರಕ್ತ ಹರಿಸುವುಸುದನ್ನು ಮತ್ತು ಮರಗಳನ್ನು ಕಡಿಯುವುದನ್ನು ನಿಷೇಧಿಸಲಾಗಿದೆ. ಇವೆಲ್ಲ ನನಗಿಂತ ಮೊದಲೂ ನಿಷಿದ್ಧವಾಗಿದ್ದವು, ನನ್ನ ಬಳಿಕವೂ ನಿಷಿದ್ಧವಾಗಿರುವವು".
ಮುಸ್ಲಿಮರಾದವರೆಲ್ಲಾ ತಮ್ಮ ಮನೆಗಳಲ್ಲಿರುವ ವಿವಿಧ ಮಿಥ್ಯ ದೇವರುಗಳ ಚಿತ್ರ, ವಿಗ್ರಹ ಇತ್ಯಾದಿಗಳನ್ನು ಧ್ವಂಸಗೊಳಿಸಬೇಕೆಂದು ಪ್ರವಾದಿ (ಸ) ಆದೇಶಿಸಿದರು. ಹಾಗೆಯೇ ಮಕ್ಕಾದ ಸುತ್ತ ಮುತ್ತ ಇಸ್ಲಾಮ್ ಸ್ವೀಕರಿಸಿದ್ದ ಎಲ್ಲ ಬುಡಕಟ್ಟುಗಳ ಜನರ ಬಳಿಗೆ ತಮ್ಮ ಪ್ರತಿನಿಧಿಗಳನ್ನು (??????????)
ಮಕ್ಕಾ ವಿಜಯದ ಬಳಿಕ, ಪ್ರವಾದಿ (ಸ) ಅಲ್ಲಿಂದ ಮರಳಿ ಮದೀನಾ ಗೆ ಹೊರಡುವ ಮುನ್ನ ನಡೆದ ಕೆಲವು ಘಟನೆಗಳು, ಕುರ್ ಆನ್ ನ ಮತ್ತು ಪ್ರವಾದಿ ಮುಹಮ್ಮದ್ (ಸ) ರ ನೈಜ ಧೋರಣೆ ಏನೆಂಬುದನ್ನು ಸ್ಪಷ್ಟ ಪಡಿಸುತ್ತವೆ:
ಮಕ್ಕಾದಲ್ಲಿ ಪ್ರವಾದಿಯನ್ನು ಕಾಣಲು ಬಂದವರ ಪೈಕಿ ವೃದ್ಧ ಹಳ್ಳಿಗನೊಬ್ಬನಿದ್ದ. ಅವನೇಕೋ ತುಬಾ ಭಯಗ್ರಸ್ತ ನಾಗಿರುವಂತಿತ್ತು. ಆತನನ್ನು ತಮ್ಮ ಹತ್ತಿರ ಕರೆಸಿಕೊಂಡ ಪ್ರವಾದಿ (ಸ) ಹೇಳಿದರು : "ಅಂಜಿಕೆ ಬೇಡ. ಬಿಸಿಲಲ್ಲಿ ಒಣಗಿಸಿದ ಮಾಂಸದ ತುಂಡುಗಳನ್ನು ತಿಂದು ಬದುಕುತ್ತಿದ್ದ ಒಬ್ಬ ಬಡ ಖುರೈಶ್ ಮಹಿಳೆಯ ಪುತ್ರ ನಾನು."
*******************************
ಪ್ರವಾದಿ (ಸ) ಮಕ್ಕಾ ನಗರವನ್ನು ಪ್ರವೇಶಿಸಿದ ಬಳಿಕ ನೇರವಾಗಿ ಪವಿತ್ರ ಕಾಬಾದ ಬಳಿಗೆ ಹೋದರು. ಪರಂಪರಾಗತವಾಗಿ ಕಾಬಾದ ಚಾವಿ ಉಸ್ಮಾನ್ ಬಿನ್ ತಲ್ಹಾ ಎಂಬವರ ಕುಟುಂಬದ ಕೈಯಲ್ಲೇ ಇರುತ್ತಿತ್ತು. ಅಂದು ಅವರು ಆ ಚಾವಿಯನ್ನು ಬಿಟ್ಟುಕೊಟ್ಟಿದ್ದರು. ಪ್ರವಾದಿ (ಸ) ಕಾಬಾದಿಂದ ಹೊರ ಬಂದಾಗ ಆ ಚಾವಿಯನ್ನು ತಮ್ಮ ವಶಕ್ಕೆ ಕೊಡಬೇಕೆಂದು ಕೆಲವು ಅನುಯಾಯಿಗಳು ಆಗ್ರಹಿಸಿದರು. ಆದರೆ ಪ್ರವಾದಿ (ಸ) "ಉಸ್ಮಾನ್ ಬಿನ್ ತಲ್ಹಾ ಎಲ್ಲಿದ್ದಾರೆ? ಅವರನ್ನು ಕರೆಯಿರಿ" ಎಂದು ಆದೇಶಿಸಿದರು. ಉಸ್ಮಾನ್ ಬಿನ್ ತಲ್ಹಾ ಅಂಜುತ್ತಾ ಬಂದು ಪ್ರವಾದಿಯ ಮುಂದೆ ನಿಂತರು. ಪ್ರವಾದಿ (ಸ) ಅವರ ಮುಂದೆ "ನಿಮ್ಮನ್ನು ನಂಬಿ ನಿಮಗೊಪ್ಪಿಸಲಾದ ಸೊತ್ತನ್ನು ನೀವು ಅದರ ನೈಜ ಮಾಲಕರಿಗೆ ಮರಳಿಸಬೇಕೆಂದು ಹಾಗೂ ನೀವು ಜನರ ನಡುವೆ ತೀರ್ಪು ನೀಡುವಾಗ ನ್ಯಾಯೋಚಿತವಾಗಿ ತೀರ್ಪು ನೀಡಬೇಕೆಂದು ಅಲ್ಲಾಹನು ನಿಮಗೆ ಆದೇಶಿಸುತ್ತಿದ್ದಾನೆ...... ... (4:58) ಎಂಬ ಕುರ್ ಆನ್ ವಚನವನ್ನೋದಿ, "ಇದೋ ಈ ಚಾವಿ ನಿಮ್ಮ ಕುಟುಂಬದ ಬಳಿಯೇ ಮುಂದುವರಿಯಲಿ" ಎನ್ನುತ್ತಾ ಚಾವಿಯನ್ನು ಅವರ ಕೈಗೊಪ್ಪಿಸಿದರು. ಉಸ್ಮಾನ್, ತಮ್ಮ ಕಣ್ಣುಗಳನ್ನು ತಾವೇ ನಂಬಲಾಗುತ್ತಿಲ್ಲ ಎಂಬಂತೆ ಸ್ಥಂಬೀ ಭೂತರಾಗಿ ಪ್ರವಾದಿಯನ್ನು ನೋಡುತ್ತಾ ತುಂಬಾ ಭಾವುಕರಾಗಿ, "ನೀವು ನಿಜಕ್ಕೂ ಅಲ್ಲಾಹನ ದೂತರು. ನೀವು ತಂದಿರುವ ಸತ್ಯ ಧರ್ಮವನ್ನು ನಾನು ಸ್ವೀಕರಿಸುತ್ತಿದ್ದೇನೆ" ಎನ್ನುತ್ತಾ ಇಸ್ಲಾಮ್ ಧರ್ಮವನ್ನು ಸ್ವೀಕರಿಸಿದರು. ಆ ಚಾವಿಯ ಹಿಂದೆ ಅಡಗಿದ್ದ ಒಂದು ಸ್ವಾರಸ್ಯಕರ ಕಥೆಯನ್ನು ಆ ಬಳಿಕ ಉಸ್ಮಾನ್ ಬಿನ್ ತಲ್ಹಾ ತಮ್ಮ ಸಂಗಾತಿಗಳಿಗೆ ತಿಳಿಸಿದರು. ಸುಮಾರು ಹತ್ತು ವರ್ಷಗಳ ಹಿಂದೆ ಪ್ರವಾದಿವರ್ಯರು(ಸ) ಇದೇ ಉಸ್ಮಾನ್ ರ ಬಳಿ ಕಾಬಾದ ಚಾವಿಯನ್ನು ಕೇಳಿದ್ದರು. ಒಮ್ಮೆಯಲ್ಲ, ಹಲವು ಬಾರಿ ಕೇಳಿದ್ದರು. ಆದರೆ ಒಮ್ಮೆಯೂ ಉಸ್ಮಾನ್ ಆ ಚಾವಿಯನ್ನು ಅವರಿಗೆ ನೀಡಿರಲಿಲ್ಲ. "ನಾವು ಪೂಜಿಸುವ ವಿಗ್ರಹಗಳನ್ನು ವಿರೋಧಿಸುವವರು ನೀವು, ನೀವು ಕಾಬಾದ ಒಳಗೆ ಪ್ರವೇಶಿಸಲು ಅರ್ಹರಲ್ಲ" ಎನ್ನುತ್ತಾ ಅವರು ಪ್ರವಾದಿಯ ಮನವಿಯನ್ನು ತಿರಸ್ಕರಿಸುತ್ತಿದ್ದರು. ಒಮ್ಮೆ ಪ್ರವಾದಿ (ಸ) "ಉಸ್ಮಾನ್, ಒಂದು ದಿನ ಆ ಚಾವಿ ಈ ನನ್ನ ಕೈಗಳಲ್ಲಿ ಇರುವುದು. ಅಂದು ಆ ಚಾವಿಯನ್ನು ಯಾರಿಗೆ ಕೊಡಬೇಕು ಎಂಬುದನ್ನು ನಾನು ತೀರ್ಮಾನಿಸಲಿದ್ದೇನೆ" ಎಂದಿದ್ದರು. ಆಗ ಉಸ್ಮಾನ್, ಆ ದಿನವು ನಮ್ಮ ಖುರೈಶ್ ವಂಶಸ್ಥರ ಪಾಲಿಗೆ ಸೋಲು ಮತ್ತು ಅಪಮಾನದ ದಿನವಾಗಿರುವುದು" ಎಂದರು. ಅದಕ್ಕುತ್ತರವಾಗಿ ಪ್ರವಾದಿ (ಸ) "ಖಂಡಿತ ಅಲ್ಲ. ಅದು ಕುರೈಶರ ಪಾಲಿಗೆ ವಿಜಯ ಮತ್ತು ಗೌರವದ ದಿನವಾಗಿರುವುದು" ಎಂದು ಉತ್ತರಿಸಿದ್ದರು. ಇಂದು ಅಂತಹ ದಿನ ನಿಜಕ್ಕೂ ಬಂದು ಬಿಟ್ಟಿತ್ತು. ಪ್ರವಾದಿಯು ತನ್ನ ವಿರುದ್ಧ ಪ್ರತೀಕಾರ ತೀರಿಸುವರೆಂದು ಉಸ್ಮಾನ್ ಅಂಜಿದ್ದರು. ಆದರೆ ಪ್ರವಾದಿವರ್ಯರು(ಸ) ತಮ್ಮದು ವಾತ್ಸಲ್ಯದ ಸಂಸ್ಕೃತಿಯೇ ಹೊರತು ಪ್ರತೀಕಾರದ್ದಲ್ಲ ಎಂಬುದನ್ನು ಉಸ್ಮಾನ್ ರಿಗೂ ಜಗತ್ತಿಗೂ ತೋರಿಸಿಕೊಟ್ಟರು.
*******************************
ಸಫ್ವಾನ್ ಬಿನ್ ಉಮಯ್ಯಾ, ಮುಸಲ್ಮಾನರ ಪರಮ ಶತ್ರುಗಳಲ್ಲೊಬ್ಬರಾಗಿದ್ದರು. ಹಿಂದೊಮ್ಮೆ ಅವರು ತಮ್ಮ ತಂದೆ ಉಮಯ್ಯಾ ಜೊತೆ ಸೇರಿ, ಮಾನ್ಯ ಬಿಲಾಲ್ ಎಂಬ ಗುಲಾಮ ಇಸ್ಲಾಮ್ ಧರ್ಮವನ್ನು ಸ್ವೀಕರಿಸಿದರೆಂಬ ಕಾರಣಕ್ಕೆ ಅವರನ್ನು ಸುಡು ಬಿಸಿಲಲ್ಲಿ ಮರಳ ಮೇಲೆ ಮಲಗಿಸಿ ಅವರಿಗೆ ಅಮಾನುಷ ಚಿತ್ರ ಹಿಂಸೆ ನೀಡಿದ್ದರು. ಮುಸ್ಲಿಮರ ಮಿತ್ರ ಪಕ್ಷವೊಂದರ ಮೇಲೆ ಆಕ್ರಮಣಕ್ಕಾಗಿ ಅವರ ಶತ್ರುಗಳಿಗೆ ಆಯುಧಗಳನ್ನು ಒದಗಿಸಿ ಆ ಮೂಲಕ ಹುದೈಬಿಯಾ ಸಂಧಿಯನ್ನು ಉಲ್ಲಂಘಿಸಿದ ಆರೋಪ ಅವರ ಮೇಲಿತ್ತು . ಮುಸ್ಲಿಮರ ವಿರುದ್ಧ ಮಕ್ಕಾದವರು ನಡೆಸಿದ ಎಲ್ಲ ಕಾರ್ಯಾಚರಣೆಗಳಲ್ಲಿ ಅವರು ಸಕ್ರಿಯ ಪಾತ್ರ ವಹಿಸಿದ್ದರು. ಅಷ್ಟೇ ಅಲ್ಲ. ಬದ್ರ್ ಯುದ್ಧದ ಸೋಲಿನ ಬಳಿಕ, ಸಾಕ್ಷಾತ್ ಪ್ರವಾದಿವರ್ಯರ ಹತ್ಯೆಗೆ ಸಂಚು ನಡೆಸಿ ಅದಕ್ಕಾಗಿ ಉಮೈರ್ ಬಿನ್ ವಹಬ್ ಎಂಬ ವ್ಯಕ್ತಿಯನ್ನು ಕಳಿಸಿದ್ದ ಆರೋಪವೂ ಅವರ ಮೇಲಿತ್ತು. ಹತ್ಯೆಯ ಕಾರ್ಯಾಚರಣೆಗಾಗಿ ಬಂದ ಉಮೈರ್ ಬಿನ್ ವಹಬ್ ಮುಸ್ಲಿಮರ ಕೈಯಲ್ಲಿ ಸಿಕ್ಕಿ ಬಿದ್ದು ಬಂಧಿಯಾದರು. ಅವರನ್ನು ಪ್ರವಾದಿವರ್ಯರ ಸಮಕ್ಷಮ ಹಾಜರು ಪಡಿಸಲಾಗಿತ್ತು. ಅಲ್ಲಿ ಪ್ರವಾದಿವರ್ಯರು ಆಡಿದ ಮಾತುಗಳಿಂದ ಪ್ರಭಾವಿತರಾಗಿ ಅವರು ತಮ್ಮ ತಪ್ಪಿಗಾಗಿ ಪಶ್ಚಾತ್ತಾಪ ಪಟ್ಟು ಇಸ್ಲಾಮ್ ಧರ್ಮ ಸ್ವೀಕರಿಸಿದ್ದರು.
ಮಕ್ಕಾ ವಿಜಯದ ವೇಳೆ ಇತರ ನೂರಾರು ವಿರೋಧಿಗಳು ಬಂದು ಪ್ರವಾದಿಯ ಮುಂದೆ ಹಾಜರಾಗಿ ಅಭಯ ಪಡೆದಾಗಲೂ ಸಫ್ವಾನ್ ಬಿನ್ ಉಮಯ್ಯಾ ಮಾತ್ರ ಮಕ್ಕಾ ಬಿಟ್ಟು ಪಲಾಯನ ಮಾಡಿದ್ದರು. ಇದೀಗ, ಪ್ರವಾದಿ ಹತ್ಯೆಗೆ ಸಂಚು ಹೂಡಿದ್ದ ಸಫ್ವಾನ್ ರ ಪರವಾಗಿ ಶಿಫಾರಸ್ಸು ಮಾಡಲು, ಪ್ರಸ್ತುತ ಸಂಚನ್ನು ಕಾರ್ಯಗತಗೊಳಿಸಲು ಹೊರಟಿದ್ದ ಉಮೈರ್ ಬಿನ್ ವಹಬ್ ಅವರೇ ಪ್ರವಾದಿಯ ಬಳಿಗೆ ಬಂದರು. ನನ್ನ ಮಿತ್ರನಿಗೆ ಅಭಯ ನೀಡಬೇಕೆಂದು ಮನವಿ ಮಾಡಿದರು. ಅವರ ಮನವಿಯನ್ನು ಸ್ವೀಕರಿಸಿದ ಪ್ರವಾದಿ (ಸ), ಸಫ್ವಾನ್ ಇಲ್ಲಿಗೆ ಬರಲಿ ಅವರಿಗೆ ಕ್ಷಮೆ ನೀಡಲಾಗುವುದು ಎಂದು ಘೋಷಿಸಿದರು. ಸಫ್ವಾನ್ ರ ಕುಕೃತ್ಯಗಳ ದಾಖಲೆ ಹೇಗಿತ್ತೆಂದರೆ ತನ್ನನು ಕ್ಷಮಿಸಲಾಗಿದೆ ಎಂದು ಯಾರಾದರೂ ಹೇಳಿದರೆ ಅವರು ಸುಲಭವಾಗಿ ಅದನ್ನು ನಂಬುವ ಸಾಧ್ಯತೆ ಇರಲಿಲ್ಲ. ಅಲ್ಲದೆ, ಸಫ್ವಾನ್ ರ ಗತ ದಾಖಲೆ ಜನರಿಗೆ ತಿಳಿದಿದ್ದರಿಂದ, ಅವರು ಪ್ರವಾದಿವರ್ಯರ ಬಳಿಗೆ ಬರುವ ಮುನ್ನವೇ ಯಾರಾದರೂ ಅವರ ಮೇಲೆ ಆಕ್ರಮಣ ನಡೆಸುವ ಸಾಧ್ಯತೆ ಇತ್ತು. ಆದ್ದರಿಂದ ಅವರಿಗೆ ಅಭಯ ನೀಡಲಾಗಿದೆ ಎಂಬುದಕ್ಕೆ ಪುರಾವೆಯಾಗಿ ಪ್ರವಾದಿ (ಸ) ಸ್ವತಃ ತಮ್ಮ ಶಿರವಸ್ತ್ರವನ್ನು ಉಮೈರ್ ಬಿನ್ ವಹಬ್ ರಿಗೆ ನೀಡಿ ಅದನ್ನು ಸಫ್ವಾನ್ ರಿಗೆ ನೀಡಲು ಹೇಳಿದರು. ಎಲ್ಲೋ ದೂರ ಅವಿತುಕೊಂಡಿದ್ದ ಸಫ್ವಾನ್ ಸಿರಿಯಾ ದೇಶಕ್ಕೆ ಪಲಾಯನ ಮಾಡಲು ಸರ್ವ ಸಿದ್ಧತೆ ನಡೆಸಿಸಿದ್ದರು. ಆದರೆ ಅವರು ಹಡಗನ್ನೇರುವ ಮುನ್ನವೇ ಅವರನ್ನು ಸಂಪರ್ಕಿಸಿದ ಉಮೈರ್, ಅವರನ್ನು ಪ್ರವಾದಿಯ ಬಳಿಗೆ ಕರೆತಂದರು. ಪ್ರವಾದಿ (ಸ) ಸಫ್ವಾನ್ ರನ್ನು ಆದರದಿಂದ ಬರಮಾಡಿಕೊಂಡರು. ಅವರಿಗೆ ಬೆಲೆಬಾಳುವ ಉಡುಗೊರೆ ಗಳನ್ನು ನೀಡಿದರು ಮತ್ತು ಎಲ್ಲರಿಗೆ ಉಪದೇಶಿಸುವಂತೆ ಅವರಿಗೂ ಇಸ್ಲಾಮ್ ಧರ್ಮದ ಕುರಿತು ಉಪದೇಶಿಸಿದರು. "ನಿಮ್ಮ ಧರ್ಮದ ಬಗ್ಗೆ ನಿರ್ಧರಿಸಲು ನನಗೆ ಎರಡು ತಿಂಗಳ ಸಮಯ ಬೇಕು" ಎಂದು ಸಫ್ವಾನ್ ಹೇಳಿದಾಗ, ಪ್ರವಾದಿ (ಸ) "ನೀವು ನಾಲ್ಕು ತಿಂಗಳ ಸಮಯ ತೆಗೆದು ಕೊಳ್ಳಿ" ಎನ್ನುತ್ತಾ ಅವರನ್ನು ಕಳಿಸಿಕೊಟ್ಟರು. ಆದರೆ ಸಫ್ವಾನ್ ಹೆಚ್ಚು ದಿನ ಕಳೆಯದೆ, ಕೆಲವೇ ದಿನಗಳ ಬಳಿಕ ಇಸ್ಲಾಮ್ ಧರ್ಮವನ್ನು ಸ್ವೀಕರಿಸಿದರು. ಆ ಬಳಿಕ ಅವರು ತಮ್ಮ ಮಿತ್ರರೊಡನೆ ಹೇಳಿದರು: "ಪ್ರವಾದಿವರ್ಯರು ನನಗೆ ಆ ಉಡುಗೊರೆಗಳನ್ನು ಕೊಡುತ್ತಿದ್ದಾಗ ನಾನು ಅತ್ಯಧಿಕ ದ್ವೇಷಿಸುತ್ತಿದ್ದ ವ್ಯಕ್ತಿ ಅವರಾಗಿದ್ದರು. ಆದರೆ ಅವರು ನನ್ನ ವಿಷಯದಲ್ಲಿ ನಿರಂತರವಾಗಿ ಎಷ್ಟು ಔದಾರ್ಯ ತೋರಿದರೆಂದರೆ, ಅವರಿಂದು ನನ್ನ ಪಾಲಿಗೆ ಜಗತ್ತಿನ ಬೇರೆಲ್ಲರಿಗಿಂತಲೂ ಪ್ರಿಯ ವ್ಯಕ್ತಿಯಾಗಿದ್ದಾರೆ".
*******************************
ಹಬ್ಬಾರ್ ಬಿನ್ ಅಲ್ ಅಸ್ವದ್ ಪ್ರವಾದಿಯ ಕಟ್ಟಾ ಶತ್ರುಗಳಲ್ಲೊಬ್ಬರಾಗಿದ್ದರು. ಅವರು ಈ ಹಿಂದೆ ಮಕ್ಕಾದಲ್ಲಿ ಪ್ರವಾದಿಯ ಹಲವು ಅನುಯಾಯಿಗಳಿಗೆ ಚಿತ್ರ ಹಿಂಸೆ ನೀಡಿದ್ದರು. ಮಾತ್ರವಲ್ಲ ಬೇರಾರೂ ಮಾಡದ ಘೋರ ಅನ್ಯಾಯವೊಂದನ್ನು ಮಾಡಿದ್ದರು. ಬದ್ರ್ ಯುದ್ಧದವರೆಗೂ ತನ್ನ ಪತಿಯ ಜೊತೆ ಮೆಕ್ಕಾದಲ್ಲಿ ಉಳಿದಿದ್ದ ಪ್ರವಾದಿ ಪುತ್ರಿ ಝಯ್ನಬ್ ಬದ್ರ್ ಯುದ್ಧ ಮುಗಿದು ಕೆಲವು ವಾರಗಳ ಬಳಿಕ ಮದೀನಾಗೆ ಹೊರಟಿದ್ದರು. ಆಕೆ ಈ ರೀತಿ ಮದೀನಾ ಹೊರಟಿರುವ ಸುದ್ದಿಕೇಳಿ ಅವರನ್ನು ತಡೆಯಲು ಮಕ್ಕಾದಿಂದ ಹಬ್ಬಾರ್ ಬಿನ್ ಅಲ್ ಅಸ್ವದ್ ನೇತೃತ್ವದಲ್ಲಿ ಪುಂಡರ ದಂಡೊಂದು ಹೊರಟಿತು. ಅವರು ಝಯ್ನಬ್ ಪ್ರಯಾಣಿಸುತ್ತಿದ್ದ ಒಂಟೆಯು ಬೆನ್ನು ಹಿಡಿದು ಅದರ ಮೇಲೆ ಈಟಿಗಳನ್ನು ಎಸೆದು ಅದನ್ನು ಗಾಯಗೊಳಿಸಿದರು. ಆಗ ಆಕೆ ಗರ್ಭಿಣಿಯಾಗಿದ್ದರು. ಒಂಟೆ ಆಯ ತಪ್ಪಿದಾಗ ಪ್ರವಾದಿ ಪುತ್ರಿ ಝಯ್ನಬ್ ತೀವ್ರ ಗಾಯಗೊಂಡರು. ಅಂದಿನ ಆಘಾತದಿಂದ ಅವರಿಗೆ ಗರ್ಭಪಾತವಾಯಿತು. ಅಂದು ಅವರು ಮರಳಿ ಮಕ್ಕಾಗೆ ಹೋದರು. ಸ್ವಲ್ಪ ಕಾಲದ ಬಳಿಕ ಮತ್ತೆ ಮದೀನಾಗೆ ಪ್ರಯಾಣಿಸಿದರು. ಆದರೆ ಅಂದು ಅಸ್ವಸ್ಥರಾದ ಅವರ ಆರೋಗ್ಯ ಮತ್ತೆಂದೂ ಪೂರ್ಣವಾಗಿ ಸುಧಾರಿಸಲಿಲ್ಲ. ಸ್ವಲ್ಪ ಕಾಲದ ಬಳಿಕ ಅವರ ಅನಾರೋಗ್ಯವು ಉಲ್ಬಣಿಸಿ ಅವರು ನಿಧನರಾದರು. ಇದೀಗ ಆ ದುರಂತದಲ್ಲಿ ಮುಖ್ಯ ಪಾತ್ರ ವಹಿಸಿದ್ದ ಹಬ್ಬಾರ್ ಮೆಕ್ಕಾದಲ್ಲಿ, ಪ್ರವಾದಿಯ ಮುಂದೆ ಕ್ಷಮೆಯಾಚನೆಗೆ ನಿಂತಿದ್ದರು. ಅವರಿಗೆ ಅತ್ಯುಗ್ರ ದಂಡನೆ ವಿಧಿಸುವ ಅಥವಾ ಅವರ ವಿರುದ್ಧ ಪ್ರತೀಕಾರ ತೀರಿಸುವ ಸಕಲ ಅವಕಾಶ ಪ್ರವಾದಿವರ್ಯರಿಗಿತ್ತು. ಆದರೂ ಅವರನ್ನು ಹಬ್ಬಾರ್ ರನ್ನು ಕ್ಷಮಿಸಿ ಬಿಟ್ಟರು.
*******************************
ಆಫ್ರಿಕಾ ಮೂಲದ ಮಾಜಿ ಗುಲಾಮ ಮಾನ್ಯ ಬಿಲಾಲ್, ತೀರಾ ಆರಂಭದಲ್ಲಿ ಇಸ್ಲಾಮ್ ಧರ್ಮ ಸ್ವೀಕರಿಸದವರಲ್ಲೊಬ್ಬರಾಗಿದ್ದರು. ಅವರು ಪ್ರವಾದಿವರ್ಯರಿಗೆ ತುಂಬಾ ಆಪ್ತರಾಗಿದ್ದರು. ಗುಲಾಮರನ್ನು ಮತ್ತು ಕರಿಯರನ್ನು ಪ್ರಾಣಿಗಳಿಗಿಂತ ಕೀಳಾಗಿ ಕಾಣಲಾಗುತ್ತಿದ್ದ ಕಾಲದಲ್ಲಿ, ಪ್ರವಾದಿವರ್ಯರು ಬಿಲಾಲ್ ರಿಗೆ ನೀಡಿದ ಗೌರವ ಮತ್ತು ಆದರಗಳನ್ನು ಕಂಡು ಪ್ರವಾದಿಯ ಎಲ್ಲ ಅನುಯಾಯಿಗಳು ಅವರನ್ನು ಗೌರವಿಸ ತೊಡಗಿದ್ದರು. ಮದೀನಾದ ಮಸೀದಿಯಲ್ಲಿ ನಿತ್ಯ ಐದು ಹೊತ್ತು ನಮಾಜ್ ಗಾಗಿ ಅದಾನ್ ಕರೆ ಕೊಡುವ ಕೆಲಸವನ್ನು ಸಾಮಾನ್ಯವಾಗಿ ಬಿಲಾಲ್ ಅವರೇ ಮಾಡುತ್ತಿದ್ದರು. ಅವರ ಗಡಸು ಧ್ವನಿ ಮದೀನದಲ್ಲಿ ತುಂಬಾ ಜನಪ್ರಿಯವಾಗಿತ್ತು. ಮಕ್ಕಾ ನಗರವು ತಮ್ಮ ನಿಯಂತ್ರಣಕ್ಕೆ ಬಂದ ದಿನ ಪ್ರವಾದಿವರ್ಯರು (ಸ) ಬಿಲಾಲ್ (ರ) ರನ್ನು ಕರೆದು ಪವಿತ್ರ ಕಾಬಾದ ಚಪ್ಪರ ಮೇಲೆ ಹತ್ತಿ ಅದಾನ್ ಕರೆ ನೀಡುವಂತೆ ಆದೇಶಿಸಿದರು. ಬಿಲಾಲ್ ರ ಅದಾನ್ ನ ಧ್ವನಿ ಮೊಳಗಿದಾಗ, ಪ್ರವಾದಿವರ್ಯರ ಸಂಗಾತಿಗಳೆಲ್ಲಾ ಹರ್ಷಪಟ್ಟರು. ಏಕೆಂದರೆ ಆ ಮೂಲಕ ಅವರ ಬಹುಕಾಲದ ಕನಸು ನನಸಾಗಿತ್ತು. ಆದರೆ ಆಗ ತಾನೇ ಮುಸ್ಲಿಮರಾಗಿದ್ದ ಮಕ್ಕಾದ ಹಲವರಿಗೆ ಈ ಕ್ರಾಂತಿಕಾರಿ ಬದಲಾವಣೆ ಜೀರ್ಣವಾಗಲಿಲ್ಲ. ಕೆಲವರು ಮನದಲ್ಲೇ ತಮ್ಮ ಅತೃಪ್ತಿಯನ್ನು ಬಚ್ಚಿಟ್ಟರೆ ಮತ್ತೆ ಕೆಲವರು ವಿವಿಧ ರೀತಿಯಲ್ಲಿ ತಮ್ಮ ಅಸಮಾಧಾನವನ್ನು ಪ್ರಕಟಿಸಿದರು. ಅಲ್ಲಿ ಜಾತಿ ವ್ಯವಸ್ಥೆ ಇರಲಿಲ್ಲವಾದರೂ ಜನಾ೦ಗವಾದ ಮತ್ತು ಬುಡಕಟ್ಟುಗಳ ಆಧಾರದ ದುರಭಿಮಾನ ಬಹಳ ಆಳವಾಗಿ ಬೇರೂರಿತ್ತು. ಕೆಲವರು "ಅಯ್ಯೋ ನಮ್ಮ ಪಾಲಿಗೆ ಇದೆಂತಹ ದಿನ ಬಂದು ಬಿಟ್ಟಿತು" ಎಂದು ಗೊಣಗಿದರು.
ಈವೇಳೆ, ತನ್ನ ಸುಶ್ರಾವ್ಯ ಧ್ವನಿಗಾಗಿ ಖ್ಯಾತರಾಗಿದ್ದ ಅಬೂ ಮಹ್ ದೂರಾ ಎಂಬ ಮಕ್ಕಾದ ಓರ್ವ ಯುವಕ, ತನ್ನ ಮಿತ್ರರ ಮಧ್ಯೆ ಕೂತಿದ್ದರು. ಬಿಲಾಲ್ ರ ಅದಾನ್ ಧ್ವನಿ ಮೊಳಗಿದಾಗ ಅಬೂ ಮಹ್ ದೂರಾ, ಬಿಲಾಲ್ ರನ್ನು ಗೇಲಿ ಮಾಡುವ ರೀತಿಯಲ್ಲಿ ಅವರ ಧ್ವನಿಯನ್ನು ಅನುಕರಿಸುತ್ತಾ ತನ್ನದೇ ಧಾಟಿಯಲ್ಲಿ ಅದಾನ್ ನ ಪದಗಳನ್ನು ಉಚ್ಚರಿಸಲಾರಂಭಿಸಿದರು. ದೂರದಿಂದ ಆ ಧ್ವನಿ ಕೇಳಿದ ಪ್ರವಾದಿ (ಸ) ಮಕ್ಕಾದ ಆ ಯುವಕನನ್ನು ತಮ್ಮ ಬಳಿಗೆ ಕರೆಸಿಕೊ೦ಡರು. ಆತ ಅಂಜುತ್ತಾ ಪ್ರವಾದಿಯ ಬಳಿಗೆ ಬಂದರು. ಸ್ವಲ್ಪ ಹೊತ್ತು ಆತನನ್ನು ಮಾತನಾಡಿಸಿ ಸಮಜಾಯಿಸಿದ ಪ್ರವಾದಿ (ಸ) "ಈತನಿಗೆ ಅದಾನ್ ನ ಎಲ್ಲ ಪದಗಳನ್ನು ಸರಿಯಾಗಿ ಕಳಿಸಿಕೊಡಿ" ಎಂದು ತನ್ನ ಸಂಗಾತಿಗಳಿಗೆ ಹೇಳಿದರು. ಅಬೂ ಮಹ್ ದೂರಾ, ಅಲ್ಲೇ ಇಸ್ಲಾಮ್ ಧರ್ಮ ಸ್ವೀಕರಿಸಿದರು. ಆಬಳಿಕ ಪ್ರವಾದಿ (ಸ) ಮಕ್ಕಾದಿಂದ ಮರಳಿ ಹೋಗುವ ಮುನ್ನ ಅದೇ ಯುವಕನನ್ನು ಕರೆದು,
ಇನ್ನು ಮುಂದೆ ಮಕ್ಕಾದ ಪವಿತ್ರ ಕಾಬಾದಲ್ಲಿ ನಿತ್ಯ ಅದಾನ್ ಹೇಳುವ ಹೊಣೆಯನ್ನು ನಾನು ಈ ಯುವಕನಿಗೆ ವಹಿಸಿಕೊಡುತ್ತಿದ್ದೇನೆ ಎಂದು ಘೋಷಿಸಿದರು. ಆ ಗೌರವದ ಹುದ್ದೆ ಮುಂದಿನ ಹಲವು ತಲೆಮಾರುಗಳ ತನಕ ಅಬೂ ಮಹ್ ದೂರಾ ಅವರ ವಂಶದಲ್ಲೇ ಮುಂದುವರಿಯಿತು.
*******************************
ಪ್ರವಾದಿವರ್ಯರನ್ನು ಮತ್ತವರ ಸಂಗಾತಿಗಳನ್ನು ಅತ್ಯಧಿಕ ಸತಾಯಿಸಿದವರ ಪೈಕಿ ಅಬೂ ಜಹಲ್ ಮತ್ತು ಆತನ ಪುತ್ರ ಇಕ್ರಿಮಾ ಪ್ರಮುಖರಾಗಿದ್ದರು. ಆ ಪೈಕಿ ಅಬೂ ಜಹಲ್, ಬದ್ರ್ ಯುದ್ಧದಲ್ಲಿ ಮುಸ್ಲಿಮರ ವಿರೋಧಿ ಸೇನೆಯ ನಾಯಕನಾಗಿದ್ದನು ಮತ್ತು ಅದೇ ಯುದ್ಧದಲ್ಲಿ ಹತನಾಗಿದ್ದನು. ಬದ್ರ್ ಯುದ್ಧದ ಬಳಿಕವೂ ಇಕ್ರಿಮಾ ಮುಸ್ಲಿಮರ ವಿರುದ್ಧ ವಿವಿಧ ಸಂಚು ಮತ್ತು ಕಾರ್ಯಾಚರಣೆಗಳನ್ನೂ ನಡೆಸುವುದರಲ್ಲಿ ನಿರತರಾಗಿದ್ದರು. ಮಕ್ಕಾ ವಿಜಯದ ಸಂದರ್ಭದಲ್ಲಿ ಇತರರೆಲ್ಲ ಶರಣಾದಾಗಲೂ ಇಕ್ರಿಮಾ ಮಕ್ಕಾ ಪ್ರವೇಶಿಸುತ್ತಿದ್ದ ಮುಸ್ಲಿಮರ ಒಂದು ತಂಡದ ಮೇಲೆ ಆಕ್ರಮಣ ನಡೆಸಿ ಇಬ್ಬರು ಮುಸ್ಲಿಮರ ಹತ್ಯೆಗೆ ಕಾರಣರಾಗಿದ್ದರು. ಈ ಘರ್ಷಣೆಯಲ್ಲಿ ತನ್ನ ತಂಡ ಸಂಪೂರ್ಣ ಸೋತುಹೋದಾಗ ಮಕ್ಕಾದಿಂದ ದೂರ ಓಡಿ ತಲೆ ಮರೆಸಿಕೊಂಡಿದ್ದರು.ಅವರ ವಿರುದ್ಧ ಮರಣ ದಂಡನೆಯನ್ನು ಘೋಷಿಸಲಾಗಿತ್ತು. ಅವರ ಪತ್ನಿ ಉಮ್ಮು ಹಕೀಮ್ ಪ್ರವಾದಿವರ್ಯರ ಬಳಿ ಬಂದು ತನ್ನ ಪತಿಗೆ ಅಭಯ ನೀಡಬೇಕೆಂದು ಮನವಿ ಮಾಡಿದಾಗ ಪ್ರವಾದಿ (ಸ) ಆ ಮನವಿಯನ್ನು ಸ್ವೀಕರಿಸಿ, ಇಕ್ರಿಮಾರನ್ನು ತಮ್ಮ ಬಳಿಗೆ ಕರೆ ತರಲು ಹೇಳಿದರು. ಅತ್ತ ಇಕ್ರಿಮಾ ಹಡಗನ್ನೇರಿ ಬೇರೆ ದೇಶವೊಂದಕ್ಕೆ ಹೋಗಲು ಶ್ರಮಿಸಿದ್ದರು. ಆದರೆ ಹಡಗು, ಬಿರುಗಾಳಿಗೆ ಸಿಕ್ಕು, ತಾನು ಮುಳುಗಿ ಸಾಯಲಿದ್ದೇನೆ ಎಂಬ ಭೀತಿ ಕಾಡಿದಾಗ ಇಕ್ರಿಮಾ, ತಾನು ಬದುಕಿ ಉಳಿದರೆ, ಪ್ರವಾದಿಯ ಬಳಿ ಹೋಗಿ ಇಸ್ಲಾಮ್ ಧಾರ್ಮ ಸ್ವೀಕರಿಸುವುದಾಗಿ ಪ್ರತಿಜ್ಞೆ ಮಾಡಿದರು. ಪ್ರವಾದಿವರ್ಯರು ಮಕ್ಕಾದಿಂದ ಹೊರಡುವ ಮುನ್ನವೇ ಒಂದು ದಿನ, ಪ್ರವಾದಿಯನ್ನು ಕಾಣಲು ಇಕ್ರಿಮಾ ಬರುತ್ತಿದ್ದಾರೆ ಎಂಬ ಸುದ್ದಿ ಬಂತು.
ಆ ಸಂದರ್ಭದಲ್ಲಿ ಪ್ರವಾದಿವರ್ಯರು (ಸ) ತಮ್ಮ ಅನುಯಾಯಿಡಲೊಡನೆ ಹೇಳಿದರು: "ಇಕ್ರಿಮಾ ಒಬ್ಬ ಮುಸ್ಲಿಮ್ ವಲಸಿಗರಾಗಿ ನಮ್ಮ ಬಳಿಗೆ ಬರುತ್ತಿದ್ದಾರೆ. ಅವರ ಉಪಸ್ಥಿತಿಯಲ್ಲಿ, ನಿಮ್ಮಲ್ಲಿ ಯಾರೊಬ್ಬರೂ ಅವರ ತಂದೆಯನ್ನು ದೂಷಿಸಬಾರದು. ಆ ರೀತಿ ಸತ್ತವರನ್ನು ದೂಷಿಸಿದರೆ ಆ ದೂಷಣೆ ಸತ್ತವರಿಗಂತೂ ತಲುಪುವುದಿಲ್ಲ, ಆದರೆ ಜೀವಂತ ಇರುವವರನ್ನು ನೋಯಿಸುತ್ತದೆ." ಇಕ್ರಿಮಾ ಬಂದರು. ಪ್ರವಾದಿವರ್ಯರು ಅವರನ್ನು ಪ್ರೀತಿಯಿಂದ ಸ್ವಾಗತಿಸಿದರು. ಮುಂದೆ ಇಕ್ರಿಮಾ ಮುಸ್ಲಿಮ್ ಸೇನೆಯ ಓರ್ವ ಪ್ರಮುಖ ಯೋಧರಾಗಿ ಹಲವು ರಣರಂಗಗಳಲ್ಲಿ ಮುಸ್ಲಿಮರ ಪರವಾಗಿ ಹೋರಾಡಿದರು.
*******************************
ಪ್ರವಾದಿವರ್ಯರ ಮಕ್ಕಾ ಪ್ರವೇಶದ ಸಂದರ್ಭದಲ್ಲಿ ಮರಣ ದಂಡನೆ ಘೋಷಿಸಲಾದವರಲ್ಲಿ ಅಬೂ ಸುಫ್ಯಾನ್ ರ ಪತ್ನಿ ಹಿಂದ್ ಕೂಡ ಒಬ್ಬಳು. ಆಕೆಯ ತಂದೆ ಉತಬಾ ಬಿನ್ ರಬೀಆ ಕೂಡಾ ಇಸ್ಲಾಮಿನ ಬದ್ಧ ವೈರಿಯಾಗಿದ್ದ. ಹಿಂದ್, ಪ್ರವಾದಿ ಮತ್ತು ಅವರ ಅನುಯಾಯಿಗಳ ವಿರುದ್ಧ ಮಕ್ಕದಲ್ಲಿ ದ್ವೇಷಾಗ್ನಿ ಭುಗಿಲೇಳಿಸುವ ತನ್ನ ಚಟುವಟಿಕೆಗಳಿಗಾಗಿ ಕುಖ್ಯಾತಳಾಗಿದ್ದಳು. ಬದ್ರ್ ನಲ್ಲಿ ಆಕೆಯ ತಂದೆ ಹತನಾಗಿದ್ದನು. ಇದಕ್ಕೆ ಪ್ರತೀಕಾರವಾಗಿ ಆಕೆ ಮತ್ತಾಕೆಯ ಕೆಲವು ಬಂಧುಗಳು ಪ್ರವಾದಿಯ ಚಿಕ್ಕಪ್ಪ ಹಂಝ ರನ್ನು ವಧಿಸಲಿಕ್ಕಾಗಿಯೇ ವಹಶಿ ಎಂಬ ಒಬ್ಬ ಹಂತಕನನ್ನು ಹಣಕೊಟ್ಟು ನೇಮಿಸಿದ್ದಳು. ಉಹುದ್ ಯುದ್ಧದಲ್ಲಿ ಆಕೆಯ ಪ್ರತೀಕಾರದ ಆಶೆ ಈಡೇರಿತು. ವಹಶಿ ಹಂಝರನ್ನು ವಧಿಸಿದರು. ಆ ಬಳಿಕ ಹಿಂದ್ ಹಂಝ ಅವರ ಮೃತಶರೀರವನ್ನು ವಿಕೃತ ಗೊಳಿಸಿದರು. ಅವರ ಹೊಟ್ಟೆ ಬಿಚ್ಚಿ ಅವರ ಯಕೃತ್ತನ್ನು ಜಗಿದು ಉಗುಳಿದ್ದಳು ಮತ್ತು ಅವರ ಕಿವಿಮೂಗುಗಳನ್ನು ಕತ್ತರಿಸಿ ಅವುಗಳನ್ನು ಮಾಲೆಯ ರೂಪದಲ್ಲಿ ಧರಿಸಿ ಮೆಕ್ಕಾಗೆ ಮರಳಿದ್ದಳು. ಹಂಝ ಜೊತೆ ಪ್ರವಾದಿವರ್ಯರಿಗೆ ವಿಶೇಷ ವಾತ್ಸಲ್ಯದ ಸಂಬಂಧವಿತ್ತು. ಅವರ ಮೃತ ಶರೀರವನ್ನು ಕಂಡು ಪ್ರವಾದಿ (ಸ) ಭಾವುಕರಾಗಿ ಅತ್ತಿದ್ದರು. ಪ್ರವಾದಿವರ್ಯರು ಮಕ್ಕಾ ನಗರಕ್ಕೆ ಮುತ್ತಿಗೆ ಹಾಕಿದ ಬಳಿಕವೂ ಆಕೆಯ ದ್ವೇಷ ತಣಿದಿರಲಿಲ್ಲ. "ಶರಣಾಗಬೇಡಿ, ಹೋರಾಡಿ" ಎಂದು ಆಕೆ ಮಕ್ಕಾದವರನ್ನು ಹುರಿದುಂಬಿಸುತ್ತಿದ್ದಳು. ಆದರೆ ಎಲ್ಲರೂ ಶರಣಾಗಿ ಬಿಟ್ಟಾಗ ಆಕೆಯ ನಿಲುವು ಬದಲಾಯಿತು. ಅಂತಹ ಖಳನಾಯಕಿ ಇತರ ಮಹಿಳೆಯರ ಜೊತೆ ಗುಪ್ತವಾಗಿ ಪ್ರವಾದಿಯ ಬಳಿಗೆ ಬಂದು ಹಠಾತ್ತನೆ "ನಾನು ಹಿಂದ್" ಎಂದು ಘೋಷಿಸಿದಳು. ಸ್ವಲ್ಪವೂ ವಿಚಲಿತರಾಗದ ಪ್ರವಾದಿ, "ಓ ಹಿಂದ್, ನಿನಗಿದೋ ಸ್ವಾಗತ" ಎಂದರು. ಈ ಪ್ರತಿಕ್ರಿಯೆ ಆಕೆಯ ಪಾಲಿಗೆ ಅನಿರೀಕ್ಷಿತ ಆಘಾತವಾಗಿತ್ತು. "ಅಲ್ಲಾಹನಾಣೆ, ನಾನು ನಿಮ್ಮ ಕುಟುಂಬಕ್ಕೆ ಆಶಿಸಿದಷ್ಟು ಸರ್ವನಾಶವನ್ನು ಬೇರಾರಿಗೂ ಅಶಿಸಿದ್ದಿಲ್ಲ. ಆದರೆ ಇಂದು ಬೇರಾರ ಕುಟುಂಬವೂ ನನ್ನ ದ್ದೃಷ್ಟಿಯಲ್ಲಿ ನಿಮ್ಮ ಕುಟುಂಬದಷ್ಟು ಗೌರವಾನ್ವಿತವಲ್ಲ."
*******************************
ಹಂಝ (ರ) ರ ಹಂತಕ ವಹಶಿ ಬಿನ್ ಹರ್ಬ್, ಇಥಿಯೋಪಿಯಾ ಮೂಲದ ಗುಲಾಮನಾಗಿದ್ದ ಆತ ಗುರಿ ಇಟ್ಟು ಈಟಿ ಎಸೆಯುವ ಕಲೆಯಲ್ಲಿ ನಿಷ್ಣಾತನಾಗಿದ್ದ. ಪ್ರವಾದಿವರ್ಯರು ಮಕ್ಕಾಗೆ ಬರುತ್ತಿದ್ದಾರೆ ಎಂಬ ಸುದ್ದಿ ಕೇಳಿದೊಡನೆ ಮಕ್ಕಾ ಬಿಟ್ಟು ಓಡಿಹೋಗಿದ್ದ. ಆದರೆ ಪ್ರವಾದಿವರ್ಯರು (ಸ್) ತುಂಬಾ ಕ್ಷಮಾಶೀಲರೆಂದು ಆತ ಕೇಳಿದ್ದ. ಮಕ್ಕಳ ವಿಜಯದ ವೇಳೆ ಪ್ರವಾದಿ (ಸ) ತಮ್ಮ ಹೆಚ್ಚಿನ ಬದ್ಧವೈರಿಗಳನ್ನೆಲ್ಲ ಕ್ಷಮಿಸಿದ್ದಾರೆ ಎಂಬ ಸುದ್ದಿಯಿಂದ ಧೈರ್ಯ ಪಡೆದ ವಹಶಿ ಮಕ್ಕಾಗೆ ಮರಳಿ ಬಂದು, ಇಸ್ಲಾಮ್ ಧರ್ಮ ಸ್ವೀಕರಿಸಿ, ಪ್ರವಾದಿಯ ಮುಂದೆ ಹಾಜರಾದಾಗ, ಪ್ರವಾದಿ (ಸ) ಆತನನ್ನು ಕ್ಷಮಿಸಿಬಿಟ್ಟರು. ಮುಂದೆ ಧರ್ಮನಿಷ್ಠನಾಗಿ ಬದುಕಿದ ಆತ, ತನ್ನಿಂದಾದ ಅಪರಾಧಕ್ಕೆ ಸದಾ ಪಶ್ಚಾತ್ತಾಪ ಪಡುತ್ತಿದ್ದ.
*******************************
ಮಕ್ಕದಲ್ಲಿ ಪ್ರವಾದಿವರ್ಯರಿಗೆ ಮತ್ತವರ ಅನುಯಾಯಿಗಳಿಗೆ ಅಮಾನುಷ ಹಿಂಸೆ ನೀಡಿದ ಹಲವರಿದ್ದರು. ಆದರೆ ಕುರ್ ಆನ್ ನಲ್ಲಿ ಅವರ ಪೈಕಿ ಬೇರೆ ಯಾರನ್ನೂ ಹೆಸರಿಸದೆ ಕೇವಲ ಒಬ್ಬ ವ್ಯಕ್ತಿಯನ್ನು ಹೆಸರಿಸಿ ಖಂಡಿಸಲಾಗಿದೆ. ಆತನ ಹೆಸರು ಅಬೂ ಲಹಬ್. ಪ್ರವಾದಿವರ್ಯರು ಮದೀನಾಗೆ ವಲಸೆ ಹೋಗುವ ಮುನ್ನವೇ ಅಬೂ ಲಹಬ್ ಸತ್ತು ಹೋಗಿದ್ದನು. ಆತನ ಪುತ್ರರು ಮುಸ್ಲಿಮರನ್ನು ವಿರೋಧಿಸುವುದರಲ್ಲಿ ಮುಂಚೂಣಿಯಲ್ಲಿದ್ದರು. ಪ್ರವಾದಿವರ್ಯರು ವಿಜಯಿಯಾಗಿ ಮಕ್ಕಾ ಪ್ರವೇಶಿಸಿದ ದಿನ ಅವರು ಊರು ಬಿಟ್ಟು ಪಲಾಯನ ಮಾಡಿದ್ದರು. ಪ್ರವಾದಿವರ್ಯರ ಆದೇಶದ ಮೇರೆಗೆ ಅಬ್ಬಾಸ್(ರ) ಅಬೂ ಲಹಬ್ ರ ಪುತ್ರರನ್ನು ಹುಡುಕಲು ಹೊರಟರು. ಅಬೂ ಲಹಬ್ ನ ಒಬ್ಬ ಪುತ್ರ ಉತ್ಬಾ, ಅಬ್ಬಾಸ್ (ರ) ಕೈಗೆ ಸಿಕ್ಕಿದಾಗ ಅವರು ಆತನನ್ನು ಪ್ರವಾದಿಯ ಬಳಿಗೆ ಕರೆತಂದರು. ಪ್ರವಾದಿಯ ಸಮಕ್ಷಮ ಇಸ್ಲಾಮ್ ಸ್ವೀಕರಿಸಿದ ಉತ್ಬಾ ಮುಂದೆ ಒಬ್ಬ ನಿಷ್ಠಾವಂತ ಮುಸ್ಲಿಮನಾಗಿ ಬದುಕಿದ್ದು ಮಾತ್ರವಲ್ಲ, ಪ್ರವಾದಿಯ ಒಬ್ಬ ಆಪ್ತ ಯೋಧರಾಗಿಯೂ ಗುರುತಿಸಲ್ಪಟ್ಟರು.
*******************************
ಮರಣದಂಡನೆಗೆ ಅರ್ಹರೆಂದು ಘೋಷಿತರಾದವರಲ್ಲಿ ಕಅಬ್ ಬಿನ್ ಝುಹೈರ್ ಒಬ್ಬರಾಗಿದ್ದರು. ಅವರೊಬ್ಬ ಪ್ರತಿಭಾವಂತ ಕವಿಯಾಗಿದ್ದರು. ತಮಗೆ ಹೇಳಬೇಕೆನಿಸಿದ ಎಲ್ಲವನ್ನೂ ಅವರು ಕಾವ್ಯದ ಮೂಲಕ ಬಹಳ ಪರಿಣಾಮಕಾರಿಯಾಗಿ ಹೇಳುತ್ತಿದ್ದರು. ಅರಬಿ ಭಾಷೆಯಲ್ಲಿ ಅವರಿಗೆ ಅಪಾರ ಪಾಂಡಿತ್ಯವಿತ್ತು. ಬಹುಕಾಲ ಅವರು ತಮ್ಮೆಲ್ಲ ಪ್ರತಿಭೆಯನ್ನು, ಇಸ್ಲಾಮ್ ಧರ್ಮ ಮತ್ತದರ ಅನುಯಾಯಿಗಳನ್ನು ತೀರಾ ನೀಚವಾಗಿ ನಿಂದಿಸುವುದಕ್ಕೆ ಮತ್ತು ಮುಸಲ್ಮಾನರ ವಿರುದ್ಧ ಹಿಂಸೆಗಿಳಿಯುವಂತೆ ಜನರನ್ನು ಪ್ರಚೋದಿಸುವುದಕ್ಕಾಗಿಯೇ ಮೀಸಲಿಟ್ಟಿದ್ದರು. ಸ್ವತಃ ಅವರ ಸಹೋದರ ಕಅಬ್ ಇಸ್ಲಾಮ್ ಧಾರ್ಮ ಸ್ವೀಕರಿಸಿದಾಗ ಅವರು ಕಅಬ್ ರನ್ನು ಲೇವಡಿ ಮಾಡುವ ಹಾಡೊಂದನ್ನು ಬರೆದಿದ್ದರು. ಆದರೆ ಮಕ್ಕ ವಿಜಯದ ಬಳಿಕ ಅವರು ತಮ್ಮ ಕೃತ್ಯಗಳಿಗಾಗಿ ಪಶ್ಚಾತ್ತಾಪ ಪಟ್ಟು ಇಸ್ಲಾಮ್ ಧಾರ್ಮ ಸ್ವೀಕರಿಸಿದರು. ಪ್ರವಾದಿವರ್ಯರು ಅವರನ್ನು ಕ್ಷಮಿಸಿ ಅವರಿಗೆ ಅಭಯ ನೀಡಿದರು. ಮುಂದೆ ಅವರು ಪ್ರವಾದಿವರ್ಯರ ಮತ್ತು ಇಸ್ಲಾಮಿನ ಗುಣಗಾನ ಮಾಡುವ ಕಾವ್ಯಗಳನ್ನು ರಚಿಸಿದರು.
*******************************
ಅಬ್ದುಲ್ಲಾಹ್ ಬಿನ್ ಸಅದ್ ರ ಹೆಸರು ಮರಣದಂಡನೆಗೆ ಅರ್ಹರೆಂದು ಘೋಷಿಸಲಾಗಿದ್ದವರ ಪಟ್ಟಿಯಲ್ಲಿತ್ತು. ಒಂದು ಕಾಲದಲ್ಲಿ ಅವರು ತಾನು ಮುಸ್ಲಾನನಾಗಿದ್ದೇನೆ ಎಂದು ಸುಳ್ಳು ಹೇಳಿ, ಮದೀನಾದಲ್ಲಿ ಮುಸ್ಲಿಮರ ಜೊತೆಗಿದ್ದು ಆ ಬಳಿಕ ಮುಸ್ಲಿಮ್ ಸಮಾಜಕ್ಕೆ ವಿಶ್ವಾಸದ್ರೋಹ ಬಗೆದು ಮಕ್ಕಾಗೆ ಮರಳಿದ್ದರು. ಅಲ್ಲಿ ಅವರು ಪ್ರವಾದಿ ಮತ್ತ್ತು ಮುಸ್ಲಿಮರ ವಿರುದ್ಧ ತೀರಾ ದ್ವೇಷಪೂರಿತವಾದ ಅಪಪ್ರಚಾರಲ್ಲಿ ಮಗ್ನರಾಗಿದ್ದರು. ಅವರ ಅಪರಾಧಗಳ ಸ್ವರೂಪ ಹೇಗಿತ್ತೆಂದರೆ ಅವರನ್ನು ದಂಡಿಸಬೇಕೆಂದು ಪ್ರವಾದಿ (ಸ) ದೃಢ ನಿರ್ಧಾರ ಮಾಡಿದ್ದರು. ಅವರು ತಮ್ಮ ಬಂಧುವಾಗಿದ್ದ, ಉಸ್ಮಾನ್ (ರ) ರ ಮೂಲಕ ಪ್ರವಾದಿವರ್ಯರನ್ನು ಮೆಚ್ಚಿಸಿ ಕ್ಷಮೆ ಪಡೆಯಲು ಶ್ರಮಿಸಿದರು. ಆದರೆ ಪ್ರವಾದಿ ಹಲವು ಬಾರಿ ಉಸ್ಮಾನ್ ರ ಮನವಿಯನ್ನು ತಿರಸ್ಕರಿಸಿದರು. ಕೊನೆಗೊಮ್ಮೆ ಪ್ರವಾದಿ (ಸ) ತಮ್ಮ ನಿಲುವು ಬದಲಾಯಿಸಿ ಅಬ್ದುಲ್ಲಾಹ್ ಬಿನ್ ಸಅದ್ ರನ್ನು ಕ್ಷಮಿಸಿಬಿಟ್ಟರು. ಆದರೆ ಕ್ಷಮೆಯ ಬಳಿಕವೂ ಅಬ್ದುಲ್ಲಾಹ್ ಅಪರಾಧ ಪ್ರಜ್ಞೆಯಿಂದ ನರಳುತ್ತಿದ್ದರು. ಅವರೆಂದೂ ಪ್ರವಾದಿವರ್ಯರ ಮುಂದೆ ಬರುತ್ತಿರಲಿಲ್ಲ. ಈ ಕುರಿತು ಉಸ್ಮಾನ್ (ರ) ಪ್ರವಾದಿವರ್ಯರ ಬಳಿ ಪ್ರಸ್ತಾಪಿಸಿದಾಗ ಪ್ರವಾದಿ (ಸ) "ಅವರು ನನಗೆ ಕೊಟ್ಟ ಮಾತಿನ ಆಧಾರದಲ್ಲಿ ನಾನು ಅವರಿಗೆ ಭದ್ರತೆಯ ಭರವಸೆ ನೀಡಿರುವೆನಲ್ಲಾ?" ಎಂದರು. "ಅವರು ಮಾಡಿರುವ ಅಪರಾಧಗಳ ಪ್ರಜ್ಞೆ ಅವರನ್ನು ಕಾಡುತ್ತಿದೆ" ಎಂದರು ಉಸ್ಮಾನ್(ರ). "ಅವರು ಸ್ವೀಕರಿಸಿರುವ ಇಸ್ಲಾಮ್ , ಅವರ ಎಲ್ಲ ಗತ ಪಾಪಗಳನ್ನು ಅಳಿಸಿ ಹಾಕುತ್ತದೆ" ಎಂದು ಪ್ರವಾದಿ (ಸ) ಸ್ಪಷ್ಟಪಡಿಸಿದರು. ಈ ಮಾತನ್ನು ಉಸ್ಮಾನ್ (ರ) ಅಬ್ದುಲ್ಲಾಹ್ (ರ) ರಿಗೆ ತಲುಪಿಸಿದಾಗ ಅಬ್ದುಲ್ಲಾಹ್ (ರ) ಸಂತೃಪ್ತರಾದರು. ಆ ಬಳಿಕ ಅವರು ಅವಕಾಶ ಸಿಕ್ಕಾಗಲೆಲ್ಲಾ ಪ್ರವಾದಿವಾರ್ಯಾರನ್ನು ಭೇಟಿಯಾಗುತ್ತಿದ್ದರು. ಮುಂದಿನ ಅವರ ಬದುಕು ಸತ್ಯಸಂಧತೆಯ ಬದುಕಾಗಿತ್ತು.
*******************************
ಪ್ರಸ್ತುತ ಎಲ್ಲ ಘಟನೆಗಳು ಮುಸ್ಲಿಮರು, ಆದರ್ಶ ಪುರುಷನೆಂದು ಪರಿಗಣಿಸುವ ಪ್ರವಾದಿ ಮುಹಮ್ಮದ್ (ಸ) ಅವರ ಆದರ್ಶವನ್ನು ಪರಿಚಯಿಸುತ್ತವೆ. ತಮ್ಮ ಬದ್ಧ ವೈರಿಗಳ ವಿಷಯದಲ್ಲಿ ಈ ಬಗೆಯ ಅನುಪಮ ಔದಾರ್ಯದ ಧೋರಣೆ ತಾಳಿದ ಪ್ರವಾದಿಯಾಗಲಿ ಅವರು ಜಗತ್ತಿಗೆ ಪರಿಚಯಿಸಿದ ಪವಿತ್ರ ಕುರ್ ಆನ್ ಆಗಲಿ, ಅನ್ಯಮತೀಯರ ವಿರುದ್ಧ ದೌರ್ಜನ್ಯವನ್ನು, ಬಲವಂತದ ಮತಾಂತರವನ್ನು ಅಥವಾ ಯಾವುದೇ ಬಗೆಯ ಹಕ್ಕು ಚ್ಯುತಿಯನ್ನು ಅನುಮತಿಸುವ ಸಾಧ್ಯತೆ ಉಂಟೇ ?
ಅಧ್ಯಾಯ - 7
ಕುರ್ ಆನ್ ವಚನಗಳನ್ನು ವಿರೂಪಗೊಳಿಸಿ ವಂಚಿಸುವ ಏಳು ಹಗರಣಗಳು:
ಕುರ್ ಆನ್ ನಲ್ಲಿ ಒಂದೆಡೆ, ರೋಗಗ್ರಸ್ತ ಮನೋಭಾವದಿಂದ ನರಳುತ್ತಿರುವ ಕೆಲವು ಸತ್ಯವಿರೋಧಿಗಳ ಸ್ವಭಾವವನ್ನು ಈ ರೀತಿ ಚಿತ್ರಿಸಲಾಗಿದೆ:
"ಅವನೇ ಈ ಗ್ರಂಥವನ್ನು ನಿಮಗೆ ಇಳಿಸಿಕೊಟ್ಟವನು. ಇದರಲ್ಲಿ ಖಚಿತ ವಚನಗಳಿವೆ - ಅವುಗಳೇ ಈ ಗ್ರಂಥದ ಸಾರ. ಇನ್ನು, ಇದರಲ್ಲಿ ಬಹು ಅರ್ಥದ ವಚನಗಳೂ ಇವೆ. ತಮ್ಮ ಮನಸ್ಸುಗಳಲ್ಲಿ ವಕ್ರತೆ ಉಳ್ಳವರು ಈ ಪೈಕಿ ಬಹು ಅರ್ಥದ ವಚನಗಳ ಹಿಂದೆ ನಡೆಯುತ್ತಾರೆ. ಅವರು ಈ ಮೂಲಕ ಗೊಂದಲದ ಬೆನ್ನು ಹಿಡಿಯುತ್ತಾರೆ ಮತ್ತು ವಿಕೃತ ವ್ಯಾಖ್ಯಾನಗಳನ್ನು ಅರಸುತ್ತಿರುತ್ತಾರೆ..... .... " (3:7)
ಸತ್ಯವನ್ನು ಯಥಾವತ್ತಾಗಿ ಎದುರಿಸುವ ಧೈರ್ಯವಿಲ್ಲದವರು ಸಾಮಾನ್ಯವಾಗಿ ಒಂದು ನೀಚ ಕುತಂತ್ರಕ್ಕೆ ಶರಣಾಗುತ್ತಾರೆ. ಅವರು ಸತ್ಯವನ್ನು ಭಾಗಶಃ ಮರೆಮಾಚುತ್ತಾರೆ, ಸತ್ಯವನ್ನು ತಿರುಚಿ ಬಿಡುತ್ತಾರೆ ಅಥವಾ ಸತ್ಯವನ್ನು ವಿರೂಪಗೊಳಿಸಿ ಅದುವೇ ಸತ್ಯವೆಂದು ಜನರನ್ನು ವಂಚಿಸುತ್ತಾರೆ. ಕುರ್ ಆನ್ ವಿರೋಧಿಗಳು ನಮ್ಮ ದೇಶದಲ್ಲಿ ಮಾತ್ರವಲ್ಲ ಪಶ್ಚಿಮ ಸಮೇತ ಜಗತ್ತಿನ ಹಲವಾರು ದೇಶಗಳಲ್ಲಿ ಇಂತಹ ಶ್ರಮ ಮಾಡಿದ್ದಾರೆ. ಕುರ್ ಆನ್ ನ ವಚನಗಳನ್ನು ಯಥಾವತ್ತಾಗಿ, ಅವುಗಳ ಸನ್ನಿವೇಶ ಸಮೇತ ಜನರ ಮುಂದಿಟ್ಟರೆ ಜನರು ಕುರ್ ಆನ್ ನೆಡೆಗೆ ಆಕರ್ಷಿತರಾಗುತ್ತಾರೆಂಬ ಭಯದಿಂದ ನರಳುವ ಈ ಮಂದಿ ಏನಾದರೂ ಮಾಡಿ ಕುರ್ ಆನ್ ಗ್ರಂಥ ಮತ್ತು ಅದರ ಅನುಯಾಯಿಗಳ ವಿರುದ್ಧ ಜನಾಭಿಪ್ರಾಯ ರೂಪಿಸಬೇಕೆಂಬ ಉದ್ದೇಶದಿಂದ ಶುದ್ಧ ವಂಚನೆಗೆ ಇಳಿದು ಬಿಡುತ್ತಾರೆ. ಅವರು ಕುರ್ ಆನ್ ನ ಕೆಲವು ವಚನಗಳನ್ನು ಹೆಕ್ಕಿ ಅವುಗಳ ನಿರ್ಣಾಯಕ ಭಾಗಗಳಿಂದ ಅಥವಾ ಬಹಳ ನಿರ್ಣಾಯಕವಾದ ಅವುಗಳ ಹಿನ್ನೆಲೆಯ ವಚನಗಳಿಂದ ಅವುಗಳನ್ನು ಪ್ರತ್ಯೇಕಿಸಿ, ತೀರಾ ತದ್ವಿರುದ್ಧ ಅರ್ಥ ಮೂಡಿಸುವ ರೀತಿಯಲ್ಲಿ ಆ ವಚನಗಳನ್ನು ವಿರೂಪಗೊಳಿಸಿ ಜನರ ಮುಂದಿಡುತ್ತಾರೆ. ಮುಸ್ಲಿಮರು ಮತ್ತು ಕ್ರೈಸ್ತ, ಹಿಂದೂ, ಯಹೂದಿ, ಬೌದ್ಧ ಮುಂತಾದ ವಿವಿಧ ಸಮುದಾಯಗಳ ನಡುವೆ ವೈಷಮ್ಯ ಮೂಡಿಸ ಬಯಸುವವರು, ಈ ರೀತಿ ತಾವು ವಿರೂಪಗೊಳಿಸಿದ ಕುರ್ ಆನ್ ವಚನಗಳನ್ನು ಜನರ ಮುಂದಿಟ್ಟು, ಕುರ್ ಆನ್ ಅಶಾಂತಿ ಮತ್ತು ರಕ್ತಪಾತವನ್ನು ಪ್ರೋತ್ಸಾಹಿಸುತ್ತದೆ ಎಂಬುದಕ್ಕೆ ಕುರ್ ಆನ್ ವಚನಗಳೇ ಪುರಾವೆಗಳೆಂದು ವಾದಿಸುತ್ತಾರೆ.
ಈ ಬಗೆಯ ಮೋಸಗಾರರ ಒಂದು ಸಮಾನ ಲಕ್ಷಣವೇನೆಂದರೆ ಅವರು ಕುರ್ ಆನ್ ನಲ್ಲಿರುವ ಯಾವುದಾದರೂ ವಿಷಮ ಸನ್ನಿವೇಶಕ್ಕೆ ಅಥವಾ ಯಾವುದಾದರೂ ನಿರ್ದಿಷ್ಟ ಯುದ್ಧಕ್ಕೆ ಸಂಬಂಧಿಸಿದ ಆದೇಶಗಳನ್ನು ಮತ್ತು ಕೇವಲ ಯಾವುದಾದರೂ ಒಂದು ಸನ್ನಿವೇಶಕ್ಕೆ ಮಾತ್ರ ಅನ್ವಯವಾಗುವ ಆದೇಶಗಳನ್ನು ಆರಿಸಿ, ಅವುಗಳ ಕಣ್ಣು, ಮೂಗು, ಕೈ ಕಾಲು ಕತ್ತರಿಸಿ ಮೂಲ ವಚನಕ್ಕೆ ತದ್ವಿರುದ್ಧ ಅರ್ಥ ಮೂಡಿಸುವ ರೀತಿಯಲ್ಲಿ ಆ ವಚನಗಳನ್ನೂ ಭಾಗಶಃ ಜನರ ಮುಂದಿಟ್ಟು ಇದುವೇ ಕುರ್ ಆನ್ ನ ಅಂತಿಮ ಆದೇಶ ಎಂದು ಬಿಂಬಿಸುತ್ತಾರೆ.
ಅಂತಹ ಕೆಲವು ಉದಾಹರಣೆಗಳು ಇಲ್ಲಿವೆ:
ಹಗರಣ 1.
"... ನೀವು ಅವರನ್ನು ಕಂಡಲ್ಲಿ ವಧಿಸಿರಿ..." 2:191
ಇದು ನಿಜವಾಗಿ, 40 ಕ್ಕೂ ಅಧಿಕ ಪದಗಳಿರುವ ಒಂದು ದೀರ್ಘ ವಚನದಿಂದ ಕೇವಲ 4 ಪದಗಳನ್ನು ಆಯ್ದು, ಪ್ರತ್ಯೇಕಿಸಿ ನಡೆಸಲಾದ ವಂಚನೆಯ ಕಾರ್ಯಾಚರಣೆಯಾಗಿದೆ. ಸತ್ಯವನ್ನು ಅರಿಯ ಬಯಸುವವರು ಆ ವಚನವನ್ನು ಪೂರ್ಣವಾಗಿ ಓದಿದರೆ, ವಂಚಕರ ವಂಚನೆ ಬಯಲಾಗಿ ಬಿಡುತ್ತದೆ. ಇನ್ನು ಆ ವಚನದ ಜೊತೆ ಅದರ ಮೊದಲು ಮತ್ತು ಅದರ ಅನಂತರ ಇರುವ ವಚನಗಳನ್ನೂ ಸೇರಿಸಿ ಓದಿದರೆ ಸತ್ಯ ಮನವರಿಕೆಯಾಗುತ್ತದೆ.
"ನಿಮ್ಮ ವಿರುದ್ಧ ಯುದ್ಧ ಮಾಡುವವರ ವಿರುದ್ಧ ನೀವು ಅಲ್ಲಾಹನ ಮಾರ್ಗದಲ್ಲಿ ಯುದ್ಧ ಮಾಡಿರಿ. ಆದರೆ ಅತಿರೇಕವೆಸಗಬೇಡಿ. ಖಂಡಿತವಾಗಿಯೂ ಅಲ್ಲಾಹನು ಅತಿರೇಕವೆಸಗುವವರನ್ನು ಮೆಚ್ಚುವುದಿಲ್ಲ." 2:190
"ಮತ್ತು ಅಂಥವರನ್ನು (ನಿಮ್ಮ ವಿರುದ್ಧ ಯುದ್ಧ ಸಾರಿದವರನ್ನು) ನೀವು ಕಂಡಲ್ಲಿ ವಧಿಸಿರಿ ಮತ್ತು ಅವರು ಎಲ್ಲಿಂದ ನಿಮ್ಮನ್ನು ಹೊರದಬ್ಬಿರುವರೋ ಅಲ್ಲಿಂದ ನೀವು ಅವರನ್ನು ಹೊರದಬ್ಬಿರಿ. ಅಶಾಂತಿಯು ಕೊಲೆಗಿಂತ ಕೆಟ್ಟದಾಗಿದೆ. ಇನ್ನು, ಮಸ್ಜಿದುಲ್ ಹರಾಮ್‌ನ ಬಳಿ - ಅವರು ನಿಮ್ಮ ವಿರುದ್ಧ ಯುದ್ಧ ಮಾಡುವ ತನಕ ನೀವು ಅವರ ವಿರುದ್ಧ ಯುದ್ಧ ಮಾಡಬೇಡಿ. ಅಲ್ಲಿ ಅವರು ನಿಮ್ಮ ವಿರುದ್ಧ ಯುದ್ಧ ಮಾಡಿದರೆ, ನೀವು ಅವರನ್ನು ವಧಿಸಿರಿ. ಇದುವೇ ಸತ್ಯವನ್ನು ಧಿಕ್ಕರಿಸಿದವರಿಗಿರುವ ಪ್ರತಿಫಲ." 2: 191
"ಒಂದು ವೇಳೆ ಅವರು ತಡೆದು ನಿಂತರೆ (ಯುದ್ಧ ವಿರಾಮ ಘೋಷಿಸಿದರೆ), ಖಂಡಿತವಾಗಿಯೂ ಅಲ್ಲಾಹನು ಕ್ಷಮಿಸುವವನು ಮತ್ತು ಕರುಣೆ ತೋರುವವನಾಗಿದ್ದಾನೆ." 2: 192
ಇಷ್ಟನ್ನು ಓದಿದ ಬಳಿಕ ವಂಚಕರು ಮುಂದಿಡುವ ಆ ನಾಲ್ಕು ಪದಗಳನ್ನು ಇದೀಗ ನೀವು ಇನ್ನೊಮ್ಮೆ ಓದಿ ನೋಡಿ. ಕುರ್ ಆನ್ ವಿರೋಧಿಗಳು ಎಂತಹ ಘೋರ ವಂಚನೆ ಮಾಡುತ್ತಿದ್ದಾರೆಂಬುಡು ವ್ಯಕ್ತವಾಗಿ ಬಿಡುವುದಿಲ್ಲವೇ?
ಹಗರಣ 2.
"'... ನೀವು ಅವರ ವಿರುದ್ಧ ಯುದ್ಧ ಮಾಡಿರಿ..."' 2: 193
ಇವು, ಮೇಲೆ ಪ್ರಸ್ತಾಪಿಸಿದ ಮೊದಲ ಹಗರಣದಂತೆಯೇ 25 ಕ್ಕೂ ಅಧಿಕ ಪದಗಳಿರುವ ಒಂದು ವಚನದಿಂದ ಆಯ್ದು ಪ್ರತ್ಯೇಕಿಸಲಾಗಿರುವ 4 ಪದಗಳು. ಯಾರಾದರೂ ಕೇವಲ ಈ ಮೇಲಿನ 4 ಪದಗಳನ್ನಷ್ಟೇ ಉದ್ಧರಿಸಿ, ಇದುವೇ ಕುರ್ ಆನ್ ನ ಧೋರಣೆ ಎಂದು ವಾದಿಸಿದಾಗ ಅವರ ವಾದ ಕೇಳಿದವರು ದಾರಿ ತಪ್ಪುತ್ತಾರೆ. ಅವರಲ್ಲಿ, ಕುರ್ ಆನ್ ಯುದ್ಧವನ್ನು ಪ್ರೋತ್ಸಾಹಿಸುವ ಗ್ರಂಥವೆಂಬ ಅಭಿಪ್ರಾಯ ಮೂಡಿಬಿಡುತ್ತದೆ. ಆದರೆ, ಹಾಗೆ ಆತುರ ಪಡದೆ, ಈ ವಚನದ ಪೂರ್ವಾಪರಗಳನ್ನು ನೋಡಿದಾಗ ಮೂಡುವ ಅಭಿಪ್ರಾಯವು ತೀರಾ ಭಿನ್ನವಾಗಿರುತ್ತದೆ. "ಯುದ್ಧದ ಕುರಿತಂತೆ ಪವಿತ್ರ ಕುರ್ ಆನ್ ನ ಧೋರಣೆ ಏನು? ಸ್ಪಷ್ಟ ಉತ್ತರ ಒದಗಿಸುವ 5 ವಚನಗಳು (2:190-194)" ಎಂಬ ಶೀರ್ಷಿಕೆಯಡಿಯಲ್ಲಿ ಈಗಾಗಲೇ ಈ ವಚನದ ಪ್ರಸ್ತಾಪ ಬಂದಿದೆ.
"ಯಾವುದೇ ಅಶಾಂತಿ ಇಲ್ಲವಾಗಿ ಬಿಡುವ ತನಕ ಹಾಗೂ ಧರ್ಮವು ಸಂಪೂರ್ಣವಾಗಿ ಅಲ್ಲಾಹನಿಗೆ ಮೀಸಲಾಗಿ ಬಿಡುವ ತನಕ ನೀವು ಅವರ ವಿರುದ್ಧ ಯುದ್ಧ ಮಾಡಿರಿ. ಇನ್ನು, ಅವರು ತಡೆದು ನಿಂತರೆ (ಯುದ್ಧ ವಿರಾಮ ಘೋಷಿಸಿದರೆ), ಅಕ್ರಮವೆಸಗಿದವರ ಹೊರತು ಇನ್ನಾರ ಮೇಲೂ ಆಕ್ರಮಣಕ್ಕೆ ಅವಕಾಶವಿಲ್ಲ." 2: 193
ಅಲ್ಲಿ ಈ ವಚನದ ಜೊತೆ ತಕ್ಕಮಟ್ಟದಲ್ಲಿ ಅದರ ಹಿನ್ನೆಲೆಯೂ ಇದೆ. ನಿಜವಾಗಿ ಈ ವಚನದ ನೈಜ ತಾತ್ಪರ್ಯ ಅರ್ಥವಾಗಬೇಕಿದ್ದರೆ ಮೊದಲು ಅದರ ಐತಿಹಾಸಿಕ ಹಿನ್ನೆಲೆಯನ್ನು ಅರಿಯಬೇಕಾಗುತ್ತದೆ. ಆದರೆ ಐತಿಹಾಸಿಕ ಹಿನ್ನೆಲೆಯ ಗೊಡವೆಗೆ ಹೋಗದೆ ಕೇವಲ ಕುರ್ ಆನ್ ನಲ್ಲೇ, ಈ ವಚನದ ಹಿಂದೆ, ಮುಂದೆ ಏನಿದೆ ಎಂಬುದನ್ನು ನೋಡಿದರೂ ತಕ್ಕ ಮಟ್ಟಿಗೆ ಇದರ ತಾತ್ಪರ್ಯ ನಿರ್ಧರಿಸಲು ಸಾಧ್ಯವಾಗುತ್ತದೆ.
ಉದಾ: ಇದು ಕುರ್ ಆನ್ ನ 2ನೇ ಅಧ್ಯಾಯದ 193ನೇ ವಚನವಾಗಿದ್ದರೆ ಅದೇ ಅಧ್ಯಾಯದ 190 ನೇ ವಚನದಲ್ಲಿ ''ನಿಮ್ಮ ವಿರುದ್ಧ ಯುದ್ಧ ಮಾಡುವವರ ವಿರುದ್ಧ ನೀವು ಅಲ್ಲಾಹನ ಮಾರ್ಗದಲ್ಲಿ ಯುದ್ಧ ಮಾಡಿರಿ. ಆದರೆ ಅತಿರೇಕವೆಸಗಬೇಡಿ. ಖಂಡಿತವಾಗಿಯೂ ಅಲ್ಲಾಹನು ಅತಿರೇಕವೆಸಗುವವರನ್ನು ಮೆಚ್ಚುವುದಿಲ್ಲÉ'' ಎಂದು ಹೇಳಲಾಗಿದೆ. 191 ನೇ ವಚನದಲ್ಲಿ ''ಅವರು ನಿಮ್ಮ ವಿರುದ್ಧ ಯುದ್ಧ ಮಾಡುವ ತನಕ ನೀವು ಅವರ ವಿರುದ್ಧ ಯುದ್ಧ ಮಾಡಬೇಡಿ.'' ಎಂಬ ನಿರ್ಬಂಧವಿದೆ. ಮತ್ತೆ 192ನೇ ವಚನದಲ್ಲಿ '' ಒಂದು ವೇಳೆ ಅವರು ತಡೆದು ನಿಂತರೆ (ಯುದ್ಧ ವಿರಾಮ ಘೋಷಿಸಿದರೆ), ಖಂಡಿತವಾಗಿಯೂ ಅಲ್ಲಾಹನು ಕ್ಷಮಿಸುವವನು ಮತ್ತು ಕರುಣೆ ತೋರುವವನಾಗಿದ್ದಾನೆ'' ಎನ್ನುವ ಮೂಲಕ, ಅನಿವಾರ್ಯ ಸನ್ನಿವೇಶದಲ್ಲಿ ಯುದ್ಧ ಆರಂಭವಾದರೂ, ಶತ್ರು ಪಾಳಯವು ಯುದ್ಧವಿರಾಮ ಘೋಷಿಸಿದರೆ ನೀವೂ ಯುದ್ಧ ನಿಲ್ಲಿಸಬೇಕೆಂಬ ಸ್ಪಷ್ಟ ಸೂಚನೆ ಇದೆ.
ಸಾಕ್ಷಾತ್ ಈ 193ನೇ ವಚನದಲ್ಲೂ ಕೇವಲ "... ನೀವು ಅವರ ವಿರುದ್ಧ ಯುದ್ಧ ಮಾಡಿರಿ..." ಎಂಬ ಮಾತು ಮಾತ್ರ ಇರುವುದಲ್ಲ. "ಇನ್ನು, ಅವರು ತಡೆದು ನಿಂತರೆ (ಯುದ್ಧ ವಿರಾಮ ಘೋಷಿಸಿದರೆ), ಅಕ್ರಮವೆಸಗಿದವರ ಹೊರತು ಇನ್ನಾರ ಮೇಲೂ ಆಕ್ರಮಣಕ್ಕೆ ಅವಕಾಶವಿಲ್ಲ'' ಎಂಬ ಮಾತುಗಳೂ ಇದೇ ವಚನದ ಭಾಗಗಳಾಗಿವೆ. ಸಾಲದ್ದಕ್ಕೆ ಇದರ ಮುಂದಿನ, ಅಂದರೆ 194ನೇ ವಚನದಲ್ಲಿ ಮತ್ತೆ, '' ನಿಮ್ಮ ಮೇಲೆ ಅತಿಕ್ರಮವೆಸಗಿದವರ ಮೇಲೆ ನೀವು, (ಹೆಚ್ಚೆಂದರೆ) ಅವರು ನಿಮ್ಮ ಮೇಲೆ ಎಸಗಿದಷ್ಟೇ ಪ್ರತಿಕ್ರಮವನ್ನೆಸಗಿರಿ ಮತ್ತು ಅಲ್ಲಾಹನಿಗೆ ಅಂಜಿರಿ'' ಎಂಬ ಎಚ್ಚರಿಕೆ ಇದೆ. ಇಷ್ಟನ್ನು ಅರಿತುಕೊಂಡ ಬಳಿಕ ನೀವು "'... ನೀವು ಅವರ ವಿರುದ್ಧ ಯುದ್ಧ ಮಾಡಿರಿ..."' 2: 193 ಎಂಬ ಉದ್ಧರಣೆಯನ್ನು ಓದಿದರೆ ಅವರ ಅಭಿಪ್ರಾಯ ಮೊದಲಿನಂತಿದ್ದೀತೇ ?
ಹಗರಣ 3.
"ಅವರನ್ನು ಕೊಲ್ಲಬೇಕು ಅಥವಾ ಶಿಲುಬೆಗೆ ಏರಿಸಬೇಕು ಅಥವಾ ಅವರ ಕೈಗಳನ್ನು ಮತ್ತು ಕಾಲುಗಳನ್ನು ವಿರುದ್ಧ ಕಡೆಗಳಲ್ಲಿ (ಉದಾ : ಬಲಗೈ ಮತ್ತು ಎಡಗಾಲು ಅಥವಾ ಎಡಗೈ ಮತ್ತು ಬಲಗಾಲು) ಕತ್ತರಿಸಬೇಕು ಅಥವಾ ಅವರನ್ನು ನಾಡಿನಿಂದ ಹೊರಗಟ್ಟ ಬೇಕು...." 5:33
ಇದು ಕುರ್ ಆನ್ ಮೇಲೆ ಸುಳ್ಳಾರೋಪಗಳನ್ನು ಹೊರಿಸುವವರು ಬಳಸುವ ಇನ್ನೊಂದು ಮೋಸದ ಅಸ್ತ್ರ. ಅವರು ಕೇವಲ ಇಷ್ಟೇ ಪದಗಳನ್ನು ಜನರ ಮುಂದಿಟ್ಟು ಕುರ್ ಆನ್ ಎಲ್ಲ ಅನ್ಯ ಮತೀಯರನ್ನು ಕೊಲ್ಲಲು ಮುಸ್ಲಿಮರಿಗೆ ಆದೇಶಿಸುತ್ತದೆಂಬ ಘೋರ ಸುಳ್ಳನ್ನು ಪ್ರಸಾರ ಮಾಡಲು ಶ್ರಮಿಸುತ್ತಾರೆ. ನಿಜವಾಗಿ ಇದು ಪವಿತ್ರ ಕುರ್ ಆನ್ ನ 5ನೇ ಅಧ್ಯಾಯದ ಒಂದು ಪುಟ್ಟ ಭಾಗ ಮಾತ್ರ. ಆದರೆ ಆತುರ ಜೀವಿಗಳು ಇಷ್ಟನ್ನೇ ಓದಿ, ಸಾವಿರಾರು ವಚನಗಳನ್ನು ಒಳಗೊಂಡ ಒಂದು ಬೃಹತ್ ಗ್ರಂಥದ ಬಗ್ಗೆ ಹಲವು ಅಪಾಯಕಾರಿ ಕುರುಡು ತೀರ್ಮಾನಗಳನ್ನು ಕೈಗೊಂಡು ಬಿಡುತ್ತಾರೆ. ಸತ್ಯವನ್ನು ಅರಿಯಬೇಕು ಎಂಬ ಪ್ರಾಮಾಣಿಕ ಆಸಕ್ತಿ ಉಳ್ಳವರು ಮಾತ್ರ ಇದರ ಪೂರ್ವಾಪರಗಳನ್ನು ನೋಡಲು ಹೊರಡುತ್ತಾರೆ. ಆಗ ಅವರ ಮುಂದೆ ಬೇರೆಯೇ ಲೋಕವೊಂದು ತೆರೆದುಕೊಳ್ಳುತ್ತದೆ. ಈ ಅಧ್ಯಾಯದ 27 ರಿಂದ 34ರ ವರೆಗಿನ ವಚನಗಳು ಗಮನಾರ್ಹವಾಗಿವೆ:
"ನೀವು ಅವರಿಗೆ ಆದಮರ ಇಬ್ಬರು ಪುತ್ರರ ನೈಜ ಘಟನೆಯನ್ನು ತಿಳಿಸಿರಿ. ಅವರಿಬ್ಬರೂ ಬಲಿದಾನ ನೀಡಿದಾಗ, ಅವರ ಪೈಕಿ ಒಬ್ಬನ ಬಲಿದಾನವು ಸ್ವೀಕತವಾಯಿತು ಮತ್ತು ಇನ್ನೊಬ್ಬನದು ಸ್ವೀಕತವಾಗಲಿಲ್ಲ. ಅವನು - ‘‘ನಾನು ಖಂಡಿತ ನಿನ್ನನ್ನು ವಧಿಸುತ್ತೇನೆ’’ ಎಂದನು. ಅವನು (ಮೊದಲನೆಯವನು) ಉತ್ತರಿಸಿದನು; ‘‘ಅಲ್ಲಾಹನಂತು, (ಯಾವುದನ್ನೂ) ಧರ್ಮನಿಷ್ಠರಿಂದ ಮಾತ್ರ ಸ್ವೀಕರಿಸುತ್ತಾನೆ.‘‘ 5:27
‘‘ನೀನೀಗ ನನ್ನನ್ನು ಕೊಲ್ಲಲಿಕ್ಕೆಂದು ನನ್ನ ಮೇಲೆ ಕೈ ಎತ್ತಿದರೂ, ನಾನಂತೂ ನಿನ್ನನ್ನು ಕೊಲ್ಲಲು ನಿನ್ನ ಮೇಲೆ ಕೈ ಎತ್ತುವವನಲ್ಲ. ಖಂಡಿತವಾಗಿಯೂ ನನಗೆ ಸರ್ವಲೋಕಗಳ ಪಾಲಕನಾದ ಅಲ್ಲಾಹನ ಭಯವಿದೆ’’5:28
‘‘ಖಂಡಿತವಾಗಿಯೂ ನೀನೀಗ ನನ್ನ ಪಾಪಗಳನ್ನೂ ನಿನ್ನ ಪಾಪಗಳನ್ನೂ ಹೊತ್ತು ನರಕವಾಸಿಗಳ ಸಾಲಿಗೆ ಸೇರಬೇಕೆಂದು ನಾನು ಬಯಸುತ್ತೇನೆ. ಅಕ್ರಮಿಗಳಿಗೆ ಇರುವುದು ಅದೇ ಪ್ರತಿಫಲ.’’ 5:29
"ಕೊನೆಗೆ ಅವನ ಚಿತ್ತವು ತನ್ನ ಸಹೋದರನ ಹತ್ಯೆಗೆ ಅವನನ್ನು ಸಿದ್ಧಗೊಳಿಸಿತು. ಅವನು ತನ್ನ ಸಹೋದರನನ್ನು ಕೊಂದು ಬಿಟ್ಟನು ಮತ್ತು ಎಲ್ಲವನ್ನೂ ಕಳೆದುಕೊಂಡವರ ಸಾಲಿಗೆ ಸೇರಿದನು". 5:30
"ಆ ಬಳಿಕ ಅಲ್ಲಾಹನು (ಅವನೆಡೆಗೆ) ಒಂದು ಕಾಗೆಯನ್ನು ಕಳುಹಿಸಿದನು. ತನ್ನ ಸಹೋದರನ ಶವವನ್ನು ಹೇಗೆ ಅಡಗಿಸಬೇಕೆಂದು ಆತನಿಗೆ ತೋರಿಸಲು ಅದು ನೆಲವನ್ನು ಕೊರೆಯುತ್ತಿತ್ತು . ಆಗ ಅವನು ಹೇಳಿದನು; ’’ಅಯ್ಯೋ ನನ್ನ ಅವಸ್ಥೆ! ನನ್ನ ಸಹೋದರನ ಶವವನ್ನು ಅಡಗಿಸುವ ವಿಷಯದಲ್ಲಿ ಈ ಕಾಗೆಯಂತಾಗಲಿಕ್ಕೂ ನನ್ನಿಂದಾಗಲಿಲ್ಲ’’. ಹೀಗೆ ಅವನು, ಪಶ್ಚಾತ್ತಾಪ ಪಡುವವರ ಸಾಲಿಗೆ ಸೇರಿದನು". 5:31
"ಇದೇ ಕಾರಣದಿಂದ ನಾವು ಇಸ್ರಾಈಲ್ ಸಂತತಿಗಳಿಗೆ ಈ ರೀತಿ ವಿಧಿಸಿದೆವು; ಒಂದು ಮಾನವ ಜೀವಕ್ಕೆ ಪ್ರತಿಯಾಗಿ (ಒಂದು ಕೊಲೆಗೆ ಶಿಕ್ಷೆಯಾಗಿ) ಅಥವಾ ಭೂಮಿಯಲ್ಲಿ ಅಶಾಂತಿ ಹರಡಿದ್ದಕ್ಕೆ (ಶಿಕ್ಷೆಯಾಗಿ) ಹೊರತು - ಒಂದು ಮಾನವ ಜೀವವನ್ನು ಕೊಂದವನು ಎಲ್ಲ ಮಾನವರನ್ನು ಕೊಂದಂತೆ. ಹಾಗೆಯೇ ಅದನ್ನು (ಒಂದು ಮಾನವ ಜೀವವನ್ನು) ರಕ್ಷಿಸಿದವನು ಎಲ್ಲ ಮಾನವರನ್ನು ರಕ್ಷಿಸಿದಂತೆ. ಮುಂದೆ ಅವರ ಬಳಿಗೆ ಸ್ಪಷ್ಟ ಪುರಾವೆಗಳೊಂದಿಗೆ ನಮ್ಮ ಅನೇಕ ದೂತರು ಬಂದರು. ಇಷ್ಟಾಗಿಯೂ ಅವರಲ್ಲಿ ಹೆಚ್ಚಿನವರು ಭೂಮಿಯಲ್ಲಿ ಅತಿರೇಕ ಎಸಗುವವರಾಗಿದ್ದಾರೆ". 5:32
"ಅಲ್ಲಾಹ್ ಮತ್ತು ಅವನ ದೂತರ ವಿರುದ್ಧ ಯುದ್ಧ ಸಾರಿದವರಿಗೆ ಮತ್ತು ಭೂಮಿಯಲ್ಲಿ ಅಶಾಂತಿಯನ್ನು ಹಬ್ಬಲು ಹೆಣಗಾಡುವವರಿಗೆ ಇರುವ ಪ್ರತಿಫಲವೇನೆಂದರೆ, ಅವರನ್ನು ಕೊಲ್ಲಬೇಕು ಅಥವಾ ಶಿಲುಬೆಗೇರಿಸಬೇಕು ಅಥವಾ ಅವರ ಕೈಗಳನ್ನು ಹಾಗೂ ಕಾಲುಗಳನ್ನು ವಿರುದ್ಧ ಕಡೆಗಳಲ್ಲಿ (ಉದಾ: ಬಲಗೈ ಮತ್ತು ಎಡಕಾಲು) ಕತ್ತರಿಸಬೇಕು ಅಥವಾ ಅವರನ್ನು ನಾಡಿನಿಂದ ಹೊರಗಟ್ಟಬೇಕು. ಇದು ಇಹಲೋಕದಲ್ಲಿ ಅವರಿಗಿರುವ ಅಪಮಾನ. ಇನ್ನು ಪರಲೋಕದಲ್ಲಂತೂ ಅವರಿಗಾಗಿ ಭಾರೀ ಹಿಂಸೆ ಕಾದಿದೆ". 5:33
"ನಿಮ್ಮ ನಿಯಂತ್ರಣಕ್ಕೆ ಬರುವ ಮುನ್ನವೇ ಪಶ್ಚಾತ್ತಾಪ ಪಟ್ಟವರು ಇದಕ್ಕೆ ಹೊರತಾಗಿದ್ದಾರೆ. ನಿಮಗೆ ತಿಳಿದಿರಲಿ! ಅಲ್ಲಾಹನು ತುಂಬಾ ಕ್ಷಮಿಸುವವನು ಮತ್ತುಕರುಣಾಮಯಿಯಾಗಿದ್ದಾನೆ. 5:34
ಯಾರಾದರೂ ಸಂಪೂರ್ಣ ಕುರ್ ಆನ್ ಅನ್ನು ಓದದೆ ಕೇವಲ, ಕುರ್ ಆನ್ ನ ಮೇಲ್ಕಾಣಿಸಿದ 8 ವಚನಗಳನ್ನಷ್ಟೇ ಒಂದಿಷ್ಟು ಗಮನವಿಟ್ಟು ಓದಿದರೆ, ಆಗಲೂ ಅವರು ಈ ವಿಷಯದಲ್ಲಿ ದಾರಿ ತಪ್ಪುವ ಸಾಧ್ಯತೆ ಕಡಿಮೆಯಾಗುತ್ತದೆ. ಇಲ್ಲಿರುವ 5ನೇ ಅಧ್ಯಾಯದ 8 ವಚನಗಳ ಪೈಕಿ 27 ರಿಂದ 31ರ ವರೆಗಿನ ವಚನಗಳಲ್ಲಿ ಒಬ್ಬ ಸಜ್ಜನ ಹಾಗೂ ಒಬ್ಬ ದುಷ್ಟನ ನಡುವೆ ನಡೆದ ಜಗಳವನ್ನು ಪ್ರಸ್ತಾಪಿಸಿ, ಅವರಿಬ್ಬರ ಧೋರಣೆಗಳು ಎಷ್ಟು ಭಿನ್ನವಾಗಿದ್ದವು ಎಂಬುದನ್ನು ತೋರಿಸಿ, ಸಜ್ಜನನ ನಡವಳಿಕೆಯನ್ನು ಆದರ್ಶದ ರೂಪದಲ್ಲಿ ಮುಂದಿಡಲಾಗಿದೆ. ಇಲ್ಲಿ ಕೊಲೆಗಾರನನ್ನು ಖಳನಾಯಕನ ರೂಪದಲ್ಲೂ ಕೊಲೆಯಾದ ವ್ಯಕ್ತಿಯನ್ನು ಅನುಕರಣೀಯ ಮಾದರಿಯ ರೂಪದಲ್ಲೂ ಚಿತ್ರಿಸಲಾಗಿದೆ. ಇಲ್ಲಿ ಒಬ್ಬ ದುಷ್ಟವ್ಯಕ್ತಿಯು ಅಸೂಯೆಯಿಂದ ಪ್ರೇರಿತನಾಗಿ ಒಬ್ಬ ಸಜ್ಜನನನ್ನು ಕೊಲ್ಲಲು ಕೈ ಎತ್ತುತ್ತಾನೆ (ವಚನ - 27). ಆಗ ಆ ಸಜ್ಜನ ವ್ಯಕ್ತಿಯು ಪ್ರತಿಹಿಂಸೆಗೆ ಇಳಿಯುವ ಬದಲು ‘‘ನೀನೀಗ ನನ್ನನ್ನು ಕೊಲ್ಲಲಿಕ್ಕೆಂದು ನನ್ನ ಮೇಲೆ ಕೈ ಎತ್ತಿದರೂ, ನಾನಂತೂ ನಿನ್ನನ್ನು ಕೊಲ್ಲಲು ನಿನ್ನ ಮೇಲೆ ಕೈ ಎತ್ತುವವನಲ್ಲ. ಖಂಡಿತವಾಗಿಯೂ ನನಗೆ ಸರ್ವಲೋಕಗಳ ಪಾಲಕನಾದ ಅಲ್ಲಾಹನ ಭಯವಿದೆ’’ ಎನ್ನುತ್ತಾನೆ (ವಚನ 28). ಮುಂದೆ ಜಾತಿ, ಜನಾಂಗ, ದೇಶ, ವರ್ಣ ಇತ್ಯಾದಿ ಯಾವ ಭೇದವೂ ಇಲ್ಲದೆ ಪ್ರತಿಯೊಂದು ಮಾನವ ಜೀವದ ಮಹತ್ವವನ್ನು ಸಾರಿ, "' ಒಂದು ಮಾನವ ಜೀವಕ್ಕೆ ಪ್ರತಿಯಾಗಿ (ಒಂದು ಕೊಲೆಗೆ ಶಿಕ್ಷೆಯಾಗಿ) ಅಥವಾ ಭೂಮಿಯಲ್ಲಿ ಅಶಾಂತಿ ಹರಡಿದ್ದಕ್ಕೆ (ಶಿಕ್ಷೆಯಾಗಿ) ಹೊರತು - ಒಂದು ಮಾನವ ಜೀವವನ್ನು ಕೊಂದವನು ಎಲ್ಲ ಮಾನವರನ್ನು ಕೊಂದಂತೆ. ಹಾಗೆಯೇ ಅದನ್ನು (ಒಂದು ಮಾನವ ಜೀವವನ್ನು) ರಕ್ಷಿಸಿದವನು ಎಲ್ಲ ಮಾನವರನ್ನು ರಕ್ಷಿಸಿದಂತೆ'' ಎಂದು ಘೋಷಿಸಲಾಗಿದೆ (ವಚನ - 32).
ಯಾವ ತಾರತಮ್ಯವೂ ಇಲ್ಲದೆ ಪ್ರತಿಯೊಬ್ಬ ಮಾನವ ಜೀವವನ್ನು ಮತ್ತು ಜೀವ ರಕ್ಷಣೆಯನ್ನು ಈ ಮಟ್ಟದಲ್ಲಿ ವೈಭವೀಕರಿಸುವ ಮತ್ತು ಒಬ್ಬ ಮಾನವ ಜೀವಿಯ ಹತ್ಯೆಯನ್ನು ಇಷ್ಟೊಂದು ಉಗ್ರವಾಗಿ ಖಂಡಿಸುವ ವಚನವೊಂದು ಬಹುಶಃ ಜಗತ್ತಿನ ಬೇರಾವ ಗ್ರಂಥದಲ್ಲೂ ಕಾಣಲು ಸಿಗದು.
ಇನ್ನು ಸಾಕ್ಷಾತ್ 33ನೇ ವಚನವನ್ನೇ ನೋಡುವುದಾದರೆ, ಸತ್ಯದ ಶತ್ರುಗಳು ಆ ವಚನವನ್ನು ಪೂರ್ಣವಾಗಿ ಉದ್ಧರಿಸುವ ಧೈರ್ಯ ತೋರುವುದಿಲ್ಲ. "ಅವರನ್ನು ಕೊಲ್ಲಬೇಕು ಅಥವಾ ಶಿಲುಬೆಗೆ ಏರಿಸಬೇಕು'' ಎಂಬುದು ಆ ವಚನದ ಕೇವಲ ಮಧ್ಯಭಾಗ ಮಾತ್ರವೇ ಹೊರತು, ಮೇಲ್ನೋಟಕ್ಕೆ ಕಾಣುವಂತೆ ಆ ವಚನದ ಆರಂಭದ ಭಾಗವೇನಲ್ಲ. ವಚನದ ಪೂರ್ಣ ರೂಪವು ಹೀಗಿದೆ:
"ಅಲ್ಲಾಹ್ ಮತ್ತು ಅವನ ದೂತರ ವಿರುದ್ಧ ಯುದ್ಧ ಸಾರಿದವರಿಗೆ ಮತ್ತು ಭೂಮಿಯಲ್ಲಿ ಅಶಾಂತಿಯನ್ನು ಹಬ್ಬಲು ಹೆಣಗಾಡುವವರಿಗೆ ಇರುವ ಪ್ರತಿಫಲವೇನೆಂದರೆ, ಅವರನ್ನು ಕೊಲ್ಲಬೇಕು ಅಥವಾ ಶಿಲುಬೆಗೇರಿಸಬೇಕು ಅಥವಾ ಅವರ ಕೈಗಳನ್ನು ಹಾಗೂ ಕಾಲುಗಳನ್ನು ವಿರುದ್ಧ ಕಡೆಗಳಲ್ಲಿ (ಉದಾ: ಬಲಗೈ ಮತ್ತು ಎಡಕಾಲು) ಕತ್ತರಿಸಬೇಕು ಅಥವಾ ಅವರನ್ನು ನಾಡಿನಿಂದ ಹೊರಗಟ್ಟಬೇಕು. ಇದು ಇಹಲೋಕದಲ್ಲಿ ಅವರಿಗಿರುವ ಅಪಮಾನ. ಇನ್ನು ಪರಲೋಕದಲ್ಲಂತೂ ಅವರಿಗಾಗಿ ಭಾರೀ ಹಿಂಸೆ ಕಾದಿದೆ". 5:33
ಇಲ್ಲಿ ಮತ್ತೆ, ಹಿನ್ನೆಲೆ, ಸನ್ನಿವೇಶ ಇತ್ಯಾದಿ ಯಾವುದನ್ನೂ ತಿರುಗಿ ನೋಡದೆ, ಕೇವಲ ಈ ಒಂದು ವಚನವನ್ನೇ ಪೂರ್ತಿಯಾಗಿ ಓದಿದರೂ ಹಲವು ಸುಪ್ತ ಮಾಹಿತಿಗಳು ಅನಾವರಣ ಗೊಳ್ಳುತ್ತವೆ. ಇಲ್ಲಿ "ಅವರನ್ನು ಕೊಲ್ಲಬೇಕು" ಎಂದಿರುವುದು ಯುದ್ಧ ನಿರತ ಶತ್ರುಗಳ ಬಗ್ಗೆಯೆ ಹೊರತು ಅನ್ಯ ಮತೀಯರ ಬಗ್ಗೆ ಅಲ್ಲ. '' ಅಲ್ಲಾಹ್ ಮತ್ತು ಅವನ ದೂತರ ವಿರುದ್ಧ ಯುದ್ಧ ಸಾರಿದವರಿಗೆ ಮತ್ತು ಭೂಮಿಯಲ್ಲಿ ಅಶಾಂತಿಯನ್ನು ಹಬ್ಬಲು ಹೆಣಗಾಡುವವರಿಗೆ ಇರುವ ಪ್ರತಿಫಲವೇನೆಂದರೆ, ಅವರನ್ನು ಕೊಲ್ಲಬೇಕು ... ... "' ಎಂಬ ಪದಗಳಿಂದ ವ್ಯಕ್ತವಾಗುವಂತೆ, ಅಲ್ಲಾಹ್ ಮತ್ತವನ ದೂತರನ್ನು ನಂಬದವರಿಗಾಗಲಿ ಅವರ ವಿರೋಧಿಗಳಿಗಾಗಲಿ ಇದು ಅನ್ವಯಿಸುವುದಿಲ್ಲ. ಇದು ಯುದ್ಧ ಸಾರಿದವರಿಗೆ ಮತ್ತು ಭೂಮಿಯಲ್ಲಿ ಅಶಾಂತಿಯನ್ನು ಹಬ್ಬುವುದಕ್ಕಾಗಿ ಹೆಣಗಾಡುವವರಿಗೆ ಅನ್ವಯಿಸುವ ಆದೇಶ. ಈ ಅಪರಾಧಗಳನ್ನು ಎಸಗಿದವರು ಬಂಧಿತರಾಗುವ ಮುನ್ನ ತಮ್ಮ ಕೃತ್ಯಕ್ಕಾಗಿ ಪಶ್ಚಾತ್ತಾಪ ಪಟ್ಟರೆ ಆಗಲೂ ಪ್ರಸ್ತುತ ಆದೇಶವು ಅವರಿಗೆ ಅನ್ವಯವಾಗುವುದಿಲ್ಲ ಎಂದು ಮುಂದಿನ ವಚನದಲ್ಲಿ (ವಚನ - 34) ತಿಳಿಸಲಾಗಿದೆ. ಮಾತ್ರವಲ್ಲ, ಅದೇ ವಚನದಲ್ಲಿ, ಅಲ್ಲಾಹನು ಕ್ಷಮಾಶೀಲನೆಂಬುದನ್ನು ನೆನಪಿಸುವ ಮೂಲಕ ಪಶ್ಚಾತ್ತಾಪ ಪಡುವ ತಪ್ಪಿತಸ್ಥರನ್ನು ಕ್ಷಮಿಸಬೇಕೆಂದು ಸೂಚಿಸಲಾಗಿದೆ. ಒಂದು ವೇಳೆ ಹಿಂಸೆಯನ್ನು ಪ್ರಚೋದಿಸುವುದೇ ಕುರ್ ಆನ್ನ ಉದ್ದೇಶವಾಗಿದ್ದರೆ, ಅದು ಈ ರೀತಿಮಾನವ ಜೀವವನ್ನು ವೈಭವೀಕರಿಸುತ್ತಿತ್ತೇ? ತನ್ನ ವಿರುದ್ಧ ಹಿಂಸೆಗಿಳಿದ, ಮಾತ್ರವಲ್ಲ ತನ್ನನ್ನು ಕೊಲ್ಲಲು ಹೊರಟವನ ಮುಂದೆ ಅಹಿಂಸೆಯ ಧೋರಣೆ ತಾಳಿದ ವ್ಯಕ್ತಿಯನ್ನು ಆದರ್ಶವ್ಯಕ್ತಿಯಾಗಿ ಪರಿಚಯಿಸುತ್ತಿತ್ತೇ?
ಹಗರಣ 4.
" .... ಆ ಬಹುದೇವಾರಾಧಕರನ್ನು ಕಂಡಲ್ಲಿ ಕೊಲ್ಲಿರಿ, ಅವರನ್ನು ಹಿಡಿಯಿರಿ, ಸುತ್ತುವರಿಯಿರಿ, ಮತ್ತು ಪ್ರತಿಯೊಂದು ಆಯಕಟ್ಟಿನ ಸ್ಥಳದಲ್ಲಿ ಅವರಿಗಾಗಿ ಹೊಂಚಿನಲ್ಲಿರಿ...." 9:5
ಇದು ಕುರ್ ಆನ್ ವಿರುದ್ಧ ಅಪಪ್ರಚಾರದಲ್ಲಿ ನಿರತರಾಗಿರುವವರು ಅತ್ಯಧಿಕವಾಗಿ ದುರುಪಯೋಗ ಪಡಿಸುವ ವಚನಗಳಲ್ಲೊಂದು. ಇದು ಒಂದು ಸಂಪೂರ್ಣ ವಚನವೂ ಅಲ್ಲ. ಕುರ್ ಆನ್ ನ 9ನೇ ಅಧ್ಯಾಯದ 5ನೇ ವಚನದ ಒಂದು ಭಾಗ ಮಾತ್ರ. ಇದರ ಇಂಗಿತ ಮತ್ತು ತಾತ್ಪರ್ಯವನ್ನು ಪೂರ್ಣವಾಗಿ ಗ್ರಹಿಸಲು ಈ ವಚನಗಳ ಐತಿಹಾಸಿಕ ಹಿನ್ನೆಲೆಯನ್ನು ಮತ್ತು ಸ್ವತಃ ಕುರ್ ಆನ್ ನಲ್ಲಿರುವ ಸಾಂಧರ್ಭಿಕ ಹಿನ್ನೆಲೆಯನ್ನು ಅರಿತಿರಬೇಕಾಗುತ್ತದೆ. ಇದೇ ಅಧ್ಯಾಯದ 1ರಿಂದ14ರ ವರೆಗಿನ ವಚನಗಳು ಆ ನಿಟ್ಟಿನಲ್ಲಿ ತುಂಬಾ ನಿರ್ಣಾಯಕವಾಗಿವೆ. ನಾವೀಗ ಈ ಒಂದು ವಚನವನ್ನೇ ಪೂರ್ಣವಾಗಿ, ಮಾತ್ರವಲ್ಲ, ಅದರ ಹಿಂದಿನ ಮತ್ತು ಮುಂದಿನ ಒಂದೊಂದು ವಚನದ ಜೊತೆ ಸೇರಿಸಿ ಓದೋಣ:
"ಬಹುದೇವಾರಾಧಕರ ಪೈಕಿ ನೀವು ಕರಾರು ಮಾಡಿಕೊಂಡಿರುವ ಮತ್ತು ಆ ಬಳಿಕ ನಿಮಗೆ ಯಾವುದೇ ಹಕ್ಕುಚ್ಯುತಿ ಮಾಡಿಲ್ಲದ ಹಾಗೂ ನಿಮ್ಮ ವಿರುದ್ಧ ಯಾರಿಗೂ ನೆರವು ನೀಡಿಲ್ಲದ ಜನಾಂಗಗಳ ಕರಾರುಗಳನ್ನು ಅವುಗಳ ಅವಧಿಯ ತನಕ ಪೂರ್ತಿಗೊಳಿಸಿರಿ. ಖಂಡಿತವಾಗಿಯೂ ಅಲ್ಲಾಹನು ಧರ್ಮನಿಷ್ಠರನ್ನು ಪ್ರೀತಿಸುತ್ತಾನೆ". (9:4)
"(ನಾಲ್ಕು) ಪವಿತ್ರ ತಿಂಗಳುಗಳು ಮುಗಿದಾಗ, ಆ ಬಹುದೇವಾರಾಧಕರನ್ನು ಕಂಡಲ್ಲಿ ಕೊಲ್ಲಿರಿ, ಅವರನ್ನು ಹಿಡಿಯಿರಿ, ಸುತ್ತುವರಿಯಿರಿ ಮತ್ತು ಪ್ರತಿಯೊಂದು ಆಯಕಟ್ಟಿನ ಸ್ಥಳದಲ್ಲಿ ಅವರಿಗಾಗಿ ಹೊಂಚಿನಲ್ಲಿರಿ. ತರುವಾಯ, ಅವರು ಪಶ್ಚಾತ್ತಾಪ ಪಟ್ಟರೆ, ನಮಾಝ್‌ಅನ್ನು ಪಾಲಿಸುವವರಾದರೆ ಮತ್ತು ಝಕಾತ್‌ಅನ್ನು ಪಾವತಿಸಿದರೆ, ಅವರಿಗೆ ಅವರ ದಾರಿಯನ್ನು ಬಿಟ್ಟು ಕೊಡಿರಿ. ಖಂಡಿತವಾಗಿಯೂ ಅಲ್ಲಾಹನು ಕ್ಷಮಿಸುವವನು ಮತ್ತು ಕರುಣಾಮಯಿಯಾಗಿದ್ದಾನೆ". (9:5)
"ಇನ್ನು ಬಹುದೇವಾರಾಧಕರ ಪೈಕಿ ಯಾರಾದರೂ ನಿಮ್ಮ ಆಶ್ರಯ ಬಯಸಿದರೆ, ಅವನು ಅಲ್ಲಾಹನ ವಾಣಿಯನ್ನು ಕೇಳುವ ತನಕ ಅವನಿಗೆ ಆಶ್ರಯ ನೀಡಿರಿ . ಆ ಬಳಿಕ ಅವನನ್ನು ಅವನ ಸುರಕ್ಷಿತ ಸ್ಥಳಕ್ಕೆ ತಲುಪಿಸಿರಿ. ಇದೇಕೆಂದರೆ, ಅವರು ಅರಿವಿಲ್ಲದವರು". (9:6)
ಇದು ನಿಜವಾಗಿ, ಅಸಾಮಾನ್ಯವಾಗಿದ್ದ ಒಂದು ನಿರ್ದಿಷ್ಟ ವಿಷಮ ಸನ್ನಿವೇಶಕ್ಕೆ ಮಾತ್ರ ಸಂಬಂಧಿಸಿದ ಆದೇಶವಾಗಿದೆ. ಇದು ಯಾರಿಗೆ ಅನ್ವಯವಾಗುವುದಿಲ್ಲ ಎಂಬುದನ್ನು ಇದೇ ಅಧ್ಯಾಯದ 4ನೇ ವಚನದಲ್ಲಿ ಸ್ಪಷ್ಟಪಡಿಸಲಾಗಿದೆ. ಅಲ್ಲಿರುವ, "(ನಾಲ್ಕು) ಪವಿತ್ರ ತಿಂಗಳುಗಳು ಮುಗಿದಾಗ"ಎಂಬ ಪದಗಳು, ಇದು ಒಂದು ನಿರ್ದಿಷ್ಟ ಕಾಲಕ್ಕೆ ಅಥವಾ ಆ ನಿರ್ದಿಷ್ಟ ವರ್ಷಕ್ಕೆ ಮಾತ್ರ ಸಂಬಂಧಿಸಿದ ಆದೇಶವೆಂಬುದಕ್ಕೆ ಪುರಾವೆಯಾಗಿವೆ. ಈ ಆದೇಶದ ಹಿಂದೆ ಬಹಳ ಮಹತ್ವದ ಒಂದು ಐತಿಹಾಸಿಕ ಹಿನ್ನೆಲೆ ಇದೆ. ಆ ಹಿನ್ನೆಲೆಯನ್ನು ಅರಿಯದೆ ಅಥವಾ ಅದನ್ನು ಕಡೆಗಣಿಸಿ ಈ ವಚನಗಳನ್ನು ಓದುವವರು ಹಲವು ಎಡವಟ್ಟುಗಳಿಗೆ ತುತ್ತಾಗುವುದು ಖಚಿತ. ಈ ಅಧ್ಯಾಯದ 1 ರಿಂದ 14 ರ ವರೆಗಿನ ವರೆಗಿನ ವಚನಗಳನ್ನು ಜೊತೆಯಾಗಿ ಓದಿದರೂ ಹಲವು ಸಂಶಯಗಳು ನಿವಾರಣೆಯಾಗುತ್ತವೆ.
"ಇನ್ನು ಬಹುದೇವಾರಾಧಕರ ಪೈಕಿ ಯಾರಾದರೂ ನಿಮ್ಮ ಆಶ್ರಯ ಬಯಸಿದರೆ, ಅವನು ಅಲ್ಲಾಹನ ವಾಣಿಯನ್ನು ಕೇಳುವ ತನಕ ಅವನಿಗೆ ಆಶ್ರಯ ನೀಡಿರಿ. ಆ ಬಳಿಕ ಅವನನ್ನು ಅವನ ಸುರಕ್ಷಿತ ಸ್ಥಳಕ್ಕೆ ತಲುಪಿಸಿರಿ. ಇದೇಕೆಂದರೆ, ಅವರು ಅರಿವಿಲ್ಲದವರು." (9:6) ಐದನೇ ವಚನದ ಬೆನ್ನಿಗೆ ಇರುವ ಈ ಆರನೇ ವಚನದಲ್ಲಿ, ಅನಿವಾರ್ಯವಾಗಿ ಖಡ್ಗವನ್ನು ಕೈಗೆತ್ತಿಕೊಳ್ಳಬೇಕಾಗಿ ಬಂದರೂ ಖಡ್ಗವನ್ನೇ ಶಾಶ್ವತ ಧೋರಣೆಯಾಗಿಸಿ ಕೊಳ್ಳಬೇಡಿ, ಶಾಂತಿಯ ಅವಕಾಶಗಳನ್ನು ಕಳೆದುಕೊಳ್ಳಬೇಡಿ, ಶತ್ರುಗಳು ಕೂಡಾ ಅಭಯ ಕೇಳಿದರೆ ಅವರಿಗೆ ಅಭಯ ನೀಡಿ, ಆಶ್ರಯ ಅರಸಿ ಬಂದವರಿಗೆ ಸತ್ಯ ಸಂದೇಶವನ್ನು ತಲುಪಿಸಿ, ಅವರಿಗೆ ಭದ್ರತೆ ಒದಗಿಸಿ, ಸುರಕ್ಷಿತವಾಗಿ ತಮ್ಮ ನೆಲೆಯನ್ನು ಸೇರಲು ಅವರಿಗೆ ನೇರವಾಗಿ ಎಂಬಿತ್ಯಾದಿ ಉದಾರ ಆಶಯಗಳು ಎದ್ದುಕಾಣುತ್ತವೆ.
9: 1 to 14
ನೀವು ಕರಾರು ಮಾಡಿಕೊಂಡಿರುವ ಬಹುದೇವಾರಾಧಕರ ವಿಷಯದಲ್ಲಿ, ಅಲ್ಲಾಹ್ ಮತ್ತು ಅವನ ದೂತರ ವತಿಯಿಂದ (ನಿಮಗೆ) ಹೊಣೆ ಮುಕ್ತಿಯನ್ನು ಘೋಷಿಸಲಾಗುತ್ತಿದೆ. 9:1 (ಬಹು ದೇವಾರಾಧಕರೇ,) ನಾಲ್ಕು ತಿಂಗಳ ಕಾಲ ನೀವು ಭೂಮಿಯಲ್ಲಿ ಧಾರಾಳ ತಿರುಗಾಡಿರಿ. ಆದರೆ ನಿಮಗೆ ತಿಳಿದಿರಲಿ - ಅಲ್ಲಾಹನನ್ನು ಸೋಲಿಸಲು ನಿಮ್ಮಿಂದಾಗದು. ನಿಜವಾಗಿ ಅಲ್ಲಾಹನೇ ಧಿಕ್ಕಾರಿಗಳನ್ನು ಅಪಮಾನಿತರಾಗಿಸಲಿದ್ದಾನೆ. 9:2
ಮಹಾನ್ ಹಜ್ಜ್ ಯಾತ್ರೆಯ ದಿನ, ಅಲ್ಲಾಹ್ ಮತ್ತು ಅವನ ದೂತರ ಕಡೆಯಿಂದ, ಸಕಲ ಮಾನವರಿಗಾಗಿರುವ ಘೋಷಣೆ ಇದು; ಬಹುದೇವಾರಾಧಕರ ವಿಷಯದಲ್ಲಿ ಅಲ್ಲಾಹ್ ಮತ್ತು ಅವನ ದೂತರು ಹೊಣೆ ಮುಕ್ತರು. ನೀವೀಗ ಪಶ್ಚಾತ್ತಾಪ ಪಟ್ಟರೆ ಅದು ನಿಮ್ಮ ಪಾಲಿಗೆ ಉತ್ತಮ. ಇನ್ನು ನೀವು ಕಡೆಗಣಿಸುವಿರಾದರೆ, ನಿಮಗೆ ತಿಳಿದಿರಲಿ; ಅಲ್ಲಾಹನನ್ನು ಸೋಲಿಸಲು ನಿಮ್ಮಿಂದಾಗದು. ಧಿಕ್ಕಾರಿಗಳಿಗೆ ಕಠಿಣ ಶಿಕ್ಷೆಯ ಶುಭವಾರ್ತೆ ನೀಡಿರಿ. 9:3
ಬಹುದೇವಾರಾಧಕರ ಪೈಕಿ ನೀವು ಕರಾರು ಮಾಡಿಕೊಂಡಿರುವ ಮತ್ತು ಆ ಬಳಿಕ ನಿಮಗೆ ಯಾವುದೇ ಹಕ್ಕುಚ್ಯುತಿ ಮಾಡಿಲ್ಲದ ಹಾಗೂ ನಿಮ್ಮ ವಿರುದ್ಧ ಯಾರಿಗೂ ನೆರವು ನೀಡಿಲ್ಲದ ಜನಾಂಗಗಳ ಕರಾರುಗಳನ್ನು ಅವುಗಳ ಅವಧಿಯ ತನಕ ಪೂರ್ತಿಗೊಳಿಸಿರಿ. ಖಂಡಿತವಾಗಿಯೂ ಅಲ್ಲಾಹನು ಧರ್ಮನಿಷ್ಠರನ್ನು ಪ್ರೀತಿಸುತ್ತಾನೆ. 9:4
(ನಾಲ್ಕು) ಪವಿತ್ರ ತಿಂಗಳುಗಳು ಮುಗಿದಾಗ, ಆ ಬಹುದೇವಾರಾಧಕರನ್ನು ಕಂಡಲ್ಲಿ ಕೊಲ್ಲಿರಿ, ಅವರನ್ನು ಹಿಡಿಯಿರಿ, ಸುತ್ತುವರಿಯಿರಿ ಮತ್ತು ಪ್ರತಿಯೊಂದು ಆಯಕಟ್ಟಿನ ಸ್ಥಳದಲ್ಲಿ ಅವರಿಗಾಗಿ ಹೊಂಚಿನಲ್ಲಿರಿ. ತರುವಾಯ, ಅವರು ಪಶ್ಚಾತ್ತಾಪ ಪಟ್ಟರೆ, ನಮಾಝ್‌ಅನ್ನು ಪಾಲಿಸುವವರಾದರೆ ಮತ್ತು ಝಕಾತ್‌ಅನ್ನು ಪಾವತಿಸಿದರೆ, ಅವರಿಗೆ ಅವರ ದಾರಿಯನ್ನು ಬಿಟ್ಟು ಕೊಡಿರಿ. ಖಂಡಿತವಾಗಿಯೂ ಅಲ್ಲಾಹನು ಕ್ಷಮಿಸುವವನು ಮತ್ತು ಕರುಣಾಮಯಿಯಾಗಿದ್ದಾನೆ. 9:5
ಇನ್ನು ಬಹುದೇವಾರಾಧಕರ ಪೈಕಿ ಯಾರಾದರೂ ನಿಮ್ಮ ಆಶ್ರಯ ಬಯಸಿದರೆ, ಅವನು ಅಲ್ಲಾಹನ ವಾಣಿಯನ್ನು ಕೇಳುವ ತನಕ ಅವನಿಗೆ ಆಶ್ರಯ ನೀಡಿರಿ. ಆ ಬಳಿಕ ಅವನನ್ನು ಅವನ ಸುರಕ್ಷಿತ ಸ್ಥಳಕ್ಕೆ ತಲುಪಿಸಿರಿ. ಇದೇಕೆಂದರೆ, ಅವರು ಅರಿವಿಲ್ಲದವರು. 9:6
ನೀವು ‘ಮಸ್ಜಿದುಲ್ ಹರಾಮ್’ನಲ್ಲಿ ಕರಾರು ಮಾಡಿಕೊಂಡಿರುವವರ ಹೊರತು (ಇತರ) ಬಹುದೇವಾರಾಧಕರಿಗೆ ಅಲ್ಲಾಹನ ಜೊತೆಗಾಗಲಿ ಅವನ ದೂತರ ಜೊತೆಗಾಗಲಿ ಯಾವುದೇ ಕರಾರು ಇರಲು ಹೇಗೆ ತಾನೇ ಸಾಧ್ಯ? ಅವರು ನಿಮ್ಮ ಜೊತೆ ನೇರವಾಗಿರುವ ತನಕ ನೀವು ಅವರ ಜೊತೆ ನೇರವಾಗಿರಿ. ಖಂಡಿತವಾಗಿಯೂ ಅಲ್ಲಾಹನು, ಸತ್ಯನಿಷ್ಠರನ್ನು ಪ್ರೀತಿಸುತ್ತಾನೆ. 9:7
ಹೇಗಿದೆ (ಅವರ ಈ ಧೋರಣೆ)? ಅವರಿಗೆ ನಿಮ್ಮ ಮೇಲೆ ಪ್ರಾಬಲ್ಯ ಸಿಕ್ಕಿದರೆ ಅವರು ನಿಮ್ಮ ಜೊತೆಗಿನ ಬಾಂಧವ್ಯವನ್ನಾಗಲಿ, ಕರಾರನ್ನಾಗಲಿ ಲೆಕ್ಕಿಸುವವರಲ್ಲ. ಅವರು ಕೇವಲ ತಮ್ಮ ಮಾತುಗಳಿಂದ ನಿಮ್ಮನ್ನು ಒಲಿಸಿಕೊಳ್ಳುತ್ತಾರೆ. ಆದರೆ ಅವರ ಮನಸ್ಸುಗಳು ಒಪ್ಪುವುದಿಲ್ಲ. ಅವರಲ್ಲಿ ಹೆಚ್ಚಿನವರು ವಚನ ಭ್ರಷ್ಟರಾಗಿದ್ದಾರೆ. 9:8
ಅವರು ಅಲ್ಲಾಹನ ವಚನಗಳನ್ನು ತೀರಾ ಸಣ್ಣ ಬೆಲೆಗೆ ಮಾರುತ್ತಾರೆ ಮತ್ತು (ಜನರನ್ನು) ಅವನ ಮಾರ್ಗದಿಂದ ತಡೆಯುತ್ತಾರೆ. ಖಂಡಿತವಾಗಿಯೂ ಅವರು ಮಾಡುತ್ತಿರುವುದೆಲ್ಲವೂ ತೀರಾ ಕೆಟ್ಟದಾಗಿದೆ. 9: 9
ಯಾವುದೇ ವಿಶ್ವಾಸಿಯ ವಿಷಯದಲ್ಲಿ ಅವರು ಬಾಂಧವ್ಯವನ್ನಾಗಲಿ ಕರಾರನ್ನಾಗಲಿ ಲೆಕ್ಕಿಸುವುದಿಲ್ಲ. ಅವರೇ ನಿಜವಾಗಿ ಎಲ್ಲೆ ಮೀರುವವರು. 9: 10
ಇಷ್ಟಾಗಿಯೂ, ಅವರು ಪಶ್ಚಾತ್ತಾಪ ಪಟ್ಟರೆ, ನಮಾಝ್‌ಅನ್ನು ಪಾಲಿಸಿದರೆ ಮತ್ತು ಝಕಾತ್ ಅನ್ನು ಪಾವತಿಸಿದರೆ, ಅವರು ಧರ್ಮದಲ್ಲಿ ನಿಮ್ಮ ಸಹೋದರರು. ನಾವಂತು, ಅರಿಯುವವರಿಗಾಗಿ ನಮ್ಮ ವಚನಗಳನ್ನು ವಿವರಿಸುತ್ತೇವೆ. 9:11
ಇನ್ನು ಅವರು, ಕರಾರು ಮಾಡಿಕೊಂಡ ಬಳಿಕ ತಮ್ಮ ಪ್ರತಿಜ್ಞೆಗಳನ್ನು ಮುರಿದರೆ ಮತ್ತು ಧರ್ಮದ ವಿಷಯದಲ್ಲಿ ನಿಮ್ಮನ್ನು ನಿಂದಿಸಿದರೆ, ಸತ್ಯಧಿಕ್ಕಾರದ ನೇತಾರರ ವಿರುದ್ಧ ಸಮರ ಹೂಡಿರಿ. ಅವರ ಪ್ರತಿಜ್ಞೆಗಳಂತು ಖಂಡಿತ ನಂಬಲರ್ಹವಲ್ಲ. (ಯುದ್ಧಕ್ಕೆ ಅಂಜಿ) ಅವರು ದೂರ ಉಳಿಯಬಹುದು. 9: 12
ನೀವೇನು, ತಮ್ಮ ಕರಾರನ್ನು ಮುರಿದ ಹಾಗೂ ದೇವದೂತರನ್ನು (ನಾಡಿನಿಂದ) ಹೊರ ಹಾಕಲು ನಿರ್ಧರಿಸಿದ ಹಾಗೂ ನಿಮಗಿಂತ ಮೊದಲು ತಾವೇ (ಆಕ್ರಮಣ) ಆರಂಭಿಸಿದ ಜನರ ವಿರುದ್ಧ ಯುದ್ಧ ಮಾಡುವುದಿಲ್ಲವೇ? ನೀವೇನು ಅವರಿಗೆ ಅಂಜುವಿರಾ? ನಿಜವಾಗಿ, ನೀವು ವಿಶ್ವಾಸಿಗಳಾಗಿದ್ದರೆ, ನಿಮ್ಮ ಅಂಜಿಕೆಗೆ ಅಲ್ಲಾಹನೇ ಹೆಚ್ಚು ಅರ್ಹನು. 9: 13
ನೀವು ಅವರ (ಶತ್ರು ಪಡೆಗಳ) ವಿರುದ್ಧ ಹೋರಾಡಿರಿ. ಅಲ್ಲಾಹನು ನಿಮ್ಮ ಕೈಗಳಿಂದ ಅವರನ್ನು ಶಿಕ್ಷಿಸುವನು ಮತ್ತು ಅವರನ್ನು ಅಪಮಾನಿಸುವನು. ಹಾಗೆಯೇ ಅವನು ಅವರ ವಿರುದ್ಧ ನಿಮಗೆ ನೆರವಾಗುವನು ಮತ್ತು ವಿಶ್ವಾಸಿಗಳ ಮನಸ್ಸುಗಳನ್ನು ತಣಿಸಿಬಿಡುವನು. 9: 14
ಹಗರಣ 5.
"ನೀವು ಅವರನ್ನು ಎದುರಿಸಲು, ನಿಮಗೆ ಸಾಧ್ಯವಿರುವಷ್ಟು ಶಕ್ತಿಯೊಂದಿಗೆ ಹಾಗೂ ಪಳಗಿದ ಕುದುರೆಗಳೊಂದಿಗೆ ಸದಾ ಸನ್ನದ್ಧರಾಗಿರಿ........" 8.60
ಇದು ಕೂಡಾ ಯುದ್ಧದ ಸನ್ನಿವೇಶಕ್ಕೆ ಸಂಬಂಧಿಸಿದ, ಸುಮಾರು 40 ಪದಗಳಿರುವ ವಚನವೊಂದರ ಸಣ್ಣ ಭಾಗ ಮಾತ್ರ. ಕೆಲವರು ಕೇವಲ ಇಷ್ಟನ್ನು ಜನರ ಮುಂದಿಟ್ಟು, "ನೋಡಿರಿ, ನೋಡಿರಿ, ಇದು ಕುರ್ ಆನ್ ತನ್ನ ಅನುಯಾಯಿಗಳಿಗೆ ನೀಡುತ್ತಿರುವ ಆದೇಶ. ಇತರ ಧರ್ಮಗಳ ಅನುಯಾಯಿಗಳ ಜೊತೆ, ಸ್ನೇಹ ಸಾಮರಸ್ಯದಿಂದ ಇರುವ ಬದಲು, ಸದಾ ಅವರ ವಿರುದ್ಧ ಯುದ್ಧಕ್ಕೆ ಸನ್ನದ್ಧರಾಗಿರಬೇಕೆಂದು ಕುರ್ ಆನ್ ಬೋಧಿಸುತ್ತದೆ" ಎಂದು ಕಿರುಚಾಡಲಾರಂಭಿಸುತ್ತಾರೆ.
ಈ ವಿಷಯದಲ್ಲಿ ಸತ್ಯವೇನೆಂಬುದನ್ನು ಅರಿಯುವ ಕುತೂಹಲ ಉಳ್ಳವರು ತುಂಬಾ ಆಳವಾದ ಸಂಶೋಧನೆಯನ್ನೇನೂ ನಡೆಸಬೇಕಾಗಿಲ್ಲ. ಇದೇ ವಚನವನ್ನು ಪೂರ್ಣವಾಗಿ ಓದಿ ಅದರ ಜೊತೆಗೆ ಅದರ ಮುಂದಿನ ಒಂದು ವಚನವನ್ನು ಓದಿದರೆ ಸಾಕು. ಮಿಥ್ಯದ ಕೋಟೆ ಕುಸಿದು ಬೀಳುತ್ತದೆ. ಸತ್ಯವು ಅನಾವರಣ ಗೊಳ್ಳುತ್ತದೆ.
"ನೀವು ಅವರನ್ನು ಎದುರಿಸಲು, ನಿಮಗೆ ಸಾಧ್ಯವಿರುವಷ್ಟು ಶಕ್ತಿಯೊಂದಿಗೆ ಹಾಗೂ ಪಳಗಿದ ಕುದುರೆಗಳೊಂದಿಗೆ ಸದಾ ಸನ್ನದ್ಧರಾಗಿರಿ. ಈ ಮೂಲಕ ನೀವು ಅಲ್ಲಾಹನ ಶತ್ರುಗಳನ್ನು, ನಿಮ್ಮ ಶತ್ರುಗಳನ್ನು ಮತ್ತು ಅವರಲ್ಲದೆ - ನಿಮಗೆ ತಿಳಿದಿಲ್ಲದ ಹಾಗೂ ಅಲ್ಲಾಹನಿಗೆ ತಿಳಿದಿರುವ ಇತರರನ್ನು (ಇತರ ಶತ್ರುಗಳನ್ನು) - ಹೆದರಿಸಬಹುದು. ನೀವು ಅಲ್ಲಾಹನ ಮಾರ್ಗದಲ್ಲಿ ಖರ್ಚು ಮಾಡುವ ಪ್ರತಿಯೊಂದು ವಸ್ತುವಿನ ಸಂಪೂರ್ಣ ಪ್ರತಿಫಲವನ್ನು ನಿಮಗೆ ನೀಡಲಾಗುವುದು ಮತ್ತು ನಿಮಗೆ ಕಿಂಚಿತ್ತೂ ಅನ್ಯಾಯವಾಗದು." 8.60
"(ದೂತರೇ,) ಒಂದು ವೆೇಳೆ ಅವರು (ಶತ್ರುಗಳು) ಶಾಂತಿಯ ಒಲವು ತೋರಿದರೆ, ನೀವು ಅದಕ್ಕೆ ಒಲವು ತೋರಿರಿ ಮತ್ತು ಅಲ್ಲಾಹನ ಮೇಲೆ ಭರವಸೆ ಇಡಿರಿ. ಅವನು ಖಂಡಿತ ಎಲ್ಲವನ್ನೂ ಕೇಳುವವನು ಮತ್ತು ಎಲ್ಲವನ್ನೂ ಬಲ್ಲವನಾಗಿದ್ದಾನೆ." 8:61
ಈ ಬಗ್ಗೆ ಇನ್ನಷ್ಟು ಸ್ಪಷ್ಟೀಕರಣದ ಅಗತ್ಯವಿದೆಯೇ?
ಹಗರಣ 6
"ನೀವು ಧಿಕ್ಕಾರಿಗಳನ್ನು ಎದುರುಗೊಂಡಾಗ ಅವರ ಕೊರಳುಗಳನ್ನು ಕತ್ತರಿಸಿರಿ" 47:4
ಕುರ್ ಆನ್ ನ ವಿರುದ್ಧ ಅಪಪ್ರಚಾರದಲ್ಲಿ ನಿರತರಾಗಿರುವವರು ವ್ಯಾಪಕವಾಗಿ ಬಳಸಿರುವ ಇನ್ನೊಂದು ಉದ್ಧರಣೆ ಇದು. ಇದು ಕೂಡಾ ಕುರ್ ಆನ್ ನ ದೀರ್ಘ ವಚನವೊಂದರ ಒಂದು ಪುಟ್ಟ ಭಾಗ ಮಾತ್ರ. ಈ ವಚನದ ಪೂರ್ಣ ರೂಪ ಹೀಗಿದೆ:
"(ಯುದ್ಧದಲ್ಲಿ) ನೀವು ಧಿಕ್ಕಾರಿಗಳನ್ನು ಎದುರಿಸಿದಾಗ, ಕೊರಳುಗಳನ್ನು ಕತ್ತರಿಸಿರಿ. ಅವರನ್ನು ಚೆನ್ನಾಗಿ ಸದೆಬಡಿದ ಬಳಿಕ (ಉಳಿದವರನ್ನು) ಬಿಗಿಯಾಗಿ ಕಟ್ಟಿ ಹಾಕಿರಿ ಆ ಬಳಿಕ ನೀವು (ಅವರ ಮೇಲೆ) ಔದಾರ್ಯ ತೋರಬಹುದು ಅಥವಾ ಪರಿಹಾರ ಪಡೆಯಬಹುದು. ಯುದ್ಧವು ಮುಗಿಯುವ ತನಕ (ಪಾಲಿಸಬೇಕಾದ ನಿಯಮ) ಇದು. ಅಲ್ಲಾಹನು ಬಯಸಿದ್ದರೆ, ಅವರ ವಿರುದ್ಧ ಪ್ರತೀಕಾರ ತೀರಿಸುತ್ತಿದ್ದನು. ಆದರೆ ಅವನು ನಿಮ್ಮಲ್ಲಿ ಕೆಲವರನ್ನು ಮತ್ತೆ ಕೆಲವರ ಮೂಲಕ ಪರೀಕ್ಷಿಸ ಬಯಸುತ್ತಾನೆ. ಅಲ್ಲಾಹನ ಮಾರ್ಗದಲ್ಲಿ ಹತರಾದವರ ಕರ್ಮಗಳು ವ್ಯರ್ಥವಾಗಲಾರವು." 47:4
ಮೇಲ್ನೋಟಕ್ಕೇ ಎದ್ದು ಕಾಣುವಂತೆ ಇದು ಒಂದು ಯುದ್ಧದ ಸನ್ನಿವೇಶದಲ್ಲಿ ನೀಡಲಾದ ಮತ್ತು ಮುಸ್ಲಿಮರ ವಿರುದ್ಧ ಯುದ್ಧನಿರತ ಶತ್ರು ಸೇನೆಯವರಿಗೆ ಸಂಬಂಧಿಸಿದ ಆದೇಶವಾಗಿದೆಯೇ ಹೊರತು ಸಾಮಾನ್ಯ ದಿನಗಳಿಗೆ ಅನ್ವಯವಾಗುವ ಅಥವಾ ಯಾವುದಾದರೂ ಸಮುದಾಯವನ್ನು ಉದ್ದೇಶಿಸಿ ನೀಡಲಾಗಿರುವ ಆದೇಶ ಖಂಡಿತ ಅಲ್ಲ. ಇದು ಯುದ್ಧದ ನಡುವೆ ಪಾಲಿಸಲಿಕ್ಕಿರುವ ನಿಯಮ ಎಂಬುದನ್ನು ಪ್ರಸ್ತುತ ವಚನದಲ್ಲೇ ಬಹಳ ಸ್ಪಷ್ಟವಾಗಿ ಹೇಳಲಾಗಿದೆ. ಯುದ್ಧ ಎಂದ ಮೇಲೆ ಅದು ಸರಸ ಸಲ್ಲಾಪಕ್ಕಿರುವ ವೇದಿಕೆಯಾಗಿರುವುದಿಲ್ಲ. ಶಾಂತಿ ಕಾಪಾಡುವುದಕ್ಕಾಗಿ ಮತ್ತು ಯುದ್ಧವನ್ನು ನಿವಾರಿಸುವುದಕ್ಕಾಗಿ ನಡೆಸಿದ ಎಲ್ಲ ಶ್ರಮಗಳು ವಿಫಲವಾದಾಗ ಮತ್ತು ಯುದ್ಧವು ಅನಿವಾರ್ಯವಾಗಿ ಬಿಟ್ಟಾಗ ಹೂಮಾಲೆ ಹಿಡಿದು ಶತ್ರುಗಳನ್ನು ಸ್ವಾಗತಿಸಬೇಕೆಂದು ಜಗತ್ತಿನ ಯಾವ ಧರ್ಮವೂ ಆಧುನಿಕ ಯುಗದ ಯಾವ ಸಂವಿಧಾನವೂ ಹೇಳಿಲ್ಲ. ಅಂತಹ ಸನ್ನಿವೇಶದಲ್ಲಿ ಸತ್ಯ ಮತ್ತು ನ್ಯಾಯದ ಶತ್ರುಗಳ ಮೇಲೆ ಕರುಣೆ ತೋರುವುದೆಂದರೆ ಅದು ಸತ್ಯ ಮತ್ತು ನ್ಯಾಯಗಳಿಗೆ ದ್ರೋಹ ಬಗೆಯುವುದೆಂದೇ ಅರ್ಥ. ಇಂತಹ ಪರಿಸ್ಥಿತಿಯಲ್ಲಿ ಸತ್ಯದ ವಿರೋಧಿಗಳನ್ನು ಮತ್ತು ಅನ್ಯಾಯದ ಪ್ರತಿಪಾದಕರನ್ನು ಸದೆಬಡಿಯುವುದಕ್ಕೆ ಸರ್ವ ಸಾಧ್ಯ ಉಪಕ್ರಮಗಳನ್ನು ಕೈಗೊಳ್ಳುವುದೇ ವಿವೇಕವಾಗಿದೆ. ಆದರೆ ಯುದ್ಧ ಮುಗಿದೊಡನೆ ಮತ್ತೆ ಸೌಜನ್ಯ ಹಾಗೂ ಔದಾರ್ಯದ ನಿಯಮಕ್ಕೆ ಮರಳಿರಿ. ಶತ್ರುಪಡೆಯನ್ನು ಮಣಿಸಿಬಿಟ್ಟ ಬಳಿಕ ನೀವು ಬಂಧಿಸಿರುವ ಕೈದಿಗಳನ್ನು ನೀವು, ಯಾವುದೇ ಪರಿಹಾರ ಪಡೆಯದೆ ಉದಾರವಾಗಿ ಬಿಡುಗಡೆಗೊಳಿಸಬಹುದು ಅಥವಾ ಏನಾದರೂ ಪರಿಹಾರ ಪಡೆದು ಅವರನ್ನು ಬಿಡುಗಡೆಗೊಳಿಸಬಹುದು ಎಂದು ಇದೇ ವಚನದಲ್ಲಿರುವ ಮಾತುಗಳು ಕುರ್ ಆನ್ ನ ಉದಾರ ಧೋರಣೆಗೆ ಸಾಕ್ಷಿಯಾಗಿವೆ. ಯುದ್ಧ ಕೈದಿಗಳೆಂದರೆ, ನಿಮ್ಮನ್ನು ವಧಿಸಲಿಕ್ಕೆಂದೇ ಬಂದವರು, ಆದ್ದರಿಂದ ನೀವು ಅವರನ್ನು ಕೊಲ್ಲಿರಿ ಎಂದಾಗಲಿ, ಅವರನ್ನು ಬಲವಂತವಾಗಿ ಮತಾಂತರಿಸಿ ಎಂದಾಗಲಿ ಕುರ್ ಆನ್ ಹೇಳುವುದಿಲ್ಲ.
ಹಗರಣ 7
''ಅಲ್ಲಾಹನಲ್ಲಿ ಹಾಗೂ ಅಂತಿಮ ದಿನದಲ್ಲಿ ವಿಶ್ವಾಸವಿಡದ ಮತ್ತು ಅಲ್ಲಾಹ್ ಮತ್ತವನ ದೂತರು ನಿಷೇಧಿಸಿರುವುದನ್ನು ನಿಷಿದ್ಧವೆಂದು ಪರಿಗಣಿಸದವರ ವಿರುದ್ಧ ಹಾಗೂ ಗ್ರಂಥ ನೀಡಲ್ಪಟ್ಟವರ ಪೈಕಿ, ಸತ್ಯ ಧರ್ಮವನ್ನು ಸ್ವೀಕರಿಸದವರ ವಿರುದ್ಧ ಯುದ್ಧ ಸಾರಿರಿ - ಅವರು ತಮ್ಮ ಕೈಯಿಂದ ಜಿಝಿಯ (ದಂಡ) ಪಾವತಿಸಿ ಅಧೀನರಾಗಿ ಬಿಡುವ ತನಕ." 9:29
ಕುರ್ ಆನ್ ವಿರೋಧಿಗಳು, ಈ ವಚನವನ್ನು ಮುಂದಿಟ್ಟು "ಕುರ್ ಆನ್ ಮುಸ್ಲಿಮರಲ್ಲದ ಎಲ್ಲರ ವಿರುದ್ಧ ಮತ್ತು ವಿಶೇಷವಾಗಿ ಗ್ರಂಥದವರು ಅಥವಾ ಕ್ರೈಸ್ತರು ಹಾಗೂ ಯಹೂದಿಗಳ ವಿರುದ್ಧ ಯುದ್ಧ ಸಾರಲು ಮುಸ್ಲಿಮರನ್ನು ಹುರಿದುಂಬಿಸುತ್ತದೆ" ಎಂದು ವಾದಿಸಿ ಜನರನ್ನು ದಾರಿಗೆಡಿಸಲು ಶ್ರಮಿಸುತ್ತಾರೆ.
ನಿಜವಾಗಿ ಇದು ಹಿಜರಿ 8ನೇ ವರ್ಷದಲ್ಲಿ ನಡೆದ ಮುವ್ತಾ ಯುದ್ಧದ ಹಿನ್ನೆಲೆಯಲ್ಲಿ, ಪ್ರಮುಖ ಐತಿಹಾಸಿಕ ಸನ್ನಿವೇಶವೊಂದರಲ್ಲಿ, ಆ ಸನ್ನಿವೇಶಕ್ಕಾಗಿ ಹೊರಡಿಸಲಾದ ಆದೇಶವಾಗಿದೆ. ಮದೀನಾದಲ್ಲಿ ಒಂದು ಆದರ್ಶ ಸಮಾಜವನ್ನು ಮಾತ್ರವಲ್ಲದೆ ಒಂದು ಆದರ್ಶ ಸರಕಾರವನ್ನು ಸ್ಥಾಪಿಸಿದ್ದ ಪ್ರವಾದಿ ಮುಹಮ್ಮದ್ (ಸ) ಅಕ್ಕ ಪಕ್ಕದ ವಿವಿಧ ದೇಶಗಳ ಆಡಳಿತಗಾರರ ಬಳಿಗೆ ತಮ್ಮ ರಾಯಭಾರಿಗಳನ್ನು ಕಳಿಸಿ, ಆ ಮೂಲಕ ಅವರಿಗೆ ಸತ್ಯ ಸಂದೇಶವನ್ನು ಮತ್ತು ಶಾಂತಿ ಮತ್ತು ಸ್ನೇಹದ ಪ್ರಸ್ತಾವವನ್ನು ತಲುಪಿಸುತ್ತಿದ್ದರು. ಈ ಚಟುವಟಿಕೆಯ ಅಂಗವಾಗಿ ಅವರು ಸಿರಿಯಾದ ಗಡಿ ಸಮೀಪವಿರುವ ಬುಸ್ರಾ ಪ್ರಾಂತ್ಯಕ್ಕೆ ಹಾರಿಸ್ ಬಿನ್ ಉಮೈರ್ ಎಂಬ ತಮ್ಮ ಸಂಗಾತಿಯನ್ನು ರಾಯಭಾರಿಯಾಗಿ ಕಳಿಸಿದರು. ಆ ಕಾಲದಲ್ಲೂ ರಾಯಭಾರಿಗಳಿಗೆ ಯಾವುದೇ ಹಾನಿ ಮಾಡಬಾರದೆಂಬ ಒಂದು ಅಲಿಖಿತ ನಿಯಮ ಬಹುತೇಕ ಎಲ್ಲ ಸಮಾಜಗಳಲ್ಲಿ ಜಾರಿಯಲ್ಲಿತ್ತು. ಆದರೆ ಪ್ರವಾದಿಯ ರಾಯಭಾರಿ ಹಾರಿಸ್ ಬಿನ್ ಉಮೈರ್, ಘಸ್ಸಾನ್ ಪ್ರದೇಶದ ಮೂಲಕ ಹಾದುಹೋಗುತ್ತಿದ್ದಾಗ ಅಧಿಕಾರದ ಅಮಲಿನಲ್ಲಿದ್ದ ಕ್ರೈಸ್ತ ಅರಬ್ ಮೂಲದ ಘಸ್ಸಾನ್ ಆಡಳಿತಗಾರ ಶುರಹ್ ಬೀಲ್ ಪ್ರವಾದಿಯ ರಾಯಭಾರಿಯನ್ನು ಬಂಧಿಸಿ, ಕಟ್ಟಿಟ್ಟು, ಹಿಂಸಿಸಿ ಅಮಾನುಷವಾಗಿ ಕೊಂದು ಬಿಟ್ಟ. ಆಗ ಘಸ್ಸಾನ್ ಸಂಸ್ಥಾನವು ರೋಮನ್ ಅಥವಾ ಬೈಝನ್ ಟಾಯ್ನ್ ಸಾಮ್ರಾಜ್ಯದ ಅಧೀನದಲ್ಲಿತ್ತು. ತಾನೇನು ಮಾಡಿದರೂ ರೋಮನ್ ದೊರೆ ತನ್ನ ಬೆಂಬಲಕ್ಕಿದ್ದಾನೆ ಎಂಬ ಅಹಂಭಾವದಿಂದ ಶುರಹ್ ಬೀಲ್ ಆ ಹೀನ ಕೃತ್ಯ ಎಸಗಿದ್ದ. ಈ ವಿಷಯ ಮದೀನಾದಲ್ಲಿದ್ದ ಮುಸ್ಲಿಮರಿಗೆ ತಲುಪಿದಾಗ ಅವರಿಗೆಲ್ಲ ತೀವ್ರ ಆಘಾತವಾಯಿತು. ಈ ಕುರಿತು ತಮ್ಮ ಸಂಗಾತಿಗಳೊಡನೆ ಸಮಾಲೋಚಿಸಿದ ಪ್ರವಾದಿವರ್ಯರು (ಸ) ಇದನ್ನು ಅಪ್ರಚೋದಿತ ಹಾಗೂ ಏಕ ಪಕ್ಷೀಯ ಯುದ್ಧ ಘೋಷಣೆ ಎಂದು ಪರಿಗಣಿಸಿ ಶುರಃಹ್ ಬೀಲ್ ವಿರುದ್ಧ ಕಾರ್ಯಾಚರಣೆಗಾಗಿ ಸೇನೆಯನ್ನು ರವಾನಿಸಿದರು. ರಾಯಭಾರಿಯ ಹತ್ಯೆ ನಡೆಸಿದ ನಿರ್ದಿಷ್ಟ ಅರಬ್ ಕ್ರೈಸ್ತ ಸಂಸ್ಥಾನದವರ ವಿರುದ್ಧ ಪ್ರತಿಕ್ರಮವನ್ನು ಆದೇಶಿಸುವುದು ಪ್ರಸ್ತುತ
ಕುರ್ ಆನ್ ವಚನದ ಉದ್ದೇಶವಾಗಿತ್ತು. ಅನ್ಯಥಾ ಸಂಘರ್ಷಗಳ ಕುರಿತಂತೆ ಕುರ್ ಆನ್ ನ ಸಾರ್ವಕಾಲಿಕ ಸ್ಥಾಯೀ ನಿಯಮವು ಈ ಕೆಳಗಿನ ವಚನಗಳಲ್ಲಿ ಹೇಳಿರುವಂತಿದೆ:
"ನಿಮ್ಮ ವಿರುದ್ಧ ಯುದ್ಧ ಮಾಡುವವರ ವಿರುದ್ಧ ನೀವು ಅಲ್ಲಾಹನ ಮಾರ್ಗದಲ್ಲಿ ಯುದ್ಧ ಮಾಡಿರಿ. ಆದರೆ ಅತಿರೇಕವೆಸಗಬೇಡಿ. ಖಂಡಿತವಾಗಿಯೂ ಅಲ್ಲಾಹನು ಅತಿರೇಕವೆಸಗುವವರನ್ನು ಮೆಚ್ಚುವುದಿಲ್ಲ." 2:190
"ಅಕ್ರಮವೆಸಗಿದವರ ಹೊರತು ಇನ್ನಾರ ಮೇಲೂ ಆಕ್ರಮಣಕ್ಕೆ ಅವಕಾಶವಿಲ್ಲ." 2: 193
(ಇದೀಗ) ಅವರು ನಿಮ್ಮಿಂದ ದೂರ ಉಳಿದರೆ ಹಾಗೂ ನಿಮ್ಮ ವಿರುದ್ಧ ಹೋರಾಡದಿದ್ದರೆ ಮತ್ತು ಶಾಂತಿಯ ಪ್ರಸ್ತಾಪವನ್ನು ನಿಮ್ಮ ಮುಂದಿಟ್ಟರೆ - ಅಲ್ಲಾಹನು ಅವರ ವಿರುದ್ಧ (ಹೋರಾಡಲು) ನಿಮಗೆ ಯಾವ ಅವಕಾಶವನ್ನೂ ಇಟ್ಟಿಲ್ಲ." 4:90
"(ದೂತರೇ,) ಒಂದು ವೆೇಳೆ ಅವರು (ಶತ್ರುಗಳು) ಶಾಂತಿಯ ಒಲವು ತೋರಿದರೆ, ನೀವು ಅದಕ್ಕೆ ಒಲವು ತೋರಿರಿ ಮತ್ತು ಅಲ್ಲಾಹನ ಮೇಲೆ ಭರವಸೆ ಇಡಿರಿ. ಅವನು ಖಂಡಿತ ಎಲ್ಲವನ್ನೂ ಕೇಳುವವನು ಮತ್ತು ಎಲ್ಲವನ್ನೂ ಬಲ್ಲವನಾಗಿದ್ದಾನೆ." 8:61
ಕುರ್ ಆನ್ ನ ವಿರೋಧಿಗಳು ಅಪ್ಪಿ ತಪ್ಪಿಯೂ ಪ್ರಸ್ತುತ ವಚನಗಳನ್ನು ಉದ್ಧರಿಸುವುದಿಲ್ಲ ಎಂಬುದು ಸತ್ಯದ ಜೊತೆ ಅವರಿಗಿರುವ ವೈಷಮ್ಯವನ್ನು ಬಯಲುಗೊಳಿಸುತ್ತದೆ.
ನಾವಿಲ್ಲಿ ಕುರ್ ಆನ್ ವಿರೋಧಿಗಳ ಕೇವಲ 7 ಹಗರಣ ಅಥವಾ ಪ್ರಹಸನ ಗಳನ್ನು ಮಾತ್ರ ಪ್ರಸ್ತಾಪಿಸಿದ್ದೇವೆ. ಸುಳ್ಳಿನ ಸರದಾರರನ್ನು ಕಣ್ಣು ಮುಚ್ಚಿ ನಂಬಬಾರದು ಎಂಬ ಪಾಠ ಕಲಿಯುವುದಕ್ಕೆ ಬಹುಶಃ ಇಷ್ಟು ಉದಾಹರಣೆಗಳು ಧಾರಾಳ ಸಾಕು. ಈ ಉದಾಹರಣೆಗಳ ಬೆಳಕಿನಲ್ಲಿ, ಸುಳ್ಳುಗಾರರು ಮತ್ತು ವಂಚಕರ ಇತರ ಕಸರತ್ತುಗಳನ್ನು ಸುಲಭವಾಗಿ ಅರ್ಥಯಿಸಿಕೊಳ್ಳಬಹುದು.
No comments:
Post a Comment